ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಯಾಗುವ ಮುನ್ನ...

Last Updated 15 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪ್ರೀತಿಯಿಂದಾಗಿ ಎಂತಹ ಬಲಶಾಲಿಯೂ ನಡುಗುತ್ತಾನೆ, ಎಂತಹ ಬಲಹೀನನೂ ಬಲವಂತನಾಗುತ್ತಾನೆ! ಇದು ಪ್ರೇಮದ ವೈಚಿತ್ರ್ಯ.
ಪ್ರೇಮವೆಂದರೆ ಹಾಗೇ. ‘ನಾ ನಿನ್ನ ಪ್ರೀತಿಸುವೆ’ ಎಂಬ ಎಂಟಕ್ಷರದ ಅದ್ಭುತ ಮಂತ್ರವನ್ನು ತಾನು ಪ್ರೀತಿಸುವ ಹೃದಯದ ಮುಂದೆ ನಿವೇದಿಸುವ ಸಂದರ್ಭದಲ್ಲಿ ಎಂತಹ ಗಟ್ಟಿ ಗುಂಡಿಗೆಯುಳ್ಳವನೂ ಕೂಡ ಹೆದರುತ್ತಾನೆ.

‘ಪ್ರೇಮ’ ಒಂದು ಸುಮಧುರ ಅನು ಭವ. ಯಾರ ಹಂಗಿಲ್ಲದೇ ಬಾನಂಗಳದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬೆಳ್ಳಕ್ಕಿಗಳಂತೆ ಪ್ರೀತಿ ನಿರ್ಮಲವಾದುದು. ಪ್ರೀತಿಸುವ ಹೃದಯಗಳಿಗೆ ಈ ಜಗತ್ತಿನ ಯಾವ ನಿರ್ಬಂಧಗಳೂ ಇಲ್ಲ. ಪ್ರೀತಿ ಕುರುಡು! ಅದು ಎಲ್ಲಿ, ಯಾವಾಗ, ಯಾರ ಮೇಲೆ, ಏಕೆ ಉಂಟಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅದಕ್ಕೆ ‘ಲವ್ ಅಟ್ ಫಸ್ಟ್ ಸೈಟ್’ ಎಂದು ಹೇಳುವುದು. ನಿಜಕ್ಕೂ ಪ್ರೀತಿ ಯಾವತ್ತಿಗೂ ‘ಅಕಾರಣ’ ವಾಗಿರಬೇಕು!

ಪ್ರೀತಿಗೆ ಮೊದಲನೇ ಮೆಟ್ಟಿಲು ಸ್ನೇಹ. ಸ್ನೇಹ ಗಾಢವಾಗುತ್ತಿದ್ದಂತೆ ಭಾವನಾತ್ಮಕವಾಗಿ ಎರಡು ಹೃದಯಗಳೂ ಬೆಸೆದುಕೊಳ್ಳುವುದರಿಂದ ಇಬ್ಬರ ಹೃದಯದಲ್ಲೂ ಸಹ ಒಂದು ಭದ್ರತೆಯ ಭಾವ ಮೂಡುತ್ತದೆ.

ಭಾವನೆಗಳಿಗೆ ಹೆಚ್ಚಾಗಿ ಸ್ಪಂದಿಸುವ ಹುಡುಗರ ಹೃದಯಗಳು ಈ ಸಂದರ್ಭದಲ್ಲಿ ತನ್ನ ಪ್ರೀತಿಯ ಸಸಿಗೆ ಮನಸ್ಸಿನಲ್ಲಿಯೇ ನೀರೆರೆದು ಪೋಷಿಸಲು ಶುರುಮಾಡುತ್ತಾರೆ. ಪ್ರೇಮದ ಸಸಿ ಚಿಗುರಿ, ಫಲವತ್ತಾಗಿ ಬೆಳೆದು, ಹೂಬಿಟ್ಟು, ಹೂ ಕಾಯಾಗಿ, ಕಾಯಿ ಹಣ್ಣಾಗುವ ಸುಸಂದರ್ಭದಲ್ಲಿ ತನ್ನ ಪ್ರೀತಿಯ ನಿವೇದನೆಗೆ ಮುಂದಾಗುತ್ತಾನೆ.

ಒಂದು ಹುಡುಗಿಗೆ ‘ಐ ಲವ್ ಯೂ’ ಎಂದು ಹೇಳುವುದಕ್ಕೂ ಮುನ್ನ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.
ಈ ದಿನಗಳಲ್ಲಿ ಹುಡುಗಿಯ ತಂದೆ ತಾಯಿಗಳಿಗಿಂತ ಹುಡುಗಿಯರೇ ತಾನು ಪ್ರೀತಿಸುವ ಹುಡುಗನ ಬಗ್ಗೆ ಹೆಚ್ಚು ಪರಿಪಕ್ವವಾಗಿ ಯೋಚಿಸುತ್ತಾರೆ. ನಾನು ಈ ಹುಡುಗನನ್ನು ಪ್ರೀತಿಸಿದರೆ ತನ್ನ ಮುಂದಿನ ಜೀವನ ಸುಭದ್ರವಾಗಿರುತ್ತದೆಯೇ? ಸಂಬಂಧಗಳಿಗೆ ಎಷ್ಟರ ಮಟ್ಟಿಗೆ ಬೆಲೆ ಕೊಡುತ್ತಾನೆ? ಹುಡುಗನ ಮನೆಯ ಆರ್ಥಿಕ ಪರಿಸ್ಥಿತಿಯ ಹಿನ್ನೋಟ ಇವುಗಳೆಲ್ಲವನ್ನೂ ಗಮನಿಸಿಯೇ ಅವರು ಪ್ರೀತಿಸಲು ಮುಂದಾಗುತ್ತಾರೆ.

ಹೀಗೆ ನಿರ್ದಿಷ್ಟವಾಗಿ ಯೋಚಿಸುವ ಹುಡುಗಿಯರು ಅಷ್ಟು ಸುಲಭವಾಗಿ ನಿಮ್ಮ  ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅನರ್ಹ ವ್ಯಕ್ತಿಗೆ ತಮ್ಮ ಅಮೂಲ್ಯ ಪ್ರೇಮ ಧಾರೆಯೆರೆಯುವವರು ಅವರಲ್ಲ.

ಆದ್ದರಿಂದಲೇ ನಿಮ್ಮ ಪ್ರೀತಿಯ ನಿವೇದನೆಗೆ ಮೊದಲು ನಿಮ್ಮ ಜೀವನದಲ್ಲಿ ಎಲ್ಲ ರೀತಿಯಿಂದಲೂ ಸದೃಢರಾಗಿ ಬೆಳೆಯಬೇಕು. ಬಳಿಕ ನಿಮ್ಮ ಪ್ರೀತಿಯ ನಿವೇದನೆಗೆ ಮುಂದಾಗಿ. ನಿಮ್ಮ ಪ್ರೀತಿ ನಿಜವಾಗಿದ್ದರೆ ಖಂಡಿತವಾಗಿ ನಿಮ್ಮ ಹುಡುಗಿ ನಿಮಗೆ ಸಿಕ್ಕೇ ಸಿಗುತ್ತಾಳೆ!

*ಹಾಗೆ ಹೇಳಲೇಬೇಕಾದ ಪ್ರಸಂಗವಿದೆಯೇ?
* ಹೇಳದಿದ್ದರೇ ಏನಾದೀತು?
*  ಹೇಳುವ ಅರ್ಹತೆ ನಿನಗಿದೆಯೇ?
* ಅದಕ್ಕವಳು ಉತ್ತರಿಸಲೇ ಬೇಕೆ?
*ಉತ್ತರಿಸದಿದ್ದರೇ ಏನು ಮಾಡೋದು?
*ಅವಳ ಎತ್ತರಕ್ಕೆ, ಪ್ರೀತಿಗೆ, ಅವಳ ಸಹಬಾಳ್ವೆಗೆ ನಾನು ಯೋಗ್ಯನೇ?
*ಮೇಲ್ಕಂಡ ಪ್ರಶ್ನೆಗಳಿಗೆಲ್ಲಾ ಪ್ರಾಮಾಣಿಕವಾಗಿ ಉತ್ತರ ಕಂಡುಕೊಂಡು ನಿಜಕ್ಕೂ ಪ್ರೀತಿಸಲು ಅರ್ಹನಿದ್ದೇನೆ ಎಂಬ ಉತ್ತರ ದೊರೆತರೆ ಮಾತ್ರ ಮುಂದುವರಿಯುವುದು ಲೇಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT