ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿದೆ ನಗರ ಸಂಚಾರ ವ್ಯವಸ್ಥೆ

Last Updated 9 ಡಿಸೆಂಬರ್ 2013, 10:24 IST
ಅಕ್ಷರ ಗಾತ್ರ

ತುಮಕೂರು: ನಗರ ಸಂಚಾರಿ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆ  ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಸಭೆ ನಡೆದಿದ್ದು, ಕೆಲ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹೆದ್ದಾರಿ ನಿರ್ಮಾಣ ಮಾಡಿದಾಗಲೇ ಕೆಲ ತಪ್ಪುಗಳಾಗಿದ್ದು, ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 4 ಹಾಗೂ 206 ಸಂಪರ್ಕಿಸುವ ರಸ್ತೆ ವೈಜ್ಞಾನಿಕವಾಗಿಲ್ಲ. ಇನ್ನು ನಗರ ಪ್ರವೇಶಿಸಲು ಬಟವಾಡಿಯಿಂದ ನೀಡಿರುವ ಪ್ರವೇಶದ ರಸ್ತೆ ಕೂಡ ಸಮಸ್ಯಾತ್ಮಕವಾಗಿದೆ.

ನಗರಸಭೆಯಿಂದ ಆಗಬೇಕಿದ್ದ ವ್ಯವಸ್ಥೆಗಳು ವರ್ಷಗಟ್ಟಲೆ­ಯಿಂದ ಬಾಕಿ ಉಳಿದಿವೆ.
ವಾಹನ ನಿಲುಗಡೆಗೆ ಉತ್ತಮ ಜಾಗವಿಲ್ಲ. ಆಟೊ, ಬಸ್ ನಿಲ್ದಾಣ, ಅಗತ್ಯ ಇರುವೆಡೆ ಟ್ರಾಫಿಕ್ ಸಿಗ್ನಲ್, ಮೇಲ್ಸೇತುವೆ, ಸ್ಕೈ ವಾಕರ್ ಇದ್ಯಾವುದೂ ಆಗಿಲ್ಲ.

ಇದೆಲ್ಲದರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತಾ, ಪೊಲೀಸ್ ಇಲಾಖೆ ಚಾಲೂ ಇರುವ ವ್ಯವಸ್ಥೆಯಲ್ಲಿ ನಿಯಮ­ಗಳನ್ನು ಜಾರಿ ಮಾಡುವುದಕ್ಕಾಗಿ ಇದೆಯೇ ಹೊರತು ನಾವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂದರು.

ನಗರಸಭೆ ಆಯುಕ್ತ ಅಶಾದ್ ಶರೀಫ್ ಮಾತನಾಡಿ, ಇದು ಹಲ ವರ್ಷಗಳಿಂದಲೂ ಇರುವ ಸಮಸ್ಯೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಕೆಲ ಸಮಸ್ಯೆಗಳಾಗಿವೆ. 

ಈ ಬಾರಿ ನಗರಸಭೆಗೆ ಬರುವ ₨ 100 ಕೋಟಿ ಅನುದಾನದಲ್ಲಿ ₨5 ಕೋಟಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಮೀಸಲಿಡಲಿದ್ದೇವೆ. ಸಿಗ್ನಲ್, ಕ್ಯಾಮೆರಾ ಅಳವಡಿಸುವುದಕ್ಕೆ, ಬಿಳಿ ಪಟ್ಟಿ ಬಳಿಯುವುದಕ್ಕೆ, ಆಟೊ, ಬಸ್ ನಿಲ್ದಾಣ ನಿರ್ಮಾಣಕ್ಕೆ, ಪಾರ್ಕಿಂಗ್ ವ್ಯವಸ್ಥೆಗೆ ಎಂದು ಪೊಲೀಸ್ ಇಲಾಖೆಯಿಂದ ಬರುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯುತ್ತೇವೆ ಎಂದರು.

ಪೊಲೀಸ್ ಪ್ರಸ್ತಾವ ಏನಿದೆ?
ಅಶೋಕ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಆಗಬೇಕು. ಬಟವಾಡಿಯಲ್ಲಿ ವೃತ್ತ ನಿರ್ಮಿಸಿ ಸಂಚಾರ ನಿಯಂತ್ರಿಸಬೇಕು. ಬಿ.ಎಚ್.ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಅಪಘಾತ ವಲಯಗಳು ಎಂದು ಗುರುತಿಸಿದೆಡೆ ಸೈನ್ ಬೋರ್ಡ್ ಅಳವಡಿಸಬೇಕು.

ಸದ್ಯ 15 ಸಿ.ಸಿ. ಕ್ಯಾಮೆರಾ ಕೆಲಸ ಮಾಡುತ್ತಿವೆ. ಮುಂದೆ ನಗರದಾದ್ಯಂತ 100 ಸಿ.ಸಿ. ಕ್ಯಾಮೆರಾ ಅಳವಡಿಸಬೇಕು, ರಾ.ಹೆ.4 ಹಾಗೂ ರಾ.ಹೆ. 206 ಸಂಪರ್ಕಿಸುವ ರಸ್ತೆ ವೈಜ್ಞಾನಿಕವಾಗಿಲ್ಲ. ಅದನ್ನು ಹೆದ್ದಾರಿ ಪ್ರಾಧಿಕಾರದವರು ಸರಿಪಡಿಸಬೇಕು. ಪ್ರಮುಖವಾಗಿ ಕ್ಯಾತ್ಸಂದ್ರ ವೃತ್ತದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಾಗಬೇಕು. ಬಸ್ ಪಥ, ಆಟೊ ನಿಲ್ದಾಣ, ಸಿಗ್ನಲ್ ಅಳವಡಿಕೆ, ಪಾದಚಾರಿ ಸೇತುವೆ ನಿರ್ಮಾಣ­ವಾಗಬೇಕು. ನಗರಸಭೆಯಿಂದ ವಾಣಿಜ್ಯ ಸಮುಚ್ಚಯ­ಗಳಿಗೆ ಪರವಾನಗಿ ನೀಡುವ ಹಂತದಲ್ಲಿಯೇ ವಾಹನ ನಿಲುಗಡೆಗೆ ಸ್ಥಳ ನಿಗದಿ ಮಾಡಲು ಸೂಚಿಸಬೇಕು. ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಿ ಅಭಿವೃದ್ಧಿ ಪಡಿಸಬೇಕು ಎಂದು ಪೊಲೀಸ್‌ ಇಲಾಖೆ ಪ್ರಸ್ತಾವದಲ್ಲಿ ಹೇಳಿದೆ.

ಅಪಘಾತ ತಡೆಯುವುದು ಹೇಗೆ?
ಪೊಲೀಸ್ ಇಲಾಖೆಯಿಂದ ‘ಬ್ಲ್ಯಾಕ್ ಸ್ಪಾಟ್’ಗಳನ್ನು ಗುರುತಿಸಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಅಪಘಾತವಾಗಿದ್ದರೆ ಅಂಥ ಸ್ಥಳವನ್ನು ಬ್ಲ್ಯಾಕ್ ಸ್ಪಾಟ್ ಅಂತ ಗುರುತಿಸಿ, ಅಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧವಾಗಿದೆ. ಸಂಚಾರಿ ಇನ್ ಸ್ಪೆಕ್ಟರ್ ಒಬ್ಬರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. 

ಸವಾಲುಗಳೇನು?: ನಗರದ ಒಳಗೆ ರಾ.ಹೆ.206 ಹಾದು ಹೋಗುತ್ತದೆ. ರಾ.ಹೆ.4ರಲ್ಲಿ ಹೋಗುವ ಬಸ್‌ಗಳು ಬಸ್‌ ನಿಲ್ದಾಣ ಮುಟ್ಟಿ ಹೋಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲು ಎಂದೇ ಖ್ಯಾತವಾದ ತುಮಕೂರಿನಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT