ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿ ಕೊರೆದರೂ ನೀರು ಸಿಗುತ್ತಿಲ್ಲ...

Last Updated 8 ಏಪ್ರಿಲ್ 2013, 9:53 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಅಸಮರ್ಪಕ ವಿತರಣೆಯಿಂದ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನಾಗರಿಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರವಾದ ಶ್ರೀನಿವಾಸಪುರ ಪಟ್ಟಣ ಹೊರತು ಪಡಿಸಿದರೆ, ದೊಡ್ಡ ಹಾಗೂ ಚಿಕ್ಕ ಗ್ರಾಮಗಳಿವೆ. ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಕೈಗೊಂಡ ಮುಂಜಾಗ್ರತಾ ಕ್ರಮದಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿರಲಿಲ್ಲ. ಆದರೆ ಈಗ ಬೇಸಿಗೆ. ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆ ಬತ್ತಿಹೋಗಿವೆ.

ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿರುವ ಆಡಳಿತ, ಎಷ್ಟೇ ಖರ್ಚಾದರೂ ನಾಗರಿಕರಿಗೆ ನೀರು ಪೂರೈಸುವ ದೃಢ ಸಂಕಲ್ಪದಿಂದ ನೀರು ಸಿಗುವ ಸಾಧ್ಯತೆ ಇರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸುತ್ತಿದೆ. ಕೆಲ ಗ್ರಾಮಗಳ ಸಮೀಪ ಏಳೆಂಟು ಕೊಳವೆ ಬಾವಿ ಕೊರೆದರೂ ನೀರು ಸಿಗದಿರುವುದು ಸಮಸ್ಯೆಯ ತೀವ್ರತೆ ಹೆಚ್ಚಿಸಿದೆ. ಆದರೂ ಪ್ರಯತ್ನ ಮಾತ್ರ ನಿಂತಿಲ್ಲ.

ಇದು ನೀರಿನ ಲಭ್ಯತೆಗೆ ಸಂಬಂಧಿಸಿದ ವಿಷಯ. ಇನ್ನೂ ಲಭ್ಯವಿರುವ ನೀರಿನ ನಿರ್ವಹಣೆ ಹೇಗೆ ಎಂಬುದು ಪ್ರಶ್ನೆ. ಸಮಸ್ಯೆ ಉಂಟಾಗಿರುವುದು ಇಲ್ಲಿಯೇ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರನ್ನು ಮೂರು ವಿಧಗಳಲ್ಲಿ ಪೂರೈಸಲಾಗುತ್ತಿದೆ. ಕೆಲವು ಕಡೆ ನೀರನ್ನು ಕೊಳವೆ ಬಾವಿಯಿಂದ ಉದ್ದವಾದ ತೊಟ್ಟಿಗಳಿಗೆ ಬಿಡಲಾಗುತ್ತಿದೆ. ಗ್ರಾಮಸ್ಥರು ಅಲ್ಲಿಂದ ಕೊಂಡೊಯ್ದು ಮನೆಯಲ್ಲಿ ತುಂಬಿಕೊಳ್ಳುತ್ತಾರೆ. ಇನ್ನು ಕೆಲ ಗ್ರಾಮಗಳಲ್ಲಿ ನಲ್ಲಿಗಳ ಮೂಲಕ ನೀರು ಪೂರೈಕೆ ಆಗುತ್ತಿದೆ. ನಲ್ಲಿಗೆ ಸಮೀಪದ ಮನೆಗಳ ಜನ ನೀರು ಹಿಡಿದು ಕೊಂಡೊಯ್ಯುತ್ತಾರೆ.

ಯಾವುದೇ ಗ್ರಾಮ ಅಥವಾ ಪಟ್ಟಣ ಪ್ರದೇಶದಲ್ಲಿ ಯಾವುದೇ ಕಾರಣದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ಆಡಳಿತ ಟ್ಯಾಕರ್ ಮೂಲಕ ಕುಡಿಯುವ ನೀರು ಪೂರೈಸುತ್ತದೆ. ಅದಕ್ಕೂ ಕಿತ್ತಾಟ ನಡೆಯುವುದುಂಟು.
ನೀರಿನ ಲಭ್ಯತೆ ಪ್ರಮಾಣ ಕುಸಿದಿರುವ ವೇಳೆಯಲ್ಲೇ, ಇರುವ ನೀರು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ನೆಲತೊಟ್ಟಿ ನಿರ್ಮಾಣ ಸಾಮಾನ್ಯ. ತಮ್ಮ ಅಗತ್ಯಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹ ಮಾಡಲಾಗುತ್ತಿದೆ. ಇದೂ ಕೂಡ ಸಮಸ್ಯೆಗೆ ದಾರಿಯಾಗಿದೆ. ತಗ್ಗು ಪ್ರದೇಶದ ನಾಗರಿಕರಿಗೆ ಸಾಕಷ್ಟು ನೀರು ಸಿಗುತ್ತದೆ. ಎತ್ತರ ಪ್ರದೇಶಕ್ಕೆ ನೀರು ಹತ್ತುವುದಿಲ್ಲ. ಇದು ಗ್ರಾಮಗಳಲ್ಲಿ ಜಗಳಕ್ಕೂ ಕಾರಣವಾಗುತ್ತಿದೆ.

ಅಗತ್ಯಕ್ಕೆ ತಕ್ಕಂತೆ ಮಾಡಲಾಗಿರುವ ನೀರು ಪೂರೈಕೆ ವ್ಯವಸ್ಥೆಗೆ ವಿರುದ್ಧವಾದ ನಾಗರಿಕರ ನಡೆ ಜಲಕ್ಷಾಮಕ್ಕೆ ಕಾರಣವಾಗಿದೆ. ಪ್ರತಿ ಗ್ರಾಮಕ್ಕೂ ನೀರು ನಿರ್ವಹಣೆಗೆಂದೇ ವಾಟರ್‌ಮ್ಯಾನ್ ಅನ್ನು ನೇಮಿಸಲಾಗಿದೆ. ಎಲ್ಲರಿಗೂ ನೀರು ಸಿಗುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಅವರು ನಿಸ್ಪಕ್ಷಪಾತವಾಗಿ ಕೆಲಸ ಮಾಡಿದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರು ಪೂರೈಸಲು ಹೊಸ ಕೊಳವೆ ಬಾವಿಗಳನ್ನು ನಿರ್ಮಿಸಿದ್ದರೂ; ಪಂಪ್‌ಸೆಟ್ ಅಳವಡಿಕೆ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತಿಲ್ಲ. ಇನ್ನು ಕೆಟ್ಟ ಪಂಪ್‌ಸೆಟ್ ದುರಸ್ತಿ ಕಾರ್ಯವೂ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.

ಅಸಮರ್ಪಕ ವಿದ್ಯುತ್ ಪೂರೈಕೆಯೂ ಕಾಡುತ್ತಿದೆ. ವಿದ್ಯುತ್ ಇದ್ದರೂ, ಲೋ ಓಲ್ಟೇಜ್‌ನಿಂದ ಪಂಪ್‌ಸೆಟ್ ಕೆಲಸ ಮಾಡುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್‌ನಿಂದ ಕುಡಿಯುವ ನೀರಿಗಾಗಿ ಕಾಯಬೇಕಿದೆ. ಮಹಿಳೆಯರು, ಪುರುಷರು, ಮಕ್ಕಳೆನ್ನದೆ ವಿದ್ಯುತ್ ಬರುವ ಸಮಯಕ್ಕಾಗಿ ಕಾದು ನೀರು ಹಿಡಿಯುತ್ತಾರೆ. ಇದು ಹಗಲು ಹೊತ್ತಿಗೆ ಮಾತ್ರ ಸೀಮಿತವಾಗಿಲ್ಲ. ರಾತ್ರಿ ವಿದ್ಯುತ್ ಇದ್ದಲ್ಲಿ ಆಗಲೂ ನಿದ್ದೆಗೆಡಬೇಕು.

ಬಿಸಿಲಿನ ತಾಪ ಹೆಚ್ಚತೊಡಗಿದೆ. ನೀರಿನ ಸಮಸ್ಯೆಯೂ ತೆರೆದುಕೊಂಡಿದೆ. ಇದು ಜನರಿಗಷ್ಟೇ ಅಲ್ಲ. ಕೆರೆ ಕುಂಟೆಗಳು ಬತ್ತಿರುವುದರಿಂದ ಜಾನುವಾರು ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ. ಬಯಲಿನ ಮೇಲೆ ಮೇಯಲು ಹೋಗುವ ದನಕರುಗಳಿಗೆ ಮಧ್ಯಾಹ್ನದ ಹೊತ್ತು ಕುಡಿಯಲು ನೀರು ಸಿಗುತ್ತಿಲ್ಲ. ಹಾಗಾಗಿ ಸಂಜೆ ಮನೆಗೆ ಹಿಂದಿರುಗಿದಾಗ ಬಕೆಟ್‌ಗಳಲ್ಲಿ ನೀರು ಇಡಬೇಕಿದೆ. ನೀರು ಲಭ್ಯವಿದ್ದರೆ ಪರವಾಗಿಲ್ಲ. ಇಲ್ಲವಾದರೆ ದಾಹ ತೀರುವುದಿಲ್ಲ.

ಈಗೀಗ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಅಲ್ಲಲ್ಲಿ ನಾಗರಿಕರು ಪ್ರತಿಭಟನೆ ಮಾಡಲಾರಂಭಿಸಿದ್ದಾರೆ. ಇದು ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇಸಿಗೆಯಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಅಮೂಲ್ಯವಾದ ಕುಡಿಯುವ ನೀರು ಪೈಪ್, ನಲ್ಲಿ ಹಾಗೂ ಟ್ಯಾಂಕ್‌ಗಳಲ್ಲಿ ವ್ಯರ್ಥವಾಗಿ ಹರಿದುಹೋಗುವುದನ್ನು ತಡೆಯಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT