ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಗೆ ನೆರವಾದ ವೀಳ್ಯದೆಲೆ

Last Updated 10 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸುಳ್ಯ ತಾಲ್ಲೂಕಿನ ಕಲ್ಲುಗುಂಡಿ ಗ್ರಾಮದ ರೈತ ಮಹಿಳೆಯೊಬ್ಬರು ತಮ್ಮ ಮನೆಯ ಅಂಗಳದ ಐದು ಸೆಂಟ್ಸ್ ಜಾಗದಲ್ಲಿ ವೀಳ್ಯದೆಲೆ ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ವೀಳ್ಯದೆಲೆಗೆ ವರ್ಷವಿಡೀ ಬೇಡಿಕೆ ಇದೆ. ಮದುವೆ, ಮುಂಜಿ, ಪೂಜೆ, ವ್ರತ ಇತ್ಯಾದಿ ಮಂಗಳ ಕಾರ್ಯಗಳು ವೀಳ್ಯದೆಲೆ ಇಲ್ಲದೆ ನಡೆಯುವುದಿಲ್ಲ. ಊಟದ ನಂತರ ತಾಂಬೂಲ ಜಿಗಿಯಲೂ ವೀಳ್ಯದೆಲೆ ಬೇಕು. ಅನೇಕ ರೈತರಿಗೆ ವೀಳ್ಯದೆಲೆ ಬೇಸಾಯವೇ ಜೀವನಾಧಾರ.
 
ಸುಳ್ಯ ತಾಲ್ಲೂಕಿನ ಕಲ್ಲುಗುಂಡಿ ಪೇಟೆಯ ಫಿಲೋಮಿನಾ ಕುಟಿನ್ಹ ಅವರು ಕಳೆದ  ಹದಿನೈದು ವರ್ಷಗಳಿಂದ ವೀಳ್ಯದೆಲೆ ಬೆಳೆಯುತ್ತ ಬದುಕು ರೂಪಿಸಿಕೊಂಡಿದ್ದಾರೆ. ಅವರ ಮನೆಯ ಅಂಗಳದ 5 ಸೆಂಟ್ಸ್ ಜಾಗದಲ್ಲಿ ವೀಳ್ಯದೆಲೆ ಬೆಳೆಯುತ್ತಾರೆ.

ಜತೆಗೆ ಮೂರು ಹಸುಗಳನ್ನು ಸಾಕಿ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣವನ್ನು ಸಂಪಾದಿಸುತ್ತಾರೆ. ಒಂದು ಸಣ್ಣ ಕುಟುಂಬ ಜೀವನ ಮಾಡಲು ಹಲವು ಎಕರೆ  ಭೂಮಿ ಇರಬೇಕು ಎಂಬ ನಿರೀಕ್ಷೆಯನ್ನು ಅವರು ಸುಳ್ಳಾಗಿಸಿದ್ದಾರೆ. ಸಂತೃಪ್ತ ಜೀವನಕ್ಕೆ ಬೇಕಾದಷ್ಟು ಹಣವನ್ನು ಅವರು ವೀಳ್ಯದೆಲೆ ಬೇಸಾಯ ಮತ್ತು ಹೈನುಗಾರಿಕೆಯಿಂದ ಗಳಿಸುತ್ತಾರೆ.

ಫಿಲೋಮಿನಾ ಮೊದಲು ಬೀಡಿ ಕಟ್ಟುತ್ತಿದ್ದರು. ಒಮ್ಮೆ ಮನೆಗೆ ಬಂದ ಅವರ ಅಣ್ಣ ಮನೆ ಅಂಗಳದ ಖಾಲಿ ಜಾಗವನ್ನು ನೋಡಿ ವೀಳ್ಯದೆಲೆ ಬೆಳೆಯುವಂತೆ ಸೂಚಿಸಿದರು. ಅದಕ್ಕೆ ಬೇಕಾದ ಸಹಾಯವನ್ನೂ ಒದಗಿಸಿದರು. ಅಂದೇ ಫಿಲೋಮಿನಾ ಬೀಡಿ ಕಟ್ಟುವ ಕೆಲಸ ಬಿಟ್ಟು ವೀಳ್ಯದೆಲೆ ಬೇಸಾಯ ಆರಂಭಿಸಿದರು.

ಫಿಲೋಮಿನಾ ಅವರು ಮನೆಯ ಅಂಗಳದಲ್ಲಿ 60 ಎಲೆ ಬಳ್ಳಿಗಳನ್ನು ನೆಟ್ಟಿದ್ದಾರೆ. ಮರಕ್ಕೆ ಹಬ್ಬಿ ಇಳಿ ಬಿದ್ದ ಬಳ್ಳಿಗಳನ್ನು ನಾಲ್ಕು ಗೆಣ್ಣುಗಳಿರುವಂತೆ ಕತ್ತರಿಸಿ ಅವನ್ನೇ ನಾಟಿ ಮಾಡಿ ಒಟ್ಟು 60 ಬಳ್ಳಿಗಳಿರುವಂತೆ ನೋಡಿಕೊಂಡಿದ್ದಾರೆ.

ಬಳ್ಳಿಗಳ ಬುಡಕ್ಕೆ  ಹಸಿರೆಲೆ ಸೊಪ್ಪು ಹಾಕುತ್ತಾರೆ. ಎರಡು ತಿಂಗಳಿಗೊಮ್ಮೆ  ಕೊಟ್ಟಿಗೆ ಗೊಬ್ಬರ ಕೊಡುತ್ತಾರೆ. ಎತ್ತರ ಬೆಳೆದ ಬಳ್ಳಿಗಳ  ಆಧಾರಕ್ಕೆ ಗೂಟ ಕೊಟ್ಟಿದ್ದಾರೆ. ಅವರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಸೆಗಣಿ ಮತ್ತು ಬೂದಿ ಮಿಶ್ರಣ ಮಾಡಿ ಹಾಕಿದರೆ ಎಲೆಗಳು ಸಮೃದ್ಧವಾಗಿ ಬೆಳೆಯುತ್ತವೆ. ರುಚಿಯೂ ಹೆಚ್ಚು ಎನ್ನುತ್ತಾರೆ ಫಿಲೋಮಿನ.

ಮಳೆಗಾಲದಲ್ಲಿ ಒಂದು ಸೂಡಿ (80 ಎಲೆ)ಗೆ 9 ರೂ. ಸಿಕ್ಕಿದರೆ ಬೇಸಿಗೆಯಲ್ಲಿ 22 ರೂ. ಸಿಗುತ್ತದೆ. ಫಿಲೋಮಿನಾ ಅವರು ವಾರಕ್ಕೆ 75 ಸೂಡಿ ಎಲೆಗಳನ್ನು ಸ್ಥಳೀಯವಾಗಿ ಮಾರುತ್ತಾರೆ. ಎಲೆ ಮಾರಾಟದಿಂದ ಬೇಸಿಗೆಯಲ್ಲಿ ವಾರಕ್ಕೆ 1,500 ರೂ. ಗಳಿಸುತ್ತಾರೆ. ಇಬ್ಬರು ಪುಟ್ಟ ಮಕ್ಕಳಿರುವ ಅವರ ಕುಟುಂಬಕ್ಕೆ ಇದೇ ಆಧಾರ.

 ಒಂದು ಕುಟುಂಬಕ್ಕೆ ಮೂರು ಹಾಲು ಕರೆಯುವ ಹಸುಗಳು ಮತ್ತು ಐವತ್ತು ಎಲೆ ಬಳ್ಳಿಗಳಿದ್ದರೆ ನೆಮ್ಮದಿಯ ಜೀವನ ನಡೆಸಬಹುದು ಎನ್ನುವುದಕ್ಕೆ ಫಿಲೋಮಿನಾ ಅವರು ಉದಾಹರಣೆ.
ಅವರ ಮೊಬೈಲ್ ನಂಬರ್ 9900902084.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT