ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನ ಆತ್ಮಹತ್ಯೆ: ಯುವತಿ ಸಾವು

Last Updated 4 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನನೊಂದ ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸ ಬಯ್ಯಪ್ಪನಹಳ್ಳಿ ಸಮೀಪದ ಇಂದಿರಾ ಹರಿಜನ ಸೇವಾ ಕಾಲೊನಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಇಂದಿರಾ ಹರಿಜನ ಸೇವಾ ಕಾಲೊನಿ ನಿವಾಸಿ ಷಣ್ಮುಗಮ್ ಎಂಬುವರ ಪುತ್ರಿ ಜೀನಾ (22) ಆತ್ಮಹತ್ಯೆ ಮಾಡಿಕೊಂಡವರು.ಆಕೆ ಪಕ್ಕದ ಮನೆಯಲ್ಲೇ ವಾಸವಿದ್ದ ಮುಕುಂದ (28) ಎಂಬಾತನನ್ನು ಪ್ರೀತಿಸುತ್ತಿದ್ದಳು. ವಿವಾಹಿತನಾಗಿ ಮೂರು ಮಕ್ಕಳ ತಂದೆಯಾಗಿದ್ದ ಮುಕುಂದ ಸಹ ಜೀನಾಳನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಮದುವೆಯಾಗಲು ಉದ್ದೇಶಿಸಿದ್ದರು. ಈ ವಿಷಯವಾಗಿ ಉಭಯ ಕುಟುಂಬಗಳ ಸದಸ್ಯರ ನಡುವೆ ಜಗಳವಾಗಿತ್ತು.ಇದರಿಂದ ಬೇಸರಗೊಂಡ ಮುಕುಂದ ಬುಧವಾರ (ಫೆ.2) ರಾತ್ರಿ ಮನೆಯ ಸಮೀಪವೇ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಿಯಕರನ ಆತ್ಮಹತ್ಯೆಯಿಂದ ಮನನೊಂದ ಜೀನಾ, ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಬಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ
ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಲದೇವನಹಳ್ಳಿಯ ಸೋಮಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.ಮಮತಾ (23) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತಿ ಶಿವಶಂಕರ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಮತಾ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಬೈಲಪ್ಪ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಸೋಮಶೆಟ್ಟಿಹಳ್ಳಿ ಕ್ಷೇತ್ರದ ಸದಸ್ಯೆ ಜಯಮ್ಮ ಅವರ ಮಗಳು. ಗೊಬ್ಬರದ ಅಂಗಡಿಯ ಮಾಲೀಕ ಶಿವಶಂಕರ್ ಜತೆ ಐದು ವರ್ಷದ ಹಿಂದೆ ಮಮತಾ ಅವರ ವಿವಾಹವಾಗಿತ್ತು. ಅವರಿಗೆ 4 ವರ್ಷದ ಮಗು ಇದೆ.

ವರದಕ್ಷಿಣೆ ತರುವಂತೆ ಆತ ಪತ್ನಿಗೆ ಪೀಡಿಸುತ್ತಿದ್ದ. ಇದರಿಂದ ಮನನೊಂದ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.ಶಿವಶಂಕರ್, ಆತನ ತಂದೆ ಮತ್ತು ಆತನ ತಾಯಿಯ ವಿರುದ್ಧ ಮಮತಾ ಪೋಷಕರು ದೂರು ನೀಡಿದ್ದಾರೆ.ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್ ಪಿ.ಟಿ.ಸುಬ್ರಹ್ಮಣ್ಯ  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಹಡಿಯಿಂದ ಬಿದ್ದು ಸಾವು
ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ ಕುಡಿದ ಅಮಲಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಮಿಲ್ಲರ್ಸ್‌ ರಸ್ತೆಯ ವಿಕ್ರಮ್ ಆಸ್ಪತ್ರೆಯ ಏಳನೇ ಮಹಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಬಿಹಾರ ಮೂಲದ ರಾಮ್‌ದೇವ್ (23) ಮೃತಪಟ್ಟವರು. ಆಸ್ಪತ್ರೆಯ ಏಳನೇ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಏಳನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮ್‌ದೇವ್ ಅಲ್ಲಿಯೇ ಮಲಗುತ್ತಿದ್ದ. ರಾತ್ರಿ ಪಾನಮತ್ತರಾಗಿದ್ದ ಅವರು ಅಮಲಿನಲ್ಲಿ ಮಹಡಿ ಮೇಲೆಯೇ ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಗುತ್ತಿಗೆದಾರ ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮ್‌ದೇವ್ ಮಿತಿ ಮೀರಿ ಮದ್ಯಪಾನ ಮಾಡುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆ ಸಹ ಅವರಿಗಿತ್ತು. ಆದ್ದರಿಂದ ಬಿದ್ದೊಡನೆಯೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಬಾಲ್‌ರಾಜ್  ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಅಪರಿಚಿತ ಶವಗಳು ಪತ್ತೆ
ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ಶವ ಶುಕ್ರವಾರ ಪತ್ತೆಯಾಗಿದೆ.
ಮಂಡೂರು ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಕೊಳೆತು ನಾರುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯ ಶವ ಕಂಡು ಬಂತು. ಆತ ಕೆಂಪು ಬಣ್ಣದ ಅರ್ಧ ತೋಳಿನ ಅಂಗಿ, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದ. ಮತ್ತೊಂದು ಶವ ಕಾಟಂನಲ್ಲೂರು ಗ್ರಾಮದ ರಸ್ತೆ ಬದಿ ಇತ್ತು. ಸುಮಾರು 45 ವರ್ಷ ವಯಸ್ಸಿನ ಆ ವ್ಯಕ್ತಿ ಯಾವುದೋ ಕಾಯಿಲೆಯಿಂದ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಆತ ಅರ್ಧ ತೋಳಿನ ಬನಿಯನ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ಪೊಲೀಸರು ಅಸಹಜ ಮರಣದ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT