ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತದ ಹಬ್ಬ ಹಾಲೊವೀನ್

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸುತ್ತ ಗವ್ವೆಂದು ಕವಿದ ಕಾರ್ಗತ್ತಲು. ಕಣ್ಣಿಗೆ ಏನೊಂದು ಕಾಣಿಸದು. ಇಂತಹ ಸಮಯದಲ್ಲಿ ಹೊರಗೆ ಅಡಿಯಿಟ್ಟರೆ ಸುಮ್ಮನೆ ಬಿಮ್ಮೆಂದು ಬೀಸುವ ಗಾಳಿ, ಅಲುಗಾಡುವ ಮರದ ಎಲೆಗಳು ಸಹ ಮನಸ್ಸಿನಲ್ಲಿ ಭೀತಿ ತಂದೊಡ್ಡುತ್ತವೆ. ಮೊದಲೇ ದಿಗಿಲುಬಿದ್ದ ಮನಸ್ಸಿಗೆ ಕತ್ತಲೆಯಲ್ಲಿ ಪ್ರತಿಯೊಂದು ಆಕೃತಿಯೂ ಸಹ ದೆವ್ವದಂತೆ ಭಾಸವಾಗುತ್ತದೆ. ಒಂದು ವೇಳೆ ನಿಜವಾಗಿಯೂ ದೆವ್ವ, ಪಿಶಾಚಿ ಕಂಡರಂತೂ ಹೃದಯದ ಬಡಿತ ನಿಂತು ಹೋಗುವುದು ಗ್ಯಾರಂಟಿ!

ಪಾಶ್ಚಾತ್ಯರಲ್ಲಿ ಅತ್ಯಂತ ಜನಪ್ರಿಯವಾದ ಹಾಲೊವೀನ್ ಆಚರಣೆ ಕೂಡ ಇದೇ ಮಾದರಿಯಲ್ಲಿ ನಡೆಯುತ್ತದೆ. ಇಲ್ಲಿ ಪಾಲ್ಗೊಳ್ಳುವ ಎಲ್ಲರೂ ಬಗೆ ಬಗೆ ವಿನ್ಯಾಸದಲ್ಲಿ ರೂಪುಗೊಂಡ ದೆವ್ವದ ಮುಖವಾಡ ತೊಟ್ಟು ದೆವ್ವ, ಪಿಶಾಚಿಗಳೇ ಕಣ್ಣ ಮುಂದೆ ಬಂದಿವೆ ಎಂಬಂತಹ ಭ್ರಾಂತಿ ಮೂಡಿಸುತ್ತಾರೆ. ವಾಸ್ತವದಲ್ಲಿ ಇದೊಂದು ಮೋಜಿನ ಕೂಟ. ಇಲ್ಲಿ ಭಾಗವಹಿಸುವವರೆಲ್ಲರೂ ಪರಸ್ಪರ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ಹೊಸದಾಗಿ ಈ ಆಚರಣೆಯಲ್ಲಿ ಪಾಲ್ಗೊಂಡವರಿಗೆ  ಮಾತ್ರ ದೊಡ್ಡದೊಂದು ಆಪತ್ತಿನಿಂದ ಪಾರಾದೆ ಎಂಬ ಭಾವನೆ ಬರುತ್ತದೆ.

ವಿಶ್ವದಾದ್ಯಂತ ಪ್ರತಿ ವರ್ಷ ಅ. 31ರಂದು ಹಾಲೊವೀನ್ ದಿನ ಆಚರಿಸಲಾಗುತ್ತದೆ. ನಮ್ಮಲ್ಲಿನ ಹೋಳಿಯಂತೆ ಅ್ಲ್ಲಲೆಲ್ಲ ಇದೊಂದು ದೊಡ್ಡ ಉತ್ಸವ. ಹಾಲೊವೀನ್ ಆಚರಣೆಯ ವೈಶಿಷ್ಟ್ಯವೇ ಇದಕ್ಕೆ ಇಷ್ಟೊಂದು ಜನಪ್ರಿಯತೆ ತಂದುಕೊಟ್ಟಿದೆ. ಅಂದಹಾಗೆ, ಈ ಆಚರಣೆ ಹಿಂದೆ ಒಂದು ರೋಚಕ ಇತಿಹಾಸ ಕೂಡ ಇದೆ.

ಸ್ಕಾಟ್‌ಲ್ಯಾಂಡ್, ಐರ‌್ಲೆಂಡ್, ವೇಲ್ಸ್‌ನಲ್ಲಿ ವಾಸವಿದ್ದ, ಕೆಲ್ಟ್ ಭಾಷೆ ಮಾತನಾಡುವ ಬುಡಕಟ್ಟು ಜನರು ಸೌನ್ ಹಬ್ಬವನ್ನು ಚಳಿಗಾಲದ ಪ್ರಾರಂಭ ಸೂಚಕವಾಗಿ ಆಚರಿಸುತ್ತಾರೆ. ಈ ದಿನದಂದು ಅವರು ಪಂಜು ಹಿಡಿದು ಅಥವಾ ಮಂದ ಬೆಳಕು ಸೂಸುವ ಲಾಟೀನು ಹಿಡಿದು, ಭೀತಿ ಹುಟ್ಟಿಸುವ ಭೂತದ ವೇಷ ತೊಟ್ಟು ಹಾಡು, ಕುಣಿತ, ಮನರಂಜನೆ ಮೊದಲಾದವುಗಳಲ್ಲಿ ತೊಡಗುತ್ತಾರೆ. ಈ ಆಚರಣೆಯೇ ಮುಂದೆ ಹಾಲೊವೀನ್ ಆಚರಣೆ ಎಂಬ ಹೆಸರು ಪಡೆದುಕೊಂಡಿತು.

8ನೇ ಶತಮಾನದಲ್ಲಿದ್ದ ಫೋಪ್ 3ನೇ ಗ್ರೇಗರಿ ಅವರು ಸತ್ತು ಸ್ವರ್ಗದಲ್ಲಿರುವ ಸಂತರು ಹಾಗೂ ಹುತಾತ್ಮರನ್ನು ಸ್ಮರಿಸುವ ಸಲುವಾಗಿ ಈ ಆಚರಣೆಯನ್ನು ಕೈಗೊಳ್ಳುವಂತೆ ಸೂಚಿಸಿದರಂತೆ. ಒಟ್ಟಾರೆ ಇದೊಂದು ಸಂತರನ್ನು ನೆನೆಯುವ ದಿನ, ಧಾರ್ಮಿಕ ನಂಬಿಕೆಯುಳ್ಳ ಆಚರಣೆ. 

ಕವಿದ ಕತ್ತಲಿನ ನಡುವೆ ದೆವ್ವದ ವೇಷತೊಟ್ಟು ಮುಖದ ಬಳಿ ಲಾಟೀನು, ಕೊಳ್ಳಿ ಹಿಡಿದುಕೊಂಡು ದೆವ್ವಗಳು ಬಂದು ಕಾಡುವ ರೀತಿಯಲ್ಲಿ ವರ್ತಿಸುತ್ತಾ ಮತ್ತೊಬ್ಬರನ್ನು ಕೆಣಕುತ್ತಾ ಅವರಲ್ಲಿ ಭಯವನ್ನು ಹುಟ್ಟಿಸುವುದು, ಇದರ ಜತೆಗೆ ಭೀತಿ ಹುಟ್ಟಿಸುವಂತಹ ದೆವ್ವದ ಕಥೆಗಳನ್ನು ಹೇಳುವುದು ಮತ್ತು ಮನಸ್ಸಿನ ಜಂಘಾಬಲವನ್ನು ಉಡುಗಿಸುವ ಭಯಾನಕ ಭೂತದ ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುವುದು ಹಾಲೊವೀನ್ ಆಚರಣೆಯ ಒಂದು ಭಾಗ.

ಕೆಲ್ಟ್ ಭಾಷಿಕರಿಗೆ ನವೆಂಬರ್ 1 ಹೊಸ ವರ್ಷದ ದಿನ. ಬೇಸಿಗೆ ಮುಕ್ತಾಯಗೊಂಡು ಚಳಿಗಾಲ ಪ್ರಾರಂಭಗೊಳ್ಳುವ ಹಿಂದಿನ (ಅ.31) ದಿನದಂದು ಅವರು ಹಾಲೊವೀನ್ ಆಚರಣೆ ಮಾಡುತ್ತಾರೆ. ಈ ದಿನದಂದು ಸತ್ತವರು ಪ್ರೇತಾತ್ಮಗಳ ರೂಪದಲ್ಲಿ ಮತ್ತೆ ಭೂಮಿಗೆ ಬರುತ್ತಾರೆ ಎಂಬ ನಂಬಿಕೆಯೂ ಅವರಲ್ಲಿದೆ. ಹುತಾತ್ಮರು ಹಾಗೂ ರೋಮನ್ನರ ಪುರಾಣ ಫಲ ದೇವತೆಯನ್ನು ನೆನೆಯುವ ಸಲುವಾಗಿ ಸಹ ಈ ಆಚರಣೆ ಮಾಡಲಾಗುತ್ತದೆ.

ಟ್ರಿಕ್ ಆರ್ ಟ್ರೀಟಿಂಗ್ ಹಾಲೊವೀನ್‌ನ ಪ್ರಮುಖ ಆಚರಣೆಯಲ್ಲಿ ಒಂದು. ಇಲ್ಲಿ ಮಕ್ಕಳು ದೆವ್ವದ ವೇಷದ ತೊಟ್ಟು ಮನೆ ಮನೆಗೆ ಹೋಗಿ ತಮಗೆ ಇಷ್ಟವೆನಿಸುವ ವಸ್ತುಗಳನ್ನು ಕೇಳಿ ಪಡೆದುಕೊಳ್ಳುತ್ತಾರೆ. ಅವರು ಮನೆ ಮನೆಗೆ ಹೋಗಿ ಟ್ರಿಕ್ ಆರ್ ಟ್ರೀಟ್ ಎಂದು ಪ್ರಶ್ನೆ ಕೇಳುತ್ತಾರೆ. ಟ್ರಿಕ್ ಎಂದರೇ ಮನೆಯವರು ತಮಗೆ ಬೇಕಾದ್ದನ್ನು ನೀಡಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ ಎಂದರ್ಥ. ಟ್ರೀಟ್ ಎಂದರೇ ತಮಗೆ ಬೇಕಾದ್ದನ್ನು ಅವರು ನೀಡಲು ಒಪ್ಪಿಕೊಂಡಿದ್ದಾರೆ ಎಂದರ್ಥ. ಈ ಸಂದರ್ಭದಲ್ಲಿ ಮಕ್ಕಳು ಹಾಡು ಹೇಳುವುದು, ದೆವ್ವದ ಕಥೆಗಳನ್ನು ಹೇಳುತ್ತಾ ತಮಗೆ ಬೇಕಾದುದುನ್ನು ಪಡೆದುಕೊಳ್ಳುತ್ತಾರೆ.

ಅಮೆರಿಕದಲ್ಲಿ ನಡೆಯುವ ಹಾಲೊವೀನ್ ಆಚರಣೆಯಲ್ಲಿ ಸಾಂಪ್ರದಾಯಿಕ ಆಚರಣೆ ಜತೆಗೆ ಸ್ಕಾಚ್ ಪಾರ್ಟಿ, ಬರ್ನ್ಸ್ ಕವಿಯ ಪದ್ಯದ ಝಲಕ್, ಫ್ಯಾಷನ್ ಎಲ್ಲವೂ ಇರುತ್ತದೆ.

ಹಾಲೊವೀನ್‌ಗೆ ಬೆಂಗಳೂರು ಸಹ ಅಣಿಗೊಳ್ಳುತ್ತಿದೆ. ಆಚರಣೆಗೆ ಬೇಕಾದ ಎಲ್ಲ ವಸ್ತುಗಳನ್ನು ಸಿದ್ಧಮಾಡಿ ಇಟ್ಟುಕೊಳ್ಳಲಾಗಿದೆ. ಕಾಸ್ಟೂಮ್ಸ, ಕುಂಬಳಕಾಯಿಯಿಂದ ತಯಾರಿಸಿದ ಲಾಟೀನು ಮೊದಲಾದ ಪರಿಕರಗಳೆಲ್ಲವೂ ಅಣಿಗೊಂಡಿವೆ. ಅನೇಕ ಹೋಟೆಲ್, ಶಾಲೆಗಳು ಇದಕ್ಕಾಗಿ ತಯಾರಾಗಿವೆ. ಇನ್ನೇನಿದ್ದರೂ ವೈಶಿಷ್ಟತೆಯುಳ್ಳ ಹಾಲೊವೀನ್ ಆಚರಣೆ ಮಾತ್ರ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT