ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭೇಟಿ ಮಾಡದೇ ಮರಳಿದ ಮಮತಾ

ಎಸ್‌ಎಫ್‌ಐ ದಾಳಿಗೆ `ದೀದಿ' ಕೆಂಡಾಮಂಡಲ, ಟಿಎಂಸಿ-ಎಡಪಕ್ಷಗಳ ಘರ್ಷಣೆ
Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ/ಕೋಲ್ಕತ್ತ (ಪಿಟಿಐ/ಐಎಎನ್‌ಎಸ್): ರಾಜಧಾನಿಯಲ್ಲಿ ತಮ್ಮ ಮೇಲೆ ನಡೆದ ದಾಳಿಯಿಂದ ಅಸಮಾಧಾನಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡದೇ ಬುಧವಾರ ತಮ್ಮ ರಾಜ್ಯಕ್ಕೆ ವಾಪಸಾದರು.

ಆರೋಗ್ಯ ತಪಾಸಣೆಗಾಗಿ ತಕ್ಷಣವೇ ಅವರನ್ನು ಕೋಲ್ಕತ್ತದ ಬೆಲ್ಲೆ ವ್ಯೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಅಲ್ಲಿ ದಾಖಲಾಗಿರುವ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಆಸ್ಪತ್ರೆಯ ಮೂಲಗಳು ಈ ಬಗ್ಗೆ ಯಾವ ಸುಳಿವನ್ನೂ ನೀಡಿಲ್ಲ.

ದೆಹಲಿಯಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ದೆಹಲಿ ಸುರಕ್ಷಿತವಲ್ಲ. ನಾನು ವಾಪಸ್ ಹೋಗುತ್ತಿದ್ದೇನೆ. ನನ್ನ ಆರೋಗ್ಯ ಸರಿ ಇಲ್ಲ. ಮಂಗಳವಾರ ರಾತ್ರಿಯಿಡೀ ಕೃತಕ ಉಸಿರಾಟದಲ್ಲಿದ್ದೆ. ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಅದರ ಅಗತ್ಯವಿಲ್ಲ' ಎಂದು ತಿಳಿಸಿದರು.

`ಇಂದು ನಡೆಯಬೇಕಿದ್ದ ಹಣಕಾಸು ಸಚಿವ ಪಿ.ಚಿದಂಬರಂ ಅವರೊಂದಿಗಿನ ಮಾತುಕತೆಯನ್ನೂ ರದ್ದು ಮಾಡಿದ್ದೇನೆ. ಪ್ರಧಾನಿಯವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ' ಎಂದೂ `ದೀದಿ' ನುಡಿದರು.

ಯೋಜನಾ ಆಯೋಗದ ಕಚೇರಿ ಮುಂದೆ ಮಂಗಳವಾರ ಮಮತಾ ಬ್ಯಾನರ್ಜಿ ಹಾಗೂ ರಾಜ್ಯದ ಹಣಕಾಸು ಸಚಿವ ಅಮಿತ್ ಮಿತ್ರಾ ಅವರ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ್ದರು.

ಟಿಎಂಸಿ ಧರಣಿ: ಘಟನೆಯನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಕೆಲವು ಕಾರ್ಯಕರ್ತರು ಪಕ್ಷದ ಮುಖಂಡ ಮುಕುಲ್ ರಾಯ್ ನೇತೃತ್ವ ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸಿದರು.

`ಈ ಘಟನೆ ಪ್ರಜಾಪ್ರಭುತ್ವಕ್ಕೆ ಅವಮಾನಕರ. ಇದು ಸಿಪಿಎಂ ಸಂಸ್ಕೃತಿಯನ್ನು ತೋರಿಸುತ್ತದೆ. ಕಳೆದ 35 ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ 55,000 ಟಿಎಂಸಿ ಕಾರ್ಯಕರ್ತರನ್ನು ಸಿಪಿಎಂ ಹತ್ಯೆ ಮಾಡಿದೆ' ಎಂದು ರಾಯ್ ದೂರಿದರು.`ಮಮತಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದು ಪೂರ್ವ ಯೋಜಿತ ದಾಳಿ' ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ಆರೋಪಿಸಿದರು.

ಪಶ್ಚಿಮ ಬಂಗಾಳದಾದ್ಯಂತ ಸಿಪಿಎಂ ಕಚೇರಿಗಳು ಹಾಗೂ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ದಾಳಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹಾರಿಕೆಯ ಉತ್ತರ ನೀಡಿದರು. `ಲಂಗು ಲಗಾಮಿಲ್ಲದೇ ನಮ್ಮ ಮೇಲೆ ಈ ರೀತಿ ಆರೋಪ ಮಾಡಲಾಗುತ್ತಿದೆ' ಎಂದು ದೂರಿದರು.

ಬೆಂಬಲಿಗರ ಪ್ರತಿಭಟನೆ : ಕೋಲ್ಕತ್ತದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಐತಿಹಾಸಿಕ ಬೇಕರ್ ಪ್ರಯೋಗಾಲಕ್ಕೆ ದುಷ್ಕರ್ಮಿಗಳು ಬುಧವಾರ ಮುತ್ತಿಗೆ ಹಾಕಿ ದಾಂದಲೆ ಎಬ್ಬಿಸಿದರು. ಈ ಘಟನೆ ಕುರಿತಂತೆ ಟಿಎಂಸಿ ವಿದ್ಯಾರ್ಥಿ ವಿಭಾಗ ಹಾಗೂ ಸಿಪಿಎಂ ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಹೊರಿಸಿವೆ.

ಸಂಸ್ಥೆಯಲ್ಲಿ ಆಯ್ಕೆ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಲವು ವಿದ್ಯಾರ್ಥಿಗಳ ಕೈಯಲ್ಲಿ ಟಿಎಂಸಿ ಪಕ್ಷದ ಧ್ವಜಗಳು ಇದ್ದವು ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಹೊರಗಿನವರ ಕೈವಾಡ ಇದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ವಿಷಾದ: ದೆಹಲಿ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಮಮತಾ ಅವರಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ಸಿಪಿಎಂ ಕ್ಷಮೆಯಾಚಿಸಬೇಕು: ಮಮತಾ ಬ್ಯಾನರ್ಜಿ ಹಾಗೂ ಹಣಕಾಸು ಸಚಿವ ಅಮಿತ್ ಮಿತ್ರಾ ಅವರ ಮೇಲೆ ನಡೆದ ಹಲ್ಲೆಯನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಖಂಡಿಸಿದ್ದಾರೆ.

`ಹಿಂದೆಂದೂ ಇಂಥ ಘಟನೆ ನಡೆದಿರಲಿಲ್ಲ. ಇದು ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಳಂಕ ತರುತ್ತದೆ. ಸಿಪಿಎಂ ಪಾಲಿಟ್ ಬ್ಯುರೊ ಇದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು' ಎಂದು ಆಗ್ರಹಿಸಿದ್ದಾರೆ.

ಹೀಗಾಗಬಾರದಿತ್ತು: `ನಿಜಕ್ಕೂ ಈ ರೀತಿ ಆಗಬಾರದಿತ್ತು. ಇಂಥ ದುರ್ವರ್ತನೆಯನ್ನು ನಾವು ಬೆಂಬಲಿಸುವುದಿಲ್ಲ' ಎಂದು ಸಿಪಿಐ ಮುಖಂಡ ಡಿ. ರಾಜಾ ಪ್ರತಿಕ್ರಿಯಿಸಿದ್ದಾರೆ.

ಹಿಂಸಾಚಾರ ನಿಲ್ಲಿಸಿ: ದೆಹಲಿ ಘಟನೆಯನ್ನು ಖಂಡಿಸಿರುವ ಸಿಪಿಎಂ, `ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಮೇಲೆ ಟಿಎಂಸಿ ನಡೆಸುತ್ತಿರುವ ಹಿಂಸಾಚಾರ ಕೂಡಲೇ ನಿಲ್ಲಬೇಕು' ಎಂದು ಹೇಳಿದೆ.

`ದೆಹಲಿ ಘಟನೆ ಹೇಗಾಯಿತು ಎಂದು ಪಕ್ಷವು ಪರಿಶೀಲಿಸುತ್ತದೆ' ಎಂದು ಪಾಲಿಟ್‌ಬ್ಯುರೊ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೀಪಾ ಆರೋಪ: ದೆಹಲಿ ಘಟನೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಕಾರು ಹಾಗೂ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾಗಿ ಕೇಂದ್ರ ಸಚಿವೆ ದೀಪಾದಾಸ್‌ಮುನ್ಷಿ ಆರೋಪಿಸಿದ್ದಾರೆ.

ಖಂಡನೆ: ಕೇಂದ್ರ ಸಚಿವರಾದ ಮನೀಶ್ ತಿವಾರಿ, ಕಮಲ್‌ನಾಥ್ ಅವರು ಕೂಡ ದೆಹಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಲಹೆ ನಿರ್ಲಕ್ಷಿಸಿದ ಮಮತಾ
ಎಸ್‌ಎಫ್‌ಐ ಪ್ರತಿಭಟನೆ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಕಚೇರಿಗೆ ಅತಿ ಗಣ್ಯ ವ್ಯಕ್ತಿಗಳಿಗೆ (ವಿಐಪಿ) ಇರುವ ಮಾರ್ಗದ ಮೂಲಕ ತೆರಳುವಂತೆ ನೀಡಿದ್ದ ಸಲಹೆಯನ್ನು ಮಮತಾ ಬ್ಯಾನರ್ಜಿ ನಿರ್ಲಕ್ಷಿಸಿದ್ದರು ಎನ್ನುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಮಮತಾ ವಿಐಪಿ ಮಾರ್ಗದ ಬದಲು ಮುಖ್ಯ ದ್ವಾರದ ಮೂಲಕ ಆಯೋಗದ ಕಚೇರಿ ಪ್ರವೇಶಿಸಿದ್ದರು ಎನ್ನುವುದನ್ನು ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ.  ಆದರೆ ಇದನ್ನು ಮಮತಾ ಅಲ್ಲಗಳೆದಿದ್ದಾರೆ.  ಈ ಕುರಿತ ಪ್ರಶ್ನೆಗೆ, `ಸಾಧ್ಯವೇ ಇಲ್ಲ. ನಾನು ಭಿಕ್ಷುಕಿ ಎಂದು ನೀವು ಭಾವಿಸಿದ್ದೀರಾ?  ನಾನು ಯಾರಿಗೂ ತಲೆ ಬಾಗುವುದಿಲ್ಲ' ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT