ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡದಲ್ಲಿ ನಿಲ್ಲದ ಟ್ಯೂಷನ್ ದಂಧೆ: ವಿದ್ಯಾರ್ಥಿಗಳಿಗೆ ಧಮಕಿ

Last Updated 4 ಡಿಸೆಂಬರ್ 2013, 6:48 IST
ಅಕ್ಷರ ಗಾತ್ರ

ಪಾವಗಡ: ‘ಕಾಲೇಜಿನಲ್ಲಿ ಟ್ಯೂಷನ್ ನಡೆಸುತ್ತಿಲ್ಲ, ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿ. ಇಲ್ಲವಾದರೆ ನಿಮಗೆ ಹಾಜರಾತಿ, ಪ್ರಾಯೋಗಿಕ ಅಂಕ ನೀಡುವ ಸಂದರ್ಭ ಸರಿಯಾಗಿ ಕತ್ತರಿಸುತ್ತೇವೆ’

–ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆಲ ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ ಹಾಕಿರುವ ಧಮಕಿ. ದುಬಾರಿ ಹಣ ತೆತ್ತು ಮನೆ ಪಾಠಕ್ಕೆ ಹೋಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ಉಪನ್ಯಾಸಕರ ಬೆದರಿಕೆಯಿಂದ ನಲುಗಿದ್ದಾರೆ.

ಪಟ್ಟಣದಲ್ಲಿ ಮನೆಪಾಠದ ಹಾವಳಿ ಮೇರೆ ಮೀರಿದೆ. ಕಾಲೇಜಿನಲ್ಲಿ ಸರಿಯಾಗಿ ಪಾಠ ಮಾಡಿದರೆ ತಮ್ಮ ಬಳಿ ಟ್ಯೂಷನ್‌ಗೆ ಬರುವುದಿಲ್ಲ ಎಂಬ ಕಾರಣಕ್ಕೆ ಹಲವು ಉಪನ್ಯಾಸಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ.

ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿರುವ ಟ್ಯೂಷನ್‌ ಹಾವಳಿ ಕುರಿತು ‘ಪ್ರಜಾವಾಣಿ’ಯಲ್ಲಿ ನ. 20ರಂದು ವಿಶೇಷ ವರದಿ ಪ್ರಕಟವಾಗಿತ್ತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮನೆ ಪಾಠ ನಡೆಸುವ ಸರ್ಕಾರಿ, ಅನುದಾನಿತ ಶಿಕ್ಷಕರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದರು. ಶಿಸ್ತುಕ್ರಮದ ಎಚ್ಚರಿಕೆಗೆ ಮಣಿದ ಬಹುತೇಕ ಪ್ರೌಢಶಾಲಾ ಶಿಕ್ಷಕರು ಇದೀಗ ಮನೆಪಾಠ ನಿಲ್ಲಿಸಿದ್ದಾರೆ. ಆದರೆ ಪದವಿ ಪೂರ್ವ ಕಾಲೇಜುಗಳ ಕೆಲ ಉಪನ್ಯಾಸಕರು ಮಾತ್ರ ವಿದ್ಯಾರ್ಥಿಗಳಿಗೆ ‘ಹಾಜರಾತಿ– ಅಂಕ ಕತ್ತರಿಸುವ’ ಧಮಕಿ ಹಾಕಿ ತಮ್ಮ ದಂಧೆ ಮುಂದುವರಿಸಿದ್ದಾರೆ.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಖಾಸಗಿ ಕಾಲೇಜುಗಳ ಕಟ್ಟಡದಲ್ಲಿಯೇ ಟ್ಯೂಷನ್ ನಡೆಯುತ್ತಿದೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಟ್ಯೂಷನ್ ಬಗ್ಗೆ ಮಾಹಿತಿ ನೀಡಿದವರನ್ನು ಪತ್ತೆ ಹಚ್ಚಿ ಭವಿಷ್ಯ ಹಾಳು ಮಾಡಲು ಉಪನ್ಯಾಸಕರು ಯತ್ನಿಸಿದರು. ಕೆಲವು ಹಿರಿಯ ಉಪನ್ಯಾಸಕರು ‘ಪೇಪರ್‌ನವ್ರಿಗೆ ಹೇಳ್ತೀರಾ? ಟಿ.ಸಿ ಕೊಟ್ಟು ಕಳಿಸ್ತೀವಿ. ನಾವು ಗವರ್ನಮೆಂಟ್ ಎಂಪ್ಲಾಯಿಸ್, ನಮ್ಮನ್ನು ಯಾರೂ ಏನು ಮಾಡಲೂ ಸಾಧ್ಯವಿಲ್ಲ’ ಎಂದು ಹೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಟ್ಯೂಷನ್‌ಗೆ ಹಣ ಕೊಡಲು ಸಾಧ್ಯವಿಲ್ಲದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಪಾಸಾಗುವ ಆಸೆಯನ್ನೇ ಕಳೆದುಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳ ಆತ್ಮವಿಶ್ವಾಸವೂ ಕುಗ್ಗಿ ಹೋಗಿದೆ.

‘ಸಾರ್, ನಮ್ಮ ಅಪ್ಪ ಅವರಿವರ ಹೊಲಗಳಲ್ಲಿ ಕೂಲಿ ಮಾಡಿ ನನ್ನ ಓದಿಸ್ತಾ ಇದ್ದಾರೆ. ನಂಗೆ ಚಪ್ಪಲಿ– ಬಟ್ಟೆ ಕೊಡಿಸಿ, ಕಾಲೇಜು ಫೀಸು ಕಟ್ಟೋದು ಅವ್ರಿಗೆ ಕಷ್ಟ. ಟ್ಯೂಷನ್‌ಗೆ ಹೋಗ್ಬೇಕು ದುಡ್ಡು ಕೊಡು ಅಂತ ಅವರನ್ನು ಹೇಗೆ ಕೇಳಲಿ. ಟ್ಯೂಷನ್‌ಗೆ ಹೋಗ್ಲಿಲ್ಲ ಅಂದ್ರೆ ಲೆಕ್ಚರರ್ ನೋಟ್ಸ್ ಕೊಡಲ್ಲ, ಟ್ಯೂಷನ್‌ಗೆ ಬಾರದವರಿಗೆ ನೋಟ್ಸ್‌ ಕೊಡಬೇಡಿ; ಕೊಟ್ರೆ ನೋಡ್ಕೋತೀನಿ ಅಂತ ಸಹಪಾಠಿಗಳಿಗೂ ಬೆದರಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪಟ್ಟಣದ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬರು ಅಲವತ್ತುಕೊಂಡರು.

‘ಇವ್ರ ಹತ್ರ ಟೂಷನ್‌ಗೆ ಸೇರ್ಕೊಂಡವರು ಪೂರ್ತಿ ಟ್ಯೂಷನ್ ಫೀಸ್ ಕಟ್ಲಿಲ್ಲಾ ಅಂದ್ರೆ ಹಾಲ್ ಟಿಕೆಟ್ ಕೊಡದೆ ಸತಾಯಿಸ್ತಾರೆ.
ಅಧಿಕಾರಿಗಳಿಗೆ ಎಲ್ಲವೂ ಗೊತ್ತು; ಆದರೆ ಏನೂ ಮಾಡಲ್ಲ. ವಿದ್ಯಾರ್ಥಿ ಸಂಘಟನೆಗಳು ಬೇಡದ ವಿಚಾರಗಳಿಗೆ ಸ್ಟ್ರೈಕ್ ಮಾಡ್ತವೆ, ಆದರೆ ಟ್ಯೂಷನ್ ದಂಧೆ ನಿಲ್ಲಿಸೋಕೆ ಒತ್ತಾಯಿಸಲ್ಲ. ಪಾಠವೂ ಇಲ್ಲ, ನೋಟ್ಸೂ ಇಲ್ಲ. ನನ್ನಂಥೋರು ಪಾಸಾಗೋ ಆಸೇನೂ ಇಟ್ಕೊಳೋಕೆ ಆಗಲ್ಲ. ಮುಂದಿನ ವರ್ಷದಿಂದ ಕಾಲೇಜು ಬಿಟ್ಟು ಅಪ್ಪನ ಜೊತೆಗೆ ಕೂಲಿ ಕೆಲಸಕ್ಕೆ ಹೋಗೋಣ ಅಂದುಕೊಂಡಿದ್ದೇನೆ. ನಮ್ಮಪ್ಪನೂ ಆಫೀಸರ್ರೋ ಇನ್ನೊಂದೋ ಅಗಿದ್ರೆ ಟ್ಯೂಷನ್‌ಗೆ ಕಳ್ಸಿ ಓದಿಸ್ತಿದ್ದರು. ಕಾಲೇಜು ಶಿಕ್ಷಣ ನಮ್ಮಂಥ ಬಡವರ ಮಕ್ಕಳಿಗಲ್ಲ’ ಎಂದು ಅವರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT