ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬದುಕಿನ ಸಾರ್ಥಕತೆಗೆ ಸಮಾಜ ಸೇವೆ ಮುಖ್ಯ'

ನಿಜಾನಂದ ಸಾಗರ ಮಹಾರಾಜರ 60ನೇ ಜಯಂತಿ
Last Updated 5 ಸೆಪ್ಟೆಂಬರ್ 2013, 6:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಯಾವುದೇ ಮನುಷ್ಯನ ಬದುಕಿನ ಸಾರ್ಥಕತೆಗೆ ಸಮಾಜ ಸೇವೆ ಬಹಳ ಮುಖ್ಯ. ಆಗ ಮಾತ್ರವೇ   ಸಮಾಜ ಅವರನ್ನು ಅನುಗಾಲವೂ ಸ್ಮರಿಸಿಕೊಳ್ಳುತ್ತದೆ' ಎಂದು ನಿಜಾನಂದ ಸಾಗರ ಮಹಾರಾಜರು ನುಡಿದರು.

ದಿಗಂಬರ ಜೈನ ಸಮಾಜ ಹಾಗೂ ಚಾತುರ್ಮಾಸ ಸಮಿತಿ ವತಿಯಿಂದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ನಿಜಾನಂದ ಸಾಗರ ಮಹಾರಾಜರ 60ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳೆಲ್ಲವೂ ಮನುಷ್ಯರ ಧಾರ್ಮಿಕ ಚಿಂತನೆಗಳನ್ನು ರೂಪಿಸುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಕಾರಣವಾಗುತ್ತವೆ. ಆ ಮೂಲಕ ಕಾಯಾ, ವಾಚಾ, ಮನಸಾ ವ್ಯಕ್ತಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಅದರಲ್ಲೂ ವಿಶೇಷವಾಗಿ ವ್ಯಕ್ತಿಯೊಬ್ಬ ತನ್ನ ದೇಶಕ್ಕಾಗಿ, ಸಮಾಜಕ್ಕಾಗಿ ಉತ್ತಮವಾದ ಕೊಡುಗೆಗಳನ್ನು ನೀಡುತ್ತಾನೆಯೋ ಅಂತಹ ವ್ಯಕ್ತಿ ಅಮರನಾಗುತ್ತಾರೆ. ಆತನ ಮರಣಾನಂತರವೂ ಜನರು ಕೊಂಡಾಡುತ್ತಾರೆ. ಅಂತಹ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳುವುದು ಅಗತ್ಯ ಎಂದರು.

`ಜೈನಧರ್ಮದಿಂದ ಮಾತ್ರ ಸಾಧ್ಯ'
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ವಿಜಯ ಸಂಕೇಶ್ವರ ಜೈನಧರ್ಮದ ಮಹತ್ವವನ್ನು ಕೊಂಡಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಸಮಾಜದಲ್ಲಿ ಪ್ರತಿದಿನವೂ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಪೊಲೀಸರು, ಕಾನೂನು ಇದ್ದರೂ ಅಂತಹ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ದುಷ್ಕೃತ್ಯಗಳು ಹೆಚ್ಚುತ್ತಲೇ ಇದ್ದು ನಿಯಂತ್ರಣ ಕಷ್ಟಸಾಧ್ಯವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತಿದ್ದರೆ ಮುಂದಿನ ಪೀಳಿಗೆ ಹೇಗೋ ಏನೋ ಎನ್ನುವ  ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆದಾಗ್ಯೂ ಆಶಾಕಿರಣ ಎನ್ನುವಂತೆ ಧರ್ಮಗಳು ನಮ್ಮ ಕೈಹಿಡಿಯುತ್ತವೆ. `ಅಹಿಂಸಾ ಪರಮೋ ಧರ್ಮಃ' ಎನ್ನುವ ಜೈನಧರ್ಮದ ಸಾರ ಕೇವಲ ಆ ಧರ್ಮದವರಿಗೆ ಮಾತ್ರವೇ ಸೀಮಿತವಲ್ಲ. ಅನ್ಯಧರ್ಮೀಯರೂ  ಕೂಡ ತಮ್ಮ ಬದುಕಿನಲ್ಲಿ ಈ ಸಾರವನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರವೇ ಸಮಾಜದಲ್ಲಿ  ನಡೆಯುತ್ತಿರುವ ದುಷ್ಟಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. 

ನವಗ್ರಹ ಪೀಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜೀವನ ಬಹಳ ಅಮೂಲ್ಯ.  ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ನುಡಿದರು.

ಜೈನ ಸಮಾಜದ ಅಧ್ಯಕ್ಷ ಮಹಾವೀರ ಎನ್.ಸೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಸನ್ನಮತಿ ಮಾತಾಜಿ, ಚಾತುರ್ಮಾಸ ಸಮಿತಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ಬ್ರಹ್ಮಕುಮಾರ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT