ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರರ ತೇರಿನಲಿ ಊರುಕೇರಿ

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

ಡಾ. ಸಿದ್ದಲಿಂಗಯ್ಯನವರ ಆತ್ಮಕತೆ ಊರುಕೇರಿಯ ನೂರನೇ ಪ್ರದರ್ಶನವನ್ನು ಹೆಗ್ಗೋಡಿನ `ಜನಮನದಾಟ~ ರಂಗತಂಡವು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತು.
 
ಬೆಟ್ಟದಂತೆ ಬಂದ ಜನಗಳ ಮಧ್ಯೆ ಕುಳಿತು ಸಿದ್ದಲಿಂಗಯ್ಯನವರೂ ನಾಟಕವನ್ನು ನೋಡಿದರು. ನೋಡಲು ಸಾಧಾರಣವಾಗಿರುವ ನಮ್ಮನ್ನು ಫೋಟೋಗ್ರಾಫರನು ತಾನು ತೆಗೆದ ಫೋಟೋದಲ್ಲಿ ಚೆನ್ನಾಗಿ ಕಾಣಿಸುವಂತೆ ನಿರ್ದೇಶಕ ಗಣೇಶ್ ಮಾಡಿದ ರಂಗರೂಪದಲ್ಲಿ ನನ್ನನ್ನು ನಾನೇ ನೋಡಿ ಬೆರಗುಗೊಂಡಿದ್ದೇನೆ ಎಂದು ಸಿದ್ದಲಿಂಗಯ್ಯನವರು ಹೇಳಿದ್ದು ಪ್ರಯೋಗ ನೋಡಿದ ಬಳಿಕ ನಿಜ ಎನ್ನಿಸಿತು.

ದಲಿತರ ಅಸ್ಮಿತೆ, ಅಸ್ತಿತ್ವದ ಹೆಮ್ಮೆಯ ಸಂಕೇತದಂತಿರುವ ಊರುಕೇರಿಯು ಬರೀ ಸಿದ್ದಲಿಂಗಯ್ಯನವರೊಬ್ಬರದೇ ಆತ್ಮಕತೆಯಾಗಿರದೆ ಇಡೀ ಸಮುದಾಯದ ಜೀವಂತಕತೆಯಾಗಿ ರಂಗದ ಮೇಲೆ ಮೂಡಿಬಂದದ್ದು ಆ ಕತೆಗೆ ಮತ್ತು ರಂಗಭೂಮಿಗೆ ನಿಜಕ್ಕೂ ಒಂದು ಅಮೂಲ್ಯ ಕಾಣಿಕೆ ಎಂದೇ ಹೇಳಬೇಕು. ನೀನಾಸಂ ರಂಗಶಿಕ್ಷಣ ಪಡೆದ ಹಲವು ಸಮಾನಮನಸ್ಕ ಯುವಕರು ಸೇರಿ ಕಟ್ಟಿಕೊಂಡ ರಂಗತಂಡವೇ `ಜನಮನದಾಟ~.

ಶ್ರೀನಿವಾಸ ವೈದ್ಯರ ಎರಡು ಸಣ್ಣಕಥೆಗಳನ್ನು ಆಧರಿಸಿ `ಶ್ರದ್ಧಾ ಮತ್ತು ಹಣತೆ~ ಎಂಬ ಮನಕಲಕುವ ಪ್ರಯೋಗದೊಂದಿಗೆ ನಾಟಕೇತರ ಸಾಹಿತ್ಯದ ಹಲವು ಪ್ರಕಾರಗಳನ್ನು ರಂಗದ ಮೇಲೆ ಶೋಧಿಸುವ ಕಾರ‌್ಯವನ್ನು ಆರಂಭಿಸಿದ `ಜನಮನದಾಟ~ ತಂಡವು ಹಲವು ಹೊಸಹೊಸ ರಂಗಸಾಧ್ಯತೆಯ ಅನ್ವೇಷಣೆಗೆ ತೊಡಗಿತು.

ತೇಜಸ್ವಿಯವರ ಸಣ್ಣಕಥೆಗಳು, ಅನಂತಮೂರ್ತಿಯವರ ಸಣ್ಣಕಥೆಗಳು, ಹೀಗೆ ಪ್ರಾರಂಭದಲ್ಲಿ ಮನುಷ್ಯನ ಭಾವನಾತ್ಮಕ ನೆಲೆಗಟ್ಟಿನ ಕತೆಗಳನ್ನಷ್ಟೇ ರಂಗಕ್ಕೆ ರೂಪಾಂತರಿಸುತ್ತಿದ್ದ ತಂಡವು ಲಕ್ಷ್ಮಣ ಗಾಯಕವಾಡರ `ಉಚಲ್ಯ~ ಎಂಬ ಆತ್ಮಕತೆಯ ಮೂಲಕ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ರಂಗಕ್ಕೆ ತರುವ ಸಾಹಸಕ್ಕೆ ಕೈಹಾಕಿತು.
 
ಮಾತ್ರವಲ್ಲದೆ ಮನುಷ್ಯನ ಸಾಮಾಜಿಕ ನೆಲೆಯ ಸ್ಥಿತಿಗತಿಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಮೂಲಕ ರಂಗಚಳವಳಿಯಲ್ಲಿ ಮುಖ್ಯವಾದೊಂದು ಹೆಜ್ಜೆಯಿಟ್ಟಿತು.
ಅದು ಸಿದ್ದಲಿಂಗಯ್ಯನವರ ಊರುಕೇರಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯನ್ನೂ ತಲುಪಿ ಜನಜನಿತವಾಗುವ ಮೂಲಕ ಸಾಕಾರಗೊಂಡಿತು ಕೂಡ.

ಪ್ರದರ್ಶನದ ಮೊದಲು ನಟರಾಜ ಹುಳಿಯಾರರು ಹೇಳಿದ  ಕರ್ನಾಟಕದಾದ್ಯಂತ ಹರಿದು ಹಂಚಿಹೋದ ದಲಿತ ಸಂಘರ್ಷ ಸಮಿತಿಯ ಹಲವು ಬಣಗಳನ್ನು ಈ ಪ್ರಯೋಗವು ಮತ್ತೆ ಕೂಡುವಂತೆ ಮಾಡಿದರೆ ಅದು ಆಶ್ಚರ್ಯವಿಲ್ಲ ಎಂಬ ಆಶಯದ ಮಾತು ನಿಜಕ್ಕೂ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ಸೇರಿದ್ದ ಡಿಎಸ್ಸೆಸ್ಸ್ ಕಾರ್ಯಕರ್ತರನ್ನು ಕಂಡಾಗ ನಿಜ ಎನ್ನಿಸಿತು. 

ಇನ್ನು ಪ್ರಯೋಗದ ಬಗ್ಗೆ ಬರುವುದಾದರೆ, ಸಾಧ್ಯವಾದಷ್ಟು ಕಡಿಮೆ ರಂಗಸಜ್ಜಿಕೆ, ರಂಗಪರಿಕರಗಳೊಂದಿಗೆ, ನಟ ತನ್ನ ಅಭಿನಯದ ಮೂಲಕವೇ ಅವೆಲ್ಲವನ್ನೂ ಕಟ್ಟಿಕೊಡಲು ಸಾಧ್ಯವಾಗುವಂತೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಹೊರಟ ತಂಡ ಜನಮನದಾಟ. ಹಲವು ಕಡೆ ಅದು ಯತಾರ್ಥ ರಂಗಸಜ್ಜಿಕೆ, ಪರಿಕರಗಳನ್ನು ಬಳಸಿದ್ದರೂ ಮಾಡಬಹುದಾದ ಪರಿಣಾಮವನ್ನು ಮಾಡುತ್ತಿರಲಿಲ್ಲವೇನೋ ಎಂಬಷ್ಟು ಪರಿಣಾಮಕಾರಿಯಾಗಿತ್ತು.

ಮನುಷ್ಯರನ್ನೇ ಎತ್ತುಗಳನ್ನಾಗಿ ಹೊಲ ಉಳುವ ದೃಶ್ಯ, ಮಂತ್ರಿಗಳ ಬರುವಿಕೆಯನ್ನು ಕಾಯುವ ಕೆಳಗಿನ ಹಟ್ಟಿಯ ಜನ, ಶಾಲೆ, ಮೆಜೆಸ್ಟಿಕ್ ಮೋರಿ, ಸಿನಿಮಾ ಕಟೌಟು, ಹೆಂಡದ ಅಂಗಡಿ, ಹಾಸ್ಟೆಲ್, ದೆವ್ವಗಳು, ರೈಲುತಡೆ ಹೋರಾಟ ಹೀಗೆ ಎಲ್ಲವನ್ನೂ ಅತಿ ಕನಿಷ್ಟ ರಂಗಪರಿಕರಗಳೊಂದಿಗೆ ನಟ ಬರೀ ತನ್ನ ಆಂಗಿಕ ಮತ್ತು ವಾಚಿಕದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು.

ರಂಗಸಜ್ಜಿಕೆಯಾಗಿ ಬಳಸಿದ್ದ ಕಪ್ಪು-ಬಿಳುಪಿನ ತೆರೆ  ಇಡೀ ಪ್ರಯೋಗದ ಉದ್ದಕ್ಕೂ ಇದ್ದದ್ದು ಒಟ್ಟಾರೆ ಪ್ರಯೋಗದ ಹಾಗೂ ಕತೆ ಸೊಲ್ಲೆತ್ತುತ್ತಿರುವ ಅಸಮಾನತೆಯ, ಅಸ್ಪೃಶ್ಯತೆಯ, ಒಳಿತು-ಕೆಡಕುಗಳ, ಬಡತನ-ಸಿರಿತನಗಳ ಬಿಚ್ಚು ಪ್ರತಿಮೆಯಾಗಿ ತೋರುತ್ತಿತ್ತು. ಪ್ರಯೋಗದ ಮುಖ್ಯಾಶಯವನ್ನು ಹೀಗೆ ಆ ಪರದೆಯೊಂದರಲ್ಲೇ ಹಿಡಿದಿಟ್ಟಿರುವುದು ನಿಜಕ್ಕೂ ನಿರ್ದೇಶಕರ ಜಾಣ್ಮೆಯನ್ನು ತೋರುತ್ತದೆ.

ಆದರೆ ಇಡೀ ಪ್ರಯೋಗದ ಲಯ ಒಮ್ಮಮ್ಮೆ ಬಿರುಸಾಗಿಯೂ ಮತ್ತೊಮ್ಮೆ ತುಂಬ ವಿಳಂಬಿತವಾಗಿ ಸಾಗುವುದು ಪ್ರಯೋಗ ಒಮ್ಮಮ್ಮೆ ಆಸಕ್ತಿಯನ್ನು ಕೆರಳುವಂತೆ ಮತ್ತೊಮ್ಮಮ್ಮೆ ನಿರಾಸಕ್ತಿ ಮೂಡುವಂತೆ ಮಾಡುತ್ತದೆ,

ಮತ್ತು ಆತ್ಮಕತೆಯಲ್ಲಿ ಬರುವ ವಸ್ತು-ವಿಷಯಗಳನ್ನು ರಂಗಕ್ಕೆ ರೂಪಾಂತರಿಸುವಾಗ ಯಾವ ಯಾವ ವಸ್ತುಗಳಿಗೆ ಎಷ್ಟೆಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ಇನ್ನೊಮ್ಮೆ ವಿವೇಚಿಸುವ ಅಗತ್ಯವಿತ್ತು. ತುಂಬ ಸುಲಭವಾಗಿ ನಾಟಕೀಯಗೊಳಿಸಬಹುದಾದ ವಸ್ತುಗಳನ್ನು ರಂಗದ ಮೇಲೆ ವಿಜೃಂಭಿಸಿ, ಆತ್ಮಕತೆಯಲ್ಲಿ ನಾಟಕೀಯತೆಯಿಲ್ಲದ ಅತಿಮುಖ್ಯವಾದ ವಸ್ತುವನ್ನು ಅಲಕ್ಷಿಸುವ ಅಪಾಯವಿರುತ್ತದೆ.

ಉದಾಹರಣೆಗೆ ಪೆರಿಯಾರರ ಪ್ರವೇಶಕ್ಕೆ ಬಳಸಿದ ಬರಹದ ದೊಡ್ಡಫ್ಲೆಕ್ಸಿನಿಂದಾಗಿ ಪ್ರಯೋಗದ ಚೌಕಟ್ಟಿನಲ್ಲಿ ಆ ದೃಶ್ಯವೊಂದಕ್ಕೆ ಅನಗತ್ಯವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗಿಬಿಡುತ್ತದೆ, ಹಾಗೂ ಇತರ ದೃಶ್ಯಗಳನ್ನೂ ಅದು ತಿಂದುಹಾಕುತ್ತದೆ. 

ಉಳಿದಂತೆ ಸಾಂದರ್ಭಿಕವಾಗಿ ಬಳಸಿದ ಸಿದ್ದಲಿಂಗಯ್ಯನವರ ಕವಿತೆಗಳು, ಸಿನಿಮಾ ಹಾಡುಗಳು ಪ್ರಯೋಗದ ರಂಜನೀಯತೆಯನ್ನು ಹೆಚ್ಚಿಸುವಲ್ಲಿ ನೆರವಾಯಿತು.

ಇದೆಲ್ಲ ಸಾಧ್ಯವಾದದ್ದು ಕಲ್ಲಪ್ಪ ಪೂಜಾರ,ಲಕ್ಷ್ಮಣ ಪೀರಗಾರ, ಚಂದ್ರಮ್ಮ, ಚಂದ್ರು ತಿಪಟೂರು, ಗಣೇಶ ಉಡುಪಿ, ಜಯರಾಮ, ಸೂರ‌್ಯ, ಶಿಲ್ಪಾ, ಚೈತ್ರಾ, ಅರುಣ್ ಮಾನ್ವಿ, ಮಹದೇವ ಲಾಲಿಪಾಳ್ಯ, ಮಂಜುನಾಥ್, ಡಿಂಗ್ರಿ ನರೇಶ, ಸಿತಾರ, ಸತ್ಯ ಹೆಗ್ಗೋಡು ಎಂಬ ಜನಮನದಾಟ ತಂಡದ ಸಶಕ್ತ ನಟವರ್ಗದಿಂದ ಹಾಗೂ ಪ್ರಯೋಗದ ಹಾಡುಗಳನ್ನು ಸಂಯೋಜಿಸಿ ಏಕಕಾಲದಲ್ಲಿ ಹಾಡುತ್ತ ವಾದ್ಯಗಳನ್ನು ನುಡಿಸುತ್ತಿದ್ದ ಸ್ವಾಮಿಗಾಮನಹಳ್ಳಿ ಮತ್ತು ಇವರೆಲ್ಲರನ್ನೂ ಒಂದು ಸೂತ್ರದಲ್ಲಿ ಸೇರಿಸಿ ರಂಗವಿನ್ಯಾಸವನ್ನೂ ಮಾಡಿ, ಮುಖ್ಯಪಾತ್ರದಲ್ಲಿ ಅಭಿನಯಿಸುತ್ತ ಇವರೆಲ್ಲರಿಗೆ ಸ್ಪೂರ್ತಿಯಂತಿದ್ದ ನಿರ್ದೇಶಕ ಗಣೇಶ್ ಹೆಗ್ಗೋಡು ಅವರಿಂದ.

ಇಷ್ಟರಲ್ಲೇ ಬೆಂಗಳೂರಿಗೆ ಬರಲಿರುವ ಅವರ ಹೊಸ ಪ್ರಯೋಗ ರೇವತಿ ಬರೆದ `ಹಿಜ್ರಾಳ ಆತ್ಮಕತೆ~- ಬದುಕು ಬಯಲು ಈ ಎಲ್ಲ ಕಾರಣಕ್ಕೆ ನಿರೀಕ್ಷೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT