ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ರೈಲು ಬಿಟ್ಟಿದ್ದೇ ಬಜೆಟ್ ಸಾಧನೆ!

Last Updated 26 ಫೆಬ್ರುವರಿ 2011, 11:25 IST
ಅಕ್ಷರ ಗಾತ್ರ

ದಾವಣಗೆರೆ: ರೈಲ್ವೆ ಬಜೆಟ್ ಸಂಬಂಧಿಸಿದಂತೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯ ಕರ್ನಾಟಕ ಭಾಗಕ್ಕೆ ಮಹತ್ತರವಾದ ಯೋಜನೆಗಳು ಬಂದಿಲ್ಲ. ನಿರೀಕ್ಷೆಗಳು ಪೂರ್ಣಗೊಂಡಿಲ್ಲ ಎಂದರೆ, ಉದ್ಯೋಗಿಗಳು ತಮಗೆ 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಸಮ್ಮತಿಸಿದ್ದು, ಮಾಜಿ ಸೈನಿಕರಿಗೆ ಉದ್ಯೋಗ ನೇಮಕಾತಿ ಭರವಸೆ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದ ಗಿಜಿಗುಡುವ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಹಲವು ಭಾವ ವ್ಯಕ್ತವಾದವು.ಮಾಜಿ ಸೈನಿಕರಿಗೆ ಉದ್ಯೋಗಾವಕಾಶ  ನೀಡಿರುವುದು ಸಂತಸ ತಂದಿದೆ. ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 958 ಹುದ್ದೆಗಳಿವೆ. ಭಾರತೀಯ ರೈಲ್ವೆ 150 ವರ್ಷಗಳಲ್ಲಿ ಪ್ರಥಮ ಬಾರಿಗೆ ಈ ಅವಕಾಶ ನೀಡಿದೆ. ಆದರೆ, ಅದು ಕಾರ್ಯಗತ ಆಗಬೇಕು. ಈ ಯೋಜನೆ ಎಲ್ಲ ಮಾಜಿ ಸೈನಿಕರಿಗೆ ಸಿಗಬೇಕು ಧಾರವಾಡದಿಂದ ತುಮಕೂರು ರೈಲು ಮಾರ್ಗ ದ್ವಿಪಥ ಆಗಬೇಕು.
-ಪ್ರಭಾಕರ್ ಹಿರೇಗೌಡರ್, ಮಾಜಿ ಸೈನಿಕ

ಭದ್ರತೆ ಸುಧಾರಿಸಿಲ್ಲ
ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಿಕೆಯಲ್ಲಿ ಮಹಿಳೆಯರ ವಯಸ್ಸಿನ ಮಿತಿಯನ್ನು 60ರಿಂದ 58ಕ್ಕೆ ಇಳಿಸಿದ್ದಾರೆ. ರೈಲ್ವೆ ಸಿಬ್ಬಂದಿಯ  ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ  ಸೌಲಭ್ಯ ಕೊಟ್ಟಿದ್ದಾರೆ. ಇದು ಬಹಳ ಒಳ್ಳೆಯದು. ಆದರೆ, ರೈಲ್ವೆ ಭದ್ರತಾ ವ್ಯವಸ್ಥೆ ಇನ್ನೂ ಸುಧಾರಿಸಬೇಕು.
-ಸುಭಾಷ್, ನಿವೃತ್ತ ಪೊಲೀಸ್ ದಾವಣಗೆರೆ

ಬಾಗಲಕೋಟೆ-ಕುಡಚಿ ಪ್ರಸ್ತಾವ ಇಲ್ಲ
ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಬ್ರಿಟಿಷ್ ಕಾಲದಲ್ಲೇ ಸಮೀಕ್ಷೆ ಆಗಿತ್ತು. ಆದರೆ, ಇನ್ನೂ ಜಾರಿಯಾಗಿಲ್ಲ. ಬಾಗಲಕೋಟೆಯ  ಲೋಕಾಪುರದಲ್ಲಿ ಸಿಮೆಂಟ್, ಸಕ್ಕರೆ ಕಾರ್ಖಾನೆಗಳಿವೆ. ಅದರಿಂದ ಸರ್ಕಾರಕ್ಕೆ ಒಳ್ಳೆಯ ಆದಾಯವೂ ಇದೆ. ನಮಗೆ ಬೆಂಗಳೂರಿಗೆ ಬರಬೇಕಾದರೆ ಹುಬ್ಬಳ್ಳಿ ಮೂಲಕವೇ ಬರಬೇಕು. ಈ ಬಾರಿಯೂ ಅದರ ಪ್ರಸ್ತಾಪವಿಲ್ಲ.
-ಲೋಕಣ್ಣ ಭಜಂತ್ರಿ, ಲೋಕಾಪುರ ಬಾಗಲಕೋಟೆ

ಹರಿಹರ-ಕೊಟ್ಟೂರು ರೈಲು ಓಡಲೇ ಇಲ್ಲ...
ಈ ಬಜೆಟ್ ನಿರಾಶಾದಾಯಕ. ಹರಿಹರ- ಕೊಟ್ಟೂರು ರೈಲು ಓಡಾಟ ಆರಂಭವಾಗಬೇಕಿತ್ತು. ಕಡೂರು ಚಿಕ್ಕಮಗಳೂರಿನ ಮಧ್ಯೆ ರೈಲು ಓಡಾಟದ ಬಗ್ಗೆ ಪ್ರಸ್ತಾಪ ಇಲ್ಲ. ಬೀರೂರು, ಶೃಂಗೇರಿ ಮಾರ್ಗದ ಮಧ್ಯೆ ಕಳೆದ ಬಾರಿ ಭರವಸೆ ನೀಡಲಾಗಿತ್ತು. ಅದೂ ಈಡೇರಿಲ್ಲ.
-ಬಸವರಾಜ್

ಜನಪರ ಕಾಳಜಿ
ಒಳ್ಳೆಯ ಬಜೆಟ್. ನಿಜವಾದ ಜನಪರ ಕಾಳಜಿಯಿಂದ ಕೂಡಿದೆ. ಆದರೆ, ಕರ್ನಾಟಕಕ್ಕೆ ಇನ್ನಷ್ಟು ರೈಲ್ವೆ ಸೌಲಭ್ಯ ಒದಗಿಸಲು ರಾಜಕೀಯ ಒತ್ತಡವೂ ಮುಖ್ಯ. ನೌಕರರ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ.
-ಗುರುಬಸವರಾಜ್, ಸಂಚಾಲಕ ಕೊಟ್ಟೂರು-ಹರಿಹರ ರೈಲು ಹೋರಾಟ ಕ್ರಿಯಾ ಸಮಿತಿ

ದಾವಣಗೆರೆ: ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಮಾತು ಮಮತಾ ಬ್ಯಾನರ್ಜಿ ಅವರ ಬಳಿ ನಡೆಯುತ್ತಿಲ್ಲ. ಮತ್ತು ರಾಜ್ಯದ ರೈಲ್ವೆ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ. ಮಧ್ಯ ಕರ್ನಾಟಕದ ರೈಲ್ವೆ ಸಂಬಂಧಿತ ಬೇಡಿಕೆಗಳನ್ನು ಈಗಾಗಲೇ ನೀಡಿದ್ದೇನೆ. ಮುನಿಯಪ್ಪ ಅವರಿಗೂ ಸಾಕಷ್ಟು ಬಾರಿ ಮನವರಿಕೆ ಮಾಡಿದ್ದೇನೆ. ಆದರೆ, ಸ್ಪಂದಿಸಿಲ್ಲ. ಈ ನಿರ್ಲಕ್ಷ್ಯದ ಬಗ್ಗೆ ಪಕ್ಷದ ನಾಯಕರು ಬಜೆಟ್ ಚರ್ಚಾ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ಆಗ ಮತ್ತೊಮ್ಮ ನಮ್ಮ ಬೇಡಿಕೆಗಳನ್ನು ಮುಂಗಡಪತ್ರದಲ್ಲಿ ಸೇರಿಸಿ ಎಂದು ಒತ್ತಡ ತರುತ್ತೇನೆ.
-ಜಿ.ಎಂ. ಸಿದ್ದೇಶ್ವರ, ಸಂಸದ

ನಿರಾಸೆ ತಂದ ಬಜೆಟ್
ನಿರೀಕ್ಷಿತ ಬೇಡಿಕೆಗಳು ಈಡೇರಿಲ್ಲ. ಹರಿಹರದಿಂದ ಬೆಂಗಳೂರಿಗೆ ಇನ್ನೊಂದು ಇಂಟರ್‌ಸಿಟಿ ಓಡಿಸುವುದು, ಹುಬ್ಬಳ್ಳಿ-ಬೆಂಗಳೂರಿಗೆ ಇನ್ನೂ 4 ಪ್ಯಾಸೆಂಜರ್ ರೈಲು, ಜನಶತಾಬ್ದಿಗೆ ಇನ್ನೂ 10 ಬೋಗಿ ಸೇರಿಸುವುದೂ ಸೇರಿದಂತೆ ಹಲವಾರು ಬೇಡಿಕೆಗಳಿದ್ದವು. ಆದರೆ ನಮಗೆ ನಿರಾಸೆಯಾಗಿದೆ. ಜನಪ್ರತಿನಿಧಿಗಳು ಯಾಕೆ ಒತ್ತಡ ತರುತ್ತಿಲ್ಲ? ಅವರು ಕೇವಲ ಮನವಿ ನೀಡಿದರೆ ಸಾಲದು. ಬಜೆಟ್ ಮಂಡನೆಗೆ ಮುನ್ನ ತಮ್ಮ ಬೇಡಿಕೆಗಳನ್ನು ಸೇರಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆಯಾದರೂ ಪರಿಶೀಲಿಸಬೇಕಿತ್ತು.
-ಎಂ.ಎಸ್.ಕೆ. ಶಾಸ್ತ್ರಿ, ಹುಬ್ಬಳ್ಳಿ ನೈಋತ್ಯ ರೈಲ್ವೆ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಪ್ರಗತಿಗೆ ಪೂರಕ
ಮಮತಾ ಬ್ಯಾನರ್ಜಿ ಅವರು ಮಂಡಿಸಿದ ರೈಲ್ವೆ ಬಜೆಟ್ ದೇಶದ ಪ್ರಗತಿಗೆ ಪೂರಕ. ಸತತ 8ನೇ ವರ್ಷವೂ ಪ್ರಯಾಣದರದಲ್ಲಿ ಯಾವುದೇ ಏರಿಕೆ ಆಗಿಲ್ಲ. ಇದು ಜನಸ್ನೇಹಿ ಬಜೆಟ್. ವಿಶೇಷವಾಗಿ 1.75 ಲಕ್ಷ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ರೈಲ್ವೆ ಸುರಕ್ಷತೆಗಾಗಿ 16 ಸಾವಿರ ನಿವೃತ್ತ ಯೋಧರ ನೇಮಕ, ಕ್ರೀಡಾಪಟುಗಳಿಗೆ ಇಲಾಖೆಯಲ್ಲಿ ನೌಕರಿ, ಧಾರವಾಡದಲ್ಲಿ ವಿವಿಧೋದ್ದೇಶ ತರಬೇತಿ ಕೇಂದ್ರ,  ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ರಾಜ್ಯಕ್ಕೆ 2 ನೂತನ ರೈಲು ನೀಡಿರುವುದು ಶ್ಲಾಘನೀಯ.
-ಡಿ. ಬಸವರಾಜ್, ಕೆಪಿಸಿಸಿ ಸದಸ್ಯ.

ಅಭಿವೃದ್ಧಿಗೆ ಪೂರಕ
ದಾವಣಗೆರೆಯಿಂದ ತುಮಕೂರಿಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಮಂಜೂರಾತಿ ದೊರೆತಿರುವುದು ಸಂತೋಷವುಂಟುಮಾಡಿದೆ. ಈ ಮಾರ್ಗ ರಚನೆಯಿಂದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಸಚಿವರು ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು.
-ಬಿ. ವಾಮದೇವಪ್ಪ ಅಧ್ಯಕ್ಷ ದಾವಣಗೆರೆ ರೈಲ್ವೆ ಜಿಲ್ಲಾ ಹೋರಾಟ ಸಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT