ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ; ಕೇಂದ್ರ-ರಾಜ್ಯ ಹೋಲಿಕೆ ಸಲ್ಲ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸುಳ್ಯ: ಕೇಂದ್ರದ ಯಪಿಎ ಸರ್ಕಾರದ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಗೂ, ರಾಜ್ಯ ಸರ್ಕಾರದ ಸಚಿವರ ವಿರುದ್ಧದ ಆರೋಪಗಳಿಗೂ ಬಹಳ ವ್ಯತ್ಯಾಸವಿದೆ. ಎರಡನ್ನೂ ಹೋಲಿಸಲಾಗದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಇಲ್ಲಿ ಪ್ರತಿಪಾದಿಸಿದರು.

ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಇಲ್ಲಿನ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಿತವಾಗಿ ಬಿಜೆಪಿ ಮುಖಂಡರ ವಿರುದ್ಧ ಆರೋಪ ಹೊರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇವೆಲ್ಲವೂ ಖಾಸಗಿ ವ್ಯಕ್ತಿಗಳು ಸೃಷ್ಟಿಸುತ್ತಿರುವ ದೂರುಗಳು. ಕೇಂದ್ರದ ಯುಪಿಎ ಸರ್ಕಾರದಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದಿದ್ದು ಖಾಸಗಿ ವ್ಯಕ್ತಿಗಳಲ್ಲ, ಸಂವಿಧಾನಾತ್ಮಕ ಸಂಸ್ಥೆಗಳು.

ಈ ಸಂಸ್ಥೆಗಳೇ ತನಿಖೆ ನಡೆಸಿದಾಗ 2ಜಿ ತರಂಗಾಂತರ, ಆದರ್ಶ ಸೊಸೈಟಿ ಪ್ರಕರಣ ಸೇರಿದಂತೆ ಹಲವು ಹಗರಣ ಬಯಲಿಗೆ ಬಂದವು ಎಂದು ಅವರು ಕೇಂದ್ರ ಮತ್ತು ರಾಜ್ಯದ ಪರಿಸ್ಥಿತಿಯ ತುಲನೆ ಮಾಡಿದರು.

ರಾಜಕಾರಣ ಎಂದರೆ ಸ್ವಜನ ಪಕ್ಷಪಾತ ಮಾಡುವುದಲ್ಲ, ಖಜಾನೆ ಲೂಟಿ ಮಾಡುವುದೂ ಅಲ್ಲ ಎಂಬ ಭಾವನೆ ಮೂಡಬೇಕಿದೆ. ವ್ಯವಸ್ಥೆ ಬದಲಾಗಬೇಕಾದರೆ ಮುಜುಗರ ಬದಿಗಿಟ್ಟು ಕೆಲಸ ಮಾಡಬೇಕಾಗಿದೆ. ಕಳೆದ ಎರಡೂವರೆ ತಿಂಗಳಿನಿಂದ ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸಗಳ ಜತೆಗೇ ಅತಿವೃಷ್ಟಿ-ಬರದಿಂದ ಎದುರಾಗಿರುವ ಸಮಸ್ಯೆಗಳತ್ತಲೂ ಗಮನ ಹರಿಸಿ ಪರಿಹರಿಸಬೇಕಾಗಿದೆ ಎಂದರು.

ಪುಸ್ತಕವಿರಲಿ-ಹಾರ ಬೇಡ: ಸಭೆ ಆರಂಭವಾಗುತ್ತಿದ್ದಂತೆಯೇ ಡಿ.ವಿ.ಸದಾನಂದ ಗೌಡ ಅವರಿಗೆ ಪಕ್ಷದ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ~ಪ್ರತಿ ಬಾರಿ ಬಂದಾಗಲೂ ಹಾರ ಹಾಕುವುದು ಬೇಡ. ಅದರ ಬದಲು ಪುಸ್ತಕ ಕೊಡುವ ಪರಿಪಾಠ ಬೆಳೆಸಿಕೊಳ್ಳಿ~ ಎಂದು ಕಿವಿಮಾತು ಹೇಳಿದರು.

ಎಬಿವಿಪಿ ಪ್ರತಿಭಟನೆ: ಇದೇ ವೇಳೆ ಮುಖ್ಯಮಂತ್ರಿಗಳು ತಮ್ಮವರಿಂದಲೇ ಪ್ರತಿಭಟನೆ ಎದುರಿಸಬೇಕಾಯಿತು. ಸಭೆ ಮುಗಿಯುತ್ತಿದ್ದಂತೆ ಧಾವಿಸಿದ ಎಬಿವಿಪಿ ಕಾರ್ಯಕರ್ತರು, ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ಅವರನ್ನು ತಕ್ಷಣ ವರ್ಗ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

`24/7 ಕಂಪ್ಲೇಟ್ ಸೆಲ್~
ಇದಕ್ಕೂ ಮುನ್ನ ಸುಳ್ಯದ ಖಾಸಗಿ ಶಾಲೆ ಅಂಗಳದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿ ಸಮಸ್ಯೆಗಳೇನಾದರೂ ಇದ್ದರೆ ಸಾರ್ವಜನಿಕರು ದಿನದ ಯಾವುದೇ ಸಮಯದಲ್ಲಿ ದೂರು ದಾಖಲಿಸಬಹುದು. ಇದಕ್ಕಾಗಿಯೇ ~24/7 ದೂರು ಕೇಂದ್ರ~ ನವೆಂಬರ್ 1ರಂದು ಆರಂಭವಾಗಲಿದೆ ಎಂದರು.

ನಾಗರಿಕ ಸನ್ನದು, 15 ದಿನಗಳಲ್ಲಿ ಕಡತ ವಿಲೇವಾರಿ ವ್ಯವಸ್ಥೆ ಬಗ್ಗೆ ಇದೇ 28ರಂದು ಸಚಿವ ಸಂಪುಟದ ಸಭೆ ಅನುಮೋದನೆ ಪಡೆಯಲಾಗುವುದು. ಈಗಾಗಲೇ ಮಂಡ್ಯ ಹಾಗೂ ಶಿವಮೊಗ್ಗದ ಜಿಲ್ಲಾಧಿಕಾರಿಗಳೇ ಬಹಳ ಉತ್ಸಾಹದಿಂದ ಈ ವ್ಯವಸ್ಥೆಯನ್ನು ತಮ್ಮ ಕಚೇರಿಯಲ್ಲಿ ಜಾರಿಗೊಳಿಸಿದ್ದಾರೆ. ಪಾರದರ್ಶಕ ಆಡಳಿತಕ್ಕೆ ಇದು ಅತ್ಯಗತ್ಯ ಎಂದು ಹೇಳಿದರು.

ಸೋಮವಾರದಿಂದ ವೆಬ್‌ಸೈಟ್: ಗೃಹ ಕಚೇರಿ ಕೃಷ್ಣಾದಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಅಳವಡಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ. ಮುಖ್ಯಮಂತ್ರಿಗಳ ವೆಬ್‌ಸೈಟ್ ಸಹ ಆರಂಭಗೊಳ್ಳಲಿದ್ದು, ಸೋಮವಾರದಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಸಿಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT