ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ‘ಬಿಂದು’

ಆಡೂ ಆಟ ಆಡು
Last Updated 2 ಜನವರಿ 2014, 9:26 IST
ಅಕ್ಷರ ಗಾತ್ರ

ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ ಗೆಳತಿಯರು ಒಟ್ಟಾಗಿ ಒನ್, ಟೂ, ಥ್ರೀ... ಹಾಕಿ ಹಳ್ಳಿ ರಸ್ತೆ­ಯಲ್ಲಿ ಸುಮ್ಮನೆ ಸವಾಲಿಗೆಂದು ಓಡು­ತ್ತಿದ್ದೆವು. ಜೂಟಾಟ ಆಡುತ್ತಿದ್ದೆವು. ಹೇಗೋ, ಏನೋ ಎಲ್ಲದರಲ್ಲೂ ನಾನೇ ಮುಂದಿರುತ್ತಿದ್ದೆ. ‘ನಾನೂ ಓಡ­ಬಲ್ಲೆ’ ಎಂದು ನನಗೆ ಆಗಲೇ ಅನಿ­ಸಿತ್ತು. ಹೀಗೆನ್ನುವ ಆಕೆಯ ಓಟದಲ್ಲಿ ದೂರದ ನೋಟವಿತ್ತು.

ರಾಷ್ಟ್ರ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಯ್ಕೆಯಾಗಿರುವ ನಗರದ ಕೆ.ಬಿಂದು, ತನಗೆ ಅಜ್ಜಿ ಊರಲ್ಲಿ ಮೂಡಿದ ಆತ್ಮವಿಶ್ವಾಸ­ದಿಂದ ಮುನ್ನುಗ್ಗಿ ಈಗ ದೊಡ್ಡ­ದೊಂದು ಕನಸು ಕಾಣುತ್ತಿದ್ದಾರೆ. ತಿಪಟೂರು ಕಲ್ಪತರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಕೆ.ಬಿಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಈಚೆಗೆ ಧಾರ­ವಾಡದಲ್ಲಿ ನಡೆದ ಕ್ರೀಡಾಕೂಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮುಂದಿನ ತಿಂಗಳು ರಾಂಚಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆ­ಯಲ್ಲಿ ಗುರಿ ಮುಟ್ಟಲು ತಯಾರಿ ನಡೆಸುತ್ತಿದ್ದಾರೆ. ಈಕೆ ಗುಡ್ಡಗಾಡು ಓಟ­ದಲ್ಲಿ ಒಂದಷ್ಟು ಸಾಧನೆ ಮಾಡಲು ‘ಓಡುತ್ತೇನೆ’ ಎನ್ನುವ ಭರವಸೆ­ಯೊಂದನ್ನು ಬಿಟ್ಟರೆ ವಿಶೇಷ ಅವಕಾಶಗಳೇನು ಸೃಷ್ಟಿಯಾಗಿರಲಿಲ್ಲ. ಆತ್ಮವಿಶ್ವಾಸವೇ ಈಕೆಯನ್ನು ಗುರಿ ಕಡೆಗೆ ಕರೆದೊಯ್ಯುತ್ತಿದೆ.

ಪ್ರೌಢಶಾಲೆಯಲ್ಲಿದ್ದಾಗ ಕೊಕ್ಕೊ ಆಟದಲ್ಲಿ ಅಪಾರ ಆಸಕ್ತಿಯಿತ್ತು. ಗೆಳತಿ­ಯರ ಜತೆ ಆಟವಾಡಲು ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ. ಆದರೆ ಕೊಕ್ಕೊದಲ್ಲಿ ಪೂರಕ ಪ್ರೋತ್ಸಾಹ, ಸೌಲಭ್ಯ ದೊರೆಯದ್ದರಿಂದ ಮುಂದು­ವರಿ­ಯಲು ಆಗಲಿಲ್ಲ. ಆ ಸಂದರ್ಭ ಬೇರೊಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಎಂಬುವರು ನನ್ನನ್ನು ಗಮನಿಸಿ ಓಟದಲ್ಲಿ ಭವಿಷ್ಯವಿದೆ ಎಂದು ಭರವಸೆ ತುಂಬಿದರು. ಅಂದಿ­ನಿಂದ ಓಟದ ಸ್ಪರ್ಧೆಗಳಲ್ಲಿ ಶಾಲೆ­ಯನ್ನು ಪ್ರತಿನಿಧಿಸಲು ಶುರು ಮಾಡಿದೆ ಎಂದು ನೆನಪಿಸಿಕೊಳ್ಳುತ್ತಾರೆ.

ಪ್ರೌಢಶಾಲೆಯಲ್ಲಿದ್ದಾಗ ವಿವಿಧ ಕ್ರೀಡಾಕೂಟಗಳಲ್ಲಿ 3000, 1500, 800 ಮೀಟರ್‌ ಓಟದ ಸ್ಪರ್ಧೆಗಳಲ್ಲಿ ಬಹುಮಾನವಿಲ್ಲದೆ ಹಿಂದಿರುಗುತ್ತಿರ­ಲಿಲ್ಲ. ಪಾಲ್ಗೊಂಡ ಬಹುತೇಕ ಸ್ಪರ್ಧೆ­ಗಳಲ್ಲಿ ಮೊದಲ ಮೂರು ಸ್ಥಾನದಲ್ಲಿ ಒಂದಾದರೂ ಸಿಗುತ್ತಿತ್ತು. ದಸರಾ ಮತ್ತು ಗ್ರಾಮೀಣ ಕ್ರೀಡಾಕೂಟದ ವಿವಿಧ ಮಟ್ಟಗಳಲ್ಲೂ ದೀರ್ಘ ದೂರ ಓಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದು ಓಟದ ದಿಕ್ಕನ್ನು ಸ್ಪಷ್ಟಪಡಿಸಿತು.

ಹತ್ತಾರು ಮೆಡಲ್‌ಗಳು ಸಿಕ್ಕವು. ಮ್ಯಾರಥಾನ್, ಗುಡ್ಡಗಾಡು ಓಟದಲ್ಲಿ ಹಲವರು ವಿಶ್ವಾಸ ತುಂಬಿದರು. ತುಮ­ಕೂರಿನಲ್ಲಿ ಸಂಸ್ಥೆಯೊಂದರಿಂದ ನಡೆದಿದ್ದ ಮ್ಯಾರಥಾನ್‌ನಲ್ಲಿ ಭಯ­ದಿಂದಲೇ ಭಾಗವಹಿಸಿದ್ದೆ. ಅಲ್ಲಿ ಬಹು­ಮಾನ ಪಡೆದಾಗ ನನ್ನ ನಿಜವಾದ ಶಕ್ತಿ ಅರಿವಾಯಿತು. ಸೋದರ ಸಂಬಂಧಿ ರಾಕೇಶ್ ಎಂಬುವರು ನನಗೆ ಗುಡ್ಡ­ಗಾಡು ಓಟದ ಸ್ಪರ್ಧೆಗಳಲ್ಲಿ ಸ್ಫೂರ್ತಿ ತುಂಬಿ ಒಂದು ರೀತಿ ಮಾರ್ಗದರ್ಶಕ­ರಾದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಗೋವಿಂದರಾಜು ಧೈರ್ಯ ತುಂಬಿ­ದರು. ಪಿಯು ಇಲಾಖೆಯಿಂದ ನಡೆದ ಕ್ರೀಡಾಕೂಟದಲ್ಲಿ ಸಹಜವಾಗಿ 3000, 1500, 800 ಮೀ. ಓಟದ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದೆ. ಆದರೆ ಗುಡ್ಡಗಾಡು ಓಟದಲ್ಲಿ ಆಸಕ್ತಿ ಇದ್ದಿದ್ದರಿಂದ ಅದಕ್ಕೆ ಒತ್ತು ಕೊಟ್ಟು ಶ್ರಮ ಹಾಕಿದೆ. ಅದರಲ್ಲಿ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ­ಯಾದೆ ಎಂದು ಬಿಂದು ಹೆಮ್ಮೆಯಿಂದ ಹೇಳುತ್ತಾರೆ. ಒಲಂಪಿಕ್ಸ್ ವರೆಗೆ ಗುರಿ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ.

ತಂದೆತಾಯಿ ಪ್ರೋತ್ಸಾಹವೇ ಎಲ್ಲದಕ್ಕೂ ಕಾರಣ ಎಂದು ನೆನೆಯುವ ಬಿಂದು, ಸರ್ಕಾರದಿಂದ ಸೂಕ್ತ ತರಬೇತಿ, ಪ್ರೋತ್ಸಾಹ ಸಿಕ್ಕಿದರೆ ಹೆಚ್ಚಿನ ಸಾಧನೆ ಮಾಡಬಹುದು ಎನ್ನುತ್ತಾರೆ.

ಈಕೆಯ ತಂದೆ ಕಾಂತರಾಜು ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿ. ತಾಯಿ ಪುಟ್ಟತಾಯಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶು­ಪಾಲರು. ‘ಓಟದ ಅಭ್ಯಾಸಕ್ಕೆಂದು ತಂದೆ ಪ್ರತಿದಿನ ಮುಂಜಾನೆ ಕ್ರೀಡಾಂಗಣಕ್ಕೆ ಕರೆದೊಯ್ಯುತ್ತಾರೆ. ಯಾವುದೇ ಕ್ರೀಡಾಕೂಟಕ್ಕೆ ತೆರಳಿ­ದರೂ ಅಪ್ಪ ಜತೆಯಲ್ಲಿ ಬಂದು ಪ್ರೋತ್ಸಾಹ ನೀಡುತ್ತಾರೆ’ ಎಂದು ಅಪ್ಪನ ಬಗ್ಗೆ ಅಭಿಮಾನದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT