ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಲಿ ಎಂದರೆ ಮೈಕುಣಿಸುವುದಷ್ಟೇ ಅಲ್ಲ

Last Updated 2 ಜನವರಿ 2012, 6:00 IST
ಅಕ್ಷರ ಗಾತ್ರ

ಲಲನೆಯರ ನೃತ್ಯ ಲಾಲಿತ್ಯ ಚಿತ್ತಾಪಹಾರಿ. ಅದರಲ್ಲೂ ಬೆಲ್ಲಿ ನೃತ್ಯ ಎಂದರಂತೂ ಕುಣಿದಾಡುವ ಮನಗಳೇ ಹೆಚ್ಚು. ದೈಹಿಕ ಸಮತೋಲನ, ಅದ್ಭುತ ಲಾಲಿತ್ಯ, ಅಪ್ರತಿಮ ನಿಯಂತ್ರಣ ಇದ್ದರಷ್ಟೇ ಈ ನೃತ್ಯದಲ್ಲಿ ಪಳಗಲು ಸಾಧ್ಯ.

ಬೆಲ್ಲಿ ನೃತ್ಯಗಾರ್ತಿಯರು ಅಪೂರ್ವ ಲಾವಣ್ಯವತಿಯರು. ಚೆಲುವು, ನೃತ್ಯ ಹದವಾಗಿ ಬೆರೆತಂತಿರುವ ಅವರಿಗೆ ರಸಿಕರ ಮನಸ್ಸನ್ನು ಆವರಿಸಿಕೊಳ್ಳುವ ಕಲೆ ಸಿದ್ಧಿಸಿದೆ. ಗುಂಗು ಹಿಡಿಸುವ ನೃತ್ಯ ಅದು. ಸಂಗೀತದ ಲಯಕ್ಕೆ ತಕ್ಕಂತೆ ಸೊಂಟ, ವಕ್ಷಸ್ಥಳ ಕುಲುಕಿಸುವುದು ಸುಲಭವಲ್ಲ.

ಬೆಲ್ಲಿ ಡ್ಯಾನ್ಸ್‌ನಲ್ಲಿ ಸೊಂಟ, ತೋಳು, ಎದೆ ಹಾಗೂ ಹೊಟ್ಟೆ ಹೆಚ್ಚು ಬಳಕೆಯಾಗುತ್ತದೆ. ನರಿ ಹೆಜ್ಜೆ ಇಡುವ ರೀತಿಯಲ್ಲಿ ಹೊಟ್ಟೆ ಕುಣಿಸುವುದು ಬೆಲ್ಲಿ ನೃತ್ಯಕ್ಕೊಂದು ಆವೇಗ ತಂದುಕೊಡುತ್ತದೆ. ಇವರು ಎದೆಯನ್ನು ಕುಣಿಸುವ ಪರಿ ಒಂಟೆ ಸವಾರಿಯನ್ನು ನೆನಪಿಸುತ್ತದೆ.
 
ಈ ನೃತ್ಯದಲ್ಲಿ ಹೊಟ್ಟೆಯ ಜತೆಗೆ ತೋಳು, ತೊಡೆ ಹಾಗೂ ಪೃಷ್ಠವನ್ನೂ ಕುಣಿಸಬೇಕು. ಅದು ಧೈರ್ಯಸ್ಥ ಮನಸ್ಸನ್ನು ಬಯಸುವ ನೃತ್ಯವೆನ್ನುವುದು ಅದೇ ಕಾರಣಕ್ಕೆ. ಬೆಲ್ಲಿಯಲ್ಲಿ ಜನಪದ, ಸಾಂಪ್ರದಾಯಿಕ ಹಾಗೂ ಸೆಲೆಬ್ರೆಟಿ ಡ್ಯಾನ್ಸ್ ಎಂಬ ಮೂರು ಬಗೆಯಿದೆ.

ಇಟಲಿಯ ಖ್ಯಾತ ಬೆಲ್ಲಿ ಡ್ಯಾನ್ಸರ್ ನಜ್ಮಾ ಆಸನಿ ಅವರಿಗೆ ಈಗ 40 ವರ್ಷ. ಅವರು ಬೆಂಗಳೂರಿನಲ್ಲಿ ಪ್ರದರ್ಶನ ನೀಡಲೆಂದೇ ಬಂದಿದ್ದರು. `ಬೆಲ್ಲಿ ಡ್ಯಾನ್ಸ್ ನನ್ನ ಉಸಿರು. ನನ್ನ ರಕ್ತದ ಕಣಕಣದಲ್ಲೂ ಬೆಲ್ಲಿಯ ಬಿಸುಪು ತುಂಬಿಕೊಂಡಿದೆ~ ಎನ್ನುವ ಅವರು ತಮ್ಮ 20ನೇ ವಯಸ್ಸಿನಿಂದಲೇ ಈ ನೃತ್ಯದತ್ತ ಆಕರ್ಷಿತರಾದರು, ಅದಕ್ಕೂ ಮೊದಲು ವಿವಿಧ ಪ್ರಕಾರದ ನೃತ್ಯದ ಪಟ್ಟುಗಳು ಕರಗತವಾಗಿದ್ದವು.
 

ಹೊಸವರ್ಷದ ದಿನ ನಜ್ಮಾ ಬೆಂಗಳೂರಿನಲ್ಲಿ ಬೆಲ್ಲಿ ನೃತ್ಯ ಪ್ರದರ್ಶಿಸಿದರು. ಅವರ ನೃತ್ಯ ಶೈಲಿ ರಸಿಕರ ಮನಸೂರೆಗೊಂಡಿತು. ಅವರನ್ನು ಮೆಟ್ರೊ ಮಾತನಾಡಿಸಿದಾಗ ತಮ್ಮ ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದರು...

`ನನ್ನ ನೃತ್ಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ರೊಮಾನಿಯಾದ ಸಾಂಪ್ರದಾಯಿಕ ಬೆಲ್ಲಿ ನೃತ್ಯಗುರು. ನಾನು ಸಾಂಪ್ರದಾಯಿಕ ನೃತ್ಯ, ಮಾಡ್ರರ್ನ್ ಹಾಗೂ ಜಾಸ್ ನೃತ್ಯವನ್ನು ಚಿಕ್ಕ ವಯಸ್ಸಿನಲ್ಲೇ ಕಲಿತಿದ್ದೆ. ಈಜಿಪ್ಟ್‌ನ ಖ್ಯಾತ ನೃತ್ಯಪಟುಗಳಾದ ಜಾಜಾ ಹಾಸನ್, ರಖಿಯ ಹಾಸನ್, ಎಸ್ಮಾತ್ ಒಸ್ಮಾನ್, ಒಸಮ್-ಎ- ಸೆರೆನಾ ರಮ್ಜಿ, ಎಲ್ಹಾದಿ ಮೊದಲಾದವರು ನನ್ನ ನೃತ್ಯ ಪ್ರತಿಭೆಯನ್ನು ತಿದ್ದಿ ತೀಡಿದರು~ ಎನ್ನುತ್ತಾರೆ ನಜ್ಮಾ.

`ಬೆಲ್ಲಿ ಡ್ಯಾನ್ಸ್‌ನಲ್ಲಿ ಪಾರಮ್ಯ ಸಾಧಿಸಿದ್ದ ಜಾಜಾ ಹಸನ್ ಅವರು ನನ್ನನ್ನು ಬೆಲ್ಲಿ ಡ್ಯಾನ್ಸ್ ಕಲಿಯಲು ಪ್ರೇರೇಪಿಸಿದರು. ಸಂಗೀತದ ಲಯಕ್ಕೆ ಅನುಗುಣವಾಗಿ ದೇಹದ ಪ್ರತಿ ಅಂಗವನ್ನು ಕುಣಿಸುವ ವಿಶಿಷ್ಟ ನೃತ್ಯ ಬೆಲ್ಲಿ. ಬೆಲ್ಲಿ ಎಂದರೆ ಕೇವಲ ಮೈ ಕುಣಿಸುವುದು ಎಂಬುದು ತಪ್ಪು ಕಲ್ಪನೆ. ನಮ್ಮ ಕುಟುಂಬದಲ್ಲಿ ಯಾರೂ ಬೆಲ್ಲಿ ನೃತ್ಯ ಅಭ್ಯಾಸ ಮಾಡಿಲ್ಲ. ನನ್ನ ಮಗಳು ಈ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ~ ಎನ್ನುತ್ತಾರೆ ನಜ್ಮಾ.

`ನನಗೆ ಈಜಿಪ್ಟಿಯನ್ ಬೆಲ್ಲಿ ಎಂದರೆ ಪಂಚಪ್ರಾಣ. ಏಕೆಂದರೆ, ಈ ಶೈಲಿಗೇ ಒಂದು ಲಾಲಿತ್ಯವಿದೆ. ಜತೆಗೆ ಪುರಾತನದ ಸೊಗಡಿದೆ. ವಯಸ್ಸು ಮಾಗಿದಂತೆಲ್ಲಾ ಈ ನೃತ್ಯಶೈಲಿ ಹೆಚ್ಚು ಹೊಂದುತ್ತದೆ. ಅಮೆರಿಕನ್ ಬೆಲ್ಲಿ ನೃತ್ಯಶೈಲಿಯನ್ನು ಸಾಂಪ್ರದಾಯಿಕ ಬೆಲ್ಲಿ ನೃತ್ಯದೊಂದಿಗೆ ಸಮ್ಮಿಲನಗೊಳಿಸಿ ನೃತ್ಯ ಮಾಡುವುದನ್ನು ನಾನು ಯಾವತ್ತಿಗೂ ಉತ್ತೇಜಿಸುವುದಿಲ್ಲ. ಇದು ನಮ್ಮ ಮೂಲ ಬೇರನ್ನು ಪಲ್ಲಟಿಸುತ್ತದೆ~ ಎನ್ನುತ್ತಾರೆ ಅವರು. 

`ಇಟಲಿಯ ಫೈವ್‌ಸ್ಟಾರ್ ಹೋಟೆಲ್ ಒಂದರಲ್ಲಿ ನಾನು ಪ್ರಥಮ ಬೆಲ್ಲಿ ಡ್ಯಾನ್ಸ್ ಪ್ರದರ್ಶನ ನೀಡಿದೆ. ಆಗ ನನಗೆ 25 ವರ್ಷ ವಯಸ್ಸು. ಆಗ ನನ್ನ ನೃತ್ಯವನ್ನು ಎಲ್ಲರೂ ಬಹುವಾಗಿ ಮೆಚ್ಚಿಕೊಂಡರು. ಇದು ನನ್ನ ಜೀವನದಲ್ಲಿ ಮರೆಯಲಾದ ಕ್ಷಣ~ ಎನ್ನುತ್ತಾರೆ.

`ನಾನು ಇದುವರೆಗೂ ಯಾವುದೇ ಸಿನಿಮಾದಲ್ಲಿ ಬೆಲ್ಲಿ ಡ್ಯಾನ್ಸ್ ಪ್ರದರ್ಶನ ಮಾಡಿಲ್ಲ. ಆದರೆ ಇಟಲಿಯ ಖ್ಯಾತ ಗಾಯಕರಾದ ಪವರೊಟ್ಟಿ ಹಾಗೂ ಕ್ಲಾಡಿಯೊಬಾಗ್ಲಿಯೊನಿ ಅವರ ಆಲ್ಬಂ  ಮೂವಿ ಕ್ಲಿಪ್‌ಗೆ ನೃತ್ಯ ಮಾಡಿದ್ದೇನೆ. ಬಾಲಿವುಡ್‌ನಿಂದ ಅವಕಾಶಗಳು ಬಂದಿದ್ದವು. ಆದರೆ ನನಗೆ ಸಮಯ ಹೊಂದಾಣಿಕೆ ಆಗಿಲ್ಲ~ ಎಂದರು.

`ಗ್ರೀಕ್ ರಂಗಭೂಮಿ, ರೋಮನ್ ಎಂಪೈರ್ ಕುರಿತು ವಿಶೇಷ ಪರಿಣತಿ ಸಾಧಿಸಿದ್ದೇನೆ. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಇಟಾಲಿಯನ್ ಹಾಗೂ ಸ್ಪಾನಿಶ್ ಭಾಷೆ ಬೋಧಿಸುತ್ತೇನೆ.

ಬಾಲಾಡಿ ಕಲೆ ಹಾಗೂ ಗ್ರೀಕ್ ರಂಗಭೂಮಿ ಕುರಿತು ಸಂಶೋಧನಾತ್ಮಕ ಪ್ರಬಂಧ ಕೂಡ ಮಂಡಿಸಿದ್ದೇನೆ. ಜತೆಗೆ ಇಟಲಿಯಲ್ಲಿ ಸೆಂಟ್ರೊ ಅಸಾನಿ ಎಂಬ ಸಂಸ್ಥೆ ಕಟ್ಟಿ ಅದನ್ನು ಮುನ್ನಡೆಸುತ್ತಿದ್ದೇನೆ~ ಎನ್ನುತ್ತಾರೆ ನಜ್ಮಾ.

`ಭಾರತದ ಮಣ್ಣಿನಲ್ಲಿ ಅಧ್ಯಾತ್ಮದ  ಸೆಲೆಯಿದೆ. ಇಲ್ಲಿನ ಪುರಾಣ, ಕಾವ್ಯ, ಕರ್ಮ ಎಲ್ಲವನ್ನು ಬಹುವಾಗಿ ನಂಬುತ್ತೇನೆ. ನನಗೆ ಬೆಂಗಳೂರು ಕನಸಿನ ನಗರಿ. ದೆಹಲಿಗೆ ಹೋಲಿಸಿದರೆ ಇದು ತುಂಬಾ ಪ್ರಶಾಂತ ನಗರಿ. ನಾನು ಇಲ್ಲಿ ಸಾಕಷ್ಟು ಸಮಯ ಕಳೆಯಲು ಇಚ್ಛಿಸುತ್ತೇನೆ. ಇಲ್ಲಿನ ದೋಸೆ ಮತ್ತು ಚಿತ್ರನ್ನ ನನಗೆ ಅಚ್ಚುಮೆಚ್ಚು. ಇಲ್ಲಿಯ ಜನ ಕೂಡ ಇಟಲಿ ಮಂದಿಯಂತೆ ಸ್ನೇಹ ಜೀವಿಗಳು~ ಎನ್ನುತ್ತಾರೆ ಅವರು.

ಈಜಿಪ್ಟ್ ಸ್ವಾದದ ಬೆಲ್ಲಿ ನೃತ್ಯವನ್ನು ಭಾರತದಲ್ಲೂ ಜನಪ್ರಿಯಗೊಳಿಸಬೇಕು ಎಂಬ ಉದ್ದೇಶದಿಂದ ನಗರದಲ್ಲಿ ಜನವರಿ 7ರ ವರೆಗೆ ಅವರು ಕಾರ್ಯಾಗಾರ ನಡೆಸುತ್ತಿದ್ದಾರೆ. ಅದಕ್ಕೆ ಇಲ್ಲಿಯವರ ಪ್ರತಿಕ್ರಿಯೆ ಕೂಡ ಚೆನ್ನಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT