ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ತನಿಖೆ ಮಂಗಳವಾರ ಆರಂಭ?

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ `ಗಣಿ ಕಪ್ಪ~ ಹಗರಣದ ತನಿಖೆಯನ್ನು ಸಿಬಿಐ ಇದೇ ಮಂಗಳವಾರದಿಂದಲೇ ಆರಂಭಿಸುವ ಸಾಧ್ಯತೆಗಳಿವೆ.

ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ತನ್ನ ವರದಿಯಲ್ಲಿ ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

`ನಮಗೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ತಲುಪಿದ್ದು, ಯಡಿಯೂರಪ್ಪ ವಿರುದ್ಧದ ನಿರ್ದಿಷ್ಟ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ          (ಎನ್‌ಜಿಒ) ಗಣಿ ಕಂಪೆನಿಗಳಿಂದ ಸಂದಾಯವಾದ ದೇಣಿಗೆ ಕುರಿತು ತನಿಖೆ ನಡೆಸಲಾಗುವುದು~ ಎಂದು ಹೆಸರು ಹೇಳಲು ಇಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ಶನಿವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಲ್ಲಿದ್ದಲು, ವೈದ್ಯಕೀಯ ಮತ್ತು ಮೇವು ಹಗರಣ ಸೇರಿದಂತೆ ಪ್ರಮುಖ ಹಗರಣಗಳ ಪ್ರಗತಿ ಪರಿಶೀಲನೆಗೆ ರಾಂಚಿಗೆ ಎರಡು ದಿನಗಳ ಭೇಟಿಗೆ ಆಗಮಿಸಿರುವ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ತಿಳಿಸಲಾಗಿದೆ ಎಂದೂ ಸಿಬಿಐ ಅಧಿಕಾರಿ ರಾಂಚಿಯಲ್ಲಿ ತಿಳಿಸಿದ್ದಾರೆ.

ಮಧ್ಯಪ್ರವೇಶ ಅನಿವಾರ್ಯ: `ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ ಸರ್ಕಾರ ವಿಫಲವಾದಾಗ ನೆಲದ ಕಾನೂನು ಎತ್ತಿ ಹಿಡಿಯಲು ತಾನು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಬೇಕಾಯಿತು~ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಮೇಲಿನ `ಭ್ರಷ್ಟಾಚಾರ ಪ್ರಕರಣ~ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಅರಣ್ಯ ಪೀಠ, ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

43 ಪುಟಗಳ ಸುದೀರ್ಘ ಆದೇಶದಲ್ಲಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಕರ್ನಾಟಕ ಮತ್ತು ಆಂಧ್ರ ಸರ್ಕಾರ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದಾಗ, ಕಾನೂನಿನ ದುರುಪಯೋಗ ತಡೆಗಟ್ಟಿ ನೆಲದ ಕಾನೂನನ್ನು ಎತ್ತಿ ಹಿಡಿಯಲು   ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಕರ್ನಾಟಕ ಹಾಗೂ ಆಂಧ್ರದಲ್ಲಿ ನಡೆದಿರುವ ಅರಣ್ಯ ನಾಶ, ಅದಿರು ಲೂಟಿ ತಡೆದು ಪರಿಸರ ಸಂರಕ್ಷಣೆ ಮಾಡಲು ಉಭಯ ಸರ್ಕಾರ ವಿಫಲವಾಗಿವೆ. ಇದು ದುರದೃಷ್ಟಕರ ಸಂಗತಿ.

ನೈಸರ್ಗಿಕ ಸಂಪನ್ಮೂಲ, ಅದರಲ್ಲೂ ಕಬ್ಬಿಣದ ಅದಿರು ಸೋರಿಕೆ ನ್ಯಾಯಾಲಯದ ಕಳವಳಕ್ಕೆ ಕಾರಣವಾಗಿದೆ. ಅರಣ್ಯ ಪ್ರದೇಶದೊಳಗೆ ಅಕ್ರಮ ಪ್ರವೇಶ ಅಡೆತಡೆಯಿಲ್ಲದೆ ನಡೆದಿರುವುದರ ಪರಿಣಾಮ ಇದು ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಮಂಗಳವಾರದಿಂದ ತನಿಖೆ ?
ಪರಿಸರ ನಾಶ ತಡೆಗಟ್ಟಿ ಅರಣ್ಯ ಪುನರುಜ್ಜೀವನ, ಪುನರ್ವಸತಿ ಉದ್ದೇಶದಿಂದ 2011ರ ಜುಲೈ 29ರಂದು ನ್ಯಾಯಾಲಯ ಅಕ್ರಮ ಗಣಿಗಾರಿಕೆ ನಿಷೇಧಿಸಿದೆ.

ಮುಂದಿನ ಪೀಳಿಗೆ ದೃಷ್ಟಿಯಿಂದ ರಾಷ್ಟ್ರದ ಸಂಪತ್ತು ಹಾಗೂ ಸಂಪನ್ಮೂಲಗಳ ರಕ್ಷಣೆ ಸರ್ಕಾರದ ಸಂವಿಧಾನಾತ್ಮಕ ಹೊಣೆ.  ಇವುಗಳ ಲೂಟಿ ಹಿನ್ನೆಲೆಯಲ್ಲಿ ನಡೆದಿರುವ `ವ್ಯವಹಾರಗಳ ಪ್ರಮಾಣ~ ಕುರಿತು ವಸ್ತುನಿಷ್ಠ ತನಿಖೆ ನಡೆಯಬೇಕು. ಸಮಗ್ರ ಮತ್ತು ನ್ಯಾಯಯುತ ತನಿಖೆ ನಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ಕ್ರಿಮಿನಲ್ ಅಪರಾಧಗಳನ್ನು ಮೊದಲು ರಾಜ್ಯ ಸರ್ಕಾರ, ಅನಂತರ ಅದಕ್ಕೆ ತುತ್ತಾದ ವ್ಯಕ್ತಿಗಳ ವಿರುದ್ಧದ ಮೇಲಿನ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಇಂಥ ಕೃತ್ಯಗಳಲ್ಲಿ ಅಧಿಕಾರದಲ್ಲಿರುವ ಜನ ಭಾಗಿಯಾಗಿರಲಿ ಅಥವಾ ಇಲ್ಲದಿರಲಿ ಇದರಿಂದ ರಾಷ್ಟ್ರ ಮತ್ತು ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗುತ್ತದೆ. ಅಕ್ರಮ ಗಣಿಗಾರಿಕೆಯಂಥ ಗಂಭೀರ ಪ್ರಕರಣಗಳಲ್ಲಿ ಸಾಮಾನ್ಯ ಫಿರ್ಯಾದಿಯಿಂದ ಎಲ್ಲ ದಾಖಲೆಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಈ ಹಿನ್ನೆಲೆಯಲ್ಲಿ ನುರಿತ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಕೋರ್ಟ್ ವಿಶ್ಲೇಷಿಸಿದೆ.

ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ, ಇದರಿಂದ ಪರಿಸರದ ಮೇಲೆ ಆಗಿರುವ ಪರಿಣಾಮ, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಗಣಿ ಗುತ್ತಿಗೆದಾರರ ನಡುವಿನ `ಅಪವಿತ್ರ ಮೈತ್ರಿ~ ಕುರಿತು ಪಿ.ವಿ.ಜಯಕೃಷ್ಣನ್ ನೇತೃತ್ವದ ಸಿಇಸಿ  ವರದಿಯಲ್ಲಿರುವ ಅಂಶಗಳನ್ನು ಆದೇಶದಲ್ಲಿ ಪ್ರಸ್ತಾಪ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT