ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರುಜ್ಜೀವನ ಕಾಣದ ಪಾಪನಕಟ್ಟೆ ಕೆರೆ

Last Updated 1 ಜುಲೈ 2012, 7:55 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಈ ಊರಿನ ಗ್ರಾಮಗಳ ರಸ್ತೆಯುದ್ದಕ್ಕೂ ಕೆರೆಗಳಿವೆ. ಆದರೆ, ಬೇಸಿಗೆಯಲ್ಲಿ ಬೊಗಸೆ ನೀರಿಗೂ ಕಷ್ಟಪಡಬೇಕಾದ ಪರಿಸ್ಥಿತಿ ಧನಗೆರೆ ಹಾಗೂ ಸರಗೂರು ಗ್ರಾಮಗಳಲ್ಲಿ ಎದುರಾಗುತ್ತದೆ.

ಕೊಳ್ಳೇಗಾಲ- ಬೆಂಗಳೂರು ಹೆದ್ದಾರಿಯಲ್ಲಿ ಬರುವ ಪಾಪನಕಟ್ಟೆ ಕೆರೆಗೆ ನೂರಾರು ವರ್ಷದ ಇತಿಹಾಸವಿದೆ. ಹಿಂದೆ ಕೆರೆಯಲ್ಲಿ ಮುಂಗಾರು ವೇಳೆ ಮಾತ್ರ ಮಳೆನೀರು ಶೇಖರವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಬಿನಿ ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರು ಬತ್ತ ಬೆಳೆಯುತ್ತಾರೆ. ಹೀಗಾಗಿ, ಬೇಸಿಗೆ ವೇಳೆಗೆ ಕೆರೆ ಬತ್ತಿಹೋಗಿ, ಜನ-ಜಾನುವಾರು ತೊಂದರೆ ಅನುಭವಿಸುತ್ತವೆ.

ಈ ಕೆರೆಯು 40 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ನೂರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತದೆ. ಅಚ್ಚುಕಟ್ಟು ಪ್ರದೇಶದ ರೈತರು ಈ ಹಿಂದೆ ವರ್ಷದಲ್ಲಿ ಎರಡು ಫಸಲು ಪಡೆಯುತ್ತಿದ್ದರು. ಕಬಿನಿ ನಾಲೆ ವ್ಯಾಪ್ತಿಗೆ ಸೇರಿದ ನಂತರ ಕೆರೆಯಲ್ಲಿ ಹೂಳು ತುಂಬಿದ್ದು, ವೈಜ್ಞಾನಿಕವಾಗಿ ಹೊರತೆಗೆಯುವ ಕೆಲಸವಾಗಿಲ್ಲ.

ತಾಲ್ಲೂಕು ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಿಂದ ಕೆರೆಗಳ ಒತ್ತುವರಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಪಾಪನಕಟ್ಟೆ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಕೆರೆಯ ಪುನರುಜ್ಜೀವನಕ್ಕೆ ಬಿಡುಗಡೆಯಾಗಿದ್ದ ಅನುದಾನ ಬಳಸಿಕೊಂಡು ಒತ್ತುವರಿ ತೆರವು, ಸ್ವಲ್ಪ ಪ್ರಮಾಣದಲ್ಲಿ ಹೂಳು ತೆಗೆಯಲಾಗಿದೆ. ಇದರಿಂದ ಪ್ರಯೋಜನ ಕಡಿಮೆ. ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು, ಸಮರ್ಪಕವಾಗಿ ಹೊರತೆಗೆದರೆ ಮಾತ್ರವೇ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ ಎಂಬುದು ರೈತರ ಅನಿಸಿಕೆ.

ಕೆರೆಯ ಪುನರುಜ್ಜೀವನ ಕೆಲಸವೂ ಸಮರ್ಪಕವಾಗಿ ಆಗಿಲ್ಲ. ಇದರ ಪರಿಣಾಮ ನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಒಂದು ಅವಧಿಯಲ್ಲಿ ಮಾತ್ರ ಬೆಳೆ ಬೆಳೆಯಲು ಸಾಧ್ಯವಾಗುತ್ತಿದೆ ಎನ್ನುವುದು ಅನ್ನದಾತರ ಅಳಲು.

ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಮುಳ್ಳಿನಗಿಡಗಳು ಬೆಳೆದು ನಿಂತಿವೆ. ಹೀಗಾಗಿ, ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯಾಗುತ್ತಿದೆ. ತೂಬು ಕೂಡ ದುರಸ್ತಿಗೊಂಡಿಲ್ಲ. ಗಿಡಗಳು ಬೆಳೆದು ಶಿಥಿಲಗೊಂಡಿದೆ. ಪುನರುಜ್ಜೀವನ ಕಾಮಗಾರಿ ವೇಳೆ ಇದರ ದುರಸ್ತಿಗೆ ಮುಂದಾಗಿಲ್ಲ ಎನ್ನುತ್ತಾರೆ ಅಚ್ಚುಕಟ್ಟು ಪ್ರದೇಶದ ರೈತರು.

ಬೇಸಿಗೆಯಲ್ಲಿಯೂ ಈ ಕೆರೆಗೆ ಕಬಿನಿ ಜಲಾಶಯದಿಂದ ನೀರು ತುಂಬಿಸಬೇಕು. ಆ ಮೂಲಕ ಅಚ್ಚುಕಟ್ಟು ಪ್ರದೇಶದಲ್ಲಿ ಅಂತರ್ಜಲಮಟ್ಟ ವೃದ್ಧಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂಬುದು ರೈತರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT