ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನ ನಾಡಲ್ಲಿ ಕುರುಡನ ಮಾಡಯ್ಯ ತಂದೆ!

Last Updated 10 ಏಪ್ರಿಲ್ 2013, 20:06 IST
ಅಕ್ಷರ ಗಾತ್ರ

ಬಾಗಲಕೋಟೆ: ಬಸವನ ನಾಡು ಎಂದೇ ಖ್ಯಾತಿ ಗಳಿಸಿದ ಬಾಗಲಕೋಟೆ ಜಿಲ್ಲೆಯಲ್ಲಿ ಜನರು ಮತ್ತು ರಾಜಕಾರಣಿಗಳು ಆ ಬಸವನಲ್ಲಿ `ಕೆಟ್ಟದ್ದನ್ನು ನೋಡದಂತೆ ಕುರುಡನ ಮಾಡಯ್ಯ ತಂದೆ, ಕೆಟ್ಟದ್ದನ್ನು ಕೇಳದಂತೆ ಕಿವುಡನ ಮಾಡಯ್ಯ ತಂದೆ' ಎಂದು ಬೇಡಿಕೊಂಡಂತೆ ಕಾಣುತ್ತದೆ. ಜನರ ಸಂಕಷ್ಟಗಳನ್ನು ಅವರು ನೋಡುತ್ತಿಲ್ಲ. ಅವರ ಕೆಟ್ಟದ್ದನ್ನು ಇವರೂ ನೋಡುತ್ತಿಲ್ಲ.

“ಏನ್ ಚುನಾವಣೆರಿ, ಯಾರ್ ಬಂದರೆ ಏನ್ರಿ, ನಾವ್ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳೋದು ತಪ್ಪೋದಿಲ್ಲ' ಎಂಬ ಕಮತಗಿಯ ರೈತ ಮಹಿಳೆಯ ಮಾತಿನಲ್ಲಿ ಅಸತ್ಯ ಕಾಣೋದಿಲ್ಲ. ಮುಳುಗಡೆಯ ಭೀತಿಯ ಬಾಗಲಕೋಟೆ ನಗರದಲ್ಲಿ ಕಣ್ಣಿಗೆ ಕಾಣುವಷ್ಟು ಅಭಿವೃದ್ಧಿಯಾಗಿದೆ. ಉತ್ತಮ ರಸ್ತೆಗಳು, ಕುಡಿಯುವ ನೀರು ಎಲ್ಲಾ ಇದೆ. ಆದರೆ ಸ್ವಲ್ಪವೇ ದೂರದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿದರೆ ನರಕದ ದರ್ಶನವಾಗುತ್ತದೆ.

“ನಿಮ್ಮ ಊರಿಗೆ ಯಾಕೆ ರಸ್ತೆ ಇಲ್ಲ. ಯಾಕೆ ಶಾಲೆ ಇಲ್ಲ. ಯಾಕೆ ಬಸ್ಸು ಬರೋದಿಲ್ಲ” ಎಂದು ಕೇಳಿದರೆ “ಸರ್ಕಾರ ಕೊಡಲಿಲ್ರಿ” ಎಂದು ಒಬ್ಬ ಉತ್ತರಿಸುತ್ತಾನೆ. “ನೀವು ಕೇಳಲಿಲ್ಲವಾ?” ಎಂದರೆ “ನಾವ್ ಕೇಳಿದರೂ ಅವರು ಕೊಡಬೇಕಲ್ರಿ” ಎಂಬ ನಿರಾಸೆಯ ಮಾತನ್ನು ಆಡುತ್ತಾನೆ. “ಚುನಾವಣೆ ಎಂದರೆ ಜಾತ್ರೀರಿ. ಎಲ್ಲ ಅಂಗಡಿ ತೆರೀತಾರ್ರಿ. ಸರ್ಕಸ್ಸೂ ಬರ್ತಾವೆ. ನೋಡೋರ್ ನೋಡ್ತಾರೆ, ಆಡೋರ್ ಆಡ್ತಾರೆ. ಜನಕ್ಕೆ ಏನೂ ಪ್ರಯೋಜನ ಇಲ್ಲಾರೀ” ಎನ್ನುತ್ತಾರೆ ಅಬ್ಬಾಸ್ ಮೂಲಿಮನಿ.

“ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಾಗಿದೆ. ಸಾವಿರ ಸಾವಿರ ಕೋಟಿ ರೂಪಾಯಿಗಳನ್ನು ತಂದು ಹಾಕಿದ್ದಾರೆ. ಅಭಿವೃದ್ಧಿ ಗುಣಮಟ್ಟವನ್ನು ಮಾತ್ರ ಪ್ರಶ್ನೆ ಮಾಡಬೇಡಿ” ಎಂದು ಗುಳೇದಗುಡ್ಡದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳುತ್ತಾರೆ. ಜಿಲ್ಲೆಯಲ್ಲಾ ಸುತ್ತಾಡಿದರೆ ಇಂತಹದೇ ನಿರಾಸೆಯ ಮಾತುಗಳು ಕೇಳಿಬರುತ್ತವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಗುಳೇ ಹೋಗುವುದು ಸಂಪ್ರದಾಯವೇ ಆಗಿದೆ. ನೀರಾವರಿ ಇಲ್ಲದ ಕಾಲದಲ್ಲಿ ಜನರು ಗುಳೇ ಹೋಗುವುದು ಮಾಮೂಲಾಗಿತ್ತು. ಈಗ ನೀರಾವರಿ ಬಂದಿದೆ. ಆದರೆ ಗುಳೇ ಹೋಗುವುದು ಮಾತ್ರ ನಿಂತಿಲ್ಲ. ಬಾಗಲಕೋಟೆ ತಾಲ್ಲೂಕಿನ ಕೆಲವು ಪ್ರದೇಶಗಳು, ಹುನಗುಂದ, ಬಾದಾಮಿ ತಾಲ್ಲೂಕುಗಳು ಬರಪೀಡಿತ ಪ್ರದೇಶಗಳು. ಇಲ್ಲಿಂದ ನಿರಂತರವಾಗಿ ಜನರು ಗುಳೇ ಹೋಗುತ್ತಾರೆ.

ಡಿಸೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಗುಳೆ ನಿರಂತರವಾಗಿರುತ್ತದೆ. ಗುಳೇ ಹೊದ ಎಲ್ಲರನ್ನೂ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಕರೆ ತರುವ ಏಜೆಂಟರೂ ಹುಟ್ಟಿಕೊಂಡಿದ್ದಾರೆ. ಬಸ್ಸು ಮತ್ತು ಲಾರಿಗಳಲ್ಲಿ ಅವರನ್ನು ಇಲ್ಲಿಗೆ ಕರೆದು ತಂದು ಓಟ್ ಹಾಕಿಸಲಾಗುತ್ತದೆ. ಅಲ್ಲಿಂದ ಇಲ್ಲಿಗೆ ಬರುವ ತನಕ ಅವರ ಯೋಗಕ್ಷೇಮವನ್ನು ಆಯಾ ರಾಜಕೀಯ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ.

ಲಾರಿ ಹತ್ತುವಾಗ `ನಮಗೆ ಅಲ್ಲಿಯೇ ಕೆಲಸ ಸಿಗುವಂತೆ ಮಾಡಿ, ಅಲ್ಲೊಂದು ಮನೆಯನ್ನು ಕಟ್ಟಿ ಕೊಡಿ' ಎಂದು ಅವರೂ ಕೇಳುವುದಿಲ್ಲ. `ನೀವು ಅಲ್ಲಿಗೆ ಯಾಕೆ ಹೋಗ್ತೀರಿ. ಇಲ್ಲಿಯೇ ಇರಿ. ನಿಮಗೆ ಇಲ್ಲಿಯೇ ಆಶ್ರಯ, ಬಸವ ಯೋಜನೆಯಲ್ಲಿ ಮನೆ ಕೊಡಿಸುತ್ತೇವೆ' ಎಂದು ಇವರೂ ಹೇಳುವುದಿಲ್ಲ. ಗುಳೇ ಹೋದವರು ಇಲ್ಲಿಗೆ ಬಂದು ಮತ ಹಾಕಿ ಹೋಗುವುದೂ ಸಂಪ್ರದಾಯವೇ ಆಗಿದೆ.

ಇಲ್ಲಿನವರು ಗುಳೇ ಹೋದ ಹಾಗೆ ಮಹಾರಾಷ್ಟ್ರದ ಮಂದಿ ಇಲ್ಲಿಗೆ ಗುಳೇ ಬರುತ್ತಾರೆ. ಪ್ರತಿ ವರ್ಷ ಕಬ್ಬು ಕಟಾವು ವೇಳೆಗೆ ಮಹಾರಾಷ್ಟ್ರದಿಂದ ಕೂಲಿ ಕಾರ್ಮಿಕರನ್ನು ಕರೆಸಲಾಗುತ್ತದೆ. ಕಬ್ಬ ಕಡಿಯಲು ಸ್ಥಳೀಯರಿಗೆ ಆದ್ಯತೆಯೇ ಇಲ್ಲ. ಕಬ್ಬು, ದ್ರಾಕ್ಷಿ, ಸಪೋಟ, ದಾಳಿಂಬೆ ಇಲ್ಲಿನ ಪ್ರಮುಖ ಬೆಳೆಗಳು. ಬಹುತೇಕ ಬೆಳೆಗಳು ರಫ್ತಾಗುತ್ತವೆ. ಅತ್ಯಂತ ಫಲಭರಿತವಾದ ಭೂಮಿ ಇದು. ಯಶಸ್ವಿ ರೈತರೂ ಇದ್ದಾರೆ. ಆದರೆ ಸಾಮೂಹಿಕವಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ.

ಆಲಮಟ್ಟಿ ಜಲಾಶಯಕ್ಕೆ ಅಡಿಗಲ್ಲು ಹಾಕಿದ 1964ರಿಂದಲೂ ನೀರಾವರಿ ಸಮಸ್ಯೆ ಇಲ್ಲಿನ ರೈತರನ್ನು ಕಾಡುತ್ತಲೇ ಇದೆ. ಬೀಳಗಿ, ಮುಧೋಳ, ಜಮಖಂಡಿ ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯ ಇದೆ. ಆದರೆ ಅದರ ಸಂಪೂರ್ಣ ಪ್ರಯೋಜನ ರೈತರಿಗೆ ಸಿಕ್ಕಿಲ್ಲ. ಕಾಲುವೆಗಳು, ಉಪ ಕಾಲುವೆಗಳು ಪೂರ್ಣವಾಗಿಲ್ಲ. ಈಗಾಗಲೇ ಪೂರ್ಣಗೊಂಡ ಕಾಲುವೆಗಳೂ ಕಳಪೆಯಾಗಿವೆ ಎಂಬ ಆರೋಪಗಳಿವೆ.

ಪುನರ್ ವಸತಿಯೂ ಸೇರಿದಂತೆ ಮುಂದಿನ ಕಾಮಗಾರಿಗೆ ಇನ್ನೂ 60 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. `ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿಗಳನ್ನು ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ' ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಜನರು ಇಲ್ಲ.

`ಊರಿಗೆಲ್ಲಾ ಸೀರೆ ಕೊಟ್ಟರೂ ನೇಕಾರನ ಹೆಂಡತಿ ಬೆತ್ತಲೆ' ಎಂಬ ಗಾದೆ ಬಾಗಲಕೋಟೆ ಜಿಲ್ಲೆಯ ನೇಕಾರರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಇಳಕಲ್ ಸೀರೆಗೆ ಬೇಡಿಕೆ ಇದ್ದರೂ ವಿದ್ಯುತ್ ಸಮಸ್ಯೆ ಮತ್ತು ಸಾಲ ಸೌಲಭ್ಯದ ಸಮಸ್ಯೆಯಿಂದ ವಿದ್ಯುತ್ ಮಗ್ಗಗಳು ಸದ್ದು ಮಾಡುತ್ತಿಲ್ಲ. ಕೈಮಗ್ಗಗಳ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೇಕಾರ ಕುಟುಂಬಗಳಿವೆ. ನೆರವಿನ `ಹಸ್ತ'ಕ್ಕಾಗಿ ಅವರು ಕಾಯುತ್ತಿದ್ದಾರೆ.
ಕಳೆದ 2 ವರ್ಷದಿಂದ ಬರಗಾಲ ಬಂದಿರುವುದರಿಂದ ಶೇ 30ರಷ್ಟು ಕಬ್ಬು ಇಳುವರಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 11 ಸಕ್ಕರೆ ಕಾರ್ಖಾನೆಗಳಿವೆ. ಅವುಗಳಲ್ಲಿ 2 ಕಾರ್ಖಾನೆಗಳು ಮುಚ್ಚಿವೆ. ಉಳಿದ 9ರಲ್ಲಿ 2 ಸಹಕಾರಿ ಕ್ಷೇತ್ರದವು. ಇನ್ನುಳಿದವು ಖಾಸಗಿ ಸಕ್ಕರೆ ಕಾರ್ಖಾನೆಗಳು.

ಪ್ರತಿ ಬಾರಿಯೂ ಕಬ್ಬಿನ ಬೆಲೆ ನಿಗದಿ ಮಾಡುವಾಗ ಹೋರಾಟ, ಪ್ರತಿಭಟನೆ ನಡೆಯುತ್ತವೆ. `ಕಬ್ಬಿಗೆ ಸೂಕ್ತ ಬೆಲೆ ಕೊಡುವವರಿಗೇ ನಮ್ಮ ಮತ' ಎಂದು ಕಬ್ಬು ಕಟಾವು ಸಂದರ್ಭದಲ್ಲಿ ಆರ್ಭಟಿಸಿದ್ದ ರೈತ ನಾಯಕರೂ ಚುನಾವಣೆ ಬಾಗಿಲಿಗೆ ಬಂದು ನಿಂತ ಈ ಸಂದರ್ಭದಲ್ಲಿ ಬಾಯಿ ತೆರೆಯುತ್ತಿಲ್ಲ.

ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರ ದೇವದಾಸಿಯರಿದ್ದಾರೆ. ಲೈಂಗಿಕ ಕಾರ್ಯಕರ್ತೆಯರೂ ಇದ್ದಾರೆ. ಉದ್ಯೋಗ ಖಾತ್ರಿ ಯೋಜನೆ ವಿಫಲವಾಗಿದ್ದು ಹೊಸ ಹೊಸ ಯುವತಿಯರು, ಬಾಲಕಿಯರೂ ಈ ಉದ್ಯೋಗಕ್ಕೆ ಇಳಿಯುತ್ತಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಮಾನವ ಸಾಗಣೆ ವಿಪರೀತವಾಗಿದೆ. ಇವುಗಳ ಕೊಡುಗೆಯಿಂದ ಅತಿ ಹೆಚ್ಚಿನ ಏಡ್ಸ್ ರೋಗಿಗಳೂ ಈ ಜಿಲ್ಲೆಯಲ್ಲಿದ್ದಾರೆ.

“ನಾವ್ ಮಾಡಿದರೆ ಆಕ್ಷೇಪ ಮಾಡ್ತೀರಿ. ತಾರೆಯರು ಮಾಡಿದರೆ ಅದನ್ನೇ ಕಣ್‌ಕಣ್ ಬಿಟ್ಟು ನೋಡ್ತೀರಿ ಎಂದು ಹೊಸದಾಗಿ ಲೈಂಗಿಕ ವೃತ್ತಿಗೆ ಇಳಿದ ಯುವತಿಯರು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ” ಎಂದು ಸ್ವರ್ಣಾ ಭಟ್ ನೊಂದು ನುಡಿಯುತ್ತಾರೆ. ಗುಳೇ ತಪ್ಪಿಸುವುದಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿರುವ ಸ್ವರ್ಣಾ ಅವರ ಅಭಿಪ್ರಾಯದಂತೆ ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ ಚುನಾವಣೆಯಲ್ಲಿ ಆಸಕ್ತಿಯೇ ಇಲ್ಲ. ಯಾರು ಗೆದ್ದು ಬಂದರೂ ತಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ನಿರಾಸೆಯ ಭಾವ ಅವರನ್ನು ಕಾಡುತ್ತಿದೆ.

ಜಿಲ್ಲೆಯ ಇನ್ನೊಂದು ಬಹುದೊಡ್ಡ ಸಮಸ್ಯೆ ಎಂದರೆ ಬಯಲು ಶೌಚಾಲಯ. ಬೆಳಗಾಯಿತೆಂದರೆ ಪುರುಷರು, ಮಕ್ಕಳು, ಮಹಿಳೆಯರು ಎಲ್ಲರೂ ಕೈಯಲ್ಲಿ ಚೊಂಬು ಹಿಡಿದುಕೊಂಡು ಸಾಗುವುದನ್ನು ನಿತ್ಯ ನೋಡಬಹುದು. ಅತ್ತೆಯರು, ಸೊಸೆಯರು, ಕಾಲೇಜು ಯುವತಿಯರು, ಮಕ್ಕಳು ಗುಂಪು ಗುಂಪಾಗಿ ಚೊಂಬು ಹಿಡಿದುಕೊಂಡು ಸಾಗುವುದನ್ನು ಕಾಣಬಹುದು. ಆಯಾ ಗುಂಪಿನವರಿಗೆ ತಮ್ಮ ಕಷ್ಟ ಸುಖ ಹೇಳಿಕೊಳ್ಳಲು ಇದೊಂದು ಅವಕಾಶ ಎನ್ನುವಂತೆಯೇ ಆಗಿದೆ. ಈ ವಿಷಯದಲ್ಲಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಎಷ್ಟೇ ಪ್ರಯತ್ನ ಪಟ್ಟರೂ ಇನ್ನೂ ಇಲ್ಲಿನ ಜನರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಆಗಿಲ್ಲ.

ಬಾದಾಮಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಸಾಕಷ್ಟು ಶ್ರಮ ವಹಿಸಿ ಸುಮಾರು 60 ಶೌಚಾಲಯಗಳನ್ನು ನಿರ್ಮಿಸಿತು. ಆದರೆ ಬಹುತೇಕ ಶೌಚಾಲಯಗಳನ್ನು ಜನರು ಬಳಸಲೇ ಇಲ್ಲ. ಒಂದು ದಿನ ಒಂದು ಶೌಚಾಲಯದಲ್ಲಿ ಎಕ್ಕೆ ಗಿಡವೊಂದು ಕಾಣಿಸಿಕೊಂಡಿತು.

ಶೌಚಾಲಯದಲ್ಲಿ ಎಕ್ಕೆ ಗಿಡ ಬಂದಿದೆ ಎಂದು ಗೊತ್ತಾಗಿದ್ದೇ ತಡ ಆ ಗ್ರಾಮದ ಮಹಿಳೆಯರೆಲ್ಲಾ ಸೇರಿ ಆ ಗಿಡಕ್ಕೆ ಅರಿಶಿನ, ಕುಂಕುಮ ಹಾಕಿ ಸಿಂಗರಿಸಿದರು. ದಾರ ಕಟ್ಟಿದರು. ಬ್ಲೌಸ್ ಪೀಸ್ ಕಟ್ಟಿ ಕೈಮುಗಿದು ನಿಂತರು. ಶೌಚಾಲಯ ಎನ್ನುವುದು ದೇವಸ್ಥಾನವಾಗಿ ಬದಲಾಗಿ ಹೋಯಿತು ಎಂದು ತಮ್ಮ ಶ್ರಮವೆಲ್ಲಾ ವ್ಯರ್ಥವಾದ ಬಗೆಯನ್ನು ಅತ್ಯಂತ ನೋವಿನಿಂದ ಸ್ವರ್ಣಾ ಅವರು ವರ್ಣಿಸುತ್ತಾರೆ!

ಮೌಢ್ಯ, ಕಂದಾಚಾರಗಳು ಇನ್ನೂ ವಿಪರೀತವಾಗಿವೆ. ಅನಕ್ಷರತೆ ಇಲ್ಲಿನ ಗ್ರಾಮಗಳಲ್ಲಿ ತುಂಬಿಕೊಂಡಿದೆ. ಬಾಲ್ಯ ವಿವಾಹಗಳು ಯಾವುದೇ ಎಗ್ಗಿಲ್ಲದೆ ನಡೆಯುತ್ತವೆ. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಮಹಿಳೆಯರೂ ಕೂಡ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಬಾಲ ಸಂಜೀವಿನಿ ವಾರ್ಡ್‌ಗೆ ಹೋದರೆ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳ ರೌರವ ನರಕ ದರ್ಶನವಾಗುತ್ತದೆ. ನಾಲ್ಕು ವರ್ಷದ ಮಗು ಕೂಡ ಇನ್ನೂ ನಾಲ್ಕು ಕೆ.ಜಿ ತೂಕವನ್ನು ಹೊಂದಿರುವುದನ್ನು ನೋಡಿದರೆ ಎಂಥವರಿಗೂ ಕರುಣೆ ಉಕ್ಕುತ್ತದೆ. ಇಳಕಲ್‌ನಲ್ಲಿ ಗ್ರಾನೈಟ್ ಗಣಿಗಾರಿಕೆ ವಿಪರೀತವಾಗಿದೆ. ಭೂಮಿಯನ್ನು ಅಗೆದು ಇಡೀ ವಾತಾವರಣವನ್ನೇ ಕಲುಷಿತ ಮಾಡಲಾಗಿದೆ.

ಅಂದಹಾಗೆ ಇದ್ಯಾವುದೂ ಬಾಗಲಕೋಟೆ ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಯ ವಿಷಯಗಳಲ್ಲ.

1970ರ ದಶಕದಲ್ಲಿ ಚೀನಾ ಭಾರತ ಯುದ್ಧ ನಡೆದು ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಪ್ರಧಾನಿ ಇಂದಿರಾಗಾಂಧಿ ಮತ್ತು ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರಿಗೆ ಚಿನ್ನದಲ್ಲಿ ತುಲಾಭಾರ ಮಾಡಿದ ಅವಿಭಜಿತ ಜಿಲ್ಲೆ ಇದು. ಜಿಲ್ಲೆಯ ಮಹಿಳೆಯರು ಮೂಗುತಿ, ಬೆಂಡೋಲೆ, ಬಳೆಯನ್ನೂ ಬಿಚ್ಚಿ ತುಲಾಭಾರಕ್ಕೆ ಅರ್ಪಿಸಿದ್ದರು. ದೇಶಕ್ಕಾಗಿ ಆಗ ಚಿನ್ನ ಕೊಟ್ಟವರು ಈಗ ಅನ್ನ ಕೊಡುವ ನೇತಾರನಿಗೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT