ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಕೋಲು ಚಳವಳಿ: ಯುಪಿಸಿಎಲ್ ಮುಚ್ಚಲು 30ರ ಗಡುವು

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಉಡುಪಿ: ನಂದಿಕೂರಿನ ಉಷ್ಣವಿದ್ಯುತ್ ಸ್ಥಾವರ (ಯುಪಿಸಿಎಲ್) ಪರಿಸರಕ್ಕೆ ಮಾರಕವಾಗಿರುವ ಗಂಡಾಂತರಕಾರಿ ಯೋಜನೆಯಾಗಿದೆ. ಅದನ್ನು ಯಾವುದೇ ಹಂತದಲ್ಲಿಯೂ ಸರಿಪಡಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಘಟಕವನ್ನು ಇದೇ 30ರೊಳಗೆ ಮುಚ್ಚಬೇಕು. ತಪ್ಪಿದಲ್ಲಿ ಬೀಗಮುದ್ರೆ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘ ಶುಕ್ರವಾರ ಇಲ್ಲಿ ಎಚ್ಚರಿಕೆ ನೀಡಿತು.

ಯುಪಿಸಿಎಲ್‌ನಿಂದಾಗಿ ಜಿಲ್ಲೆಯ ಪರಿಸರ ಹಾಳಾಗಲು ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯರೇ ಕಾರಣ ಎಂದು ಆರೋಪಿಸಿ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಾರುಕೋಲು ಚಳವಳಿ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಈ ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರ ಮನೆಯತ್ತ ಸಾಗಲು ಯತ್ನಿಸಿದ ನೂರಾರು ಪ್ರತಿಭಟನಾಕಾರರನ್ನು ಕಲ್ಸಂಕದ ಬಳಿ ಚತುಷ್ಪಥ ರಸ್ತೆಯಲ್ಲಿ ತಡೆದ ಪೊಲೀಸರು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಬೆಳಗಿನಿಂದಲೇ ಆಚಾರ್ಯರ ಮನೆಯ ಸುತ್ತಮುತ್ತ  ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯುಪಿಸಿಎಲ್ ಕಂಪೆನಿ ಇಲ್ಲಿನ ಜನರಿಗೆ ಮೋಸ ಮಾಡಿ ಜನವಸತಿ ಪ್ರದೇಶದಲ್ಲಿ ಘಟಕ ಸ್ಥಾಪಿಸಿದೆ. ಹಿಂದಿನ ದೇವೇಗೌಡರ ಸರ್ಕಾರದ ಕಾಲದಿಂದ ಈ ಘಟಕದ ಯೋಜನೆ ಆರಂಭವಾಗಿ ನಂತರ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಬೆಂಬಲಿಸಿತು. ಆಗ ವಿರೋಧ ಮಾಡುತ್ತಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ಈ ಯೋಜನೆ ಮುಂದುವರಿಸಿತು.
 
ಒಟ್ಟಾರೆ ಎಲ್ಲ ರಾಜಕೀಯ ಪಕ್ಷಗಳೂ ಯೋಜನೆಯ ‘ಫಲಾನುಭವಿ’ಗಳಾಗಿದ್ದು ಪ್ರಸ್ತುತ ಸನ್ನಿವೇಶದಲ್ಲಿ ಅಲ್ಲಿನ ಪರಿಸರಕ್ಕೆ ಸಂಪೂರ್ಣ ಮಾರಕವಾಗಿ ಯೋಜನೆ ಜಾರಿಯಾಗಿದೆ ಎಂದು ದೂರಿದರು. ಘಟಕ ಕೆಲಸ ಆರಂಭಿಸಿದ ವರ್ಷದೊಳಗೆ ಸಾಕಷ್ಟು ಅನಾಹುತ, ಪರಿಸರ ಮಾಲಿನ್ಯವೂ ಕಂಡು ಬಂದಿದೆ. ಯಾರು ಏನೆಲ್ಲ ಸಮರ್ಥನೆ ನೀಡಿದರೂ ಕೂಡ ಈ ಕಂಪೆನಿ ಕಾರ್ಯ ನಿರ್ವಹಿಸಲು ಯೋಗ್ಯವಾಗಿಲ್ಲ. ಕೂಡಲೇ ಕಂಪೆನಿಯು ಬೇರೆ ಎಲ್ಲಿಯಾದರೂ ಬಂಜರು ಭೂಮಿ ಹುಡುಕಿಕೊಂಡು ಅಲ್ಲಿ ಘಟಕ ಸ್ಥಾಪನೆ ಮಾಡಿಕೊಳ್ಳಬೇಕು.
 
ವಿದ್ಯುತ್‌ಗೋಸ್ಕರ ಈ ಯೋಜನೆ ಬೆಂಬಲಿಸುವ ಸರ್ಕಾರಕ್ಕೆ ಬಾರುಕೋಲಿನ ಎಚ್ಚರಿಕೆ ನೀಡುತ್ತಿದ್ದು ಇದೇ 30ರ ಗಡುವಿನ ಒಳಗೆ ಕಂಪೆನಿ ಬಂದ್ ಮಾಡದೇ ಇದ್ದಲ್ಲಿ ಬಳಿಕ ಬೀಗಮುದ್ರೆ ಚಳವಳಿ ಪ್ರಾರಂಭ ಮಾಡುವುದು ಖಚಿತ ಎಂದು ಅವರು ಎಚ್ಚರಿಸಿದರು. ಟೀಕೆ: ‘ಜಿಲ್ಲೆಯ ಜನರಿಗೆ ಬುದ್ದಿ ಹೇಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ಯ ಅವರೇ ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ. ನಿಮ್ಮ ನಡೆ ಶೋಭೆ ತರುವಂಥದ್ದಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿ ಕುಳಿತು ಕಾನೂನು ಉಲ್ಲಂಘನೆಗೆ ಕುಮ್ಮಕ್ಕು ನೀಡುತ್ತಿದ್ದೀರಿ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT