ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣಾ ಕರಾರು ಉಲ್ಲಂಘಿಸಿಲ್ಲ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಗರತ್ ರಸ್ತೆಯಲ್ಲಿರುವ `ಗರುಡಾ ಮಾಲ್~ ವಾಣಿಜ್ಯ ಸಂಕೀರ್ಣದಲ್ಲಿ ನಿರ್ವಹಣಾ ಕರಾರು ಉಲ್ಲಂಘಿಸಿಲ್ಲ ಎಂದು ಮೇವರಿಕ್ ಹೋಲ್ಡಿಂಗ್ ಸಂಸ್ಥೆಯು ಸ್ಪಷ್ಟಪಡಿಸಿದೆ.

`ಪ್ರಜಾವಾಣಿ~ಯ ಫೆಬ್ರುವರಿ 14ರ ಸಂಚಿಕೆಯಲ್ಲಿ `ಕಟ್ಟಡ ಒಪ್ಪಂದ ರದ್ದು: ಶಿಫಾರಸು~ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸ್ಪಷ್ಟೀಕರಣ ನೀಡಿರುವ ಸಂಸ್ಥೆಯು, ಪಾಲಿಕೆಯ ಆಯುಕ್ತರ ಸೂಚನೆ ಮೇರೆಗೆ ರಚನೆಯಾದ ಟಿವಿಸಿಸಿ ಮುಖ್ಯ ಎಂಜಿನಿಯರ್ ನೇತೃತ್ವದ ಸಮಿತಿ ನೀಡಿದ ವರದಿಯಲ್ಲಿನ ಬಹುತೇಕ ಅಂಶಗಳು ಏಕಪಕ್ಷೀಯ ಹಾಗೂ ಸತ್ಯಕ್ಕೆ ದೂರವಾದುದಾಗಿವೆ ಎಂದು ಆರೋಪಿಸಿದೆ.

ವಾಹನ ನಿಲುಗಡೆ ಪ್ರದೇಶವನ್ನು ಸಂಸ್ಥೆಯು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು ಕರಾರು ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬಿಬಿಎಂಪಿಯು ಏಳು ದಿನಗಳೊಳಗೆ ನೋಟಿಸ್ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಪಾಲಿಕೆಯೊಂದಿಗೆ ಸಂಸ್ಥೆಯು ಮಾಡಿಕೊಂಡ ಮೂಲ ಹಾಗೂ ನಿರ್ವಹಣಾ ಒಪ್ಪಂದದಂತೆ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶವಿದ್ದರೂ ಏಕಪಕ್ಷೀಯವಾಗಿ ನೋಟಿಸ್ ನೀಡಿ ಕ್ರಮ ಜರುಗಿಸುವ ಬೆದರಿಕೆ ಹಾಕುವುದು ಕೂಡ ಕಾನೂನಿಗೆ ವಿರುದ್ಧವಾದುದು ಎಂದು ಅದು ಪ್ರಕಟಣೆಯಲ್ಲಿ ವಾದಿಸಿದೆ.

ಮೂಲ ಒಪ್ಪಂದದಂತೆ ಪಾಲಿಕೆಯು ಸಂಸ್ಥೆಗೆ ಒಟ್ಟು 252 ಕಾರುಗಳ ನಿಲುಗಡೆ ಜಾಗದಲ್ಲಿ ಇನ್ನೂ 34 ಕಾರುಗಳ ನಿಲುಗಡೆ ಜಾಗ ಒದಗಿಸಿಲ್ಲ. ಆದರೂ, ಸಂಸ್ಥೆಯು ಈ ಜಾಗಕ್ಕೂ ನಿರ್ವಹಣಾ ಶುಲ್ಕ ಪಾವತಿಸುತ್ತಿದೆ. ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯು ಪಾಲಿಕೆಗೆ ಒಟ್ಟು 1.05 ಕೋಟಿ ರೂಪಾಯಿ ಶುಲ್ಕ ಪಾವತಿಸುತ್ತಿದೆ. ಇನ್ನು ಜಾಗ ಒದಗಿಸುವ ಸಂಬಂಧ ಪಾಲಿಕೆಯೊಂದಿಗೆ ಹಲವಾರು ಬಾರಿ ಪತ್ರ ವ್ಯವಹಾರ ನಡೆಸಿದರೂ ಇದಕ್ಕೆ ಸಂಬಂಧಿಸಿದ ಕಡತಗಳು ಲೋಕಾಯುಕ್ತ ಬಳಿಯಿವೆ ಎಂಬ ಸಬೂಬು ನೀಡಿ ಜಾರಿಕೊಂಡಿದೆ. ಇದಕ್ಕೆ ಸಂಸ್ಥೆ ಹೊಣೆಯೇ? ಎಂದು ಅದು ಪ್ರಶ್ನಿಸಿದೆ.

ಮೇವರಿಕ್ ಹೋಲ್ಡಿಂಗ್ ಪಾಲಿನ ಶೇ 58.25ರಷ್ಟು ಜಾಗವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮಾಲ್‌ಗೆ ಹೊಂದಿಕೊಂಡಂತಿರುವ ಜಾಗದಲ್ಲಿ ವಾಸ ಮಾಡುತ್ತಿದ್ದ ಐವರು ಕಾರ್ಮಿಕರಿಗೆ ಆಸ್ಟಿನ್ ಟೌನ್‌ನಲ್ಲಿ ಸಂಸ್ಥೆಯು ಮನೆ ನಿರ್ಮಿಸಿ, ಎರಡು ಜಾಗಗಳನ್ನು ಸ್ವಾಧೀನಪಡಿಸಿಕೊಂಡ ನಂತರ 8,059 ಚದರ ಅಡಿ ಬದಲಿಗೆ 11,515 ಚದರ ಅಡಿಗಳಷ್ಟು ಹೆಚ್ಚಿನ ಜಾಗ ಸಿಕ್ಕಿದೆ. ಇದರಿಂದ ಪಾಲಿಕೆ ಹಾಗೂ ಸಂಸ್ಥೆಗೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಹೊಸ ಸಿಡಿಪಿ ಪ್ರಕಾರವೂ ಸಂಸ್ಥೆಗೆ ಹೆಚ್ಚಿನ ಜಾಗ ಸಿಗಲಿದೆ. ಇದಕ್ಕಾಗಿ ಪರಿಷ್ಕೃತ ನಕ್ಷೆಗೆ ಮಂಜೂರಾತಿ ನೀಡುವಂತೆ 2007ರಲ್ಲಿಯೇ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಮಂಜೂರಾತಿ ನೀಡಿಲ್ಲ. ಕಾನೂನಿನ ಪ್ರಕಾರ, 30 ದಿನಗಳಲ್ಲಿ ಪರಿಷ್ಕೃತ ನಕ್ಷೆ ಮಂಜೂರಾತಿ ನೀಡದಿದ್ದಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಪರಿಗಣಿಸಿ ತನ್ನ ಪಾಲಿನ ಜಾಗವನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಅದು ತಿಳಿಸಿದೆ.

`ಗರುಡಾ ಮಾಲ್~ ನಿರ್ಮಾಣಕ್ಕಾಗಿ ಸಂಸ್ಥೆಯು ನೂರು ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಪಾಲಿಕೆಯ ಜಂಟಿ ಸಹಭಾಗಿತ್ವದಲ್ಲಿ ಕೈಗೊಂಡಿರುವ  ಈ ಯೋಜನೆಯ ಒಪ್ಪಂದದಂತೆ ಪಾಲಿಕೆಯ ಶೇ 41.75ರಷ್ಟು ಜಾಗದಲ್ಲಿ ಕಟ್ಟಡ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಆ ಜಾಗವನ್ನು ಪಾಲಿಕೆಯು ನಿರ್ವಹಣೆಗಾಗಿ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಪ್ರಸ್ತುತ ಸಂಸ್ಥೆಯು ಈ ಜಾಗದ ಭಾಗಶಃ ಮಾಲೀಕತ್ವವನ್ನು ಹೊಂದಿದೆ. ಬಂಡವಾಳ ಹೂಡಿದ ಸಂಸ್ಥೆಯು ಗುತ್ತಿಗೆ ಸಂಸ್ಥೆಯಲ್ಲ. ವಾಣಿಜ್ಯ ಸಮುಚ್ಚಯದ ನಿರ್ವಹಣೆಗಾಗಿ ಐದನೇ ಮಹಡಿಯಲ್ಲಿ ಸಂಸ್ಥೆಯ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದು ಮೇವರಿಕ್ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT