ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೂರಿಕಾರರ ನೆಲೆಯಲ್ಲಿ ರಾಜಕೀಯ ಇತಿಹಾಸ: ವಿಷಾದ

Last Updated 27 ಡಿಸೆಂಬರ್ 2012, 6:15 IST
ಅಕ್ಷರ ಗಾತ್ರ

ತುಮಕೂರು: ಪಿತೂರಿಕಾರರ ನೆಲೆಯಲ್ಲಿ ರಾಜಕೀಯ ಇತಿಹಾಸ ನೋಡಲಾಗುತ್ತಿದೆ. ನಿಜವಾದ ನಾಯಕರು ಇತಹಾಸದಲ್ಲಿ ಮೂಲೆಗುಂಪಾಗಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಿಷಾದಿಸಿದರು.

ನಗರದ ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ತುಮಕೂರು ವಿ.ವಿ. ಇತಿಹಾಸ ಅಧ್ಯಾಪಕರ ವೇದಿಕೆ ಬುಧವಾರ ಏರ್ಪಡಿಸಿದ್ದ `ಸ್ವಾತಂತ್ರ್ಯೋತ್ತರ ಭಾರತದ ಘಟನೆಗಳು' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪಿತೂರಿಯೇ ಶ್ರೇಷ್ಠ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಇಂದು ವಿದ್ಯಾವಂತರೆ ಜಾತಿ ಬಳಕೆ ಮಾಡುತ್ತಿದ್ದಾರೆ. ಪ್ರತಿಭೆಗಿಂತ ಜಾತಿಯೇ ಪ್ರಮುಖ ವಿಚಾರವಾಗಿದೆ. ರಾಜಕೀಯ ಪಕ್ಷಗಳು ಅಭಿವೃದ್ಧಿ ವಿಚಾರಕ್ಕಿಂತ ಧಾರ್ಮಿಕ ವಿವಾದವನ್ನು ಪ್ರಣಾಳಿಕೆಯಲ್ಲಿ ಬಿಂಬಿಸಲಾಗುತ್ತಿದೆ. ಬಿಜೆಪಿ ರಾಮಮಂದಿರ ಕಟ್ಟುವುದನ್ನೆ ಪ್ರಮುಖ ವಿಚಾರ ಮಾಡಿತು. ಎಲ್.ಕೆ.ಅಡ್ವಾಣಿ ರಥಯಾತ್ರೆ ಮಾಡಿದ್ದು ದುರಂತ ಎಂದು ಅಭಿಪ್ರಾಯಪಟ್ಟರು.

ಇಂದಿರಾಗಾಂಧಿ ಕಾಲದಲ್ಲಿ ಆಂತರಿಕ ಆಡಳಿತ ಕುಸಿದು ಬಿದ್ದಿತ್ತು. ತುರ್ತುಪರಿಸ್ಥಿತಿ ಹೇರಿ ದೇಶದಲ್ಲಿ ಕರಾಳ ಸ್ಥಿತಿಯನ್ನು ತರಲಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು. ನಾಯಕರು ಜೈಲು ಪಾಲಾದರೆ ಕೆಲವರು ಭೂಗತರಾದರು. ಇಂತಹ ಕರಾಳ ಸ್ಥಿತಿಯಲ್ಲಿಯೇ ಸಂಜಯ್‌ಗಾಂಧಿ ಅಂಥವರು ಸಾರ್ವಭೌಮರಾದರು. ಅಧಿಕಾರಿಗಳು ಪಕ್ಷದ ಕಾರ್ಯಕರ್ತರ ಅಣತಿಯಂತೆ ಕಾರ್ಯನಿರ್ವಹಿಸುವಂತಾಗಿತ್ತು ಎಂದು ಅವರು ಆರೋಪಿಸಿದರು.

ನೆಹರೂ ಅವಧಿಯಲ್ಲಿ ನಡೆದ ಚೀನಾ ಆಕ್ರಮಣ ದೇಶಕ್ಕೆ ಆದ ಅವಮಾನ. ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಗೆದ್ದರೂ ಸಮಸ್ಯೆ ತಪ್ಪಲಿಲ್ಲ. ಅಲ್ಲದೆ ಶ್ರೀಲಂಕಾ, ಬಾಂಗ್ಲಾ, ಟಿಬೆಟ್‌ಗೆ ಸಹಾಯ ಮಾಡಲು ಹೋಗಿ ನಮ್ಮ ನಾಯಕರು ಅನಗತ್ಯ ಸಮಸ್ಯೆ ತಂದುಕೊಂಡರು. ನಿರಾಶ್ರಿತರು ಮತ್ತು ಅಕ್ರಮ ನುಸುಳಕೋರರ ಸಮಸ್ಯೆ ಬಗೆಹರಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದರು.

ಉತ್ತರ ಭಾರತೀಯರ ಶ್ರೇಷ್ಠತೆ ಹೇರುವಿಕೆಯನ್ನು ಬಲವಾಗಿ ವಿರೋಧಿಸಿದವರು ತಮಿಳರು. ಪೆರಿಯಾರ್ ಚಳವಳಿ ಮತ್ತು ಆ ನಂತರದ ಬೆಳವಣಿಗೆ ದಕ್ಷಿಣ ಭಾರತೀಯರಿಗೆ ಪೂರಕವಾಗಿದ್ದವು. ಮಹಾಜನ ವರದಿ ಬಂದರೂ ಬೆಳಗಾವಿ ಮುಂತಾದ ಗಡಿ ವಿವಾದಗಳು ಬಗೆಹರಿಯಲ್ಲಿಲ್ಲ ಎಂದು ಹೇಳಿದರು.
ಪ್ರಾಚಾರ್ಯ ಡಾ.ನಾಗಭೂಷಣ್, ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಪ್ರೊ.ಎನ್.ಪ್ರಸನ್ನಕುಮಾರ್, ಡಾ.ಉದಯ ಎಸ್.ಮೂರ್ತಿ ಭಾಗವಹಿಸಿದ್ದರು. ಡಾ.ಡಿ.ಎಂಯೋಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT