ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಸ್ಫೋಟ!; ಬೆರಗಾದ ವಿದ್ಯಾರ್ಥಿ ಸಮೂಹ

Last Updated 14 ಜನವರಿ 2012, 10:15 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ಬಿವಿವಿ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಮತ್ತು ಸರಣಿ ಪೆಟ್ರೋಲ್ ಮತ್ತು ಬಣ್ಣದ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆ ಪೂರ್ವ ನಿಯೋಜಿತವಾಗಿದ್ದ ಕಾರಣ ಯಾವುದೇ ಆಸ್ತಿ ಮತ್ತು ಜೀವಕ್ಕೆ ಹಾನಿ ಸಂಭವಿಸಿಲ್ಲ..!

ಬಾಂಬ್ ಸ್ಫೋಟ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಪೊಲೀಸ್, ಗೃಹರಕ್ಷಕ ಮತ್ತು ಆಗ್ನಿ ಶಾಮಕ ಸಿಬ್ಬಂದಿ ಘಟನೆಯಲ್ಲಿ ಗಾಯವಾದಂತೆ ನಟಿಸುತ್ತಿದ್ದವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ಬಿವಿವಿ ಆಟದ ಮೈದಾನದಲ್ಲಿ ಆಯೋಜಿಸ ಲಾಗಿದ್ದ ಸಂತೆಯಲ್ಲಿ ನೆರೆದವರನ್ನು ಕೇಂದ್ರ ವಾಗಿಟ್ಟುಕೊಂಡು ಸ್ಫೋಟ ಮಾಡಲಾಗಿದ್ದು, ಸ್ಫೋಟದ ತೀವ್ರತೆಗೆ ಸಂತೆಯಲ್ಲಿ ಕುಡಿದು ತೂರಾಡುತ್ತಿದ್ದ ಒಬ್ಬ ಕುಡುಕ, ದಿನಪತ್ರಿಕೆ ಮಾರುವವ, ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದ ನಾಲ್ಕೈದು ಮಹಿಳೆಯರು ಮತ್ತು ಸಂತೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ನಾಲ್ಕೈದು ಜನ ತೀವ್ರವಾಗಿ ಗಾಯಗೊಂಡಂತೆ ನಟಿಸಿದರು.

ಬಾಂಬ್‌ಸ್ಫೋಟಗೊಳ್ಳುವ ಸಂದರ್ಭದಲ್ಲಿ ಸಮೀಪದಲ್ಲೇ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಸೇರಿದಂತೆ ಶಾಲಾ-ಕಾಲೇಜುಗಳ ಸಾವಿರಾರು ಮಂದಿ  ವಿದ್ಯಾರ್ಥಿ- ವಿದ್ಯಾರ್ಥಿನಿ ಯರು ಕೂದಲೆಳೆ ಅಂತರದಲ್ಲಿ ಪವಾಡವಿಲ್ಲದೇ ಪಾರಾಗಿದ್ದಾರೆ.

ಬಾಂಬ್ ಸ್ಫೋಟದ ಹೊಣೆಹೊತ್ತು ಕೊಂಡಿರುವ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಗೃಹರಕ್ಷಕದಳ ಮತ್ತು ಅಗ್ನಿ ಶಾಮಕ ದಳ, ಈ ಸಂಬಂಧ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಯಾರನ್ನೂ ಗುರಿಯಾಗಿಸಿಕೊಂಡು ಈ ಬಾಂಬ್ ಸ್ಫೋಟ ಮಾಡಿಲ್ಲ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನಾಚರಣೆ ಅಂಗವಾಗಿ ನಡೆಸಿದ ಅಣಕು ಪ್ರದರ್ಶನ ಎಂದು ಸ್ಪಷ್ಟಪಡಿಸಿದೆ!.

ಆದರೂ ಬಾಂಬ್‌ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ ಪ್ರತ್ಯಕ್ಷದರ್ಶಿಗಳಾದ ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇಂತಹ ಹುಸಿ ಮತ್ತು ಬಣ್ಣದ ಬಾಂಬ್‌ಗಳು ಸಾವಿರಾರು ಸ್ಫೋಟಗೊಂಡರೂ ಹೆದರುವುದಿಲ್ಲ, ದೂರದಲ್ಲೇ ಕುಳಿತು ಧೈರ್ಯದಿಂದ ವೀಕ್ಷಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಬಾಂಬ್ ಸ್ಫೋಟದಿಂದಾಗಿ ಮೈದಾನದಲ್ಲೇ ಕೃತಕವಾಗಿ ನಿರ್ಮಿಸಲಾಗಿದ್ದ ಗುಡಿಸಲು ಸಹ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಭಸ್ಮವಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ಆಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಿದರು. ಈ ಸಂದರ್ಭದಲ್ಲಿ ಗುಡಿಸಲು ವಾಸಿಗಳು ಹೊರಗಿದ್ದ ಕಾರಣ ಯಾವುದೇ ಅನುಹುತ ಸಂಭವಿಸಲಿಲ್ಲ.

 ಬಾಂಬ್ ಸ್ಫೋಟ ಸಂದರ್ಭದಲ್ಲಿ ಸಮೀಪದ ಬಿವಿವಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡದಲ್ಲಿ  ಜೀವಾಪಾಯದಲ್ಲಿ ಸಿಲುಕಿದ್ದ ನಾಲ್ಕು ಮಂದಿಯನ್ನು ರಕ್ಷಣಾ ಸಿಬ್ಬಂದಿ ಪಾರುಮಾಡಿದರು.

ಸ್ಥಳಕ್ಕೆ ಕರೆತರಲಾಗಿದ್ದ ಪೊಲೀಸ್ ಶ್ವಾನವು ಬಾಂಬ್ ಸ್ಫೋಟದ ರೂವಾರಿ ಶುಭಾನ್ ಬೆಂಗಳೂರು ಎಂಬುವವರನ್ನು ಪತ್ತೆಹಚ್ಚಿದೆ. ಘಟನೆ ಹಿನ್ನೆಲೆಯಲ್ಲಿ ಶುಭಾನ್ ಬೆಂಗಳೂರು ಅವರನ್ನು ಪತ್ರಕರ್ತರು ವಿಚಾರಿಸಲಾಗಿ, ತಾವು ಈ ಹಿಂದೆ ಕನ್ನಡದ ಅನೇಕ ಸಾಹಸಮಯ ಚಿತ್ರಗಳಲ್ಲಿ ಪೆಟ್ರೋಲ್ ಮತ್ತು ಬಣ್ಣದ ಬಾಂಬ್‌ಸ್ಫೋಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಕೂಡಲಸಂಗಮದಲ್ಲಿ ಗುರುವಾರ ಚಿತ್ರೀಕರಣಗೊಂಡ `ಭೀಮಾ ತೀರದ ಹಂತಕರು~ ಚಿತ್ರದಲ್ಲೂ ಪೆಟ್ರೋಲ್ ಬಾಂಬ್‌ಸ್ಫೋಟ ಮಾಡಿರುವುದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಜಾಥಾ:  ರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನಾಚರಣೆ ಅಂಗವಾಗಿ ಅಗ್ನಿಶಾಮಕ, ಗೃಹರಕ್ಷಕ, ಪೊಲೀಸ್ ಸಿಬ್ಬಂದಿ ಹಾಗೂ ಶಾಲಾವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಿವಿವಿ ಮೈದಾನದ ವರೆಗೆ  ಜನಜಾಗೃತಿ ಜಾಥಾ ನಡೆಸಿದರು.

 ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರು ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಪ್ರಬಂಧ  ಸ್ಪರ್ಧೆ:  ಪ್ರಥಮ- ಅಕ್ಷತಾ ಲೋಕಾಪುರ(ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಬಾಗಲಕೋಟೆ), ದ್ವಿತೀಯ- ರಮೇಶ ಮಾಗಿ (ನೂತನ ಪ್ರೌಢಶಾಲೆ ಬಾಗಲಕೋಟೆ), ತೃತೀಯ- ವಿನಾಯಕ ಅಣ್ಣೀಗೇರಿ(ವಿವೇಕಾನಂದ ಪ್ರೌಢಶಾಲೆ, ಬಾಗಲಕೋಟೆ).

ಚಿತ್ರಕಲಾ ಸ್ಪರ್ಧೆ: ಪ್ರಥಮ-ಭಾಗ್ಯಶ್ರೀ ಬಸವರಾಜ, ದ್ವಿತೀಯ-ಮೇದ ಸಿ. ಗೌಡರ, ತೃತೀಯ-ಮೇಘಾ ಜಾಧವ.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿರಸಗಿ ನಾಗಪ್ಪ, ಜಿಲ್ಲಾ ಆಗ್ನಿ ಶಮನ ತುರ್ತುಸೇವೆಗಳ ಅಧಿಕಾರಿ ಎಸ್.ಈ ಲಕ್ಕಪ್ಪ, ಗೃಹರಕ್ಷಕ ದಳದ ಪ್ರಭಾರ ಜಿಲ್ಲಾ ಕಮಾಂಡೆಂಟ್ ಡಾ. ಚಂದ್ರಶೇಖರ ಪಿ. ಕುಪ್ಪಿ, ಬಿ.ಆರ್. ಕಂದಗಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT