ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ನನ್ನ ಜೀವನ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೆಣ್ಣಿಗೆ ಹೊನ್ನು ಅಂದವೋ; ಹೊನ್ನು ಹೆಣ್ಣಿಗೆ ಅಂದವೋ ಎಂಬ ಮಾತು `ಮೊಟ್ಟೆ ಮೊದಲಾ, ಕೋಳಿ ಮೊದಲಾ?~ ಎಂಬ ಮಾತಿನಷ್ಟೇ ಸಂಕೀರ್ಣವಾದದ್ದು. ಏನೇ ಆಗಲಿ, ಹೆಣ್ಣು ಹೊನ್ನು ಒಂದೆಡೆ ಮೇಳೈಸಿದಾಗ ಅಲ್ಲಿ ಚೆಲುವು ಝರಿಯಾಗುತ್ತದೆ.
 
ಖ್ಯಾತ ಭರತನಾಟ್ಯ ಕಲಾವಿದೆ ವಾಣಿ ಗಣಪತಿ ಅವರಿಗೆ ಪ್ರಪಂಚದ ಎಲ್ಲ ಬಗೆಯ ಚಿನ್ನದ ಆಭರಣಗಳೂ ಪ್ರಿಯವಂತೆ.

ತನ್ನ ಒಡನಾಡಿಗಳೆಲ್ಲರೂ ಕುಂಟೋಬಿಲ್ಲೆ, ಮರಕೋತಿ ಆಡುವಾಗ ಇವರು ನೃತ್ಯ ಮಾಡಲು ಆರಂಭಿಸಿದರಂತೆ. ಆಗ ಅವರಿಗೆ ವಯಸ್ಸು ನಾಲ್ಕು. ಟಿ.ಎ.ರಾಜಲಕ್ಷ್ಮಿ ಅವರಿಂದ ನೃತ್ಯದ ಪಟ್ಟುಗಳನ್ನು ಕಲಿತ ಅವರು ತಮ್ಮ ಏಳನೇ ವಯಸ್ಸಿನಲ್ಲಿಯೇ ಸಾರ್ವಜನಿಕ ಕಾರ್ಯಕ್ರಮ ನೀಡಿದ ಅಪರೂಪದ ಪ್ರತಿಭೆ.
 
ಅಲ್ಲಿಂದ ಇಲ್ಲಿವರೆಗಿನ ನೃತ್ಯಪಯಣ ಸಾಂಗವಾಗಿ ಮುಂದುವರಿದುಕೊಂಡು ಬಂದಿದೆ. 1970ರಲ್ಲಿ `ಟೀನ್ ಮಿಸ್ ಇಂಡಿಯಾ~ ಗೌರವಕ್ಕೆ ಪಾತ್ರರಾದ ವಾಣಿ; ಆಸ್ಟ್ರೇಲಿಯಾ, ಸಿಂಗಪೂರ್, ಮಲೇಷ್ಯಾ, ಚೀನಾ, ಜಪಾನ್, ನೇಪಾಳ, ಬರ್ಲಿನ್, ಸ್ಟಾಕ್‌ಹೋಂ, ಲಂಡನ್ ಮಧ್ಯಪ್ರಾಚ್ಯ ಹೀಗೆ ಅನೇಕ ದೇಶಗಳಲ್ಲಿ ಭರತನಾಟ್ಯದ ಕಂಪು ಸೂಸಿದ್ದಾರೆ.
 
ಫೆಬ್ರುವರಿ 18ರಿಂದ 20ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ `ಜ್ಯುವೆಲ್ಸ್ ಎಕ್ಸಾಟಿಕಾ~ ಮೇಳದ ರಾಯಭಾರಿ ವಾಣಿ ಗಣಪತಿ.

ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಚಿರಯೌವನೆ ತಮ್ಮ ನೃತ್ಯ ಪ್ರೀತಿ, ಜೀವನ ಪ್ರೀತಿ, ಒಡವೆಗಳ ಬಗ್ಗೆ ತಮಗಿರುವ ಮೋಹ, ತನಗೆ ಏನೇನು ಇಷ್ಟ ಎಂಬುದನ್ನು `ಮೆಟ್ರೊ~ ಜತೆ ಹಂಚಿಕೊಂಡರು.

ಪ್ರಪಂಚದಲ್ಲಿರುವ ಎಲ್ಲ ಬಗೆಯ ಆಭರಣಗಳೂ ಇಷ್ಟ ಎನ್ನುವ ಅವರಿಗೆ ಗೌರಿಶಂಕರ, ಚಿದಂಬರಂ ಹಾಗೂ ಟೆಂಪಲ್ ಜ್ಯುವೆಲರಿಗಳನ್ನು ಕಂಡರೆ ಮನಸ್ಸು ಅರಳುತ್ತದಂತೆ.

ಆ್ಯಂಟಿಕ್ ಆಭರಣಗಳ ಬಗ್ಗೆ ವಿಪರೀತ ಮೋಹ. `ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವ ಶಕ್ತಿ ಆಭರಣಕ್ಕಿದೆ. ಆಭರಣಗಳ ಬಗ್ಗೆ ನನಗೆ ನಿರ್ದಿಷ್ಟ ಟೇಸ್ಟ್ ಇದೆ. ಆಯ್ಕೆಯಲ್ಲಿ ಜಾಣತನವಿದೆ. ಇದೇ ಉದ್ದೇಶದಿಂದ ಇರಬೇಕು ಜ್ಯುವೆಲ್ಸ್ ಎಕ್ಸಾಟಿಕಾ ಮೇಳಕ್ಕೆ ನನ್ನನ್ನು ರಾಯಭಾರಿಯಾಗಿ ಆಯ್ಕೆ ಮಾಡಿರಬೇಕು~ ಎಂದು ನಗುತ್ತಾರೆ.
 
ವಾಣಿ ಆಡಿದ ಇನ್ನಷ್ಟು ನುಡಿಮುತ್ತುಗಳು ಹೀಗಿವೆ...

`ಎಕ್ಸಾಟಿಕಾ ಮೇಳದಲ್ಲಿ ಹೆರಿಟೇಜ್, ಟೆಂಪಲ್, ವಜ್ರಾಭರಣ ಹಾಗೂ ವಧುವಿನ ಆಭರಣಗಳ ದೊಡ್ಡ ಪ್ರದರ್ಶನ ಮತ್ತು ಮಾರಾಟವಿದೆ. ಕೋಲ್ಕತ್ತಾದಲ್ಲಿ ತಯಾರಾದ ಹ್ಯಾಂಡ್ ಮೇಡ್ ಕ್ರಾಫ್ಟ್ ಚಿನ್ನದ ಆಭರಣಗಳು ಪ್ರದರ್ಶನಗೊಳ್ಳುವುದು ಈ ಮೇಳದ ಮತ್ತೊಂದು ಆಕರ್ಷಣೆ.

ಮದುವೆ ಮತ್ತಿತರ ಶುಭ ಸಮಾರಂಭದಲ್ಲಿ ಸೀರೆ ಜತೆ ಭಾರತೀಯ ಶೈಲಿಯ ಆಭರಣಗಳನ್ನು ಹಾಕಿಕೊಂಡರೆ ಚೆಲುವು ಇಮ್ಮಡಿಯಾಗುತ್ತದೆ. ಕಾಕ್‌ಟೇಲ್ ಪಾರ್ಟಿಗಳಿಗೆ ವೆಸ್ಟರ್ನ್ ಶೈಲಿಯ ಬಟ್ಟೆ ತೊಡುವುದರಿಂದ ವೆಸ್ಟರ್ನ್ ಜ್ಯುವೆಲರಿ ತೊಡುತ್ತೇನೆ.

ಹೋದಲ್ಲೆಲ್ಲಾ ಜನರು ನನ್ನ ಸೌಂದರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾರೆ. ಕೆಲವರು ಅಸೂಯೆ ಕೂಡ ಪಟ್ಟುಕೊಂಡಿದ್ದಾರೆ. ಮತ್ತೆ ಕೆಲವರು ನಿಮ್ಮ ಚೆಲುವಿನ ಗುಟ್ಟೇನು ಎಂದು ಕೇಳುತ್ತಾರೆ.
 
ನೃತ್ಯವೇ ನನ್ನ ಸೌಂದರ್ಯದ ಗುಟ್ಟು. ನಾನು ಪಾರ್ಲರ್‌ಗೆ ಹೋಗುವುದಿಲ್ಲ. ತಾಯಿ ನನ್ನ ಬಗ್ಗೆ ತೋರಿದ ಕಾಳಜಿಯೇ ನನ್ನ ಚೆಲುವನ್ನು ಪೋಷಿಸಿ ಬೆಳೆಸಿತು. ನಾನು ಚಿರಯೌವನೆ ಆಗಿರಬೇಕು ಎಂದು ಬಯಸಿ, ಡಯಟ್ ಮಾಡುತ್ತಾ ಕೂರುವುದಿಲ್ಲ. ಸಾಕಷ್ಟು ತಿನ್ನುತ್ತೇನೆ. ಅದು ಎಂದಿಗೂ ನನ್ನ ಚೆಲುವನ್ನು ಕುಂದಿಸಿಲ್ಲ.

ನನಗೆ ದಕ್ಷಿಣ ಭಾರತದ ಬ್ರಾಹ್ಮಣರ ಅಡುಗೆ ಅಂದ್ರೆ ತುಂಬಾ ಇಷ್ಟ. ಮಾಂಸಾಹಾರದಲ್ಲಿ ಸೀ ಫುಡ್ ತುಂಬಾ ಇಷ್ಟ. ಸ್ವೀಟ್ಸ್, ಚಾಕೊಲೆಟ್ ಎಲ್ಲವೂ ಇಷ್ಟ. ಫುಡ್ ಬಗ್ಗೆ ಅಡ್ವೆಂಚರಸ್ ನಾನು. ಪ್ರಪಂಚದ ಎಲ್ಲ ಬಗೆಯ ಆಹಾರ ತಿನಿಸುಗಳನ್ನು ರುಚಿ ನೋಡಿದ್ದೇನೆ.

ಬೆಂಗಳೂರಿನಲ್ಲಿರುವ ಅಷ್ಟೂ ಹೋಟೆಲ್‌ಗಳ ಊಟದ ಸವಿಯನ್ನು ಸವಿದಿದ್ದೇನೆ. ಯುಬಿ ಸಿಟಿಯಲ್ಲಿರುವ ಎಲ್ಲ ರೆಸ್ಟೋರೆಂಟ್‌ಗಳು ನನಗೆ ಪ್ರಿಯ.

ಬಣ್ಣಗಳೆಂದರೆ ನನಗಿಷ್ಟ. ಬಣ್ಣಗಳೇ ಇಲ್ಲದ ಬದುಕು ಭಾವನೆಗಳೇ ಇಲ್ಲದೇ ಮಿಡಿವ ವೀಣೆಯಂತೆ. ಹಾಗಾಗಿ ಪ್ರತಿ ಬಣ್ಣವೂ ನನಗಿಷ್ಟ. ನನ್ನ ಇಬ್ಬರೂ ಸಹೋದರಿಯರು ಸ್ಲಿಮ್ ಆಗಿದ್ದಾರೆ. ನನ್ನಪ್ಪ 6.3 ಅಡಿ ಎತ್ತರವಿದ್ದರು. ಹಾಗಾಗಿ ನಾನು ಕೂಡ 5.7 ಅಡಿ ಎತ್ತರವಿದ್ದೇನೆ.

ನೃತ್ಯ ನನ್ನ ಜೀವನ. ಬಿಡುವಿನ ವೇಳೆಯಲ್ಲಿ  ಒಳಾಂಗಣ ವಿನ್ಯಾಸ ಮಾಡುವುದು ಇಷ್ಟ. ವಾರಕ್ಕೊಮ್ಮೆ ತರಹೇವಾರಿ ಅಡುಗೆ ಹಾಗೂ ಗಾರ್ಡೆನಿಂಗ್ ಕೂಡ ಮಾಡುತ್ತೇನೆ.
 
ನನ್ನ ಬಳಿ ಸಾಕಷ್ಟು ಆಭರಣಗಳ ಸಂಗ್ರಹವಿದೆ. ಆದರೆ ಎಷ್ಟು ಜತೆ ಇದೆ ಎಂದು ಹೇಳಿದರೆ ನನಗೇ ತೊಂದರೆ~. ವಾಣಿ ತಮ್ಮ ಮಾತಿಗೆ ಪೂರ್ಣವಿರಾಮ ಹಾಕಿದ್ದ ಕಣ್ಣು ಮಿಟುಕಿಸುವ ಮೂಲಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT