ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು- ಚೆನ್ನೈ ಷಟ್ಪಥಕ್ಕೆ ನಿಶಾನೆ

Last Updated 19 ಅಕ್ಟೋಬರ್ 2011, 20:05 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಪರ್ಕ ಕಲ್ಪಿಸುವ `ಎಕ್ಸ್‌ಪ್ರೆಸ್ ವೇ~ ಷಟ್ಪಥ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.

ಎಲ್ಲವೂ ಯೋಜನೆಯಂತೆ ನಡೆದರೆ ಇನ್ನು ಮೂರ‌್ನಾಲ್ಕು ವರ್ಷಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ದೇಶದಲ್ಲಿ ಮೊದಲ ಬಾರಿಗೆ `ನಿರ್ಮಾಣ- ನಿರ್ವಹಣೆ- ಹಸ್ತಾಂತರ~ (ಬಿಒಟಿ) ಆಧಾರದ ಮೇಲೆ ಖಾಸಗಿ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಷಟ್ಪಥ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು- ಚೆನ್ನೈ ನಡುವಿನ ಅಂತರ 344 ಕಿ.ಮೀ ನಿಂದ 258 ಕಿ.ಮೀಗೆ ಇಳಿಯಲಿದ್ದು, ಸುಮಾರು 86 ಕಿ.ಮೀ ಅಂತರ ಕಡಿಮೆಯಾಗಲಿದೆ. ತಗ್ಗು- ದಿನ್ನೆಗಳಿಲ್ಲದ ರಸ್ತೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ 120 ಕಿ.ಮೀ ವೇಗದಲ್ಲಿ ವಾಹನಗಳು ಸರಾಗವಾಗಿ ಚಲಿಸಬಹುದು. ಇದರಿಂದ ಐದಾರು ಗಂಟೆಗಳ ಪ್ರಯಾಸಕರ ಪ್ರಯಾಣ ಕೇವಲ ಮೂರು ಗಂಟೆಗೆ ತಗ್ಗಲಿದೆ.

ಎರಡೂ ನಗರಗಳ ಮಧ್ಯೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸದ್ಯದ ರಾಷ್ಟ್ರೀಯ ಹೆದ್ದಾರಿ- 4ಕ್ಕೆ ಸಮಾನಾಂತರವಾಗಿ ನಿರ್ಮಾಣವಾಗಲಿರುವ ರಸ್ತೆ ಮೂರು ರಾಜ್ಯಗಳಲ್ಲಿ ಹಾಯ್ದು ಹೋಗಲಿದೆ.

ಂಗಳೂರು ಬಳಿಯ ಹೊಸಕೋಟೆಯಿಂದ ಆರಂಭವಾಗಿ ಕೋಲಾರ, ಪಾಲ್‌ಮನಾರ, ಚಿತ್ತೂರು, ರಾಣಿಪೇಟೆ ಮೂಲಕ ಚೆನ್ನೈ ತಲುಪಲಿದೆ. ಕರ್ನಾಟಕದಲ್ಲಿ 74 ಕಿ.ಮೀ, ಆಂಧ್ರ ಪ್ರದೇಶದಲ್ಲಿ 94 ಕಿ.ಮೀ ಹಾಗೂ ತಮಿಳು ನಾಡಿನಲ್ಲಿ 94 ಕಿ.ಮೀ ರಸ್ತೆ ಹಾಯ್ದು ಹೋಗಲಿದೆ. ಆದರೆ, ಬೆಂಗಳೂರು ಮತ್ತು ಚೆನ್ನೈ ಹೊರತಾಗಿ ಮೂರು ರಾಜ್ಯಗಳ ಇತರ ಯಾವ ನಗರಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನೆಯನ್ನು ಸಿದ್ಧಪಡಿಸಿದ್ದು, ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಪ್ರತಿ ಕಿ.ಮೀ ರಸ್ತೆಯ ನಿರ್ಮಾಣಕ್ಕೆ ಅಂದಾಜು 18- 20 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ನಿರ್ಮಾಣ ಉಸ್ತುವಾರಿಗೆ ಮೂರು ತಿಂಗಳ ಒಳಗಾಗಿ ಎಕ್ಸ್‌ಪ್ರೆಸ್ ವೇ ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ದೇಶದ ಎಂಟು ಪ್ರಮುಖ ನಗರಗಳ ನಡುವೆ ಸುಮಾರು ಸಾವಿರ ಕಿ.ಮೀ ಎಕ್ಸ್‌ಪ್ರೆಸ್ ವೇ ನಿರ್ಮಿಸುವ ಕೇಂದ್ರ ಸರ್ಕಾರದ 16,680 ಕೋಟಿ ರೂಪಾಯಿ ವೆಚ್ಚದ ಯೋಜನೆಯಲ್ಲಿ ಬೆಂಗಳೂರು- ಚೆನ್ನೈ ಷಟ್ಪಥ ನಿರ್ಮಾಣವೂ ಸೇರಿದೆ.

ವಡೋದರ- ಮುಂಬೈ ನಡುವೆ 400 ಕಿ.ಮೀ, ದೆಹಲಿ- ಮೀರತ್ ನಡುವೆ 66 ಕಿ.ಮೀ, ಕೋಲ್ಕತ್ತ- ಧನಬಾದ್ ನಡುವೆ 277 ಕಿ.ಮೀ ಮತ್ತು ಬೆಂಗಳೂರು- ಚೆನ್ನೈ ನಡುವಿನ 344 ಕಿ.ಮೀ ಷಟ್ಪಥ ನಿರ್ಮಾಣ ಯೋಜನೆ ಕೇಂದ್ರದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT