ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮರಾಯನಗುಡಿ ಮನೆ ಅಕ್ರಮ ಇನ್ನಷ್ಟು ಬಯಲು!

Last Updated 17 ಅಕ್ಟೋಬರ್ 2012, 8:50 IST
ಅಕ್ಷರ ಗಾತ್ರ

ಶಹಾಪುರ:  ಭೀಮರಾಯನಗುಡಿ ಅನುಸೂಚಿತ ಪ್ರದೇಶದ 500 ಮನೆಗಳ ಅಕ್ರಮವು ಅಗೆದಷ್ಟು ಬಯಲಾಗುತ್ತಿದೆ. ಅನುಸೂಚಿತ ಪ್ರದೇಶದ ವ್ಯಾಪ್ತಿಯಲ್ಲಿ ಹುಲಕಲ್, ಕಂಚಲಕವಿ, ಶಖಾಪೂರ, ಭೀಮರಾಯನಗುಡಿ ಗ್ರಾಮ ಬರುತ್ತವೆ.

ವಿಚಿತ್ರವೆಂದರೆ ಹೆಚ್ಚಿನ ಫಲಾನುಭವಿಗಳು ಹೋತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ ಎಂಬ ಅಂಶ ದಾಖಲಾತಿಗಳನ್ನು ಪರಿಶೀಲಿಸಿದಾಗ ಬಯಲಾಗಿದೆ. ಅನುಸೂಚಿತ ಪ್ರದೇಶಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ 75,000ರೂಪಾಯಿ ನಿಗದಿಪಡಿಸಿ ಒಟ್ಟು 500 ಮನೆಗಳು ಮಂಜೂರಾಗಿವೆ. ಅನುಸೂಚಿತ ಪ್ರದೇಶದ ನಿವಾಸಿಗಳ ಮೂಲಸೌಲಭ್ಯ ಕಲ್ಪಿಸುವುದಕ್ಕಾಗಿ ಭೀಮರಾಯನಗುಡಿಯಲ್ಲಿ ಪ್ರತ್ಯೇಕ ಕಾರ್ಯಾಲಯವಿದೆ.

ಪುರಸಭೆ ಮುಖ್ಯಾಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ  ಅಲ್ಲದೆ ಆಡಳಿತಾಧಿಕಾರಿಯಾಗಿ ಅದರ ನಿರ್ವಹಣೆಯನ್ನು ತಾಲ್ಲೂಕು ದಂಡಾಧಿಕಾರಿ ನೋಡಿಕೊಳ್ಳುತ್ತಾರೆ. ಫಲಾನುಭವಿಗಳ ಆಯ್ಕೆಯನ್ನು ಆಡಳಿತಾಧಿಕಾರಿ ಸಮ್ಮುಖದಲ್ಲಿ ಜರುಗಬೇಕೆಂಬ ಷರತ್ತು ಇದ್ದು ನಂತರ ಸಿದ್ದಪಡಿಸಿದ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಬೇಕು ಎನ್ನುತ್ತಾರೆ ತಾಲ್ಲೂಕು ಕೃಷಿಕೂಲಿಕಾರ ಸಂಘದ ಅಧ್ಯಕ್ಷ ದಾವಲಸಾಬ ನದಾಫ್.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನುಸೂಚಿತ ಪ್ರದೇಶದ ವ್ಯಾಪ್ತಿಯನ್ನು ಬಿಟ್ಟು 500 ಮನೆಗಳನ್ನು ಹೋತಪೇಟ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಪಡೆದುಕೊಂಡು ಅದರಂತೆ ಹೋತಪೇಟ ತಾಂಡಾ 100, ದಿಗ್ಗಿತಾಂಡಾ 25 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಸ್ಪಷ್ಟವಾಗಿ ಸರ್ಕಾರದ ನಿಯಮ ಉಲ್ಲಂಘನೆಯಾಗಿದೆ.

ಆರ್ಥಿಕವಾಗಿ ಸಬಲರಾಗಿ ರಾಜಕೀಯ ಪ್ರಭಾವ ಹೊಂದಿದ ವ್ಯಕ್ತಿಗಳು ಪಟ್ಟಿಯಲಿ ಸೇರ್ಪಡೆಯಾಗಿದ್ದಾರೆ. ಇದಕ್ಕೆ ತಾಜಾತನ ಎನ್ನುವಂತೆ ಹುಲಕಲ್ ಗ್ರಾಮದಲ್ಲಿ ರಾಜಕೀಯ ಪ್ರಭಾವ ವ್ಯಕ್ತಿಗಳ ಸಂಬಂಧಿಕರು ನಿವೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅದರಂತೆ ಭೀಮರಾಯನಗುಡಿ, ಶಖಾಪೂರ ಗ್ರಾಮದಲ್ಲಿಯೂ ಸರ್ಕಾರಿ ಹುದ್ದೆಯಲ್ಲಿದ್ದು ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನ ಮಾಡಿಕೊಂಡಿದ್ದಾರೆ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಆಪಾದಿಸಿದ್ದಾರೆ.
 
ಅನುಸೂಚಿತ ಪ್ರದೇಶ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ ಎಂ. ರಾಚಪ್ಪ ಈಗಾಗಲೇ 172 ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಸ್ಪಷ್ಟನೆ ನೀಡುತ್ತಾರೆ.  ಆದರೆ ಆಯ್ಕೆ ಪಟ್ಟಿಯಲ್ಲಿ ಒಬ್ಬರ ಹೆಸರು ಕೂಡಾ ತೆಗೆದು ಹಾಕಿಲ್ಲ. ಜನತೆಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಇವೆಲ್ಲದರ ನಡುವೆ ಅನುಸೂಚಿತ ಪ್ರದೇಶದ ಮನೆ ಹಂಚಿಕೆ ಪಟ್ಟಿಯಲ್ಲಿ 2006ರಿಂದ2009 ಸಾಲಿನಲ್ಲಿ ಕಚ್ಚಾಪಕ್ಕಾ ಮನೆ (ಇಂದಿರಾ ಅವಾಜ್) ಫಲಾನುಭವಿಗಳಾಗಿ ಸರ್ಕಾರದ ಯೋಜನೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಯೋಜನೆ ದಾರಿ ತಪ್ಪಿದ್ದು ಸಮಗ್ರವಾಗಿ ತನಿಖೆ ನಡೆಸುವುದು ಅಗತ್ಯವಾಗಿದೆ. ರಾಜಕೀಯ ಲಾಭಕ್ಕಾಗಿ ನಿಜವಾದ ಫಲಾನುಭವಿಗಳಿಗೆ ಸೂರಿನಿಂದ ವಂಚಿತಗೊಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಲಿವೆ.

ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಗೋಗಿ ಎಸ್‌ಬಿಐ ಬ್ಯಾಂಕಿನಲ್ಲಿ ಸಂದಾಯವಾಗಿರುವ ಅಂದಾಜು 73 ಲಕ್ಷ ಹಣವನ್ನು ಯಾವುದೇ ಫಲಾನುಭವಿಗಳಿಗೆ ವಿತರಿಸಬಾರದು ಎಂಬ ತುರ್ತು ಫ್ಯಾಕ್ಸ್ ರವಾನಿಸಲಾಗಿದೆ. ಚೆಕ್ ನೀಡಲು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ನಿರಾಕರಿಸುತ್ತಿದ್ದರಿಂದ ಅವರನ್ನು ಎತ್ತಂಗಡಿ ಮಾಡಿ ಬೇರೊಬ್ಬರನ್ನು ನೇಮಿಸುವ ತಂತ್ರವನ್ನು ಹೆಣೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೋಟ್ಯಂತರ ಮೌಲ್ಯದ ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದ್ದು ತಕ್ಷಣ ಅದನ್ನು ತಡೆ ಹಿಡಿದು ಸಮಗ್ರವಾದ ತನಿಖೆ ನಡೆಸಬೇಕು. ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಇಲ್ಲದಿದ್ದರೆ ಲೋಕಾಯುಕ್ತ ಕೊರ್ಟ್‌ಗೆ ಹೋಗಬೇಕಾಗುತ್ತದೆ ಎಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT