ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ತರಲೆ ಆಗಿದ್ರೆ ಹಾಸ್ಯ ಹುಟ್ಟುತ್ತೆ

Last Updated 11 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಪಾಪ ಪಾಂಡು~ವಿನಿಂದ ಆರಂಭಿಸಿ `ಪಾಂಡುರಂಗ ವಿಠಲ~ದವರೆಗೆ ಕಳೆದ ಎಂಟು ವರ್ಷಗಳ ಕಾಲ ಹಾಸ್ಯ ಧಾರಾವಾಹಿಗಳನ್ನು ಸತತವಾಗಿ ನಿರ್ದೇಶಿಸಿದ ದಾಖಲೆ ಮುನಿ ಜನಪದ ಅವರದು.

ಬೆಂಗಳೂರು ಹೊರವಲಯದ ಕೆಂಗೇರಿಯಲ್ಲಿ ಗಣೇಶೋತ್ಸವ, ರಾಜ್ಯೋತ್ಸವಗಳಿಗೆ ನಾಟಕಗಳನ್ನು ಮಾಡಿಕೊಂಡಿದ್ದ ಮುನಿರಾಜು, ಮೈನಾ ಚಂದ್ರಶೇಖರ ಅವರ `ಜನಪದ~ ತಂಡದ ಮೂಲಕ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲು ತುಳಿದರು.

ತಮ್ಮ ಹೆಸರಿನೊಂದಿಗೆ ತಂಡದ ಹೆಸರು ಅಂಟಿಸಿಕೊಂಡ ಮುನಿರಾಜು- `ಮುನಿ ಜನಪದ~ ಆದರು. ಪಾ-ದಿಂದ ಪಾ-ವರೆಗಿನ ಮಧ್ಯದ ಅವಧಿಯಲ್ಲಿ ನಿರ್ದೇಶಿಸಿದ `ಪಾಂಡು ಐ ಲವ್ ಯೂ~, `ಯಾಕಿಂಗಾಡ್ತಾರೋ?~, `ಪತಿ ಪತ್ನಿ ಗುಲಾಮ~- ಎಲ್ಲವೂ (`ಪರಮಪದ~ ಒಂದನ್ನು ಬಿಟ್ಟು) ಹಾಸ್ಯ ಧಾರಾವಾಹಿಗಳೇ.
 
ಅಷ್ಟೂ ಧಾರಾವಾಹಿಗಳ ನಿರ್ಮಾಪಕರು ಸಿಹಿ ಕಹಿ ಚಂದ್ರು. ಅಷ್ಟರಮಟ್ಟಿನ ಹೊಂದಾಣಿಕೆ `ಮುನಿಯದ~ ಜನಪದ ಅವರದು.

ಹಾಸ್ಯ ಧಾರಾವಾಹಿಗಳಲ್ಲಿ ಸಂಭಾಷಣೆಯೇ ಪ್ರಧಾನವೇ?
ಹೌದು. ಒಳ್ಳೊಳ್ಳೆ ಪಂಚ್ ಇದ್ರೆ ಸಂಭಾಷಣೆ ಹಿತವಾದ ಹಾಸ್ಯ ಆಗುತ್ತೆ. ಸಂಭಾಷಣೆಯ ಗೈರುಹಾಜರಿಯಲ್ಲೂ ಒಳ್ಳೆ ಹಾಸ್ಯವನ್ನು ಸೃಷ್ಟಿಸಬೇಕು. ಆದರೆ ಅದು ಅಪಹಾಸ್ಯ ಆಗಬಾರದು, ತಿಳಿ ಹಾಸ್ಯ ಆಗಬೇಕು.

ಅಂದರೆ ನಟ- ನಟಿಯರ ಹಾವಭಾವದಲ್ಲೂ ಹಾಸ್ಯ ಹುಟ್ಟುತ್ತೆ. ಶೂನ್ಯವನ್ನು ಅವರು ಹೇಗೆ ತುಂಬ್ತಾರೆ, ಮಾತಿನ ಮೇಲೆ ಮಹಡಿ ಹೇಗೆ ಕಟ್ತಾರೆ ಅನ್ನೋದು ಮುಖ್ಯ. ಅಲ್ಲಿಗೆ ಕಲಾವಿದರು ಬಹಳ ಮುಖ್ಯ ಅಲ್ಲವೆ?
ಖಂಡಿತಾ. ಅವರೂ ಹಾಸ್ಯ ಸಂದರ್ಭಗಳನ್ನು ಬೆಳೆಸ್ತಾ ಹೋಗ್ತಾರೆ. ಒಂದು ಸಂಚಿಕೆಗೆ ಬೇಕಾದಷ್ಟು ಚಿತ್ರಕಥೆ, ಸಂಭಾಷಣೆಯನ್ನು ಲೇಖಕರು ಬರೆದಿರ‌್ತಾರೆ.

ಎಲ್ಲೋ ಸ್ವಲ್ಪ ಕಡಿಮೆ ಬಿತ್ತು ಅಂದ್ರೆ ನಾನು ಕಲಾವಿದರಿಗೆ ಹೇಳ್ತೀನಿ. ಅವರ ಕಲ್ಪನೆಗೇ ಬಿಡ್ತೀನಿ. ಅವರು ಬೆಳೆಸ್ತಾ ಹೋಗ್ತಾರೆ. ಒಳ್ಳೆಯ ಕಲಾವಿದರು ಸಿಕ್ಕರೆ ನಿರ್ದೇಶಕನ ಅರ್ಧ ಕೆಲಸ ಹಗುರಾಗಿಬಿಡುತ್ತೆ.

`ಪಾಂಡುರಂಗ ವಿಠಲ~ದಲ್ಲಿ ಒಳ್ಳೆಯ ಕಲಾವಿದರು ಇದ್ದಾರಲ್ಲ?
ಒಳ್ಳೇ ಟೀಂ ಇದೆ. ಜಹಾಂಗೀರ್ ನನ್ನ ಅರ್ಧ ಕೆಲಸ ಮಾಡಿಬಿಡ್ತಾನೆ. `ಪಾಪ ಪಾಂಡು~ ಧಾರಾವಾಹಿಯಿಂದ ಅಂದರೆ ಕಳೆದ ಎಂಟು ವರ್ಷಗಳಿಂದ ಒಟ್ಟಿಗೇ ಕೆಲಸ ಮಾಡ್ತಾ ಇದ್ದೇವೆ. ಅವರ ನನ್ನ ವೇವ್‌ಲೆಂತ್ ಒಂದೇ ಇದೆ.

ಬಿ.ಜಯಾ ಅವರಂತಹ ಹಿರಿಯ ಕಲಾವಿದೆಯೊಂದಿಗೆ ಕೆಲಸ ಮಾಡುವುದು ನನ್ನ ಭಾಗ್ಯ. ನರಸಿಂಹರಾಜು, ದ್ವಾರಕೀಶ್ ಜತೆಗೆ ಹಾಸ್ಯ ಪಾತ್ರಗಳಲ್ಲಿ ನಟಿಸಿದವರು ಅವರು. ನಟನೆ ಬಗ್ಗೆ ಈಗಲೂ ಅವರಿಗೆ ಅದೇ ಭಯ ಭಕ್ತಿ ಇದೆ.

ಪಾಂಡುರಂಗ ಗಂಡುಗಲಿಯ ಧರ್ಮಪತ್ನಿ ಪಾತ್ರದಲ್ಲಿ ಸಿಹಿ ಕಹಿ ಗೀತಾ ನಟಿಸುತ್ತಿದ್ದರು. ಅವರ ಬದಲಿಗೆ ಅಪೇಕ್ಷಾ ಬಂದಾಗ ಹೇಗೆ ಸ್ವೀಕರಿಸಿದರು?
ಅವರಿಗೆ ತದ್ವಿರುದ್ದ ವರ್ತನೆ ಮಾಡಬೇಕಿತ್ತು. ಜನ ಸ್ವೀಕರಿಸಿದರು. ಅದೇ ಒಂದು ಪವಾಡ. ಈಗ ಅಪೇಕ್ಷಾ ಹಾವಭಾವ ನಟನೆ ಜನರಿಗೆ ಬಹಳ ಇಷ್ಟ ಆಗಿದೆ. ಮೇಘಾಶ್ರೀ, ಜಹಾಂಗೀರ್, ಅಪೇಕ್ಷಾ ಕಾಂಬಿನೇಷನ್ ಬೊಂಬಾಟ್ ಆಗಿದೆ. ಪೆದ್ದು ಹುಡುಗನಂತೆ ಕಾಣುವ, ನಟಿಸುವ ಸತೀಶ್ಚಂದ್ರನೂ ಬಾಳ ಹಿಡಿಸಿದಾನೆ.

ಹಾಸ್ಯ ಧಾರಾವಾಹಿ ನಿರ್ದೇಶಕನ ಅರ್ಹತೆ ಏನು?
ನಾವು ತರಲೆ ಆಗಿರಬೇಕು. ಆಗ ಒಳ್ಳೆ ಹಾಸ್ಯ ಹುಟ್ಟುತ್ತೆ.

ನೀವು ತರಲೆ ಅನ್ನೋ ಹಾಗೆ ಕಾಣಿಸೋದಿಲ್ವಲ್ಲ?
ನೋಡಿದವರೆಲ್ಲ ಹಾಗೇ ಅಂತಾರೆ.. (ನಗು)

ಜತೆಗೆ ಮತ್ತೇನು ಬೇಕು? ನಿತ್ಯ ಹಾಸ್ಯ ಹೇಗೆ ಸೃಷ್ಟಿ ಮಾಡ್ತೀರಿ? ಇತರೆ ಭಾಷೆಯ ಹಾಸ್ಯ ಧಾರಾವಾಹಿಗಳನ್ನ ನೋಡುತ್ತೀರಾ?
ಬೇರೆ ಯಾವ ಭಾಷೆಯ ಹಾಸ್ಯ ಧಾರಾವಾಹಿಯನ್ನೂ ನಾನು ಅಷ್ಟಾಗಿ ನೋಡಲ್ಲ. ಯಾವಾಗಲಾದರೂ ಒಮ್ಮೆ ಇಂಗ್ಲಿಷ್ ಧಾರಾವಾಹಿ ನೋಡ್ತೇನೆ. ಅಲ್ಲಿಂದ ಪ್ರಭಾವಿತನಾದರೆ ನಮ್ಮ ಸ್ಥಳೀಯ ಸಂದರ್ಭಕ್ಕೆ ಅದನ್ನ ಹೇಗೆ ಹೊಂದಿಸಿಕೊಳ್ಳಬೇಕು ಅನ್ನೋದನ್ನ ಯೋಚನೆ ಮಾಡ್ತೀನಿ.

ನರಸಿಂಹರಾಜು, ಬಾಲಕೃಷ್ಣ ಅಭಿನಯದ ಹಾಸ್ಯ ದೃಶ್ಯಗಳು ಬಂದ್ರೆ ಮಾತ್ರ ಟೀವಿ ಮುಂದೆ ಪಟ್ಟಾಗಿ ಕುಳಿತುಬಿಡ್ತೇನೆ. ನರಸಿಂಹರಾಜು ಎಲ್ಲರಿಗಿಂತ ಎತ್ತರದ ಕಲಾವಿದ ಅನಿಸಿಕೊಂಡಿರೋದು ಅವರ ಹಾಸ್ಯದ ಅಭಿನಯದಿಂದ.

ಜನರನ್ನು ಅವರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸ್ತೇನೆ. ತರಕಾರಿ ಅಂಗಡಿಗೆ ಹೋದಾಗಲೂ, ಅಲ್ಲೇನಾದರೂ ನನಗೆ ಸ್ವಾರಸ್ಯ ಅನಿಸಿದರೆ ಸ್ವಲ್ಪ ಹೊತ್ತು ಅಲ್ಲೇ ನಿಂತುಬಿಡ್ತೇನೆ. ಪುಸ್ತಕಗಳನ್ನು ಓದ್ತೀನಿ.

ನಿಮ್ಮ ನಿರ್ದೇಶನದ ಹಾಸ್ಯ ಧಾರಾವಾಹಿಗಳ ಯಶಸ್ಸಿನ ಗುಟ್ಟೇನು?
ಸಮಾಜದ ಆಗುಹೋಗುಗಳನ್ನು, ಸಮಕಾಲೀನ ಸಂಗತಿಗಳನ್ನು ನರಸಿಂಹಮೂರ್ತಿಯವರು ತಮ್ಮ ತಿಳಿ ಹಾಸ್ಯದಲ್ಲಿ ಹೇಳ್ತಾರೆ. ಅದಕ್ಕೆ ತಕ್ಕನಾದ ಕಲಾವಿದರಿದ್ದಾರೆ. ಇವರೆಲ್ಲರನ್ನೂ ಸಂಯೋಜಿಸೋದು, ಅವರ ಅವ್ಯಕ್ತ ಪ್ರತಿಭೆ ಹೊರತೆಗೆಯೋದು ನನ್ನ ಕೆಲಸ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT