ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ ಹರಾಜು ಕೇಂದ್ರ ಮರೀಚಿಕೆ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಗರದಲ್ಲಿ 4ವರ್ಷಗಳ ಹಿಂದೆಯೇ ನಿರ್ಮಿಸಲು ಉದ್ದೇಶಿದ್ದ ಅತ್ಯಾಧುನಿಕ `ಪುಷ್ಪ ಹರಾಜು ಕೇಂದ್ರ~ದ ನಿರ್ಮಾಣ ಇನ್ನೂ ಆಗಿಲ್ಲ!

ಈ ಕೇಂದ್ರ ನಿರ್ಮಾಣಕ್ಕಾಗಿ ಒಂದು ವರ್ಷದ ಹಿಂದೆಯೇ ರೂ 2 ಕೋಟಿ ಬೆಳಗಾವಿ ತೋಟಗಾರಿಕೆ ಇಲಾಖೆ ಉಪ    ನಿರ್ದೇಶಕರಿಗೆ ಬಿಡುಗಡೆ ಮಾಡಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಜಿಲ್ಲೆಯ ಹೂವಿನ ಬೆಳೆಗಾರರು, ವ್ಯಾಪಾರಿಗಳು ಮೂಲ ಸೌಲಭ್ಯ ಇಲ್ಲದೆ ಗಾಂಧಿ ನಗರದ ಬೈಪಾಸ್ ರಸ್ತೆ ಬಳಿಯೇ ವಹಿವಾಟು ನಡೆಸುತ್ತಿದ್ದಾರೆ.

ಮಧ್ಯವರ್ತಿಗಳನ್ನು ತಡೆದು ಹೂವು ಬೆಳೆಗಾರರಿಗೆ ಉತ್ತಮ ಬೆಲೆ ಕಲ್ಪಿಸಿಕೊಡುವ ಉದ್ದೇಶದಿಂದ 2008-09ನೇ ಸಾಲಿನಲ್ಲಿ ಬೆಳಗಾವಿ, ಉಡುಪಿ, ಮಡಿಕೇರಿ, ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ದಾವಣಗೆರೆ ಸೇರಿದಂತೆ 6 ಕಡೆ ತಲಾ ರೂ 2.50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ `ಪುಷ್ಪ ಹರಾಜು ಕೇಂದ್ರ~ ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು.

ಪುಷ್ಪ ಹರಾಜು ಮಳಿಗೆ, ಶೈತ್ಯಾಗಾರ, ಮಾರುಕಟ್ಟೆ ಮಾಹಿತಿ ಕೇಂದ್ರ, ರೈತರಿಗೆ ವಿಶ್ರಾಂತಿ ಗೃಹ, ಹವಾನಿಯಂತ್ರಿತ ವಾಹನ, ಅತ್ಯಾಧುನಿಕ ತೂಕದ ಯಂತ್ರ, ಇಂಟರ್‌ನೆಟ್, ದೂರವಾಣಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಈ ಕೇಂದ್ರದಲ್ಲಿ ಕಲ್ಪಿಸುವ ಯೋಜನೆ ಇದೆ. ಹರಾಜು ಕೇಂದ್ರದ ನಿರ್ಮಾಣ ವಿಳಂಬವಾಗಿರುವುದರಿಂದ ಬಹಳ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತರು ಮತ್ತು ವರ್ತಕರು.

ಸ್ಥಳಕ್ಕೆ ಪರದಾಟ: ಬೆಳಗಾವಿಯಲ್ಲಿ ಸ್ಥಳ ಹುಡುಕಾಟದಲ್ಲೇ ಒಂದೆರಡು ವರ್ಷ ಕಳೆದು ಹೋಯಿತು. ಕೊನೆಗೆ ಎಪಿಎಂಸಿ ಬಳಿ ಪಾಲಿಕೆಗೆ ಸೇರಿದ 1.11 ಎಕರೆಯಲ್ಲಿ ಪುಷ್ಪ ಹರಾಜು ಕೇಂದ್ರ ನಿರ್ಮಿಸಲು ಸ್ಥಳ ನಿಗದಿಪಡಿಸಲಾಯಿತು. ಪಾಲಿಕೆಗೆ ತೋಟಗಾರಿಕೆ ಇಲಾಖೆ ಪ್ರಸ್ತಾವ ಕಳುಹಿಸಿದ ಅನೇಕ ತಿಂಗಳ ಬಳಿಕ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ 2011ರ ಜುಲೈ 22 ರಂದು ಅನುಮೋದನೆ ನೀಡಲಾಯಿತು. ಇದಾಗಿ ವರ್ಷ ಮುಗಿಯಲು ಬಂದಿದ್ದರೂ ಸ್ಥಳದ ಬಗ್ಗೆ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ನಡುವೆ `ಒಡಂಬಡಿಕೆ~ಯೇ ಆಗಿಲ್ಲ.

`ಪಾಲಿಕೆ ಇದೀಗ `ಒಡಂಬಡಿಕೆ~ ಪತ್ರನೀಡಿದೆ. ಇದನ್ನು ಇಲಾಖೆಗೆ ಕಳುಹಿಸಿ ಮಂಜೂರಾತಿ ಪಡೆದುಕೊಂಡ ತಕ್ಷಣವೇ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ. ಕಟ್ಟಡ ಪೂರ್ಣಗೊಂಡ ಬಳಿಕ ಪಾಲಿಕೆಗೆ ಹಸ್ತಾಂತರಿಸುತ್ತೇವೆ~ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಐ.ಕೆ. ದೊಡ್ಡಮನಿ `ಪ್ರಜಾವಾಣಿ~ಗೆ ತಿಳಿಸಿದರು.

`ಜಿಲ್ಲೆಯಲ್ಲಿ 1,100 ಹೆಕ್ಟೇರ್ ಪ್ರದೇಶದಲ್ಲಿ 11,500 ಟನ್ ಹೂವು ಬೆಳೆಯಲಾಗುತ್ತಿದೆ. 45 ಹಸಿರುಮನೆಗಳಲ್ಲಿ  ಜರ್ಬೆರಾ, ಆಂಥೋರಿಯಂ, ಗುಲಾಬಿ, ಆರ್ಕಿಡ್ ಬೆಳೆಯಲಾಗುತ್ತಿದ್ದು, ದೆಹಲಿ ಮಾರುಕಟ್ಟೆಗೂ ಕಳುಹಿಸಲಾಗುತ್ತಿದೆ. ಕೆಲವು ಬಿಡಿ ಹೂವು ಬೆಳೆಗಾರರು ಸಾಂಗ್ಲಿ, ಮೀರಜ್ ಹಾಗೂ ಹುಬ್ಬಳ್ಳಿಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿ ಪುಷ್ಪ ಹರಾಜು ಕೇಂದ್ರ ಆರಂಭವಾದರೆ, ಪುಷ್ಪ ಬೆಳೆಗಾರ ಸಂಘ ರಚಿಸಿಕೊಂಡು ಇಲ್ಲಿಯೇ ವಹಿವಾಟು ನಡೆಸಲು ಅನುಕೂಲವಾಗಲಿದೆ~ ಎನ್ನುತ್ತಾರೆ  ದೊಡ್ಡಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT