ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ, ಜಯಲಲಿತಾ ಪ್ರತಿಕೃತಿ ದಹನ

Last Updated 7 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಗಂಗಾವತಿ: ಕಾವೇರಿಯ ನದಿ ನೀರು ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆ ಹಿನ್ನೆಲೆ ಕರೆ ನೀಡಲಾಗಿದ್ದ ರಾಜ್ಯ ಬಂದ್ ಅಂಗವಾಗಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಗಂಗಾವತಿ ಬಂದ್‌ಗೆ ಕರೆ ನೀಡಿದ್ದವು.

ಈ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾರ ಪ್ರತಿಕೃತಿಗಳ ಅಣಕು ಶವಯಾತ್ರೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಳಿಕ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಇಸ್ಲಾಂಪುರದಲ್ಲಿರುವ ಸಿಬಿಎಸ್ ವೃತ್ತದಲ್ಲಿ ನೆರೆದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಅಲ್ಲಿಂದ ವಿವಿಧ ಪ್ರಧಾನಿ ಮತ್ತು ತ.ನಾಡು ಸಿ.ಎಂ. ಅವರ ಅಣಕು ಶವಯಾತ್ರೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ನಡೆಸಿದರು.

ಶವಯಾತ್ರೆಯಲ್ಲಿ ತಮಟೆಯ ನಾದಕ್ಕೆ ತಕ್ಕಂತೆ ಯುವಕರು ಬಾಯಿ ಬಡಿದುಕೊಳ್ಳುತ್ತಾ, ಮಂಡಕ್ಕಿ ತೂರುತ್ತಾ, ಎದೆ ಎದೆ ಬಡಿದುಕೊಂಡು ಅಳುತ್ತಿರುವ ಅಣಕು ಪ್ರದರ್ಶನ ನೀಡಿದರು. ಇನ್ನು ಕೆಲ ಯುವಕರು ಪ್ರತಿಕೃತಿಗಳಿಗೆ ಪಾದರಕ್ಷೆಯಿಂದ ಥಳಿಸುತ್ತಿದ್ದರು.   
 
ಬಳಿಕ ಕೇಂದ್ರ ಬಸ್‌ನಿಲ್ದಾಣ ಸಮೀಪ ಇರುವ ಶ್ರೀಕೃಷ್ಣ ದೇವರಾಯ ವೃತ್ತಕ್ಕೆ ಆಗಮಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಪ್ರಧಾನಿ ಮತ್ತು ಜಯಲಲಿತಾರ ಪ್ರತಿಕೃತಿಗಳನ್ನು ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲದಿದ್ದ ಸಂದರ್ಭದಲ್ಲಿ ತಮಿಳುನಾಡಿಗೆ ಕೃಷಿ ಚಟುವಟಿಕೆಗೆ ನೀರು ಬಿಡುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟಿನ ತೀರ್ಪು ಆತಂಕ ಮೂಡಿಸಿದೆ.

ಕನ್ನಡಿಗರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮತ್ತು ಕಾವೇರಿ ನದಿ ವಿವಾದದ ಶೀಘ್ರ ಇತ್ಯರ್ಥ ಪಡಿಸುವ ದೃಷ್ಟಿಯಿಂದ ಈ ಕೂಡಲೆ ಪ್ರಧಾನಿ ಮನಮೋಹನ ಸಿಂಗ್ ಮಧ್ಯ ಪ್ರವೇಶಿಸಬೇಕು ಎಂದು ಯುವಕರು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಕನ್ನಡ ಸೇನೆ, ಕರವೇ, ಜೈ ಕರ್ನಾಟಕ, ಕಸಾಪ, ಕರವೇ ಸ್ವಾಭಿಮಾನಿ ಬಣದ ಪ್ರಮುಖರಾದ ರಾಮಣ್ಣ ಬಳ್ಳಾರಿ, ಚನ್ನಬಸವ ಜೇಕಿನ್, ಎಚ್. ಮಲ್ಲಿಕಾರ್ಜುನ, ರಾಜೇಶ ಅಂಗಡಿ, ಅಜಮೀರ ನಂದಾಪುರ, ಆದಿಲ್‌ಪಾಶ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT