ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಪ್ ಟೆಸ್ಟ್ ಮಾಡಿಸಿದ್ದೀರಾ?

ವಾರದ ವೈದ್ಯ
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪ್ಯಾಪ್ ಟೆಸ್ಟ್ ಅಥವಾ  ಪ್ಯಾಪ್‌ಸ್ಮಿಯರ್ ತಪಾಸಣೆಯ ಒಂದೇ ಒಂದು ಹೆಜ್ಜೆ ನಿಮ್ಮ ಜೀವವನ್ನು ಪ್ರಾಣಾಪಾಯದಿಂದ ರಕ್ಷಿಸಬಹುದು. ಈ ತಪಾಸಣೆ ಗರ್ಭಕಂಠದ ಕೋಶಗಳ ಸೋಂಕು, ಅಸಹಜ- ಅನಾರೋಗ್ಯಕರ ಬೆಳವಣಿಗೆ ಅಥವಾ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆಯನ್ನು ಶೀಘ್ರ ಪತ್ತೆ ಹಚ್ಚುತ್ತದೆ. ಏನಿದು ಪ್ಯಾಪ್ ಟೆಸ್ಟ್? ಯಾವಾಗ, ಎಲ್ಲಿ, ಯಾರು ಹೇಗೆ ಈ ಪರೀಕ್ಷೆಗೆ ಒಳಗಾಗಬೇಕು? ಇದನ್ನು ಮಾಡಿಸುವುದರಿಂದ ಆಗುವ ಲಾಭಗಳೇನು? ಮಾಹಿತಿ ಇಲ್ಲಿದೆ...

`ಪ್ಯಾಪ್ ಟೆಸ್ಟ್' ಬಗ್ಗೆ ತಿಳಿಸಿ.
ಗರ್ಭಕಂಠದ (ಸರ್ವಿಕಲ್) ಪರೀಕ್ಷೆಯೇ `ಪ್ಯಾಪ್ ಟೆಸ್ಟ್'.  ಈ ಪರೀಕ್ಷೆಯಿಂದ ಗರ್ಭಕಂಠದ ಕೋಶಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರುತಿಸಬಹುದು. ಗರ್ಭಕಂಠದ ಕೋಶಗಳಲ್ಲಿ ಯಾವುದೇ ಅಸಹಜ ಬೆಳವಣಿಗೆ ಅಥವಾ ಸೋಂಕು ಕಂಡುಬಂದರೂ, ಅದನ್ನು ಈ ಪರೀಕ್ಷೆಯಿಂದ ಸುಲಭವಾಗಿ ಪತ್ತೆ ಹಚ್ಚಬಹುದು. ಅಲ್ಲದೆ, ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಕಂಡು ಹಿಡಿಯಬಹುದು. ಇದರಿಂದ ಚಿಕಿತ್ಸೆ ಸುಲಭವೂ, ಪರಿಣಾಮಕಾರಿಯೂ ಆಗುತ್ತದೆ.

`ಪ್ಯಾಪ್ ಟೆಸ್ಟ್'ನ ಪ್ರಯೋಜನವೇನು?
ಒಂದೇ ಮಾತಿನಲ್ಲಿ ಹೇಳುವುದಾದರೆ `ಪ್ಯಾಪ್ ಟೆಸ್ಟ್' ಜೀವ ಉಳಿಸುವ ಕೆಲಸ ಮಾಡುತ್ತದೆ. ಗರ್ಭಕಂಠದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಕಂಠದ ಕೋಶಗಳ ಅಸಹಜ ಬೆಳವಣಿಗೆ ಅಥವಾ ಸೋಂಕನ್ನೂ ಇದು ಪತ್ತೆ ಹಚ್ಚುವುದರಿಂದ ಕ್ಯಾನ್ಸರ್‌ಗೆ ತಿರುಗುವ ಮುನ್ನವೇ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆಯಬಹುದು.

ಎಲ್ಲ ಮಹಿಳೆಯರೂ `ಪ್ಯಾಪ್ ಟೆಸ್ಟ್'ಗೆ ಒಳಗಾಗಲೇ ಬೇಕೆ? ಯಾವ ವಯೋಮಾನದಿಂದ ಈ ಪರೀಕ್ಷೆ ಆರಂಭಿಸಬೇಕು?
ಹೌದು, 21 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರೂ `ಪ್ಯಾಪ್ ಟೆಸ್ಟ್' ಹಾಗೂ ಗರ್ಭಕಂಠದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು. ರಜೋನಿವೃತ್ತಿಯ ನಂತರವೂ ಈ ಪರೀಕ್ಷೆಯನ್ನು ಮುಂದುವರಿಸಬೇಕು. 65 ವರ್ಷದ ನಂತರ ಈ ಪರೀಕ್ಷೆಯನ್ನು ನಿಲ್ಲಿಸಬಹುದು. ಆದರೆ ಅದನ್ನು ವೈದ್ಯರು ನಿರ್ಧರಿಸುತ್ತಾರೆ.

ಯಾವಾಗ ಮತ್ತು ಎಷ್ಟು ಬಾರಿ ಈ ಪರೀಕ್ಷೆಗೆ ಒಳಗಾಗಬಹುದು?
21 ವರ್ಷದ ನಂತರ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು. 30 ವರ್ಷದ ನಂತರ, ಹಿಂದಿನ ಮೂರು ಪರೀಕ್ಷೆಯಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡುಬರದೇ ಇದ್ದರೆ ಅಂತಹ ಮಹಿಳೆ ಮೂರು ವರ್ಷಕ್ಕೆ ಒಮ್ಮೆ ತಪಾಸಣೆಗೆ ಒಳಗಾದರೂ ಸಾಕು.

ಗರ್ಭಕಂಠದ ಕ್ಯಾನ್ಸರ್ ಅಥವಾ ಇನ್ನಾವುದೇ ತೊಂದರೆಯ ಅಪಾಯ ಕಂಡು ಬಂದ ಮಹಿಳೆಯರು ವೈದ್ಯರ ಸೂಚನೆಯಂತೆ ನಿರಂತರ ಹಾಗೂ ನಿಯಮಿತ ಪರೀಕ್ಷೆ ಮತ್ತು ಚಿಕಿತ್ಸೆಗೆ ಮುಂದಾಗುವುದು ಅನಿವಾರ್ಯ. 65 ವರ್ಷ ಮೇಲ್ಪಟ್ಟ ನಂತರ, ಹಿಂದಿನ 10 ವರ್ಷಗಳ ಅವಧಿಯಲ್ಲಿ ನಡೆದ ಪರೀಕ್ಷೆಗಳಿಂದ ಕೋಶಗಳಲ್ಲಿ ಯಾವುದೇ ಅಸಹಜ ಬೆಳವಣಿಗೆ ವರದಿಯಾಗದಿದ್ದ ಪಕ್ಷದಲ್ಲಿ, ಪ್ಯಾಪ್ ಟೆಸ್ಟ್ ನಿಲ್ಲಿಸಲು ವೈದ್ಯರು ಸೂಚಿಸಬಹುದು.

ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚಿಸಿ.
* ಮೊದಲ ಹೆಜ್ಜೆಯಾಗಿ ನಿರಂತರ ಪ್ಯಾಪ್ ಟೆಸ್ಟ್‌ಗೆ ಒಳಗಾಗಬೇಕು.
* ಗರ್ಭಕಂಠದ ಕೋಶಗಳ ಅಸಾಮಾನ್ಯ ಬೆಳವಣಿಗೆ ಪತ್ತೆಯಾಗಿ, ಅದಕ್ಕೆ ಚಿಕಿತ್ಸೆ ಆರಂಭಿಸಿದ ನಂತರವೂ ನಿಯಮಿತವಾಗಿ ಪ್ಯಾಪ್ ಟೆಸ್ಟ್ ಮಾಡಿಸಿಕೊಳ್ಳಬೇಕು.
* ಒಬ್ಬರಿಗಿಂತ ಹೆಚ್ಚು ಸಂಗಾತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಬಾರದು.
* ಧೂಮಪಾನ ಗರ್ಭಕಂಠದ ಕ್ಯಾನ್ಸರ್ ಅಲ್ಲದೆ, ಅನೇಕ ಬಗೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ನೆನಪಿಡಿ. ಎಚ್‌ಪಿವಿ (Human papilloma virus & HPV ) ಸೋಂಕಿತರೊಂದಿಗೆ ಸಿಗರೇಟ್ ಹಂಚಿಕೊಂಡು ಸೇದುವುದರಿಂದ ಗರ್ಭಕಂಠದ ಅಸಾಮಾನ್ಯ ಬೆಳವಣಿಗೆಯ ವೇಗ ಹೆಚ್ಚುತ್ತದೆ.
* ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಎಚ್‌ಐವಿ ಅಥವಾ ಇತರ ಲೈಂಗಿಕ ರೋಗಗಳ (Sexually transmitted disease - STD) ಜೊತೆಗೆ ಗರ್ಭಕಂಠದ ಕ್ಯಾನ್ಸರ್‌ನ ಪ್ರಮಾಣ ಕೂಡ ಹೆಚ್ಚುತ್ತದೆ.

ಪ್ಯಾಪ್ ಟೆಸ್ಟ್‌ಗೂ ಮುನ್ನ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿ.
ಎಲ್ಲರೂ ತಿಳಿದುಕೊಳ್ಳಲೇಬೇಕಾದ ವಿಷಯ ಇದು. ಅನೇಕ ಸಂಗತಿಗಳು ತಪ್ಪು ವರದಿಗೆ ಕಾರಣವಾಗುವ ಅಪಾಯವೂ ಇದರಲ್ಲಿದೆ. ಆದ್ದರಿಂದ ಈ ಪರೀಕ್ಷೆಗೂ ಮುನ್ನ ಕೆಳಗಿನ ಸೂಚನೆಗಳನ್ನು ಅನುಸರಿಸಲೇಬೇಕು- ಪರೀಕ್ಷೆಗೆ ಹಾಜರಾಗುವ ಎರಡು ದಿನ ಮುನ್ನ ಟ್ಯಾಂಪೂನ್ ಬಳಕೆಯನ್ನು ನಿಲ್ಲಿಸಿ, ಯಾವುದೇ ಯೋನಿ ಕ್ರೀಂ, ಲೋಶನ್, ದ್ರವೌಷಧ, ಪೌಡರ್ ಅಥವಾ ಔಷಧವನ್ನು ಹಚ್ಚಬೇಡಿ. ಲೈಂಗಿಕ ಕ್ರಿಯೆಯಿಂದಲೂ ದೂರವಿರಿ. ಋತುಚಕ್ರದ ಅವಧಿಯಲ್ಲಿ ಈ ಪರೀಕ್ಷೆ ಬೇಡ.

ಪ್ಯಾಪ್ ಟೆಸ್ಟ್ `ಅಸಹಜ ಫಲಿತಾಂಶ' ಎಂದರೇನು?
`ಅಸಹಜ ಫಲಿತಾಂಶ' ಎಂದರೆ ಗರ್ಭಕಂಠದ ಕ್ಯಾನ್ಸರ್ ಎಂದು ಭಾವಿಸುವ ಅಗತ್ಯವೇನೂ ಇಲ್ಲ. ಗರ್ಭಕಂಠದಲ್ಲಿ ಒಂದು ಸಣ್ಣ ಸಮಸ್ಯೆ ಅಥವಾ ಸೋಂಕು ಕಂಡುಬಂದರೂ `ಅಸಹಜ ಫಲಿತಾಂಶ' ಬರುತ್ತದೆ. ಆದರೆ ಕೆಲವೊಮ್ಮೆ ಈ ಫಲಿತಾಂಶವನ್ನು ಕಡೆಗಣಿಸಿದರೆ ಅದು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಡ ಮಾಡದೇ ಸೂಕ್ತ ಚಿಕಿತ್ಸೆಗೆ ಒಳಗಾಗಬೇಕು.

ಧನಾತ್ಮಕ ತಪ್ಪು (False positive) ಋಣಾತ್ಮಕ ತಪ್ಪು (False negative) ಎಂದರೇನು?
ಪ್ಯಾಪ್ ಟೆಸ್ಟ್ ಫಲಿತಾಂಶದಲ್ಲಿ ಯಾವಾಗಲೂ ಶೇ 100ರಷ್ಟು ನಿಜ ಇರುವುದಿಲ್ಲ. ಕೆಲವೊಮ್ಮೆ  ಧನಾತ್ಮಕ ತಪ್ಪು ಅಥವಾ ಋಣಾತ್ಮಕ ತಪ್ಪು ಸಂಭವಿಸಬಹುದಾದ ಸಾಧ್ಯತೆಯೂ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ಇದು ರೋಗಿ ಹಾಗೂ ಅವರ ಕುಟುಂಬದವರನ್ನು ಅನಗತ್ಯ ಕಳವಳ ಹಾಗೂ ಆತಂಕಕ್ಕೆ ಈಡು ಮಾಡುತ್ತದೆ.

ಗರ್ಭಕಂಠದ ಕೋಶಗಳು ಸಾಮಾನ್ಯವಾಗಿದ್ದಾಗಲೂ `ಅಸಾಮಾನ್ಯ ಬೆಳವಣಿಗೆಯ ಫಲಿತಾಂಶ' ಕಂಡುಬಂದರೆ ಅದನ್ನು ಧನಾತ್ಮಕ ತಪ್ಪು ಎನ್ನಲಾಗುತ್ತದೆ. ಒಂದು ವೇಳೆ ಗರ್ಭಕಂಠದ ಕೋಶಗಳಲ್ಲಿ ಸಮಸ್ಯೆ ಇದ್ದರೂ `ಸಾಮಾನ್ಯ ಫಲಿತಾಂಶ' ಬಂದರೆ ಅದನ್ನು ಋಣಾತ್ಮಕ ತಪ್ಪು ಎಂದು ಕರೆಯಲಾಗುತ್ತದೆ. ನಿಯಮಿತವಾಗಿ ಪ್ಯಾಪ್ ಟೆಸ್ಟ್‌ಗೆ ಒಳಗಾಗುವುದರಿಂದ ಒಂದು ಬಾರಿ ಇಂತಹ ತಪ್ಪು ಫಲಿತಾಂಶ ಬಂದರೂ ಮತ್ತೊಂದು ಬಾರಿ ಸರಿಯಾದ ಫಲಿತಾಂಶ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT