ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ- ಬಿಡಿಎ ಮಧ್ಯೆ ಮುಗಿಯದ ಗೊಂದಲ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲೇಖನ ಮಾಲೆ-5

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆಯುವುದು ಕಡ್ಡಾಯ. ಆದರೆ, ಬಹುಮಹಡಿ ಕಟ್ಟಡಗಳಿಗೆ ಸ್ವಾಧೀನಪತ್ರವನ್ನು ಬಿಬಿಎಂಪಿ ನೀಡಬೇಕೆ ಅಥವಾ ಬಿಡಿಎ ವತಿಯಿಂದ ಪಡೆಯಬೇಕೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.

ಈ ಎರಡೂ ಸಂಸ್ಥೆಗಳ ನಡುವಿನ ಗೊಂದಲದ ಲಾಭ ಪಡೆದ ಅಧಿಕಾರಿಗಳು ನಿಯಮ ಮೀರಿ ಸ್ವಾಧೀನ ಪತ್ರ ನೀಡಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

2007ರ ಜನವರಿಯಲ್ಲಿ ಪಾಲಿಕೆಯು ಬಿಬಿಎಂಪಿಯಾಗಿ ರೂಪುಗೊಂಡಿತು. ಅಂದಿನಿಂದ ಈವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಸ್ವಾಧೀನ ಪತ್ರ ಯಾರಿಂದ ಪಡೆಯಬೇಕು ಎಂಬ ಗೊಂದಲ ಈವರೆಗೆ ನಿವಾರಣೆಯಾಗಿಲ್ಲ. ನೂರಾರು ಕೋಟಿ ರೂಪಾಯಿ ಆದಾಯ ತರುವ ಅಧಿಕಾರವನ್ನು ಬಿಟ್ಟುಕೊಡಲು ಈ ಎರಡೂ ಸಂಸ್ಥೆಗಳಿಗೆ ಮನಸ್ಸಿಲ್ಲ.

ನಗರ ವ್ಯಾಪ್ತಿಯಲ್ಲಿ 583 ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಕಡತಗಳು ಬಿಡಿಎ ಬಳಿ ಇವೆ. ಈ ಪೈಕಿ 187 ಕಟ್ಟಡಗಳಿಗೆ ಬಿಡಿಎ ಸ್ವಾಧೀನ ಪತ್ರವನ್ನೂ ವಿತರಿಸಿದೆ. ಆದರೆ ಸ್ವಾಧೀನ ಪತ್ರ ವಿತರಿಸುವ ಅಧಿಕಾರಿ ಬಿಡಿಎಗೆ ಇಲ್ಲ ಎಂಬ ವಾದವನ್ನು ಪಾಲಿಕೆ ಪುನರುಚ್ಚರಿಸುತ್ತಲೇ ಇದೆ. ಪರಿಣಾಮವಾಗಿ ಸ್ವಾಧೀನ ಪತ್ರವನ್ನು ಪಾಲಿಕೆಯಿಂದ ಪಡೆಯಬೇಕೆ ಅಥವಾ ಬಿಡಿಎ ವತಿಯಿಂದ ಪಡೆಯಬೇಕೆ ಎಂಬ ಗೊಂದಲ ಕಟ್ಟಡ ಮಾಲೀಕರನ್ನು ಕಾಡುತ್ತಿದೆ.

ಕೆಎಂಸಿ ಕಾಯ್ದೆಯನ್ವಯ ಸ್ಥಳೀಯ ಪ್ರಾಧಿಕಾರದಿಂದ ಕಟ್ಟಡ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣಗಳಲ್ಲಿ ಪಾಲಿಕೆಯಿಂದ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭಿಸಿ ಮುಂದುವರಿಸಿರುವುದು ಕಂಡು ಬಂದಿದ್ದು, ಇದು ಕಾನೂನುಬಾಹಿರ ಎಂದು ಬಿಬಿಎಂಪಿ ಹೇಳುತ್ತಿದೆ. ಇದರಿಂದ ಪಾಲಿಕೆಗೆ ಸಂದಾಯಬೇಕಾಗಿದ್ದ ಶುಲ್ಕ ಕೂಡ ಕೈತಪ್ಪಿ ಸಂಪನ್ಮೂಲಗಳಿಗೆ ಕೊರತೆ ಉಂಟಾಗುತ್ತಿದೆ ಎಂದು ಪಾಲಿಕೆ ಹೇಳುತ್ತಿದೆ.

ಈ ನಡುವೆ, ಕಾನೂನುಬಾಹಿರವಾಗಿ ತಲೆಯೆತ್ತುತ್ತಿರುವ ಕಟ್ಟಡಗಳ ನಿರ್ಮಾಣ ಕೆಲಸ ತಡೆಯುವಂತಹ ಅಧಿಕಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಬಿಎಂಪಿ ನೀಡಿದೆ. ಅಲ್ಲದೆ, ನಕ್ಷೆ ಮಂಜೂರಾತಿ ಹಾಗೂ ಪರವಾನಗಿ ನೀಡುವ ಸಮಯದಲ್ಲಿ ಸುಧಾರಣಾ ವೆಚ್ಚ ಪಡೆದುಕೊಂಡು ಸಂಪನ್ಮೂಲ ಕ್ರೋಡೀಕರಿಸಲು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿನ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಲಾಗಿದೆ.

583 ಪ್ರಕರಣ: ಮಹಾನಗರ ಪಾಲಿಕೆಯು ಬಿಬಿಎಂಪಿಯಾಗಿ ಪರಿವರ್ತನೆಗೊಂಡ 2007ರ ಜನವರಿ 16ರಿಂದ ಈವರೆಗೆ 583 ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಕಡತಗಳು ಬಿಡಿಎ ಬಳಿ ಇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕೆಎಂಸಿ ಕಾಯ್ದೆ 300ರಡಿ ನಕ್ಷೆ ಪರವಾನಗಿ ಪಡೆಯುವುದು ಕಡ್ಡಾಯ. ತಪ್ಪಿದಲ್ಲಿ ಕಾಯ್ದೆ 321 (1), (2) ಮತ್ತು (3)ರ ನಿಯಮಗಳನ್ವಯ ಕ್ರಮ ಕೈಗೊಳ್ಳಲು ಅವಕಾಶವಿದೆ. ಬಿಬಿಎಂಪಿ ವಲಯದ ಹೆಚ್ಚುವರಿ/ ಜಂಟಿ ಆಯುಕ್ತರು ತಮ್ಮ ವಲಯ ವ್ಯಾಪ್ತಿಗಳಲ್ಲಿ ಬಿಡಿಎ ಹಾಗೂ ಬಿಎಂಐಸಿಪಿಎ ವತಿಯಿಂದ ನಕ್ಷೆ ಮಂಜೂರಾಗಿರುವ ಕಟ್ಟಡ ನಿರ್ಮಾಣಗಳನ್ನು ಗುರುತಿಸಿ ಕೆಎಂಸಿ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣ ಕೈಗೊಂಡಿದ್ದರೆ ಕೂಡಲೇ ಸ್ಥಗಿತಗೊಳಿಸಲು ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ವಲಯದ ಅಧಿಕಾರ ವ್ಯಾಪ್ತಿಗೆ ಒಳಪಡುವ ನಕ್ಷೆಗಳಿಗೆ ವಲಯಗಳಿಂದ ಹಾಗೂ ಕೇಂದ್ರ ಕಚೇರಿಯ ನಗರ ಯೋಜನಾ ವಿಭಾಗದ ವ್ಯಾಪ್ತಿಗೊಳಪಡುವ ಪ್ರಕರಣಗಳಿಗೆ ಕೇಂದ್ರ ಕಚೇರಿಯಿಂದಲೂ ಪರವಾನಗಿ ಪಡೆಯಲು ಸೂಚಿಸಿ ಈ ಆದೇಶದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದರು.

ಬಿಡಿಎ ಸಮರ್ಥನೆ: ಈ ನಡುವೆ, ಪಾಲಿಕೆ ವ್ಯಾಪ್ತಿಯಲ್ಲಿಯೂ ಹೊಸ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಅಧಿಕಾರ ತನಗೂ ಇದೆ ಎಂಬುದು ಬಿಡಿಎ ವಾದ. ಈ ಸಂಬಂಧ ಬಿಡಿಎ ಆಯುಕ್ತರು ಇತ್ತೀಚೆಗೆ ಪಾಲಿಕೆಗೆ ಪತ್ರ ಕೂಡ ಬರೆದಿದ್ದಾರೆ.

ಬೆಂಗಳೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿನ 583 ಹೊಸ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿಕೆಯನ್ನು ಬಿಡಿಎ ಸಮರ್ಥಿಸಿಕೊಳ್ಳುತ್ತಿದೆ.

ಈ ನಡುವೆ, 583 ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ವಾಪಸು ಕಳಿಸುವಂತೆ ಬಿಬಿಎಂಪಿಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಕೋರಿದೆ. ಆದರೆ, ಬಿಡಿಎ ತನ್ನ ನಿಲುವನ್ನು ಪ್ರತಿಪಾದಿಸುತ್ತಿದೆ.

ಗೊಂದಲಕ್ಕೆ ಕಾರಣ: ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿಗಳ ಅಧಿಕಾರಾವಧಿಯಲ್ಲಿ ಕಟ್ಟಡಗಳಿಗೆ ಓ.ಸಿ. ನೀಡುವ ಅಧಿಕಾರವನ್ನು ಸರ್ಕಾರ ಬಿಡಿಎಗೆ ನೀಡಿತ್ತು. ಆಗ ಇದು ತಾತ್ಕಾಲಿಕ ವ್ಯವಸ್ಥೆ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಬಿಡಿಎ ಈ 183 ಕಟ್ಟಡಗಳಿಗೆ ಓ.ಸಿ. ನೀಡಿತ್ತು. ಆದರೆ, ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತ ಜಾರಿಗೆ ಬಂದಾಗ ಈ ಕಟ್ಟಡಗಳ ಓ.ಸಿ. ಕಡತವನ್ನು ಹಸ್ತಾಂತರಿಸುವಂತೆ ಬಿಬಿಎಂಪಿ ಪ್ರಾಧಿಕಾರವನ್ನು ಕೋರಿತು. ಆದರೆ, ಆಗಸ್ಟ್ 27ರಂದು ಬಿಬಿಎಂಪಿಗೆ ಪತ್ರ ಬರೆದ ಬಿಡಿಎ ಕಡತ ಹಸ್ತಾಂತರ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಮೂರ‌್ನಾಲ್ಕು ವರ್ಷಗಳಿಂದ ಗೊಂದಲ ಹಾಗೇ ಮುಂದುವರಿಯುವಂತಾಗಿದೆ.

250 ಕೋಟಿ ರೂ. ಮೇಲೆ ಕಣ್ಣು
583 ಬಹುಮಹಡಿ ಕಟ್ಟಡಗಳಿಗೆ ಸ್ವಾಧೀನ ಪತ್ರ ವಿತರಣೆ, ನಿಯಮ ಉಲ್ಲಂಘನೆಗೆ ದಂಡ ಹಾಗೂ ಇತರೆ ಶುಲ್ಕ ಸಂಗ್ರಹದಿಂದ ಸುಮಾರು 250 ಕೋಟಿ ರೂಪಾಯಿ ಆದಾಯ ಬರಲಿದೆ. ಈ ಬೃಹತ್ ಮೊತ್ತದ ಆದಾಯವನ್ನು ಕಳೆದುಕೊಳ್ಳಲು ಎರಡೂ ಸಂಸ್ಥೆಗಳಿಗೂ ಮನಸ್ಸಿಲ್ಲ. ಹಾಗಾಗಿ ಅಧಿಕಾರ ಪಡೆಯಲು ಎರಡೂ ಸಂಸ್ಥೆಗಳು ಪೈಪೋಟಿ ನಡೆಸಿವೆ.

ಅಲ್ಲದೇ ಬಿಡಿಎ ನೇರವಾಗಿ ಓ.ಸಿ. ನೀಡುತ್ತದೆಯೇ ಹೊರತು ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ದಂಡ ಶುಲ್ಕವನ್ನು ಸಂಗ್ರಹಿಸುವ ಅಧಿಕಾರವಿಲ್ಲ.  ಹಾಗಾಗಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಮಾಲೀಕರು ಬಿಡಿಎ ವತಿಯಿಂದಲೇ ಓ.ಸಿ. ಪಡೆಯಲು ಹಾತೊರೆಯುತ್ತಿದ್ದಾರೆ. ಪರಿಣಾಮವಾಗಿ ಈ ಗೊಂದಲ ಇನ್ನಷ್ಟು ಕಗ್ಗಂಟಾಗಿದೆ.

-ಮುಂದುವರಿಯುವುದು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT