ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಲಟದ ಪಥದಲ್ಲಿ ದಲಿತ ಉದ್ಯಮಿಗಳು!

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಾವು ಉದ್ಯೋಗ, ಮೀಸಲಾತಿ ಕೇಳುತ್ತಿಲ್ಲ. ನಾವೇ ಉದ್ಯೋಗ ಕೊಡುತ್ತಿದ್ದೇವೆ. ನಾವೀಗ ಉದ್ಯೋಗದಾತರೇ ಹೊರತು ಉದ್ಯೋಗ ಕೇಳುವವರಲ್ಲ...

ಆ ಮಾತಿನಲ್ಲಿ ದೃಢವಾದ ಆತ್ಮವಿಶ್ವಾಸವಿತ್ತು. ದಮನಿತ ಸಮುದಾಯ ಈವರೆಗೆ ಅನುಭವಿಸಿದ ನೋವುಗಳನ್ನು ಮೀರಿದ ಹೊಸದೊಂದು ಆಶಾಕಿರಣ ಇಣುಕುತ್ತಿತ್ತು.

ದಲಿತರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ (ಡಿಐಸಿಸಿಐ-ಡಿಕ್ಕಿ) ಕರ್ನಾಟಕ ಘಟಕದ ಅಧ್ಯಕ್ಷ ರಾಜಾನಾಯ್ಕ ಈ ಮಾತುಗಳನ್ನಾಡುವಾಗ ತಾವೊಂದು ಹೊಸ ದಿಕ್ಕು, ಚಿಂತನೆಯಲ್ಲಿ ಸಾಗುತ್ತಿರುವುದನ್ನು ವ್ಯಕ್ತಪಡಿಸಿದರು.

ದಲಿತ ಉದ್ಯಮಿಗಳು ರಚಿಸಿಕೊಂಡ `ಡಿಕ್ಕಿ' ದೇಶದಲ್ಲಿರುವ ಇತರ ವಾಣಿಜ್ಯ ಮಂಡಳಿಗಳಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪ್ರಯತ್ನದಲ್ಲಿ ಸಾಗಿದೆ. ದಲಿತ ಸಮುದಾಯದಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ, ಸ್ವಾವಲಂಬನೆ ಮೂಡಿಸಿ ಉದ್ಯಮ ವಲಯದಲ್ಲಿನ ಅವಕಾಶಗಳಿಗಾಗಿ ತಡಕಾಡುತ್ತಿದೆ.

ಈ ಸ್ಥಿತ್ಯಂತರದ ಮಧ್ಯೆಯೂ ಶ್ರೇಣಿಕೃತ ಸಮಾಜದಲ್ಲಿನ ವ್ಯವಸ್ಥೆಯನ್ನು ಎದುರಾಗುವ ಸವಾಲುಗಳಿಗೆ `ಡಿಕ್ಕಿ' ಮುಖಾಮುಖಿಯಾಗಿ ನಿಲ್ಲುವುದೇ? ಜತೆಗೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಫಿಕ್ಕಿ), ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ) ಮೊದಲಾದ ವಾಣಿಜ್ಯ ಮತ್ತು ಕೈಗಾರಿಕೆ ಸಂಘಟನೆಗಳು ಅಸ್ತಿತ್ವದಲ್ಲಿರುವಾಗ ದಲಿತ ಉದ್ಯಮಿಗಳ ಪ್ರತ್ಯೇಕ ಒಕ್ಕೂಟ ರಚನೆಯ ಅಗತ್ಯವಿತ್ತೆ? ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಂಡವಾಳಶಾಹಿ ವ್ಯವಸ್ಥೆಯೂ ಒಂದು ಪರಿಹಾರವಾಗಬಲ್ಲದೇ? ಮುಂತಾದ ಪ್ರಶ್ನೆಗಳು `ಡಿಕ್ಕಿ' ಅಸ್ತಿತ್ವಕ್ಕೆ ಬಂದಾಗ ಉದ್ಭವಿಸಿದ್ದು ಸಹಜ. ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಸಾಗಿರುವ `ಡಿಕ್ಕಿ' ಈಗ ದಶಕದ ಹಾದಿಯಲ್ಲಿದೆ.

ಪುಣೆ ಮೂಲದ `ಡಿಕ್ಕಿ' 2005ರ ಏಪ್ರಿಲ್ 14ರಂದು ಸಿವಿಲ್ ಎಂಜಿನಿಯರ್ ಹಾಗೂ ಉದ್ಯಮಿ ಮಿಲಿಂದ್ ಕಾಂಬ್ಳೆ ಅವರ ಪ್ರಯತ್ನದಿಂದ ಸ್ಥಾಪನೆಗೊಂಡಿತು. ಈಗ ಮಿಲಿಂದ್ ಕಾಂಬ್ಳೆ ಅವರೇ `ಡಿಕ್ಕಿ' ಅಧ್ಯಕ್ಷರು. ಮಹಾರಾಷ್ಟ್ರದ ಲಾತೂರಿನ ಶಿಕ್ಷಕನ ಮಗ ಮಿಲಿಂದ್ ಕಾಂಬ್ಳೆ ಅವರಿಗೆ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಉದ್ಯೋಗ ಸುಲಭವಾಗಿ ದೊರೆಯುತ್ತಿತ್ತು. ಸರ್ಕಾರಿ ಉದ್ಯೋಗಕ್ಕೆ ಆಸೆ ಪಡದೆ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ಆರಂಭಿಸಿದ ಮಿಲಿಂದ್ ಕಾಂಬ್ಳೆ, ಇಂದು ಸ್ವಂತ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಉದ್ಯಮ ವಲಯದಲ್ಲಿನ ಸಾಧನೆಗಾಗಿ ಪ್ರಸಕ್ತ ವರ್ಷ ಮಿಲಿಂದ್ ಕಾಂಬ್ಳೆ ಅವರಿಗೆ ಸರ್ಕಾರ `ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ.

`ರಾಜಕೀಯದಲ್ಲಿ ದಲಿತ ನಾಯಕರಿದ್ದಾರೆ. ಅತ್ಯುತ್ತಮ ದಲಿತ ಚಿಂತಕರಿದ್ದಾರೆ. ಆದರೆ, ಉದ್ಯಮ ವಲಯದಲ್ಲಿ ಮಾತ್ರ ದಲಿತ ನಾಯಕರ ಕೊರತೆ ಇದೆ.  ಆದ್ದರಿಂದ ಉದ್ಯಮ ವಲಯದಲ್ಲಿ ದಲಿತ ನಾಯಕರನ್ನು ಸೃಷ್ಟಿಸಬೇಕಾಗಿದೆ' ಎನ್ನುತ್ತಾರೆ ಮಿಲಿಂದ್ ಕಾಂಬ್ಳೆ.

`ಸಾಮಾನ್ಯವಾಗಿ ದಲಿತರು ಒಂದು ಉದ್ಯಮ ಆರಂಭಿಸುವಾಗ ಯಾವುದೇ ರೀತಿಯ ಹಿನ್ನೆಲೆಯೂ ಇರುವುದಿಲ್ಲ. ಜತೆಗೆ, ಬಂಡವಾಳ ಕೊರತೆಯೂ ಇರುತ್ತದೆ. ಈ ಕೊರತೆಗಳನ್ನು ನೀಗಿಸಲು ಮಾರ್ಗದರ್ಶನ ನೀಡುವ ಮೂಲಕ ದಲಿತರಲ್ಲೂ ಟಾಟಾ, ಬಿರ್ಲಾ ಅವರಂತಹ ಉದ್ಯಮಿಗಳನ್ನು ಸೃಷ್ಟಿಸುವುದೇ ನಮ್ಮ ಗುರಿ. ಜತೆಗೆ ದಲಿತರು ಪ್ರತಿಯೊಂದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಿದ್ದಾರೆ. ಅವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎನ್ನುವುದು ಸಾಮಾನ್ಯವಾಗಿ ಮೂಡಿರುವ ಅಭಿಪ್ರಾಯ. ಈ ಅಭಿಪ್ರಾಯ ತೆಗೆದುಹಾಕುವುದೇ `ಡಿಕ್ಕಿ'ಯ ಅಂತಿಮ ಗುರಿ' ಎನ್ನುತ್ತಾರೆ ಕಾಂಬ್ಳೆ.

`ಉದ್ಯೋಗ ನೀಡಿ- ಉದ್ಯೋಗ ಕೇಳಬೇಡಿ' ಎನ್ನುವುದು `ಡಿಕ್ಕಿ'ಯ ಘೋಷವಾಕ್ಯ. ದೇಶದ ಎಲ್ಲ ರಾಜ್ಯಗಳಲ್ಲೂ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿರುವ `ಡಿಕ್ಕಿ' 3000 ಸದಸ್ಯರನ್ನು ಹೊಂದಿದೆ. 150 ಸದಸ್ಯರಿರುವ ಕರ್ನಾಟಕದಲ್ಲೇ ಅತಿ ಹೆಚ್ಚು ದಲಿತ ಉದ್ಯಮಿಗಳಿದ್ದಾರೆ. ಕರ್ನಾಟಕದಲ್ಲಿ `ಡಿಕ್ಕಿ' ಘಟಕ ಸ್ಥಾಪನೆಯಾಗಿ ಒಂದು ವರ್ಷವಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಪಂಚತಾರಾ ಹೋಟೆಲ್‌ನಲ್ಲಿ ಕರ್ನಾಟಕ ಘಟಕದ ಪ್ರಥಮ ವಾರ್ಷಿಕೋತ್ಸವ ನಡೆಯಿತು.

ಎಲ್ಲ ದಲಿತ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವುದು, ಉದ್ಯಮ ಸ್ಥಾಪಿಸಲು ಇಚ್ಛಿಸುವ ಉತ್ಸಾಹಿ-ಕ್ರಿಯಾಶೀಲ ದಲಿತರಿಗೆ ಸಂಪನ್ಮೂಲ ಕೇಂದ್ರದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ದಲಿತರನ್ನು ಉದ್ಯಮಿಗಳಾಗುವಂತೆ ಉತ್ತೇಜನ ನೀಡುವುದು `ಡಿಕ್ಕಿ'ಯ ಪ್ರಮುಖ ಉದ್ದೇಶಗಳು.

ಪ್ರಸ್ತುತ ದಲಿತ ಉದ್ಯಮಿಗಳು ರಾಸಾಯನಿಕ ವಲಯ, ಕೃಷಿ ಉತ್ಪನ್ನಗಳು, ಪ್ಲಾಸ್ಟಿಕ್, ಜವಳಿ, ಲೋಹ, ಕಟ್ಟಡ ನಿರ್ಮಾಣ, ಸೌರಶಕ್ತಿ, ಸೇವಾ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗ ಡಿಕ್ಕಿ ಕಾರ್ಪೊರೇಟ್ ವಲಯದ ನೆರವು ಪಡೆಯಲು ಮುಂದಾಗಿದೆ. `ಟಾಟಾ' ಸೇರಿದಂತೆ ಹಲವು ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಟಾಟಾ ಕಂಪೆನಿಯ ಅಧಿಕಾರಿಗಳ ಜತೆ ಮಾತುಕತೆಯನ್ನೂ ನಡೆಸಿದೆ.

`ಕೇವಲ ಸರ್ಕಾರದ ಮೇಲೆ ತಪ್ಪು ಹೊರಿಸುವ ಬದಲು ನಾವಾಗಿಯೇ ಪ್ರಗತಿ ಹೊಂದುವ ದಾರಿಗಳನ್ನು ಕಂಡುಕೊಳ್ಳಬೇಕು. ದಲಿತರು ಉದ್ಯಮಿಗಳಾಗುವಂತೆ ಪ್ರೇರಣೆ ನೀಡುವುದು ನಮ್ಮ ಮೂಲ ಉದ್ದೇಶ. ಚರ್ಮ, ಪ್ಯಾಕೇಜಿಂಗ್, ಗಾರ್ಮೆಂಟ್ ಕ್ಷೇತ್ರದಲ್ಲಿ ದಲಿತರು ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಚಮ್ಮಾರನಿಗೆ ಚಪ್ಪಲಿ, ಬೂಟು ತಯಾರಿಸುವುದು ಗೊತ್ತು.

ಉತ್ತಮ ಕೌಶಲವನ್ನೂ ಆತ ಹೊಂದಿದ್ದಾನೆ. ಆದರೆ, ಮಾರುಕಟ್ಟೆ ವ್ಯವಸ್ಥೆಯೇ ಆತನಿಗೆ ಗೊತ್ತಿಲ್ಲ. ಮಧ್ಯವರ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. `ಡಿಕ್ಕಿ' ಇಂತಹ ಸನ್ನಿವೇಶದಲ್ಲಿ ಮಧ್ಯಪ್ರವೇಶಿಸಿ ಒಬ್ಬ ಚಮ್ಮಾರ ಹೇಗೆ ಉದ್ಯಮಿಯಾಗುವ ದಾರಿಯಲ್ಲಿ ಸಾಗಬಲ್ಲ ಎನ್ನುವ ಬಗ್ಗೆ ಮಾರ್ಗದರ್ಶನ  ನೀಡುತ್ತದೆ. ಅರಿವು ಮೂಡಿಸುವ ಮೂಲಕ ದಲಿತರನ್ನು ಉದ್ಯಮಶೀಲರನ್ನಾಗಿಸುವುದು ನಮ್ಮ ಮುಖ್ಯ ಧ್ಯೇಯ. ಸದ್ಯಕ್ಕೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಸ್ಥಾಪಿಸಲು ಹೆಚ್ಚು ಗಮನ ಹರಿಸಿದ್ದೇವೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಕೇವಲ ಅವಕಾಶಕ್ಕಾಗಿ ಕಾಯುತ್ತಿದ್ದೇವೆ' ಎಂಬುದು ರಾಜಾನಾಯ್ಕ ಅವರ ಸ್ಪಷ್ಟ ನುಡಿ.

ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕಳೆದ 10 ವರ್ಷಗಳಿಂದ ದುಡಿಯುತ್ತಿರುವ ಬೆಂಗಳೂರಿನ ಎಂ. ಸತೀಶ್ ಚಂದ್ರ ಸರ್ಕಾರಿ ಕೆಲಸಕ್ಕೆ ಅಲೆದವರಲ್ಲ. ಅರ್ಜಿಯೂ ಹಾಕಿದವರಲ್ಲ. 7 ವರ್ಷಗಳ ಕಾಲ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿ ಈಗ ತಾವೇ `ಇಂಡಸ್ ಈವೆಂಟ್' ಎನ್ನುವ ಸಂಸ್ಥೆ ಹುಟ್ಟುಹಾಕಿದ್ದಾರೆ. ಮೂಲತಃ ಕಲಾವಿದರಾದ ಇವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇನ್ನೊಬ್ಬರ ಕೈಕೆಳಗೆ ದುಡಿಯುವ ಬದಲು ತಾವೇ ಮಾಲೀಕರಾಗಿ ದುಡಿಯಬೇಕು ಎನ್ನುವ ಮನೋಭಾವದಿಂದ ಸ್ವಂತ ಸಂಸ್ಥೆ ಸ್ಥಾಪಿಸಿದರು. ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ, ವರ್ಣರಂಜಿತ ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಡುವಲ್ಲಿ ಪರಿಣತರಾಗಿದ್ದಾರೆ.

ರೂ.5ಲಕ್ಷ ಆರಂಭಿಕ ಬಂಡವಾಳದೊಂದಿಗೆ ಸಂಸ್ಥೆಯನ್ನು ಆರಂಭಿಸಿದ ಸತೀಶ್ ಚಂದ್ರ, ಈಗ ದಕ್ಷಿಣ ಭಾರತದಾದ್ಯಂತ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದ್ದಾರೆ. ಹಲವು ಮಹತ್ವದ ಕಾರ್ಯಕ್ರಮಗಳನ್ನು ನಿರ್ವಹಿಸಿದ ಅನುಭವ ಅವರದ್ದಾಗಿದೆ.
2008ರ ಮೈಸೂರು ದಸರಾದಲ್ಲಿ ಬನ್ನಿಮಂಟಪದಲ್ಲಿನ ವೇದಿಕೆ, ಲೇಸರ್ ಷೊ ಮೊದಲಾದ ವ್ಯವಸ್ಥೆ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಿರ್ವಹಣಾ ವ್ಯವಸ್ಥಾಪಕ ಪ್ರಶಸ್ತಿ ಪಡೆದಿದ್ದಾರೆ.

`ನಾವು ಗುಣಮಟಕ್ಕೆ ಒತ್ತು ನೀಡುತ್ತಿದ್ದೇವೆ. ನಮ್ಮ ಸಂಸ್ಥೆ ಕಣ್ಣುಬಿಡುವುದಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹತ್ತಾರು ಪ್ರತಿಷ್ಠಿತ ಕಂಪೆನಿಗಳು ಸ್ಥಾಪನೆಯಾಗಿ ವರ್ಷಗಳೇ ಸಂದಿದ್ದವು. ಆ ಹಿರಿಯ ಕಂಪೆನಿಗಳ ಜತೆಗೂ ಸ್ಪರ್ಧೆ ನಡೆಸಬೇಕಿದೆ. ವ್ಯಾಪಾರ ಮಾಡಲು ಬರುವುದಿಲ್ಲ, ಅನುಭವವೂ ಇಲ್ಲ ಎಂಬ ನಕಾರತ್ಮಾಕ ಮನೋಭಾವದಿಂದ ಹೊರಬಂದು ಈ ಕ್ಷೇತ್ರದಲ್ಲಿ ಸದೃಢವಾಗಿ ಬೇರೂರಲು ಪ್ರಯತ್ನಿಸುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಸಮಾಜವೂ ನಮ್ಮ ಜತೆ ಸ್ಪಂದಿಸಬೇಕು. ವೃತ್ತಿ ಬದುಕಿನಲ್ಲಿ ಈವರೆಗೆ ಎಲ್ಲಿಯೂ ನೋವಾಗುವಂತಹ ಅನುಭವ ಆಗಿಲ್ಲ. ನಾವಂತೂ ಸಕಾರಾತ್ಮಕವಾಗಿ ಯೇ ಚಿಂತಿಸುತ್ತಾ ಉದ್ಯಮದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ'.

ಆದರೆ, ಸರ್ಕಾರಿ ಯೋಜನೆಗಳನ್ನು ಹೆಸರಿಗೆ ಮಾತ್ರವೇ ರೂಪಿಸಲಾಗುತ್ತಿದೆ. ಈ ಯೋಜನೆಗಳ ಲಾಭ ನಮ್ಮಂತಹವರಿಗೆ ಸಕಾಲಕ್ಕೆ ದೊರೆಯುವುದಿಲ್ಲ. ಸಾಲ ಪಡೆಯಬೇಕಾದರೆ ಹತ್ತಾರು ಬಾರಿ ಬ್ಯಾಂಕ್‌ಗಳಿಗೆ ಅಲೆದಾಡಬೇಕಾಗುತ್ತದೆ. ಅದು ಸಹ ದೊರೆಯುವುದು ಕಷ್ಟಸಾಧ್ಯ. ಸರ್ಕಾರಿ ಯೋಜನೆಗಳನ್ನು ನಂಬಿ ಉದ್ಯಮ ಸ್ಥಾಪಿಸುವುದು ಕಷ್ಟ' ಎಂದು ಸತೀಶ್ ಚಂದ್ರ ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT