ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಜಮೀನಿಗೆ ನುಗ್ಗಿದ ನೀರು

Last Updated 11 ಸೆಪ್ಟೆಂಬರ್ 2013, 9:32 IST
ಅಕ್ಷರ ಗಾತ್ರ

ಇಳಕಲ್‌: ಕಳೆದ 3 ದಿನಗಳಿಂದ ಸುರಿದ ಮಳೆಗೆ ಇಳಕಲ್‌ ಹತ್ತಿರದ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಹಳ್ಳಕ್ಕೆ ಹೊಂದಿಕೊಂಡಿರುವ ಸಮೀಪದ ಗ್ರಾಮಗಳಾದ ತುಂಬ, ಜಂಬಲದಿನ್ನಿ, ನಿಡಸನೂರ, ಲವಳಸರ, ಕಮಲದಿನ್ನಿ, ಪಾಲತಿ, ಹೇಮವಾಡಗಿ, ಕರಡಿ ಗ್ರಾಮಗಳ ತಗ್ಗು ಪ್ರದೇಶ­ದಲ್ಲಿರುವ ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಸೋಮವಾರ ರಾತ್ರಿ ಒಟ್ಟು 135 ಮಿ.ಮೀ. ಮಳೆ ಸುರಿದಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಮುಂಗಾರು ಹಂಗಾಮಿನಲ್ಲಾದ ನಷ್ಟವನ್ನು ಹಿಂಗಾರು ಹಂಗಾಮು ತುಂಬಿಕೊಡಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ. ಆದರೆ ಹಳ್ಳಗಳು ತುಂಬಿ ಹರಿಯುತ್ತಿರುವುದರ ಪರಿಣಾಮ ಅಲ್ಲಲ್ಲಿ ಮಳೆ ಹಾನಿಯನ್ನುಂಟು ಮಾಡಿದೆ.

ಹೇಮವಾಡಗಿ ಗ್ರಾಮದ 12 ತಗಡಿನ ಶಡ್ಡುಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರಿಗೆ ಕೊಚ್ಚಿಕೊಂಡು ಹೋಗಿವೆ.

ನಿಡಸನೂರ, ಪಾಲತಿ, ಕೊಣ್ಣೂರ, ತುಂಬ, ಜಂಬಲದಿನ್ನಿ, ಲವಳಸರ, ಕಮಲದಿನ್ನಿ ಕರಡಿ ಗ್ರಾಮಗಳಲ್ಲೂ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳು ಹಾಳಾಗಿವೆ. ಮನೆಗಳು ಹಾಗೂ ಜಮೀನುಗಳು ಜಲಾವೃತಗೊಂಡಿವೆ.

ಹೇಮವಾಡಗಿ ಹಾಗೂ ಕರಡಿ ಗ್ರಾಮಗಳ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ತಹಶೀಲ್ದಾರ್‌ ಪಂಪನಗೌಡ ಮೇಲ್ಸೀಮೆ ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ನೆರವಾಗಿದ್ದಾರೆ.  ಪ್ರವಾಹ ಪೀಡಿತ ಸ್ಥಳಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ, ಕೃಷಿ ಹಾಗೂ ಲೋಕೋಪ­ಯೋಗಿ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ತೀವ್ರಗೊಂಡರೇ ಪರಿಹಾರ ಕಾರ್ಯ ಚುರುಕುಗೊಳಿಸಲು ಸನ್ನದ್ಧರಾಗಿರಲು ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ಮೇಲ್ಸೀಮೆ ತಿಳಿಸಿದ್ದಾರೆ.

ಬನಹಟ್ಟಿ ಭಾರಿ ಮಳೆ: ಗಣಪತಿ ಕಾರ್ಯಕ್ರಮ ರದ್ದು
ಬನಹಟ್ಟಿ:
ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ತುಂಬ ನೀರು ಹರಿದು ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಸಾಕಷ್ಟು ತೊಂದರೆಯಾಯಿತು. ತಗ್ಗು ಪ್ರದೇಶದ ಹಲವಾರು ಕಡೆಗಳಲ್ಲಿ ನೀರು ಮನೆಗಳಿಗೆ ಹೋಯಿತು.

ಭಾನುವಾರ ರಾತ್ರಿಯಿಂದ ಮಳೆ ಸುರಿಯುತ್ತಿತ್ತು. ಆದರೆ ಸೋಮವಾರ ಮುಂಜಾನೆಯಿಂದ ಸಂಜೆಯವರೆಗೆ ಯಾವುದೇ ಮಳೆಯ ಲಕ್ಷಣಗಳಿರಲಿಲ್ಲ. ಸಂಜೆ 7ಕ್ಕೆ ಒಮ್ಮಲೆ ಮಳೆ ಜೋರಾಗಿ ಪ್ರಾರಂಭಗೊಂಡಿತು. ಮಳೆಯಿಂದಾಗಿ ಅನೇಕ ಸಾರ್ವಜನಿಕ ಗಣಪತಿಯ ಮಂಟಪಗಳು ಮಳೆಯಲ್ಲಿ ತೊಯ್ದುವು. ಸಂಘಟಕರು ಹಲವಾರು ತೊಂದರೆಗಳನ್ನು ಅನುಭವಿಸಿದರು.

ಗಣಪತಿಯ ಹಬ್ಬದ ನಿಮಿತ್ತವಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ರದ್ದು ಮಾಡಬೇಕಾಯಿತು. ರಾತ್ರಿ ಪೂರ್ತಿ ಮಳೆ ಸುರಿಯಿತು. ಇದರಿಂದಾಗಿ ಒಂದು ದಿನ ಮಾತ್ರ ಪ್ರತಿಷ್ಠಾಪಿಸುವ ಹಲವರು ಮಳೆಯಲ್ಲಿಯೇ ಗಣೇಶ ವಿಸರ್ಜನೆಗೆ ತೆಗೆದುಕೊಂಡು ಹೋದರು.

ಜಿಲ್ಲೆಯಾದ್ಯಂತ ಉತ್ತಮ ಮಳೆ
ಬಾಗಲಕೋಟೆ:
ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಕೆಲವೆಡೆ ಭಾರಿ ಹಾಗೂ ಮತ್ತೆ ಕೆಲವೆಡೆ ತುಂತುರು ಮಳೆಯಾಗುತ್ತಿದ್ದು, ಬಾಡುತ್ತಿದ್ದ ಬೆಳೆಗೆ ಜೀವಕಳೆ ಬಂದಂತಾಗಿದೆ.

ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆಯವರೆಗೆ ನಿರಂತರವಾಗಿ ತುಂತುರು ಮಳೆ ಸುರಿಯಿತು. ಒಂದು ತಿಂಗಳಿಂದ ಮಳೆ ಇಲ್ಲದೇ ಬೇಸಿಗೆಯನ್ನು ನೆನಪಿಸುವಂತಿದ್ದ ವಾತಾವರಣ ತುಂತುರು ಮಳೆಯಿಂದ ತಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT