ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಪಾದಗಳ ದಿಟ್ಟ ನೃತ್ಯ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಹತ್ತಾರು ಯುವ ಕಲಾವಿದರು ಶಾಸ್ತ್ರೀಯ ನೃತ್ಯ ಅಥವಾ ಸಂಗೀತವನ್ನು ಅಭ್ಯಾಸ ಮಾಡಿ ಆ ಪ್ರಕಾರವನ್ನು ಕರಗತಗೊಳಿಸಿಕೊಳ್ಳಲು ಪರಿಶ್ರಮ ವಹಿಸುತ್ತಿದ್ದಾರೆ. ರಸಿಕರ ಮುಂದೆ ತಮ್ಮ ಪ್ರತಿಭೆ, ಪರಿಣತಿ ಮತ್ತು ಪಾಂಡಿತ್ಯ ಪ್ರದರ್ಶನವನ್ನು ಪ್ರಾಮಾಣಿಕವಾಗಿ ಹಾಗೂ ಪ್ರಶಂಸನೀಯ ರೀತಿಗಳಲ್ಲಿ ಮಾಡುತ್ತಿರುವುದು ಸ್ವಾಗತಾರ್ಹವೂ ಸಂತೋಷಜನಕವೂ ಹೌದು. ಈ ಯುವ ಜನರ ಗುಣಾತ್ಮಕ ಹಾಗೂ ಘನಾತ್ಮಕ ಪ್ರವೇಶ ಮತ್ತು ಪ್ರದರ್ಶನಗಳಿಂದ ಶಾಸ್ತ್ರೀಯ ಸಂಗೀತ ಮತ್ತು ನತ್ಯ ಪ್ರಕಾರಗಳ ಭವ್ಯ ನಾಳೆಗಳ ಸುರಕ್ಷೆ ಹಾಗೂ ಆರೋಗ್ಯಕರ ಬೆಳವಣಿಗೆ ಖಚಿತಗೊಂಡಂತಾಗಿದೆ. 

ಭರತನಾಟ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಅಂಥ ಪ್ರದರ್ಶನಗಳು ಹೆಚ್ಚುತ್ತಿರುವುದು ಆಶಾದಾಯಕ. ಬಹುತೇಕ ಪ್ರವೇಶ ಮತ್ತು ಪ್ರದರ್ಶನಗಳು ಕಲಾಲೋಕವನ್ನು ಸಮೃದ್ಧಗೊಳಿಸುತ್ತಿವೆ. ಅಷ್ಟೇ ಅಲ್ಲದೆ ಚೆನ್ನೈಗೆ ಪರ್ಯಾಯವಾಗಿ ಬೆಂಗಳೂರು ವಿಶ್ವದಾದ್ಯಂತ ಭರತನಾಟ್ಯಕ್ಕೆ ಹೆಸರುವಾಸಿಯಾಗುತ್ತಿದೆ. ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವಂತೆ ಭರತನಾಟ್ಯ ಕಲಾ ಕ್ಷೇತ್ರದ್ಲ್ಲಲು ಸಹ ಇದೀಗ ಬೆಂಗಳೂರು ಮೇಲ್ಪಂಕ್ತಿಯಲ್ಲಿ ರಾರಾಜಿಸುತ್ತಿದೆ. 

ಶನಿವಾರ (ಜ.21) ವೈಟ್‌ಫೀಲ್ಡ್‌ನ ಬ್ರಿಗೇಡ್ ಕನ್ವೆನ್‌ಷನ್ ಹಾಲ್‌ನಲ್ಲಿ 12 ವರ್ಷದ ಬಾಲೆ ಆರಾಧನಾ ಎಸ್. ಆಲೋಕಳ ತೇಜಸ್ವಿ ಹಾಗೂ ಓಜಸ್ವಿ ಭರತನಾಟ್ಯ ಪ್ರದರ್ಶಿಸಿದರು. ಅದನ್ನು ವೀಕ್ಷಿಸಿದಾಗ ಮೇಲಿನ ವಿಚಾರಗಳು ನನ್ನಲ್ಲಿ ಹುಟ್ಟಿದವು. ನಾಟ್ಯಪ್ರಿಯ ಸಂಸ್ಥೆಯ ರೂವಾರಿ ಗುರು ಪದ್ಮಿನಿ ರಾಮಚಂದ್ರ ಅವರ ಸುಪುತ್ರಿ ಗುರು ಕನ್ಯಾ ರಾಮಚಂದ್ರನ್ ತಹಾಲಿಯಾ ಗರಡಿಯಲ್ಲಿ ಪಳಗಿದ ಆರಾಧನಾ ತಮ್ಮ ತಾಲೀಮು ಎಷ್ಟು ಚೆನ್ನಾಗಿದೆ ಎಂಬುದನ್ನು ಒರೆಗೆಹಚ್ಚುವಂತೆ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಕುಳ್ಳಗೆ, ತೆಳ್ಳಗೆ, ಬೆಳ್ಳಗೆ, ಹೊಳೆಯುವ ಮುಖಮಂಡಲದಲ್ಲಿ ಹೂನಗೆಯೊಂದಿಗೆ ನರ್ತಿಸಿದ ಆರಾಧನಾಗೆ ನೃತ್ಯ ಕಲೆ ರಕ್ತಗತವಾಗಿಯೇ ಬಂದಿದೆ. ಆಕೆಯ ತಾಯಿ ಶರ್ಮಿಳಾ ಗುಪ್ತಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಭರತನಾಟ್ಯ ಕಲಾವಿದೆಯಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ಹೆಚ್ಚೂ ಕಡಿಮೆ ತನ್ನ ತಾಯಿಯನ್ನೇ ಹೋಲುವ ಚಹರೆ ಮತ್ತು ಮೈಕಟ್ಟಿನ ಆರಾಧನಾ ನಿರಾಯಾಸ ಮತ್ತು ತಪ್ಪುಗಳಿಲ್ಲದಂತೆ ಸುಮಾರು 180 ನಿಮಿಷಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂಸ್ಕೃತ ಮಂತ್ರ (ಭದ್ರಂ ಕರಣೇ)ದೊಂದಿಗೆ ಆರಂಭವಾಗಿ ತೋಡಯಂ (ಗಂಭೀರನಾಟ), ಗಣೇಶ ವಂದನೆ (ಶ್ರೀವಿಘ್ನರಾಜಂ ಭಜೆ) ಮತ್ತು ತ್ರಿಶ್ರ, ಚತುರಶ್ರ, ಖಂಡ ಮತ್ತು ಮಿಶ್ರ ಅಲರಿಪ್ಪುವನ್ನು ಅತ್ಯಂತ ಆತ್ಮವಿಶ್ವಾಸದೊಂದಿಗೆ ನಿರೂಪಿಸಲಾಯಿತು. ಈ ಹಂತದಲ್ಲಿ ಆಕೆಯ ಸೊಂಟಪಟ್ಟಿ ಹಾಗೂ ಕಿವಿ ಆಭರಣ ಸಡಿಲಗೊಂಡು ನೋಡುಗರ ಕಣ್ಣುಗಳನ್ನು ಸೆಳೆಯಿತು. ಆದರೂ ಕಿಂಚಿತ್ತೂ ವಿಚಲಿತರಾಗದೆ ನೃತ್ಯ ಪ್ರವಾಹವನ್ನು ಕಾಪಿಟ್ಟುಕೊಂಡು ಲಯಬದ್ಧವಾಗಿ ತನ್ಮಯರಾಗಿ ತದೇಕಚಿತ್ತತೆಯೊಂದಿಗೆ ನರ್ತಿಸಿ ರಸಿಕರ ಮನ ಗೆದ್ದರು.

ಗುರು ಕನ್ಯಾ ರಾಮಚಂದ್ರನ್ ತಹಾಲಿಯಾ (ನಟುವಾಂಗ), ರಮೇಶ್ ಚಡಗ (ಗಾಯನ), ನಟರಾಜಮೂರ್ತಿ (ಪಿಟೀಲು), ನರಸಿಂಹಮೂರ್ತಿ (ಕೊಳಲು), ಜನಾರ್ದನರಾವ್ (ಮೃದಂಗ) ಮತ್ತು ಪ್ರಸನ್ನಕುಮಾರ್ (ರಿದಂ) ಅವರ ಉತ್ಸಾಹವರ್ಧಕ ಪಕ್ಕವಾದ್ಯದ ಸಹಕಾರವಿತ್ತು. ಅದರಿಂದ ಆರಾಧನಾ ಶಿವ- ಪಾರ್ವತಿಯರನ್ನು ಕುರಿತಾದ ಕಲ್ಯಾಣಿ ವರ್ಣದ (ಆಡುಂ ದೈವಂ ಅರುಳ್‌ವಾ) ವಿಸ್ತರಣೆಯಲ್ಲಿ ಸುಂದರ ಹಾಗೂ ಬಿಗಿ ಹಂದರದ ಜತಿ ಮತ್ತು ಅಡುವುಗಳನ್ನೊಳಗೊಂಡಿದ್ದ ನೃತ್ತ,  ಸೊಗಸಾಗಿ ಕಡೆದ ಕ್ಲಿಷ್ಟ ಹಾಗೂ ವೈವಿಧ್ಯದ ಕರಣಗಳು ಪುಟ್ಟ ನರ್ತಕಿಯ ಪ್ರದರ್ಶನದ ಮೆರಗನ್ನು ಹೆಚ್ಚಿಸಿದವು. ಅದರ ಚರಣ (ಓಂಕಾರ ಪ್ರಣವ) ದ್ರುತ ಕಾಲದಲ್ಲಿ ಆಕರ್ಷಿಸಿತು. ದಾಸರ `ಎಲ್ಲಾಡಿ ಬಂದ್ಯೋ ರಂಗಯ್ಯ~ನ ವಿಶದೀಕರಣದಲ್ಲಿ ಪುಟ್ಟ ರಾಧಾ-ಕೃಷ್ಣರ ತುಂಟಾಟಗಳ ಅಭಿನಯ ಸಹಜತೆಯಿಂದ ಇಷ್ಟವಾಯಿತು. ಸರಸ್ವತಿಯ ಗುಣಗಾನ ಮಾಡುತ್ತಾ ಆಕೆಯ ರೂಪ ಶ್ರೀಮಂತಿಕೆಯನ್ನು ಬಹು ಆತ್ಮೀಯವಾಗಿ ಆರಾಧನಾ ಬಿಂಬಿಸಿದರು. ತುಳಸೀದಾಸರ `ಶ್ರೀರಾಮಕಪಾಳು ಭಜನ್~ ರಾಮನ ಹಿರಿಮೆ, ಭರತನ ಭ್ರಾತೃಪ್ರೇಮ ಮತ್ತು ಭಕ್ತಿಯನ್ನು ರೇಖಿಸಿ ಕರುಣಾರಸ ಮತ್ತು ವಾತ್ಸಲ್ಯ ರಸಗಳನ್ನು ಸ್ಫುರಿಸಿತು. ಕದನಕುತೂಹಲ ತಿಲ್ಲಾನ ಔಚಿತ್ಯಪೂರ್ಣ ಸಮಾಪ್ತಿಯನ್ನು ಒದಗಿಸಿತು.

ನಾದಜ್ಯೋತಿ ಶ್ರೀತ್ಯಾಗರಾಜ ಭಜನಸಭೆಯ 47ನೆಯ ಒಂಭತ್ತು ದಿನಗಳ ವಾರ್ಷಿಕ ನಾದಜ್ಯೋತಿ ಸಂಗೀತೋತ್ಸವವು ಮಲ್ಲೇಶ್ವರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಮೊನ್ನೆ ಆರಂಭಗೊಂಡಿತು. ಹಿರಿಯ ಮುಂಬೈ ಗಾಯಕಿ ಸೋದರಿಯರು ಉತ್ಸವವನ್ನು ಉದ್ಘಾಟಿಸಿ `ನಾದಜ್ಯೋತಿ 2012~ ಸ್ಮರಣ ಸಂಚಿಕೆಯನ್ನು ಅನಾವರಣ ಮಾಡಿದರು.

ಅಪೂರ್ವ ಊಂಛವತ್ತಿ

ಭಾನುವಾರ (ಜ.22) ಬೆಳಿಗ್ಗೆ ಹಿರಿಯ ಸಂಗೀತ ವಿದ್ವಾಂಸರು ಶ್ರೀರಾಮ ಮತ್ತು ವಾಗ್ಗೇಯಕಾರರ ಫೋಟೋಗಳನ್ನು ಹಿಡಿದು ತಂಬೂರಿ, ಮೃದಂಗ, ತಾಳ ಮುಂತಾದವುಗಳೊಂದಿಗೆ ಗೀತೆಗಳು ಮತ್ತು ಭಜನೆಗಳನ್ನು ಹಾಡುತ್ತಾ ಊಂಛವತ್ತಿಯನ್ನು ಮಾಡಿ ತ್ಯಾಗರಾಜ ಮತ್ತು ಇತರೆ ವಾಗ್ಗೇಯಕಾರರ ಆರಾಧನಾ ಮಹೋತ್ಸವವಕ್ಕೆ ಚಾಲನೆ ನೀಡಿದರು. ಸಾಂಪ್ರದಾಯಿಕ ಪೂಜಾದಿಗಳ ನಂತರ ಗೋಷ್ಠಿಗಾಯನದಲ್ಲಿ ಪಂಚರತ್ನ ಕೀರ್ತನೆಗಳು, ತ್ರಿಮೂರ್ತಿಗಳ ರಚನೆಗಳು, ದಾಸರ ನವರತ್ನಮಾಲಿಕೆ ಮುಂತಾದ ರಚನೆಗಳನ್ನು ಭಕ್ತಿಪೂರ್ವಕವಾಗಿ ಹಾಡಲಾಯಿತು.

ಕಲಾತ್ಮಕ ಯುಗಳ ಒಡಿಸ್ಸಿ

ಹಿರಿಯ ಗುರು ಶ್ರೀದೇವಿ ಉನ್ನಿ ನೇತೃತ್ವದ ಮೊನಿಷಾ ಆರ್ಟ್ಸ್‌ನ ಆಶ್ರಯದಲ್ಲಿ ಎರಡು ದಿನಗಳ ನೃತ್ಯೋತ್ಸವ ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನುರಿತ ಒಡಿಸ್ಸಿ ನತ್ಯಗಾರ್ತಿ ಮಧುಲಿಕಾ ಮಹಾಪಾತ್ರ ಅವರು ತಮ್ಮ ಶಿಷ್ಯೆ ಸಂಜಾಲಿಕಾ ಪಾಡಿ ಅವರೊಡಗೂಡಿ ಸುಸಂಘಟಿತ ನೃತ್ಯ ಪ್ರದರ್ಶಿಸಿದರು. ಇಬ್ಬರಲ್ಲೂ ಸಮಾನಂತರ ಪ್ರತಿಭೆ, ಪರಸ್ಪರ ಹೊಂದಾಣಿಕೆ, ತಮ್ಮ ಮಾಧ್ಯಮ ಮತ್ತು ಲಯದ ಮೇಲೆ ಸೊಗಸಾದ ಹಿಡಿತವಿತ್ತು. ಹಾಗಾಗಿ ಯುಗಳ ನೃತ್ಯಕ್ಕೆ ಪ್ರಶಂಸೆ ಸಂದಿತು. ವಿಶೇಷವಾಗಿ ಅವರು ನಿರೂಪಿಸಿದ ಒರಿಯಾ ಕವಿತೆ (ಬಜುಚ್ಚಿ ಸಾಹಿ ಬಜರೆ) ರಸಿಕರ ಮನಸೂರೆಗೊಂಡಿತು. ಕೃಷ್ಣನ ಪ್ರೇಮದ ಬಗೆಗೆ ಅಪವಾದ ರೂಪದಲ್ಲಿ ಸುದ್ದಿ ಹರಡಿದ್ದು ಆ ವಿಷಯದಲ್ಲಿ ರಾಧಾಗೆ ತಿಳಿಹೇಳುವ ಸಖಿಯ ಚಿತ್ರಣ ಮತ್ತು ರಾಧೆಯ ಪ್ರತಿಕ್ರಿಯೆಗಳು ಕಲಾತ್ಮಕವಾಗಿ ಮೈತಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT