ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟ್ ರೈಡರ್ಸ್ ವರ್ಸಸ್ ಓಟ್ ಕೀಳರ್ಸ್‌!

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರಿಯ ವೀಕ್ಷಕರೇ, ನಾನು ಕಾಮೆಂಟ್ರಿಯೇಟರ್ ಕೋದಂಡ ತರಲೆಕ್ಯಾತ್‌ನಳ್ಳಿ ಕೆರೆ ಅಂಗಳಕ್ಕೆ ನಿಮ್ಮನ್ನ ಬರಮಾಡಿಕೊಳ್ತಿದೀನಿ. ಸೀರಿಯಲ್,ಕೋಟ್ಯಧಿಪತಿ ನೋಡ್ಕಂಡು ಬ್ರೇಕ್‌ನಲ್ಲಿ ಈ ನನ್ಮಕ್ಳು ಏನಾದ್ರು ನೋಡಣ ಅಂತ ಚಾನಲ್ ಚೇಂಜ್ ಮಾಡಿ ಐಪಿಲ್ ನೋಡಕ್ಕೆ ಬಂದಿರೋ ನಿಮಗೆ ಇಲ್ಲಿನ ಅಡಾವುಡಿಗಳ ಒಂದು ಅಪ್‌ಡೇಟ್ ಕೊಡ್ತಿದೀನಿ..

ನಿಮಗೆ ಗೊತ್ತಿರೋ ಹಾಗೆ `ಯಡ್ಡಿ ನೋಟ್ ರೈಡರ್ಸ್‌' ಮತ್ತು `ಚಡ್ಡಿ ಓಟ್ ಕೀಳರ್ಸ್‌' ಮಧ್ಯೆ 20:20 ಈಡಿಯಟ್ ಪೊಲಿಟಿಕಲ್ ಲೀಗ್‌ನ ನಿರ್ಣಾಯಕ ಹಣಾಹಣಿ ನಡೀತಾ ಇದೆ. ಅತ್ತ ಸಾಲ್ಟ್ ಲೇಕಲ್ಲಿ ಕತ್ರಿನಾ, ದೀಪಿಕಾ ಸೊಂಟ ಕುಣಿಸಿದ ಬೆನ್ನಿಗೇ ಇಲ್ಲಿ ಕೆರೆ ಅಂಗಳದಲ್ಲಿ ಚಿಯರ್ ಗರ್ಲ್ಸ್ ಚಿಕ್ನಿ ಚಮೇಲಿ, ಶೀಲಾ ಕಿ ಜವಾನಿ ಐಟಂಸಾಂಗ್‌ಗೆ ಕುಣಿದು ಕುಪ್ಪಳಿಸಿ ಐಪಿಎಲ್‌ನ ಗ್ರಾಂಡಾಗೇ ಉದ್ಘಾಟಿಸಿದಾರೆ.

ಯಡ್ಡಿ ನೇತೃತ್ವದ ವೈಎನ್‌ಆರ್ ತಂಡದಲ್ಲಿ ರೇಣುಕಪ್ಪ, ಹಾಲಪ್ಪ, ಓಲೇಕಾರ್, ಹರೀಶ್, ಸಿದ್ದರಾಮಯ್ಯ, ಶೃತಿ, ಶೋಭಾ, ರಕ್ಷಿತಾ, ಪರಮೇಶ್ವರ್, ಡಿಕೆಶಿ ಮೊದಲಾದವರಿದ್ದಾರೆ.'ಚೆಡ್ಡಿ ಕೀಳರ್ಸ್‌ ಸಾರಿ ಓಟ್ ಕೀಳರ್ಸ್‌' ಕಡೆ ಶೆಟ್ಟರ್ ನೇತೃತ್ವದಲ್ಲಿ ಈಶ್ವರಪ್ಪ, ಜೋ, ಕುಮಾರಣ್ಣ, ಅನಂತು, ರಾಧಿಕಾ, ಪೂಜಾ, ರಮ್ಯೋ, ಭಾವನಾ ಮೊದಲಾದ ಸ್ಟಾರ್ ಪ್ಲೇಯರ್ಸ್‌ ಇದಾರೆ. ಪರಮೇಶ್ ಮುಂದುವರೆಸ್ತಾರೆ.

`ನಮಸ್ಕಾರ ಕೋದಂಡ. ಇದೀಗ ಟಾಸ್ ಗೆದ್ದು ಚೆಡ್ಡಿ ಓಟ್ ಕೀಳರ್ಸ್‌ ಬ್ಯಾಟಿಂಗ್ ಆಯ್ಕೆ ಮಾಡ್ಕೊಂಡಿದಾರೆ! ನೋಟ್ ರೈಡರ್ಸ್‌ಗೆ ಹರಾಜಲ್ಲಿ ಅಂದ್ಕೊಂಡಷ್ಟು ಒಳ್ಳೇ ಪ್ಲೆಯರ್ಸ್‌ ಸಿಕ್ಕಿಲ್ಲ. ಆದರೂ  ಕಾಂಗ್ರೆಸ್ ಫ್ರಾಂಚೈಸ್ ಜೊತೆ ಒಳಒಪ್ಪಂದ ಇದೆ. ಚಡ್ಡಿ ಕೀಳರ್ಸ್‌ಗೆ ಕೂಡ ಹರಾಜಲ್ಲಿ ಹೇಳ್ಕೊಳುವಂತ ಆಟಗಾರರು ಸಿಕ್ಕಿಲ್ಲ. ಆಟಗಾರರೇ ಟೀಂ ಬಿಟ್ಟು ಹೋಗಿ ಇದ್ದ ಮಾನಾನೇ ಹರಾಜಾಗಿ ಹೋಗಿದೆ.' ಇದೀಗ ಶೆಟ್ಟರ್ ಪ್ಯಾಡೂ ಗಾರ್ಡೂ ಇಲ್ಲದೆ ಡೇ ಅಂಡ್ ನೈಟ್ ವಾಚ್‌ಮನ್ ಆಗಿ ಕ್ರೀಸಲ್ಲಿದ್ದಾರೆ. ಕೋದಂಡ, `ಶೆಟ್ಟರ್ ಪ್ಯಾಡಿಲ್ಲದೆ ಆಡ್ತಿರೋದರ ಬಗ್ಗೆ ಏನು ಹೇಳ್ತೀರಿ?'

`ಅವರು ಹಳೇ ಅನುಭವಿ ಪ್ಲೇಯರ್, ಈಗಾಗಲೇ ನಿಮಗೆ ಗೊತ್ತಿರೋ ಹಾಗೆ ಯಡ್ಡಿ ವಿಕೆಟ್ ಮೇಲೆ ಒಂದು ಬಾಲೂ ಎಸೆದಿಲ್ಲ. ಇಷ್ಟರ ಮೇಲೆ ಯಡ್ಡಿ ಹಳೇ ಬಾಲು ಹೆಚ್ಚು ತಿರುಗ್ತಿಲ್ಲ. ಯಡ್ಡಿ ನಾನು ವಿಕೆಟ್ ಉರುಳಿಸಲ್ಲ, ಅವರೇ ಹಿಟ್ ವಿಕೆಟ್ ಮಾಡ್ಕೊಂಡು ಒಬ್ಬೊಬ್ಬರಾಗಿ ಮನೆಗೆ ಹೋಗ್ತಾರೆ ಅಂತ ಹೇಳ್ತಾನೇ ಇದ್ರು. ಅವರು ಹಾಕಿದ ತಲೆ ಮೇಲಿಂದ ಹೋದ ಬೌನ್ಸರ್, ವಿಕೆಟ್ ಆಚೆ ಹೋದ ವೈಡ್, ಓವರ್‌ಗೆ ಆರು ನೋ ಬಾಲಿಂದ ಶೆಟ್ಟರ್ ನಿರಾಳವಾಗಿ ಎಕ್ಸ್‌ಟ್ರಾನಲ್ಲೇ ರನ್ ಪೇರಿಸಿದಾರೆ. ಪ್ಯಾಡು, ಗಾರ್ಡ್ ಅವಶ್ಯಕತೆನೇ ಬಂದಿಲ್ಲ'
`ಧನ್ಯವಾದ ಕೋದಂಡ, ಇನ್ನೊಂದು ತುದೀಲಿ ಸದಾನಂದ ಗೌಡ್ರು ಬ್ಯಾಟ್ ಹಿಡ್ಕೊಂಡು ಗರಂ ಆಗಿ ನಿಂತಿದ್ದಾರೆ.

ಕ್ಯಾಪ್ಟನ್ಸಿ, ಮ್ಯೋನೇಜರ್ ಗಿರಿ ಯಾವುದೂ ಸಿಕ್ಲಿಲ್ಲ ಅಂತ (ಬಿ) ಫಾರಂ ಕಳ್ಕಂಡಿರೋರ ತರ ಪೆಚ್ಚಾಗಿದಾರೆ. ಕೋಡಿ ಎಂಡಿಂದ ಯಡಿಯೂರಪ್ಪ ಓಡಿ ಬಂದು ಬೋಲ್ ಮಾಡಿದಾರೆ. ಶೆಟ್ಟರ್ ಬಲವಾಗಿ ಬ್ಯಾಟ್ ಬೀಸಿದಾರೆ. ಓ! ಬಾಲು ಗಾಳಿಯಲ್ಲಿ ಹಾರಿದೆ. ಓ! ಅದು ನಿಧಾನವಾಗಿ ರೇಣುಕಪ್ಪ ಅವರ ತಲೆ ಮೇಲೆ ಇಳೀತಿದೆ. ಅರೆರೆ! ರೇಣುಕಪ್ಪ ಎಲ್ಲೋ ನೋಡ್ತಿದಾರೆ. ಎಲ್ಲಿ?... ಓ! ಧನಂಜಯಪ್ಪ ಕೂಗ್ತಿದಾರೆ. ಹಾಂ! ರೇಣುಕಪ್ಪ ಮೇಲೆ ನೋಡುದ್ರು. ಕೈ ಒಡ್ಡುದ್ರು. ಇನ್ನೇನು ಹಿಡುದ್ರು... ಹಿಡಿದೇ ಬಿಟ್ರು... ಅಯ್ಯಯ್ಯೋ! ಬಾಲ್ ಕೈ ಜಾರಿ ಬಿದ್ದೇ ಹೋಯ್ತು. ಶೆಟ್ಟರ್ ಡ್ರಾಪ್ಡ್... ಒಂದು ಲೈಫ್ ಸಿಕ್ತು. ಇತ್ತ ಯಡಿಯೂರಪ್ಪ ಕಿಡಿಕಿಡಿ ಆಗ್ತಿದಾರೆ... ರೇಣುಕಪ್ಪ ಬಾಲ್ ನಾಕು ನಾಕು ಕಾಣಿಸ್ತು ಅಂತ ಏನೋ ಸಮಜಾಯಿಷಿ ಹೇಳ್ತಿದಾರೆ... ನೀವೇನು ಹೇಳ್ತೀರಿ ಕೋದಂಡ?'

`ನಾನು ಹೇಳೋದೇನಿದೆ? ಲಕ್ಷಾಂತರ ಟಿ.ವಿ. ವೀಕ್ಷಕರು ನೋಡ್ತಿದಾರೆ. ರೇಣುಕಪ್ಪ ಸ್ವಲ್ಪ ಡಿಸ್ಟರ್ಬ್ ಆಗಿದಾರೆ. ಅವರನ್ನ ಆಕ್ಚುಲೀ ಬೌಂಡರಿ ಲೈನ್‌ಗೆ ಯಡ್ಡಿ ಬಿಡಲ್ಲ. ಅವರು ಹಂಗಂಗೇ ಬಾಲ್ ಬದಲು ತಾವೇ ಬೌಂಡರಿ ಗೆರೆ ದಾಟಿ ಬಿಡ್ತಾರೆ ಅನ್ನೋ ಭಯ ಯಡ್ಡಿಗೆ. ಸೋ ಮಿಡ್ ಆನ್‌ನಲ್ಲಿ ಫೀಲ್ಡ್ ಮಾಡಕ್ಕೆ ಹಾಕಿದ್ರು. ರೇಣುಕಪ್ಪ ಎಲ್ಲೇ ಫೀಲ್ಡ್ ಮಾಡುದ್ರೂ ಫೈನ್‌ಲೆಗ್, ಡೀಪ್ ಫೈನ್ ಲೆಗ್ ಕಡೆನೇ ನೋಡ್ತಿರ‌್ತಾರೆ. ಅಲ್ಲಿ ಇಬ್ಬರು ಲೇಡಿ ಫೀಲ್ಡರ್ಸ್‌ ಇರೋದನ್ನ ನೀವು ಕ್ಲೋಸಪ್ಪಲ್ಲಿ ನೋಡ್ತಿರೋದ್ರಿಂದ ಅವರ ಹೆಸರು ಹೇಳೋ ಅಗತ್ಯ ಇಲ್ಲ. ಶೆಟ್ಟರ್ ಕ್ಯಾಚ್ ಕೊಟ್ಟಾಗಲೂ ಅವರ ಗಮನ ಆ ಕಡೆ ಇತ್ತು. ಧನಂಜಯಪ್ಪನೋರು ಕೂಗಿದಾಗ ಅಲರ್ಟ್ ಆದ್ರು. ಆದ್ರೆ ಯಾರೋ ಜಯಕ್ಕ ಬಂದ್ರು  ಅಂತ ಕೂಗಿದ್ರು. ಅವರು ಪೂರಾ ಶಾಕ್ ಆಗಿ ಕ್ಯಾಚ್ ಕೈ ಚೆಲ್ಲಿ ಬಿಟ್ರು..'

`ನೀವು ಹೇಳ್ತಿರೋದು ನಿಜ ಅನಿಸುತ್ತೆ. ಈ ಚಿಯರ್ ಗರ್ಲ್ಸ್ ಇದ್ರೂ ಇದೇ ಪ್ರಾಬ್ಲಂ ಆಗುತ್ತೆ ಅಲ್ಲವಾ?'
`ಆಕ್ಚುಲೀ ಅದೇನೂ ದೊಡ್ಡ ಪ್ರಾಬ್ಲಂ ಅಲ್ಲ. ಯಾಕಂದ್ರೆ ಈ ಈಡಿಯಟ್ ಲೀಗಲ್ಲಿ ಹೆಚ್ಚು ಜನ ಮುದುಕ್ರೇ ಆಡ್ತಿರೋದು. ಜನ ಇವರನ್ನ ನೋಡಕ್ಕೆ ಬರೋದು ಕಮ್ಮಿ. ಹಾಗಾಗಿ ಎತ್ತಕ್ಕೆ ಚಿಯರ್ಸ್‌ ಗ್ಲಾಸು. ನೋಡಕ್ಕೆ ಚಿಯರ್ ಗರ್ಲ್ಸ್ ಇಲ್ಲದಿದ್ರೆ ಏನು ಮಜಾ ಇರುತ್ತೆ ಹೇಳಿ?'
  `ಒಪ್ಕೊಬೇಕಾದ್ದೇ ಮಿಸ್ಟರ್ ಕೋದಂಡ. ಅದಕ್ಕೇ ಅಂತ ಎಲ್ಲಾ ಟೀಮ್‌ಗಳಲ್ಲೂ ಸ್ಟಾರ್ ಅಟ್ರಾಕ್ಷನ್ ಜಾಸ್ತಿ ಆಗ್ತಿದೆಯಲ್ಲ. ನೋಟ್ ರೈಡರ್ಸ್‌ನ ನಾವು ಕುಡಿ ನೋಟ ರೈಡರ್ಸ್‌, ಚಡ್ಡಿ ಓಟು ಕೀಳರ್ಸ್‌ನ ತುಂಡು ಹೈಕ್ಳು ಇಲೆವನ್ ಅನ್ನಬಹುದೇನೋ?'

`ಓಹ್! ವೆರಿ ಇಂಟರೆಸ್ಟಿಂಗ್! ಅಯ್ಯಯ್ಯೋ ರನೌಟ್..! ನಾವು ನಿಮಗೆ ಕೆಲವು ಉಪಯುಕ್ತ ಡಾಟಾ ಕೊಡ್ತಿರಬೇಕಾದ್ರೆ ಸದಾನಂದ ಗೌಡ್ರು ರನ್‌ಔಟ್ ಆಗಿದಾರೆ. ಯಡ್ಡಿಗೆ ತುಂಬಾ ಸಿಟ್ಟಿತ್ತು. ಹಳೇ ಆವೃತ್ತಿಲಿ ಕ್ಯಾಪ್ಟನ್ ಮಾಡುದ್ರೂ ತಮ್ಮನ್ನೇ ಟೀಮಿಂದ ಕಿತ್ ಹಾಕಿಸುದ್ರು ಅಂತ. ಅದನ್ನ ತೀರಿಸ್ಕೊಂಡಿದಾರೆ!'

`ನಿಜ, ಅವರ ಜಾಗಕ್ಕೆ ಈಗ ಈಶ್ವರಪ್ಪ ಬರ‌್ತಿದಾರೆ. ಇನ್ನೂ ಚೆಡ್ಡಿ ಟೀಮಲ್ಲಿ ಆಡೋರು ತುಂಬಾ ಜನ ಇದಾರಲ್ಲವಾ ಕೋದಂಡ?'
  `ಹೌದು ಪರಮೇಶ್! ಕುಮಾರಣ್ಣಂಗೆ 20:20 ಆಡಿ ಚೆನ್ನಾಗೇ ಅಭ್ಯಾಸ ಇದೆ. ಯಡ್ಡಿ ಬಾಲ್ ಎಲ್ಲಿ ತಿರುಗುತ್ತೆ? ಹೇಗೆ ಬಾರಿಸಬೇಕು? ಎಲ್ಲಿ ತೂರಿಸಬೇಕು ಅಂತ ಅವರಿಗೆ ಗೊತ್ತಿದೆ'

  `ಆದ್ರೆ ತಮ್ಮ ತರನೇ ಯಡ್ಡಿ ಹೊಸ ಫ್ರಾಂಚೈಸ್ ಕಟ್ಟಿರೋದು ಕುಮಾರಣ್ಣಂಗೆ ನುಂಗಲಾರದ ತುತ್ತಾಗಿದೆ. ಹೊಸ ಕ್ಯಾಪ್ಟ್‌ನ್ ಜೋ ಒಂದೆರಡು ಸಿಕ್ಸರ್ ಹೊಡೀಬಹುದಾ?'
  `ಸ್ವಲ್ಪ ಕಷ್ಟ ಇದೆ. ಈ ಕಡೆಯಿಂದ ಎಲ್ಲಾ ಉದುರಿ ಹೋದ್ರೆ ಅವರು ಒಂದ್ಕಡೆ ನಿಂತ್ಕೊಂಡು ಏನು ಪ್ರಯೋಜನ? ಬೊಮ್ಮಾಯಿ, ಸೋಮಣ್ಣ, ನಿರಾಣಿ ಎಲ್ಲಾ ಯಡ್ಡಿ ಮುಂದೆ ಬ್ಯಾಟ್ ಹಿಡಿದು ಅವರ ಗೂಗ್ಲಿ ಎದುರಿಸೋದು ಕಷ್ಟ. 20 ಓವರ್ ನೆಗೆದು ಬಿದ್ದು ಹೋಗ್ಲಿ ಅಂತ ಒದ್ದಾಡ್ತಿರ‌್ತಾರೆ..'

`ಪ್ರೇಕ್ಷಕರೇ! ಇದೀಗ ವೈಸ್ ಕ್ಯಾಪ್ಟನ್ ಈಶ್ವರಪ್ಪ ಬುಸುಗುಡ್ತಾ ಒಂದು ರನ್ ಹೊಡೆದಿದಾರೆ. ಓಡಕ್ಕಾಗಲ್ಲ ಅಂತ ಮಗನ್ನ ರನ್ನರ್ ಆಗಿ ಕರ‌್ಕೊತಿದಾರೆ..' 
  `ನೋಟ್ ರೈಡರ್ಸ್‌ ಕಡೆ ಪರಮೇಶ್ವರಪ್ಪ, ಸಿದ್ದರಾಮಣ್ಣ ಏನಾದರೂ ಬ್ಯಾಟ್ ಬೀಸ್‌ಬಹುದಾ?'
  `ಈ ಸಾರಿ ಫ್ರಾಂಚೈಸ್ ಓನರ್ ಸೋನಿಯಮ್ಮ ಸಿಕ್ಕಾಪಟ್ಟೆ ಟ್ರೈನಿಂಗ್ ಕೊಡಿಸಿದಾರಂತೆ..! ಸಿದ್ರಾಮಣ್ಣ ಟೀಂ ಸೆಟ್ ಮಾಡೋದ್ರಲ್ಲೇ ಸುಸ್ತಾಗಿ ಹರ್ಟಾಗಿದಾರಂತೆ..! ಹಳೇ ಆಲ್‌ರೌಂಡರ್ ಪಾಂಚ್‌ಜನ್ಯ ಕಷ್ಣಂಗೆ ಶಂಖ ಬೇಡ, ವಿಶಲ್ ಊದಿ ಅಂಪೈರಿಂಗ್ ಮಾಡಿ, ಆಡೋದು ಬೇಡ ಅಂದಿದಾರಂತೆ..!'

`ಈ ಮಧ್ಯೆ ಉದಾಸಿ ಬೋಲ್ ಮಾಡಿದ ಚೆಂಡನ್ನ ಈಶ್ವರಪ್ಪ ಪಿಚ್ ಮೇಲೆ ವಾಪಸ್ ಕಳಿಸಿದಾರೆ. ಪಿಚ್‌ನ ಕುಟ್ಟಿ ಕುಟ್ಟಿ ನೋಡ್ತಿದಾರೆ. ಪಿಚ್ ಸರಿಯಲ್ಲ ಅಂತ ಹೇಳ್ತಿರೋ ಹಾಗಿದೆ. ಹಿಂದ್ಗಡೆ ಕೀಪರ್ ಬಿ.ಪಿ.ಹರೀಶ್ ಏನೋ ಚಮ್ಕಾಯಿಸಿರೋ ಹಾಗಿದೆ. ಬ್ಯಾಟ್ ಬೀಸಲಾಗದವನು ಪಿಚ್ ನೆಟ್ಟಗಿಲ್ಲ ಅಂದ್ನಂತೆ ಅಂತ ಏನೋ ಹೇಳಿರಬೇಕು. ಈಶ್ವರಪ್ಪ ರೌದ್ರಾವತಾರ ತಾಳಿದಾರೆ. ನಂಗೆ ಕಿರಣ್ ಮೋರೆ, ಮಿಯಾಂದಾದ್ ಜಗಳ ನೆನಪಾಗ್ತಿದೆ. ಮಾತಿನ ಚಕಮಕಿ ನಡೀತಿದೆ. ಆಟಗಾರರೆಲ್ಲಾ ಗುಂಪಾಗಿ ಪರಸ್ಪರ ಬೈದಾಡ್ತಿದಾರೆ. ಪ್ರೇಕ್ಷಕರ ಕಡೆಯಿಂದ ಕಲ್ಲು, ಚಪ್ಪಲಿ, ಕೊಳೆತ ಮೊಟ್ಟೆ ಬರ‌್ತಿವೆ.'

`ಕೀಪರ್ ಬಿ.ಪಿ.ಹರೀಶ್ ಸ್ಕ್ರೀಸ್‌ನೇ ಅಳಿಸಿ ಸ್ಟಂಪ್ ಔಟ್ ಮಾಡಕ್ಕೆ ನೋಡ್ತಿದಾರೆ ಅಂತ ಈಶ್ವರಪ್ಪ ಉರ‌್ಕೊತಿದಾರೆ. ಪಕ್ಕದ ಸ್ಲಿಪ್ಪಲ್ಲಿರೋ ಭಾವನಾ, ನೀರು ದೋಸೆ ರಮ್ಯೋ ಏನೋ ಗುಸುಗುಸು ಅಂತಿದಾರೆ. ಯಾರೋ ಮೊಬೈಲಲ್ಲಿ ಫೋಟೊ ತೆಗೆದ್ರು ಅಂತ ನೀರು ದೋಸೆ ಗರಂ ಆಗಿರುವಂತಿದೆ..'

`ಸಿನಿಮಾದಲ್ಲಿ ನೀರಲ್ಲಿ ಡೈ ಹೊಡುದ್ರೂ ಪರವಾಗಿಲ್ಲ. ಇಲ್ಲಿ ಬಾಲಿಗೆ ಡೈ ಹೊಡೆದಾಗ ಫೋಟೊ ತೆಗೀಬಾರದು ಅಂದ್ರೆ ಹೇಗೆ? ಹೋಗ್ಲಿ ಬಿಡಿ. ಇಲ್ಲೂ ಏನಾದರೂ ಮ್ಯೋಚ್ ಫಿಕ್ಸಿಂಗ್ ನಡೆಯೋ ಸಂಭವ ಇದೆಯಾ?'
`ಐಪಿಎಲ್ ಅಂದ್ರೇ ಮೊದಲೇ ಮಿಕ್ಸಿಂಗ್! ಎಲ್ಲಾ ಕಲಬೆರಕೆ..! ಇನ್ನು ಫಿಕ್ಸಿಂಗ್ ಇಲ್ಲ ಅಂತ ಹೇಳಕ್ಕಾಗಲ್ಲ. ಹಿಂದೆ ಆಪರೇಶನ್ ಆಗಿರೋ ಕೆಲ ಆಟಗಾರರು ಫಿಕ್ಸ್ ಆದರೂ ಆಗಬಹುದು'

`ಪರ‌್ಮೇಶ್,ಈ ಸಂದರ್ಭದಲ್ಲಿ ಆಲ್‌ರೌಂಡರ್ ರೆಡ್ಡಿ ಇದ್ದಿದ್ರೆ 20:20 ಕಳೆನೇ ಬೇರೆ ಆಗ್ತಿತ್ತಲ್ಲವಾ?'
  `ಎಕ್ಸಾಕ್ಟ್‌ಲೀ! ಅವರೇ ರಾಮಪ್ಪನೋರ ಜೊತೆ ಸೇರ‌್ಕಂಡು ಒಂದು ಫ್ರಾಂಚೈಸ್ ಕಟ್ತಿದ್ರು. ಗಣಿ ಡೇರ್ ಡೆವಿಲ್ಸ್ ಅಂತ. ಆಡೋಕೆ, ಆಡದೆ ತೆಪ್ಪಗಿರೋಕೆ ಎರಡಕ್ಕೂ ಕೋಟಿ ಹರಾಜಲ್ಲಿ ಕೊಂಡು  ಎಲ್ಲರನ್ನೂ ಉಡಾಯಿಸಿಬಿಡ್ತಿದ್ರು. ಅವರಿಲ್ಲದೆ ಮ್ಯೋಚ್‌ಗೆ ಕಳೇನೇ ಇಲ್ಲ ಅನಿಸ್ತಿದೆ.'

ಪಿಚ್ ಮಧ್ಯೆ ಇನ್ನೂ ಜಗಳ ಮುಂದುವರೆದಿದೆ. ಹೌದು, ಬಾಲ್ ಶೇಪ್ ಕಳ್ಕೊಂಡಿದೆ, ಯಡಿಯೂರಪ್ಪ ಉಜ್ಜಿ ಏನೋ ಮಾಡಿದಾರೆ ಅಂತ ಈಶ್ವರಪ್ಪ ಕ್ಯಾತೆ ತೆಗೆದಿದಾರೆ. ಯಡ್ಡಿ ಬಾಲಿನ ಮನೆ ಹಾಳಾಯ್ತು, ನೀವೇ ಶೇಪ್ ಕಳ್ಕಂಡಿದೀರ ಅಂದದ್ದೇ ಜಗಳಕ್ಕೆ ಕಾರಣ ಆಗಿ ಬಗೆಹರಿಯೋ ಲಕ್ಷಣ ಕಾಣುಸ್ತಿಲ್ಲ. ಈ ಮಧ್ಯೆ ಡ್ರಿಂಕ್ಸ್ ಅಂಗಳಕ್ಕೆ ಬರ‌್ತಿದೆ. ರೇಣುಕಪ್ಪ ಸಾಫ್ಟ್ ಜೊತೆಗೆ ಹಾಟೂ ಕೊಡಿ ಅಂತ ಕೇಳ್ತಿರೋ ಹಾಗಿದೆ. ಹಾಲಪ್ಪ, ಕೆಲವರು ಮೊಬೈಲಲ್ಲಿ ಏನೋ ನೋಡ್ತಿದಾರೆ.

ಆದರೆ ಅದು ಟಿ.ವಿ. ಕ್ಯಾಮರಾಗೆ ಸಿಗದಂತೆ ಹುಶಾರಾಗಿದಾರೆ. ಈ ಜಗಳದ ಮಧ್ಯೆ ನಮಗೇನು ಕೆಲಸ ಅಂತ ಲೇಡಿ ಪ್ಲೇಯರ್ಸ್‌ ಡ್ರೆಸಿಂಗ್ ರೂಂಗೆ ಹೋಗಿದಾರೆ. ಆದ್ದರಿಂದ ಇಲ್ಲಿ ಇನ್ನು ಸ್ವಾರಸ್ಯಕರವಾದ್ದು ಏನೂ ಇಲ್ಲ. ಮಿಕ್ಕಿದ್ದನ್ನ ಹೈಲೈಟ್ಸಲ್ಲೋ, ನ್ಯೂಸಲ್ಲೋ ನೋಡ್ಕೊಬಹುದು. ನೀವು ವಾಪಸ್ ಸೀರಿಯಲ್ ನೋಡೋಕ್ಕೆ ಹೋಗಬಹುದು. ಓವರ್ ಟು ಸೀರಿಯಲ್ಸ್...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT