ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶಿಸುತ್ತಿದೆ ಭಾರತದ ಭ್ರಷ್ಟತೆ

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ಬಂದ ನಂತರ ನಮ್ಮ ರಾಜಕಾರಣಿಗಳು ಹೇಗಿದ್ದಾರೆ ಎಂಬುದನ್ನು ಆಚಾರ್ಯ ಕೃಪಲಾನಿ ಒಂದು ಲೇಖನದಲ್ಲಿ ಪ್ರಸ್ತಾಪಿಸುತ್ತ ‘ಬ್ರಿಟಿಷರು ಭಾರತ ಬಿಟ್ಟು ಹೋದರೂ ಅವರ ಕಾಲದ ವೈಭವ ಇನ್ನೂ ಹೋಗಿಲ್ಲ, ಅವೇ ದೊಡ್ಡ ಬಂಗಲೆಗಳು, ಬಟ್ಲರ್‌ಗಳು, ಅಸಂಖ್ಯ ಪರಿಚಾರಕರು, ಜೀವನ ಕ್ರಮದಲ್ಲೂ ಫರಂಗಿ ಆಚರಣೆ...’ ಇತ್ಯಾದಿ ಮಾತುಗಳಲ್ಲಿ ನಮ್ಮ ವ್ಯವಸ್ಥೆ, ಪರಾವಲಂಬಿ ಸಂಸ್ಕೃತಿ ಮತ್ತು ನಡವಳಿಕೆ ಕುರಿತು ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ದೇಶದ ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ ‘ಔಟ್‌ಲುಕ್’ ಭ್ರಷ್ಟಾಚಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿತ್ತು. ಒಂದೆರಡು ವಾರಗಳ ಹಿಂದೆ ಹಾಂಕಾಂಗ್ ಮೂಲದ ವಹಿವಾಟು ಸಲಹಾ ಸಂಸ್ಥೆ ಪೆರ್ಕ್ (ಪಿಇಆರ್‌ಸಿ) ಭಾರತವು ಏಷ್ಯ ಪೆಸಿಫಿಕ್‌ನ ಅತಿಭ್ರಷ್ಟ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಇದು ಗಂಭೀರ ಅಧ್ಯಯನದ ವರದಿ. ಈ ವರದಿ ನಮಗೆ ನಾಚಿಕೆಗೇಡಿನ ವಿಷಯ ಅನ್ನಿಸುವುದೇ ಇಲ್ಲ. ಭಾರತ-ಪಾಕಿಸ್ತಾನ್ ನಡುವೆ ಕ್ರಿಕೆಟ್ ನಡೆಯುವಾಗ ದೇಶಭಕ್ತಿ, ಉಗ್ರರ ದಾಳಿಗಳನ್ನು ಖಂಡಿಸುವಾಗ ಮಾತ್ರ ರಾಷ್ಟ್ರೀಯ ಭಾವನೆ ಉದ್ದೀಪನಗೊಳ್ಳುತ್ತದೆ. ಹಾಗೇ ನಮ್ಮ ರಾಜಕಾರಣಿಗಳು ಅಧಿಕಾರದಲ್ಲಿ ಇದ್ದಾಗ ಮಾತ್ರ ‘ಭಾರತ ಪ್ರಕಾಶಿಸುತ್ತಿದೆ’ ಎಂದು ಹೇಳಬಲ್ಲರು!

ಏಷ್ಯ ಖಂಡದಲ್ಲಿ ಮೂರನೇ ಅತಿದೊಡ್ಡ ಆರ್ಥಿಕ ವಹಿವಾಟು ಹೊಂದಿರುವ ಭಾರತದಲ್ಲಿ ಭ್ರಷ್ಟಾಚಾರ ಇಂದು ಮಿತಿಮೀರಿದೆ. ಅದರ ನಿಯಂತ್ರಣ ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. 2008ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಭಾರತದ 540 ಸಂಸದರಲ್ಲಿ ನಾಲ್ವರಲ್ಲಿ ಒಬ್ಬರು ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಬರೆಯಿತು. ಈ ಸಂಸದರು ಮಾನವ ಕಳ್ಳಸಾಗಣೆ, ವಲಸೆ ಹಗರಣ, ಅತ್ಯಾಚಾರ, ಕೊಲೆ, ಹಣ ಲಪಟಾಯಿಸುವ ಕೃತ್ಯಗಳಲ್ಲಿ ಭಾಗಿಯಾದವರು ಎಂದು ಹೇಳಿತು. ಇಂಥದ್ದಕ್ಕೆಲ್ಲಾ ಪುಷ್ಟಿ ನೀಡುವಂತೆ ರಾಜಕೀಯ ಅಪರಾಧೀಕರಣ ಇಂದು ಹೆಚ್ಚಾಗಿದೆ. ಭ್ರಷ್ಟಾಚಾರ ತೊಲಗಬೇಕೆಂದು ಹೇಳುವ ರಾಜಕಾರಣಿಗಳೇ ಭ್ರಷ್ಟಾಚಾರದ ಬಗ್ಗೆ ಉಡಾಫೆಯಿಂದ ಮಾತನಾಡುತ್ತಿದ್ದಾರೆ.   ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ತಮ್ಮ ಸಂಪುಟದ ಯಾವ ಮಂತ್ರಿಯೂ ಮೂರುಸಾವಿರ ಚದರ ಅಡಿಗಳಿಗಿಂತಲೂ ಹೆಚ್ಚು ವಿಸ್ತೀರ್ಣ ಉಳ್ಳ ಬಂಗಲೆಗೆ ಹೋಗಬಾರದು ಎಂದು ಸೂಚಿಸಿದ್ದರು. ಈ ನಿಯಮ ಪಾಲಿಸಿದವರು ತೀರಾ ವಿರಳ. ಆದರೆ ಇಂದಿಗೂ ಈ ನಿಯಮ ಒಂದು ಸಣ್ಣ ಆಶಾಕಿರಣ.

ದೇಶದಲ್ಲಿನ ಶೇಕಡಾ 80ರಷ್ಟು ಜನರು ಬಡವರು. ಅವರ ದಿನದ ಆದಾಯ 120ರೂ. ಇಂತಹ ಬಡವರು ಹೆಚ್ಚಾಗಿರುವ ಭಾರತದಲ್ಲಿ ಸರಳತೆ ಕೇವಲ ಆದರ್ಶ ಆಗಬೇಕಿಲ್ಲ. ಅದು ನಮಗೆ ಅನಿವಾರ್ಯ ಅಗತ್ಯ.

ರಾಜ್ಯದ ರಾಜಕಾರಣಿಯೊಬ್ಬರು ‘ಗಾಂಧೀಜಿ ಬದುಕಿದ್ದಿದ್ದರೆ ಅವರು ಕೂಡಾ ಭ್ರಷ್ಟರಾಗುವ ಸಾಧ್ಯತೆ ಇತ್ತು’ ಎಂಬ ಧಾಟಿಯ ಮಾತು ಹೇಳಿದ್ದಾರೆ. ಈ ಅಭಿಪ್ರಾಯ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ನಮ್ಮ ವ್ಯವಸ್ಥೆ ಯಾವ ಹಂತ ತಲುಪಿದೆ ಎಂಬುದು ಈ ಮಾತುಗಳಿಂದ ವ್ಯಕ್ತವಾಗುತ್ತಿದೆ. ಅವರ ಅಭಿಪ್ರಾಯ ಸರಿಯೋ, ತಪ್ಪೋ ಎಂಬುದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರ ಆಲೋಚನೆ ಮತ್ತು ವಸ್ತುಸ್ಥಿತಿ ಈ ಹಂತಕ್ಕೆ ಬಂದು ತಲುಪಿವೆ.

ಭ್ರಷ್ಟಾಚಾರದ ವಿರುದ್ಧ ಪಾಂಚಜನ್ಯ ಮೊಳಗಿಸಿ ಹೋರಾಟಕ್ಕೆ ಸಜ್ಜಾಗಿರುವ ಅಣ್ಣಾ ಹಜಾರೆ ಅವರ ಪ್ರಯತ್ನಗಳಲ್ಲೂ ಕೊಂಕು ಹುಡುಕುವ ಪ್ರಯತ್ನಗಳು ಆರಂಭವಾಗಿವೆ. ನಮ್ಮ ರಾಜಕೀಯ ಹಾಗೂ ಸಾರ್ವಜನಿಕ ವ್ಯವಸ್ಥೆ ಇನ್ನಷ್ಟು ಭ್ರಷ್ಟವಾಗಬೇಕೇ ಅಥವಾ ಅದಕ್ಕೊಂದು ಲಗಾಮು ಹಾಕಬೇಕೆ ಎಂಬುದೇ ಈಗಿನ ಬಹುಮುಖ್ಯ ಪ್ರಶ್ನೆ. ಅಣ್ಣಾ ಹಜಾರೆ ಈ ಇಳಿವಯಸ್ಸಿನಲ್ಲಿ ಜನಲೋಕಪಾಲ ವ್ಯವಸ್ಥೆಗಾಗಿ ಸತ್ಯಾಗ್ರಹ ಆರಂಭಿಸಿ ದೇಶದ ಜನರ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿದ್ದಾರೆ. ದುರದೃಷ್ಟದ ಸಂಗತಿ ಎಂದರೆ ಜನ ಲೋಕಪಾಲ ಮಸೂದೆಯ ಕರಡು ರಚನಾ ಸಮಿತಿಯಲ್ಲಿ ದೇಶದ ಪ್ರಸಿದ್ಧ ವಕೀಲ ಶಾಂತಿಭೂಷಣ್ ಹಾಗೂ ಅವರ ಮಗ ಪ್ರಶಾಂತ್ ಭೂಷಣ್ ಇದ್ದಾರೆ ಎಂಬುದನ್ನೇ ಕೆಲವರು ದೊಡ್ಡ ವಿವಾದ ಮಾಡಿ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಹಿಂದಿನ ಉದ್ದೇಶವೇನು?

ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿಭ್ರಷ್ಟ ದೇಶ ಎಂದು ಕರೆಸಿಕೊಳ್ಳುತ್ತಿದ್ದರೂ 2020ರ ವೇಳೆಗೆ ಭಾರತ ಜಗತ್ತಿನ ಅತ್ಯಂತ ಬಲಾಢ್ಯ ದೇಶವಾಗಲಿದೆ ಎಂಬ ವಿಶ್ವಾಸ ಅನೇಕರಲ್ಲಿದೆ.

ಕಳೆದ ಅರವತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಜನರ ಆದಾಯ ನೂರಾರು ಪಟ್ಟು ಹೆಚ್ಚಾಗಿದೆ. ಆದಾಯ ಹೆಚ್ಚಾದಂತೆ ಅವರ ಜೀವನ ಶೈಲಿ ಬದಲಾಗಿದೆ. ಆಡಂಬರದ, ಭೋಗದ  ಬದುಕಿಗೆ ಒಗ್ಗಿಕೊಂಡ ನಾಯಕರಿಗೆ ಭ್ರಷ್ಟಚಾರ ಅನಿವಾರ್ಯ ಅನ್ನಿಸಿಬಿಟ್ಟಿದೆ. ಭ್ರಷ್ಟಾಚಾರದ ಪರಿಣಾಮ ಹಾಗೂ ಅದರಿಂದ ಜನರಿಗೆ ಆಗುತ್ತಿರುವ ತೊಂದರೆಗಳು ಇವರಿಗೆ ಅರ್ಥವಾಗುತ್ತಿಲ್ಲ.

ಬ್ರಿಟಿಷರ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಇಂದಿಗೂ ಇದೆ. ಈಗ ಅಕ್ರಮ ಮಾರ್ಗಗಳ ಮೂಲಕ ಗಳಿಸಿದ ಸಂಪತ್ತನ್ನು ದೇಶದ ಹೊರಕ್ಕೆ ಸಾಗಿಸುವ ಅಗತ್ಯ ಇಲ್ಲ. ದೇಶದ ಒಳಗೇ ಹತ್ತಾರು ವ್ಯವಹಾರಗಳಲ್ಲಿ ಅದನ್ನು ತೊಡಗಿಸಲು ಸಾಧ್ಯವಿದೆ. ಅದಕ್ಕೆ ನೆರವಾಗುವ ನೂರಾರು ದಳ್ಳಾಳಿಗಳು ಇದ್ದಾರೆ.

ಭಾರತೀಯರಿಗೆ ಸಂಬಳದ ಜತೆಗೆ ‘ಗಿಂಬಳ’ ಪಡೆಯುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟವರು ಈಸ್ಟ್ ಇಂಡಿಯಾ ಕಂಪೆನಿಯ ನೌಕರರು ಎಂಬ ಅಭಿಪ್ರಾಯವಿದೆ. ಬ್ರಿಟಿಷ್ ಆಡಳಿತದಲ್ಲಿ ಭಾರತದಲ್ಲಿದ್ದ ವೈಸರಾಯ್‌ಗಳಿಂದ ಹಿಡಿದು ಸಾಮಾನ್ಯ ಕಂದಾಯ ಸಂಗ್ರಹಿಸುವ ನೌಕರನವರೆಗೆ ಭ್ರಷ್ಟಾಚಾರ ನಿಧಾನವಾಗಿ ಪರಿಚಯವಾಯಿತು. ಅಕ್ರಮವಾಗಿ ಬರುವ ಹಣದಿಂದ ಅವರ ಜೀವನ ಶೈಲಿ ಬದಲಾಯಿತು. ಈ ಬದಲಾದ ಬದುಕಿನ ಗಮ್ಮತ್ತು ಅನೇಕರ ಮೇಲೆ ಪ್ರಭಾವ ಬೀರಿತು. ಭಾರತದಲ್ಲಿದ್ದ ಅನೇಕ ವೈಸ್‌ರಾಯ್‌ಗಳು ನಮ್ಮ ರಾಜರುಗಳಿಗಿಂತ ವೈಭವೋಪೇತ ಜೀವನ ನಡೆಸಿ ಹೋದರು. ಅಂದು ಆರಂಭವಾದ ಆಳುವವರ ಜೀವನ ಶೈಲಿ ವಿಚಿತ್ರ ತಿರುವು ಪಡೆದುಕೊಳ್ಳುತ್ತ ಇಂದಿನ ಸ್ಥಿತಿಗೆ ಬಂದು ತಲುಪಿದೆ.
ಗಾಂಧೀಜಿ ಅನುಸರಿಸಿದ ಸರಳ ಜೀವನ ಶೈಲಿ ಇಂದು ಸವಕಲು ಆದರ್ಶವಾಗಿದೆ. ನೈತಿಕತೆಯನ್ನೇ  ಸಂಪೂರ್ಣವಾಗಿ ಧಿಕ್ಕರಿಸಿ ನಿಂತಿರುವ ರಾಜಕಾರಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರ ಒಟ್ಟು ಪರಿಣಾಮವೇ ಭಾರತ ಭ್ರಷ್ಟ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿರುವುದು!

ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ವಂಚನೆ ಸಲೀಸಾಗಿ ನಡೆಯುತ್ತಿದೆ. ಅಕ್ರಮವಾಗಿ ಗಳಿಸಿದ ಕೋಟ್ಯಂತರ ರೂಪಾಯಿ ಹಣ ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಿದೆ. ಇತ್ತೀಚೆಗೆ ಮುಂಬೈ ಮೂಲದ ಉನ್ನತ ಅಧಿಕಾರಿಯೊಬ್ಬರು ಭಾರತದ ಭ್ರಷ್ಟಾಚಾರದ ಝಲಕ್ ಅನ್ನು ಪತ್ರಕರ್ತರಿಗೆ ವಿವರಿಸುತ್ತಾ; ಮುಂಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಅಲ್ಲಿಂದ ಜ್ಯೂರಿಚ್‌ಗೆ ಕೆಲವು ವಿಶೇಷ ವಿಮಾನಗಳಲ್ಲಿ ಹಣವನ್ನು ತುಂಬಿ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಏನೆಂದು ಕರೆಯೋಣ?

 ರಸ್ತೆ, ರೈಲು, ಅಣೆಕಟ್ಟೆ ಮತ್ತಿತರ ಬೃಹತ್ ಕಾಮಗಾರಿಗಳ ಕಾಂಟ್ರ್ಯಾಕ್ಟ್ ವ್ಯವಹಾರಗಳು, ಅರಣ್ಯ, ಔಷಧಿ, ರಸಗೊಬ್ಬರ, ಮೀನುಗಾರಿಗೆ ಇತ್ಯಾದಿ ಇತ್ಯಾದಿ ಎಲ್ಲ ವಲಯಗಳಿಗೆ ನೀಡುವ ಹಣ ಯಾರ ಪಾಲಾಗುತ್ತಿದೆ ಎಂಬ ವಿವರಗಳನ್ನು ಹುಡುಕಿದರೆ ಬೆಚ್ಚಿ ಬೀಳುವಂತಹ ಸಂಗತಿಗಳು ಕಣ್ಣಿಗೆ ರಾಚುತ್ತವೆ.

ದೇಶದಲ್ಲಿರುವ ಕಪ್ಪು ಹಣ ಯಾವುದು? ಬಿಳಿಯ ಹಣ ಯಾವುದು? ಎಂಬುದು ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತೆರಿಗೆ ವಂಚನೆ ನೀರು ಕುಡಿದಷ್ಟೇ ಸಲೀಸು. ತೆರಿಗೆ ತಪ್ಪಿಸುವ ಮಾರ್ಗ ತೋರಿಸಲೆಂದೇ ಸುಳ್ಳು ಲೆಕ್ಕ ಬರೆಯುವ ಪ್ರತಿಭಾವಂತರಿದ್ದಾರೆ. ಒಟ್ಟಾರೆ ಇಡೀ ವ್ಯವಸ್ಥೆ ಹಾದಿ ತಪ್ಪಿದೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಗೆಲ್ಲಲು ಹಣ ಬೇಕು. ಅಧಿಕಾರಕ್ಕೆ ಬರಲು ಚುನಾವಣೆಯಲ್ಲಿ ಗೆಲ್ಲಲೇಬೇಕು. ಹೀಗಾಗಿ ಅಧಿಕಾರ ಸಿಕ್ಕಾಗ ಯಾವ ಮಾರ್ಗವಾದರೂ ಸರಿ ಹಣ ಮಾಡು. ಅದನ್ನೇ ಖರ್ಚು ಮಾಡಿ ಚುನಾವಣೆ ಗೆಲ್ಲು ಎನ್ನುವುದು ಇವರ ಸಿದ್ಧಾಂತವಾಗಿದೆ. ಇದೇ ಭ್ರಷ್ಟಚಾರ ವೃಕ್ಷದ ಬೀಜ.

ಗ್ರೀಕ್ ತತ್ವಶಾಸ್ತ್ರಜ್ಞ ಡಯಾಗಿನಿಸ್ ಅಥೆನ್ಸ್ ನಗರದಲ್ಲಿ ಹಗಲು ಹೊತ್ತಿನಲ್ಲೇ ಉರಿಯುವ ದೀಪ ಹಿಡಿದುಕೊಂಡು ಅಡ್ಡಾಡುತ್ತಿದ್ದನಂತೆ. ಯಾರಾದರೂ ‘ಏನಯ್ಯಾ ಹಗಲು ಹೊತ್ತಿನಲ್ಲೇ ಉರಿಯುವ ದೀಪವನ್ನು ಹಿಡಿದು ಏನು ಹುಡುಕುತ್ತಿದ್ದೀಯಾ? ಎಂದು ಪ್ರಶ್ನಿಸಿದರೆ, ‘ಅಥೆನ್ಸ್ ನಗರದಲ್ಲಿ ಯಾರಾದರೂ ಪ್ರಾಮಾಣಿಕರು ಇದ್ದಾರೆಯೇ ಎಂದು ಹುಡುಕುತ್ತಿದ್ದೇನೆ! ಎಂದು ಉತ್ತರಿಸುತ್ತಿದ್ದನಂತೆ!

 ಭಾರತದಲ್ಲೂ ಈಗ ಹಗಲು ಹೊತ್ತಿನಲ್ಲಿ ದೀಪ ಹಿಡಿದು ಪ್ರಾಮಾಣಿಕರನ್ನು ಹುಡುಕುವ ಪರಿಸ್ಥಿತಿ ಇದೆ. ಈ ದೇಶದ ಕೋಟ್ಯಂತರ ಜನರ  ರಕ್ತ ಹೀರುತ್ತಲೇ ಆದರ್ಶದ ಮಾತುಗಳನ್ನು ಆಡುತ್ತಿರುವ, ಜನತಂತ್ರದ ಹೆಸರಿನಲ್ಲಿ ದರೋಡೆ ನಡೆಸುತ್ತಿರುವ ದೇಶೋದ್ಧಾರಕರು ಹಾಗೂ ಭೋಗಜೀವನದಲ್ಲಿ ತೊಡಗಿರುವ ಹಣವಂತರಿಗೆ ಪಾಠ ಹೇಳುವವವರು ಯಾರು?

ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ಮಾರಿಯ ಗಿಯಾನ್‌ಲಿಗಿ ಪುಸೊ ಹೇಳುವಂತೆ ಪ್ರತಿಯೊಂದೂ ಭರ್ಜರಿ ಸಂಪತ್ತಿನ ಹಿಂದೆ ಒಂದು ಅಪರಾಧ ಇರುತ್ತದಂತೆ. ಬಹುಶಃ ನಾವು ಈಗಿನ ಭಾರತದ ಸಂದರ್ಭದಲ್ಲಿ ಈ ಮಾತನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT