ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂರಿ ಭೋಜನಕ್ಕೆ ಅರ್ಧ ಕೋಟಿ ಬಜೆಟ್

Last Updated 9 ಸೆಪ್ಟೆಂಬರ್ 2011, 11:10 IST
ಅಕ್ಷರ ಗಾತ್ರ

ಗಂಗಾವತಿ: ಮುಂದಿನ ನವೆಂಬರ್‌ನಲ್ಲಿ ನಗರದಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಉತ್ತರ ಕರ್ನಾಟಕ ವಿಶೇಷತೆಯ ಭೋಜನ ವ್ಯವಸ್ಥೆ ಮಾಡಲು ಬರೋಬ್ಬರಿ ಅರ್ಧ ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆ ಸಿದ್ದವಾಗಿದೆ.

ಶುಕ್ರವಾರ ನಗರದಲ್ಲಿರುವ ಸಮ್ಮೇಳನದ ಸ್ವಾಗತ ಕಚೇರಿಯಲ್ಲಿ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪರಣ್ಣ ಮುನವಳ್ಳಿ, ಆಹಾರ ಸಮಿತಿ ಅಧ್ಯಕ್ಷ ಉದ್ಯಮಿ, ಕೆ. ಕಾಳಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ಸಮ್ಮೇಳನಕ್ಕೆ ಆಗಮಿಸುವ ರಾಜ್ಯದ ನಾನಾ ಜಿಲ್ಲೆಯ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಸ್ವಾಧಿಷ್ಟ ಭೋಜನ ಏರ್ಪಾಡು ಮಾಡಲು ತೀರ್ಮಾನ ಕೈಗೊಂಡಿದ್ದು, ಅದಕ್ಕಾಗಿ ಅಂದಾಜು ಒಟ್ಟು ರೂ, 50 ಲಕ್ಷ ಮೊತ್ತದ ಅಗತ್ಯ ಇದೆ ಎಂದು ಶೇಖರಗೌಡ ಮಾಲಿ ಪಾಟೀಲ್ ಸಭೆಗೆ ವಿವರಿಸಿದರು.

ಅಗತ್ಯವಾಗುವ ಭಾರಿ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣಕ್ಕೆ ಯಾವ ವ್ಯವಸ್ಥೆ ಮಾಡಬೇಕು ಎಂಬುವುದರ ಬಗ್ಗೆ ಕೆಲ ಕಾಲ ಚರ್ಚೆ ನಡೆಯಿತು. ಮುಕ್ತ ಮನಸ್ಸಿನಿಂದ ಎಲ್ಲ ವ್ಯವಹಾರಸ್ಥರು ಸಹಾಯ ಮಾಡಬೇಕೆಂದು ಶಾಸಕ ಪರಣ್ಣ ಮನವಿ ಮಾಡಿದರು.

ನಿರೀಕ್ಷಿತ ಭೋಜನಾ ವೆಚ್ಚ ಸುಮಾರು 50 ಲಕ್ಷ ಬಜೆಟ್ ಮೀರಿದರೆ, ಮಿಕ್ಕ ಹಣವನ್ನು ಗಂಗಾವತಿ ಕ್ಷೇತ್ರದ ಶಾಸಕರು ಭರಿಸುವ ಭರವಸೆ ನೀಡಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಟೆ ಬಸವರಾಜ ಹೇಳಿದರು.

ಗಂಗಾವತಿ ನಗರ, ಕಾರಟಗಿ, ಕನಕಗಿರಿ, ಕೊಪ್ಪಳ ಕುಷ್ಟಗಿ, ಯಲಬುರ್ಗಾ ತಾಲ್ಲೂಕಿನ ಚುನಾಯಿತ ಹಾಲಿ-ಮಾಜಿ ಪ್ರತಿನಿಧಿಗಳ ನೆರವು ಪಡೆಯಬೇಕೆಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು. ಉದ್ಯಮಿ, ವರ್ತಕರು, ಗುತ್ತಿಗೆದಾರರಿಂದಲೂ ಹಣ ಪಡೆಯುವಂತೆ ಸಲಹೆ ವ್ಯಕ್ತವಾದವು. 

ಸೆ. 15ಕ್ಕೆ ಅಂತಿಮ ಸಭೆ: ಹಣಕಾಸಿನ ವ್ಯವಸ್ಥೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸೆ. 15ರಂದು ಮತ್ತೊಂದು ಕೊನೆಯ ಸುತ್ತಿನ ಸಭೆ ಕರೆಯಲಾಗಿದೆ. ಅಂದು ಯಾವ ವ್ಯಕ್ತಿ, ಉದ್ಯಮಿ, ಸಂಘ-ಸಂಸ್ಥೆಗಳು ಎಷ್ಟು ದೇಣಿಗೆ ನೀಡಲಿದ್ದಾರೆ ಎಂದು ಬಸವರಾಜ ಕೋಟೆ ತಿಳಿಸಿದರು.
 
ಈ ಸಂದರ್ಭದಲ್ಲಿ ಅಶೋಕಸ್ವಾಮಿ ಹೇರೂರು, ಎಸ್.ಬಿ. ಗೊಂಡಬಾಳ, ಎನ್. ಸೂರಿಬಾಬು, ಕೆ. ಸಣ್ಣ ಸೂಗಪ್ಪ, ಎಸ್. ವಿರುಪಾಕ್ಷಪ್ಪ. ರಾಜಶೇಖರ ಪಾಟೀಲ್, ಎನ್.ಆರ್. ಶ್ರೀನಿವಾಸ, ಎಸ್. ಸುರೇಶ, ಪದ್ಮಾ ವೀರಣ್ಣ, ಗುರುಪಾದಪ್ಪ ಮತ್ತಿತರ ಸುಮಾರು 150ಕ್ಕೂ ಹೆಚ್ಚು ವರ್ತಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT