ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮುಯ್ಯಿ ತೀರಿಸುವ ತವಕ

ಕ್ರಿಕೆಟ್: ಇಂದು ಎರಡನೇ ಟಿ-20; ಸರಣಿ ಸೋಲು ತಪ್ಪಿಸಲು ಜಯ ಅನಿವಾರ್ಯ
Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಹಮದಾಬಾದ್: ಗೆದ್ದರೆ ಮಾತ್ರ ಉಳಿಗಾಲ. ಸೋಲು ಅನುಭವಿಸಿದರೆ ಕೋಟಿ ಕೋಟಿ ಅಭಿಮಾನಿಗಳ ಕೋಪಕ್ಕೆ ತುತ್ತಾಗುವ ಭೀತಿ. ಇದು ಭಾರತ ತಂಡದ ಸದ್ಯದ ಪರಿಸ್ಥಿತಿ. ಜಯ ಪಡೆಯಲೇಬೇಕಾದ ಒತ್ತಡದಲ್ಲಿರುವ ಭಾರತ ತಂಡ ಶುಕ್ರವಾರ ನಡೆಯುವ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದ್ದು, ಕ್ರಿಕೆಟ್ ಪ್ರೇಮಿಗಳು ಮತ್ತೊಂದು ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲು ಅನುಭವಿಸಿದ್ದ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಇಂದು ಜಯ ಅನಿವಾರ್ಯ. ಅದರಲ್ಲಿ ಯಶಸ್ವಿಯಾದರೆ ಸರಣಿ ಸಮಬಲದಲ್ಲಿ ಕೊನೆಗೊಳ್ಳಲಿದೆ. ಇಲ್ಲದಿದ್ದರೆ, ಎರಡು ಪಂದ್ಯಗಳ ಸರಣಿ ಪಾಕಿಸ್ತಾನದ ಪಾಲಾಗಲಿದೆ.

ಪಾಕ್ ವಿರುದ್ಧದ ಸರಣಿ ಸೋಲನ್ನು ಭಾರತದ ಅಭಿಮಾನಿಗಳು ಸಹಿಸರು ಎಂಬ ಸತ್ಯವನ್ನು ಮನದಲ್ಲಿಟ್ಟುಕೊಂಡು `ಮಹಿ' ಬಳಗ ಸರ್ದಾರ್ ಪಟೆಲ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಬೇಕಾಗಿದೆ. ಮಾತ್ರವಲ್ಲ ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಕಹಿಯನ್ನು ಮರೆತು ಅಂಗಳದಲ್ಲಿ ಕೆಚ್ಚೆದೆಯ ಹೋರಾಟ ನಡೆಲೇಬೇಕಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸುವುದು ಅಗತ್ಯ. ಬ್ಯಾಟಿಂಗ್‌ನಲ್ಲಿ ಚೇತರಿಕೆಯ ಪ್ರದರ್ಶನ ನೀಡಬೇಕು. ಗೆಲುವು ತಂದುಕೊಡಲು ಸಾಮರ್ಥ್ಯವಿರುವ ಅಂತಿಮ ಇಲೆವೆನ್‌ನ್ನು ಆಯ್ಕೆ ಮಾಡುವ ಸವಾಲು ನಾಯಕ ದೋನಿ ಮುಂದಿದೆ.

ಅಬ್ಬರದ ಬ್ಯಾಟಿಂಗ್ ಅಗತ್ಯ:ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಸೋಲಿಗೆ ಕಾರಣ ಎಂದು ಮೊದಲ ಪಂದ್ಯದ ಬಳಿಕ ದೋನಿ ಹೇಳಿದ್ದರು. ಏಕೆಂದರೆ ಒಂದು ಹಂತದಲ್ಲಿ ಮೂರು ವಿಕೆಟ್‌ಗೆ 108 ರನ್ ಗಳಿಸಿದ್ದ ತಂಡ ಬಳಿಕ ಕುಸಿತ ಕಂಡು 133 ರನ್ ಪೇರಿಸಲಷ್ಟೇ ಶಕ್ತವಾಗಿತ್ತು.

ಗೌತಮ್ ಗಂಭೀರ್ (43) ಮತ್ತು ಅಜಿಂಕ್ಯ ರಹಾನೆ (42) ಅವರನ್ನು ಹೊರತುಪಡಿಸಿ ಇತರ ಎಲ್ಲ ಬ್ಯಾಟ್ಸ್‌ಮನ್‌ಗಳು ಬೇಗನೇ ವಿಕೆಟ್ ಒಪ್ಪಿಸಿದ್ದರು. ಆದ್ದರಿಂದ ಭರ್ಜರಿ ಪ್ರದರ್ಶನ ನೀಡಬೇಕಾದ ಒತ್ತಡ ಬ್ಯಾಟ್ಸ್‌ಮನ್‌ಗಳ ಮೇಲಿದೆ. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರೋಹಿತ್ ಶರ್ಮ ಹಾಗೂ ದೋನಿ ಅಬ್ಬರದ ಆಟವಾಡಿದರಷ್ಟೇ ಗೆಲುವಿನ ಕನಸು ಕಾಣಬಹುದು.

ಬದಲಾವಣೆ ಸಾಧ್ಯತೆ:ಭಾರತ ಕೆಲವೊಂದು ಬದಲಾವಣೆಗಳೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯವ ಸಾಧ್ಯತೆಯಿದೆ. ಅಂತಿಮ ಹನ್ನೊಂದರಲ್ಲಿ ಯಾರಿಗೆಲ್ಲ ಸ್ಥಾನ ನೀಡಬೇಕು ಎಂಬ ಸವಾಲು ದೋನಿ ಮುಂದಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡದ್ದು ಹಿನ್ನಡೆಯಾಗಿ ಪರಿಣಮಿಸಿತ್ತು.

`ಪಾರ್ಟ್ ಟೈಮ್' ಬೌಲರ್‌ಗಳಾದ ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಜ ನೆರವಿನಿಂದ ಪಾಕ್ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ತೊಡಿಸಬಹುದು ಎಂದು ದೋನಿ ಭಾವಿಸಿದ್ದರು. ಆದರೆ ಅವರ ಯೋಜನೆ ತಲೆಕೆಳಗಾಗಿತ್ತು. `ಅಶ್ವಿನ್ ಆಡದೇ ಇದ್ದುದು ನಮಗೆ ಹೆಚ್ಚಿನ ನೆರವು ನೀಡಿತು' ಎಂದು ಪಾಕ್ ತಂಡದ ನಾಯಕ ಮೊಹಮ್ಮದ್ ಹಫೀಜ್ ಹೇಳಿದ್ದರು.

ಚೆನ್ನೈನ ಈ ಸ್ಪಿನ್ನರ್‌ಗೆ ಬದಲು ರವೀಂದ್ರ ಜಡೇಜಗೆ ಸ್ಥಾನ ನೀಡಿದ ದೋನಿ ಕ್ರಮ ಟೀಕೆಗೆ ಗುರಿಯಾಗಿತ್ತು. ಆದ್ದರಿಂದ ಇಂದು ಅಶ್ವಿನ್ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ.ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕ ಎಂಬ ಹಿರಿಮೆಯನ್ನು ದೋನಿ ಹೊಂದಿದ್ದಾರೆ. ಆದರೆ ಇತ್ತೀಚೆಗೆ ಎದುರಾದ ಕೆಲವು ಸೋಲುಗಳು ಅವರ ಮೇಲಿನ ಒತ್ತಡ ಹೆಚ್ಚಿಸಿದೆ. ಪಾಕ್ ಎದುರು ತವರು ನೆಲದಲ್ಲಿ ಸರಣಿ ಸೋಲು ಅನುಭವಿಸಿದರೆ `ಮಹಿ' ಎಲ್ಲ ಕಡೆಗಳಿಂದ ಟೀಕೆಗೆ ಗುರಿಯಾಗುವುದು ಖಚಿತ. ಆದ್ದರಿಂದ ಈ ಮಹತ್ವದ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸವಾಲು ಅವರ ಮುಂದಿದೆ.

ಆತ್ಮವಿಶ್ವಾಸದಲ್ಲಿ ಪಾಕ್: ಹಫೀಜ್ ನೇತೃತ್ವದ ಪಾಕ್ ಸಹಜವಾಗಿ ಆತ್ಮವಿಶ್ವಾಸದಲ್ಲಿದೆ. ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆದಿರುವುದೇ ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪಂದ್ಯದ ಅಂತಿಮ ಓವರ್‌ನಲ್ಲಿ ಪಾಕ್ ಜಯ ತನ್ನದಾಗಿಸಿಕೊಂಡಿತ್ತು.

ಬೌಲಿಂಗ್ ವಿಭಾಗ ಬಲಿಷ್ಠವಾಗಿರುವುದು ಪಾಕ್‌ಗೆ ಹೆಚ್ಚಿನ ನೆರವು ನೀಡಿದೆ. ವೇಗಿಗಳಾದ ಉಮರ್ ಗುಲ್, ಸೊಹೇಲ್ ತನ್ವೀರ್ ಮತ್ತು ಮೊಹಮ್ಮದ್ ಇರ್ಫಾನ್ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಆದರೆ ಸರ್ದಾರ್ ಪಟೇಲ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡದು. ಹಾಗಾದಲ್ಲಿ ಸ್ಪಿನ್ನರ್ ಸಯೀದ್ ಅಜ್ಮಲ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

ಪಾಕ್ ತಂಡದ ಬ್ಯಾಟಿಂಗ್ ಕೂಡಾ ಚಿಂತೆಗೆ ಕಾರಣವಾಗಿದೆ. ಮೊಹಮ್ಮದ್ ಹಫೀಜ್ ಮತ್ತು ಶೋಯಬ್ ಮಲಿಕ್ ಮಾತ್ರ ಮೊದಲ ಪಂದ್ಯದಲ್ಲಿ ಮಿಂಚಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲದೆ, ಉಮರ್ ಅಕ್ಮಲ್ ಮತ್ತು ಕಮ್ರನ್ ಅಕ್ಮಲ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟ್ವೆಂಟಿ-20 ಸರಣಿ ಗೆದ್ದುಕೊಂಡು ಏಕದಿನ ಪಂದ್ಯಗಳಿಗೆ ಸಜ್ಜಾಗುವುದು ಪ್ರವಾಸಿ ತಂಡದ ಗುರಿ.

ತಂಡಗಳು ಇಂತಿವೆ
ಭಾರತ
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ಯುವರಾಜ್   ಸಿಂಗ್, ರೋಹಿತ್ ಶರ್ಮ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಆರ್. ಅಶ್ವಿನ್, ಅಶೋಕ್ ದಿಂಡಾ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಪರ್ವಿಂದರ್ ಅವಾನ, ಪಿಯೂಷ್ ಚಾವ್ಲಾ, ಅಂಬಟಿ ರಾಯುಡು

ಪಾಕಿಸ್ತಾನ
ಮೊಹಮ್ಮದ್ ಹಫೀಜ್ (ನಾಯಕ), ಅಹ್ಮದ್ ಶೆಹಜಾದ್, ಅಸದ್ ಅಲಿ, ಜುನೈದ್ ಖಾನ್, ಕಮ್ರನ್ ಅಕ್ಮಲ್, ಮೊಹಮ್ಮದ್ ಇರ್ಫಾನ್, ನಾಸಿರ್ ಜಮ್‌ಶೆದ್, ಸಯೀದ್ ಅಜ್ಮಲ್, ಶಾಹಿದ್ ಅಫ್ರಿದಿ, ಶೋಯಬ್ ಮಲಿಕ್, ಸೊಹೇಲ್ ತನ್ವೀರ್, ಉಮರ್ ಅಕ್ಮಲ್, ಉಮರ್ ಅಮೀನ್, ಉಮರ್ ಗುಲ್, ಜುಲ್ಫಿಕರ್ ಬಾಬರ್

ಅಂಪೈರ್: ಸುಧೀರ್ ಅಸ್ನಾನಿ ಮತ್ತು ವಿನೀತ್ ಕುಲಕರ್ಣಿ, ಮೂರನೇ ಅಂಪೈರ್: ಸಿ. ಶಂಸುದ್ದೀನ್, ಮ್ಯಾಚ್ ರೆಫರಿ: ರೋಶನ್ ಮಹಾನಾಮ
ಪಂದ್ಯದ ಆರಂಭ: ಸಂಜೆ 5.00ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT