ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಫಿಟ್‌ನೆಸ್‌ಗೆ ಒತ್ತು ನೀಡಿದ್ದೇನೆ'

ಕಠಿಣ ಪರಿಶ್ರಮಕ್ಕೆ ಫಲ ಲಭಿಸುತ್ತಿದೆ: ಬೋಪಣ್ಣ
Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆಟದಲ್ಲಿ ಸುಧಾರಣೆ ಕಂಡುಕೊಳ್ಳಲು ನಡೆಸುತ್ತಿರುವ ಕಠಿಣ ಪರಿಶ್ರಮಕ್ಕೆ ಇದೀಗ ತಕ್ಕ ಫಲ ಲಭಿಸುತ್ತಿದೆ ಎಂದು ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹೇಳಿದ್ದಾರೆ.

`ಕೆಲವು ಸಣ್ಣ ವಿಚಾರಗಳತ್ತಲೂ ಗಮನ ಹರಿಸುವುದು ಅಗತ್ಯ. ನಾನು ಫಿಟ್‌ನೆಸ್ ಕಾಪಾಡಿಕೊಳ್ಳುವತ್ತ ಹೆಚ್ಚಿನ ಒತ್ತು ನೀಡಿದ್ದೇನೆ' ಎಂದು `ಗೋ ಸ್ಪೋರ್ಟ್ಸ್' ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ನುಡಿದರು.

ಇತ್ತೀಚೆಗೆ ನಡೆದ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಎಡ್ವರ್ಡ್ ರೋಜರ್ ವೆಸೆಲಿನ್ ಜೊತೆ ಆಡಿದ್ದ ಬೋಪಣ್ಣ ಸೆಮಿಫೈನಲ್ ಪ್ರವೇಶಿಸಿದ್ದರು. ಮಾತ್ರವಲ್ಲ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. `ಇದು ನನಗೆ ಅವಳಿ ಸಂಭ್ರಮಕ್ಕೆ ಕಾರಣವಾಗಿದೆ'  ಎಂದು ಕರ್ನಾಟಕದ ಈ ಆಟಗಾರ ತಿಳಿಸಿದ್ದಾರೆ.

ವಿಂಬಲ್ಡನ್‌ನಲ್ಲಿ ರೋಹನ್ ಅವರು ಮಹೇಶ್ ಭೂಪತಿ ಜೊತೆ ಆಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರೂ ಈ ನಿರ್ಧಾರ ಬದಲಿಸಿ ಬೇರೆ ಬೇರೆ ಜೊತೆಗಾರರೊಂದಿಗೆ ಆಡಲು ನಿರ್ಧರಿಸಿದ್ದರು. ಇದರು ರೋಹನ್‌ಗೆ ವರವಾಗಿ ಪರಿಣಮಿಸಿತ್ತು.

`ಎಟಿಪಿ ಟೂರ್ನಿಗಳಲ್ಲಿ ನಾನು ಹಾಗೂ ಮಹೇಶ್ ಉತ್ತಮವಾಗಿ ಆಡುತ್ತಿದ್ದೆವು. ಆದರೆ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ನಮಗೆ ಹೊಂದಾಣಿಕೆಯ ಆಟವಾಡಲು ಆಗುತ್ತಿರಲಿಲ್ಲ. ಈ ಕಾರಣ ವಿಂಬಲ್ಡನ್‌ನಲ್ಲಿ ಬೇರೆ ಬೇರೆ ಜೊತೆಗಾರರೊಂದಿಗೆ ಆಡಲು ತೀರ್ಮಾನಿಸಿದೆವು. ಎಡ್ವರ್ಡ್ ಜೊತೆ ಆಡುವ ನನ್ನ ನಿರ್ಧಾರ ಸರಿಯಾಗಿಯೇ ಇತ್ತು. ನಾವು ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾದೆವು' ಎಂದು ರೋಹನ್ ತಿಳಿಸಿದರು.

`ನಾನು ಉತ್ತಮವಾಗಿ ಸರ್ವ್ ಮಾಡುತ್ತೇನೆ ಎಂದು ಜನರು ಹೇಳುವರು. ಆದರೆ ಪಂದ್ಯದಲ್ಲಿ ನೆಟ್ ಬಳಿ ಉತ್ತಮ ರೀತಿಯ ಆಟ ತೋರುವುದು ಮುಖ್ಯ. ನಾನು ಎರಡೂವರೆ ವರ್ಷಗಳಿಂದ ಕೋಚ್ ಸ್ಕಾಟ್ ಡೇವಿಡಫ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT