ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿಯಂತ್ರಿಸಿ

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ಮಂದಿರದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ, ಶಾಂತಿಪ್ರಿಯ ನಾಗರಿಕರನ್ನು ತಲ್ಲಣಗೊಳಿಸಿದೆ. ಘಟನೆಯಲ್ಲಿ ಜೀವಹಾನಿ ಆಗಿಲ್ಲ ಎಂಬುದು ಸಮಾಧಾನದ ಸಂಗತಿಯಾದರೂ ಜನಮಾನಸದಲ್ಲಿ ಭಯ ಬಿತ್ತುವ ಭಯೋತ್ಪಾದಕರ ಉದ್ದೇಶ ಫಲಿಸಿದೆ.

ಶಾಂತಿದೂತ ಗೌತಮ ಬುದ್ಧ ಜ್ಞಾನೋದಯ ಪಡೆದ ಸ್ಥಳ ಎಂಬ ಹಿರಿಮೆಯ ಕಾರಣ ಬೋಧಗಯಾ ಮಂದಿರ ವಿಶ್ವಖ್ಯಾತಿ ಪಡೆದಿದೆ. ಶ್ರೀಲಂಕಾ, ಚೀನಾ, ಜಪಾನ್, ಥಾಯ್ಲೆಂಡ್, ಮ್ಯಾನ್ಮಾರ್ ಒಳಗೊಂಡಂತೆ ಜಗತ್ತಿನ ವಿವಿಧ ಮೂಲೆಗಳಿಂದ ಬುದ್ಧನ ಲಕ್ಷಾಂತರ ಮಂದಿ ಅನುಯಾಯಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ವಿಶ್ವಪ್ರಸಿದ್ಧಿ ಸ್ಥಳದಲ್ಲಿ ಬಾಂಬ್ ಸ್ಫೋಟಿಸಿ, ಭಯೋತ್ಪಾದಕರು ಜಗತ್ತಿನ ಉದ್ದಗಲಕ್ಕೂ ಹಿಂಸೆಯ ಸಂದೇಶ ರವಾನಿಸಿದ್ದಾರೆ.

ಈ ದಾಳಿಗೆ ಭದ್ರತಾ ಲೋಪ ಮುಖ್ಯ ಕಾರಣ. ಈ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಸ್ಫೋಟಕ್ಕೆ ಮುಜಾಹಿದ್ದೀನ್ ಸಂಘಟನೆ ಸಂಚು ರೂಪಿಸಿತ್ತು ಎಂದು ದೆಹಲಿ ಪೊಲೀಸರ ವಶದಲ್ಲಿರುವ ಶಂಕಿತ ಉಗ್ರ ಸೈಯದ್ ಮಕ್ಬೂಲ್ ಏಳೆಂಟು ತಿಂಗಳ ಹಿಂದೆಯೇ ಬಾಯಿಬಿಟ್ಟಿದ್ದ ಎನ್ನಲಾಗಿದೆ.  ಬೌದ್ಧರ ಪ್ರಾಬಲ್ಯ ಇರುವ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ದಾಳಿಗೆ ಪ್ರತೀಕಾರವಾಗಿ ಈ ಆಕ್ರಮಣ ನಡೆದಿದೆ ಎಂದೂ ಶಂಕಿಸಲಾಗಿದೆ.

ಮಕ್ಬೂಲ್, ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟದ ಆರೋಪಿ. ಕಳೆದ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ಸೆರೆಸಿಕ್ಕ ಈತ ನೀಡಿದ ಸ್ಫೋಟ ಸಂಚಿನ ಮಾಹಿತಿಯನ್ನು ಬಿಹಾರ ಪೊಲೀಸರ ಜತೆಗೂ ಹಂಚಿಕೊಳ್ಳಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆದರೂ ವಿಧ್ವಂಸಕ ಕೃತ್ಯ ವಿಫಲಗೊಳಿಸಲು ಸಾಧ್ಯವಾಗಲಿಲ್ಲ ಎಂಬುದು ಭದ್ರತಾ ವ್ಯವಸ್ಥೆಯ ವೈಫಲ್ಯಗಳಿಗೆ ಕನ್ನಡಿ ಹಿಡಿಯುತ್ತದೆ.

ಸ್ಫೋಟಕ್ಕೆ ಸಂಚು ರೂಪಿಸಿದ್ದ ಕುರಿತು ಮೊದಲೇ ಮಾಹಿತಿ ಇದ್ದರೂ ಅದನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ. ಈ ವೈಫಲ್ಯದ ಹೊಣೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಹೊರಬೇಕು. ಸಾವಿರಾರು ಮಂದಿ ಸೇರುವ ಮಂದಿರದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಬಿಹಾರ ಸರ್ಕಾರ ಕೈಗೊಂಡಿದ್ದರೆ ಈ ಅನಾಹುತ ತಪ್ಪಿಸಲು ಸಾಧ್ಯವಿತ್ತು.

ಭದ್ರತಾ ಲೋಪದ ಹೊಣೆಯಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳಲಾಗದು. ಉಗ್ರರನ್ನು ಮಟ್ಟ ಹಾಕಲು ಭಯೋತ್ಪಾದನೆ ನಿಯಂತ್ರಣ ವ್ಯವಸ್ಥೆಯನ್ನು  ಪುನಶ್ಚೇತನಗೊಳಿಸುವ ತುರ್ತು ಕ್ರಮಗಳನ್ನು ಕೇಂದ್ರ  ಕೈಗೊಳ್ಳಲು ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಅಗತ್ಯ ನೆರವು ಒದಗಿಸಬೇಕು.

ಭಯೋತ್ಪಾದಕರ ಬರ್ಬರ ಕೃತ್ಯಗಳನ್ನು ರಾಜಕೀಯ ಉದ್ದೇಶಕ್ಕೆ ಯಾವುದೇ ಪಕ್ಷ ಬಳಸಿಕೊಳ್ಳಬಾರದು. ಬೋಧಿ ಮಂದಿರ ಘಟನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ ಬುದ್ಧ ವಿಹಾರಗಳು, ಮಂದಿರಗಳಿಗೆ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ರಾಷ್ಟ್ರವನ್ನು ಕಾಡುತ್ತಿರುವ ಇಂತಹ ಭಯೋತ್ಪಾದನೆ ಕೃತ್ಯಗಳ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯಗಳು ಸಮನ್ವಯದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯ ಎಂಬುದನ್ನು ಈ ಕೃತ್ಯ ಮತ್ತೊಮ್ಮೆ ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT