ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎ. ಪರೀಕ್ಷೆ: ಮನೆಯ್ಲ್ಲಲೇ ಉತ್ತರ ಬರೆದರು?!

Last Updated 18 ಜೂನ್ 2011, 9:50 IST
ಅಕ್ಷರ ಗಾತ್ರ

ಕೊಪ್ಪಳ: ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. 4ನೇ ಸೆಮಿಸ್ಟರ್‌ನ ಇತಿಹಾಸ ಪ್ರಶ್ನೆ ಪತ್ರಿಕೆಗೆ ಮನೆಯೊಂದರಲ್ಲಿ ಉತ್ತರ ಬರೆಯಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿ 10 ಸಾವಿರ ರೂಪಾಯಿ ನೀಡಿದ್ದಾನೆ!

ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಈ ಘಟನೆ ನಗರದ ಕಿನ್ನಾಳ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಈಗ ಈ ವಿಡಿಯೋ ಕ್ಲಿಪ್ಪಿಂಗ್ ನಗರದ ಮೊಬೈಲ್‌ಗಳಲ್ಲಿ ಓಡಾಡತೊಡಗಿದೆ.

ಇದರ ಜೊತೆಗೆ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾಜಿ ವಿದ್ಯಾರ್ಥಿ ಹಾಗೂ ಕಾಲೇಜಿನ ಸಿಬ್ಬಂದಿ ಇಂತಹ ಪರೀಕ್ಷಾ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಂದ 10 ಸಾವಿರ ರೂಪಾಯಿ ವಿಧಿಸುತ್ತಿದ್ದಾರೆ ಎನ್ನಲಾಗಿದೆ.

ವಿಡಿಯೋ ಹಾಗೂ ಭಾವಚಿತ್ರಗಳಲ್ಲಿ ಮೂವರು ಅಭ್ಯರ್ಥಿಗಳು ಇದ್ದು, ಇವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೇ ಅಥವಾ ವಿದ್ಯಾರ್ಥಿಗಳ ಪರವಾಗಿ ಉತ್ತರ ಬರೆಯಲು ನಿಯೋಜನೆಗೊಂಡಿರುವ ಅಭ್ಯರ್ಥಿಗಳೇ ಎಂಬ ಜಿಜ್ಞಾಸೆಯೂ ಜನರಲ್ಲಿ ಮನೆ ಮಾಡಿದೆ.

ಜೂ. 15ರಂದು ಮಧ್ಯಾಹ್ನ 2 ರಿಂದ 5 ಗಂಟೆ ವರೆಗೆ ಇತಿಹಾಸ ಪರೀಕ್ಷೆ ನಡೆದಿದೆ. ಆದರೆ, ಇದೇ ಸಮಯದಲ್ಲಿಯೇ ಈ ಮನೆಯಲ್ಲಿ ಮೂವರು ಅಭ್ಯರ್ಥಿಗಳು ಇದೇ ವಿಷಯದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರವಾಗಿರುವ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಹೇಗೆ ಹೊರಗೆ ಹೋಯಿತು ಎಂಬುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಆರೋಪ: ಈ ಪರೀಕ್ಷಾ ಅಕ್ರಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಪಿ.ರಾಘವೇಂದ್ರಾಚಾರ್ ನೇರ ಹೊಣೆ ಹಾಗೂ ಅವರು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಆಪಾದನೆ ಮಾಡಿದೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ದೇಸಾಯಿ, ಕಾಲೇಜಿನ ಪ್ರಾಚಾರ್ಯ, ರವಿ ಎಂಬ ಇದೇ ಕಾಲೇಜಿನ ಮಾಜಿ ವಿದ್ಯಾರ್ಥಿ ಈ ಅಕ್ರಮ ಕಾರ್ಯ ನಡೆಸುತ್ತಿದ್ದಾರೆ. ಈ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದರು.

ಈ ಹಿಂದೆ ಹೆಚ್ಚುವರಿಯಾಗಿ ಪ್ರವೇಶ ಶುಲ್ಕ ವಸೂಲಿ ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆ ನೀಡುವ ವಿದ್ಯಾರ್ಥಿ ವೇತನವನ್ನು ಇದೇ ಪ್ರಾಚಾರ್ಯರು ದುರಪಯೋಗಪಡಿಸಿಕೊಂಡಿದ್ದನ್ನು ದಾಖಲೆ ಸಮೇತ ಸಂಘಟನೆ ಬಯಲು ಮಾಡಿತ್ತು.

ಸಂಘಟನೆಯ ಹೋರಾಟದ ಫಲವಾಗಿ ಹೆಚ್ಚುವರಿಯಾಗಿ ವಸೂಲಿ ಮಾಡಿದ ಶುಲ್ಕವನ್ನು ಪ್ರಾಚಾರ್ಯ ರಾಘವೇಂದ್ರಾಚಾರ್ ವಿದ್ಯಾರ್ಥಿಗಳಿಗೆ ವಾಪಸು ನೀಡಿದ್ದು ಸಹ ಜನರು ಮರೆತಿಲ್ಲ. ಹೀಗಾಗಿ ಈ ಘಟನೆ ಶಿಕ್ಷಣ ಪ್ರೇಮಿಗಳನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಕೂಡಲೇ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದರು.

ನಿರಾಕರಣೆ: ತಮ್ಮ ಕಾಲೇಜಿನಲ್ಲಿ ಯಾವುದೇ ಅಕ್ರಮಗಳು ಇಲ್ಲದೇ ಪರೀಕ್ಷೆ ನಡೆಸಲಾಗಿದೆ. ಕ್ಲಿಪ್ಪಿಂಗ್‌ನಲ್ಲಿರುವ ಅಭ್ಯರ್ಥಿಗಳು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎಂಬ ಬಗ್ಗೆ ಮಾಹಿತಿ ಇಲ್ಲ. ಅಗತ್ಯ ಬಿದ್ದರೆ ತನಿಖೆ ನಡೆಸಲು ಸಿದ್ಧ ಎಂದು ಪ್ರಾಚಾರ್ಯ ಎಚ್.ಪಿ.ರಾಘವೇಂದ್ರಾಚಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಪರೀಕ್ಷಾ ಅಕ್ರಮ: ಗುಲ್ಬರ್ಗ ವಿ.ವಿ.ಗೆ ದೂರು-ಎಸ್‌ಎಫ್‌ಐ
ಕೊಪ್ಪಳ
: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಎ. 4ನೇ ಸೆಮಿಸ್ಟರ್‌ನ ಇತಿಹಾಸ ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಮನೆಯಲ್ಲಿ ಬರೆದಿದ್ದಾರೆ. ಈ ಅವಕಾಶಕ್ಕೆ ಅವರು 10 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ಎಸ್.ಎಫ್.ಐ. ಜಿಲ್ಲಾ ಅಧ್ಯಕ್ಷ ಗುರುರಾಜ ದೇಸಾಯಿ, ಈ ಸಂಬಂದ ಜೂ. 18ರಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ಜೂ. 15ರಂದು ಈ ಘಟನೆ ನಡೆದಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಘವೇಂದ್ರಾಚಾರ್ ಈ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದೂ ದೂರಿದ್ದಾರೆ. ಈ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಒತ್ತಾಯಿಸಿ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT