ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ದೃಷ್ಟಿಗೆ ಮಾರಕ-ದೃಷ್ಟಿಮಾಂದ್ಯ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ನ ಪರಿಚಯದ ವೈದ್ಯ ದಂಪತಿಗಳು 6ನೇ ತರಗತಿಯಲಿರುವ ತಮ್ಮ ಮಗ ಪ್ರದೀಪನನ್ನು ಕಣ್ಣು ಪರೀಕ್ಷೆಗೆ ನನ್ನ ಕ್ಲಿನಿಕ್‌ಗೆ ಕರೆ ತಂದಿದ್ದರು. ಶಾಲೆಯಲ್ಲಿ ನೇತ್ರ ಸಹಾಯಕರು ಕಣ್ಣು ಪರೀಕ್ಷಿಸಿ, ಒಂದು ಕಣ್ಣಿನಲ್ಲಿ ಸ್ವಲ್ಪ ತೊಂದರೆಯಿದೆಯೆಂದು ನನ್ನಲ್ಲಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದರು. ಪ್ರದೀಪನ ದೃಷ್ಟಿ ಪರೀಕ್ಷಿಸಿದಾಗ ಬಲಗಣ್ಣಿನಲ್ಲಿ ದೃಷ್ಟಿ ಸರಿಯಿತ್ತು.

ಎಡಗಣ್ಣಿನಲ್ಲಿ 40% ದೃಷ್ಟಿ ಕಡಿಮೆಯಿತ್ತು. ಅದರ ಕಾರಣದ ಬಗೆಗೆ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಗೊತ್ತಾದ ಅಂಶವೆಂದರೆ ಆತನ ಎಡಗಣ್ಣಿನಲ್ಲಿ ಅಸಮದೃಷ್ಟಿದೋಷವಿತ್ತು.

ಅಂದರೆ ಇದರಲ್ಲಿ ಎರಡೂ ಕಣ್ಣಿನಲ್ಲಿ ದೃಷ್ಟಿಯ ಸಮಸ್ಯೆ ಇರುವುದಿಲ್ಲ. ಬೇರೆ ಬೇರೆ ಕಣ್ಣುಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಿದಾಗ ಮಾತ್ರ ಒಂದೇ ಕಣ್ಣಿನಲ್ಲಿರುವ ದೃಷ್ಟಿದೋಷದ ಸಮಸ್ಯೆ ಪತ್ತೆ ಹಚ್ಚಬಹುದು. ಹಾಗೆ ಸರಿಯಾಗಿ ಪತ್ತೆಯಾದಾಗ ಸೂಕ್ತ ಕನ್ನಡಕದಿಂದ ಅದನ್ನು ನಿವಾರಿಸಬಹುದು.

ಪ್ರದೀಪನಿಗೆ ಆ ಹಂತದಲ್ಲಿ ಚಿಕಿತ್ಸೆ ಮಾಡದಿದ್ದರೆ ಆತನ ಎಡಗಣ್ಣು `ದೃಷ್ಟಿಮಾಂದ್ಯ~ (amblyopia)  ಎಂಬ ಅಪಾಯಕಾರಿ ಸ್ಥಿತಿಗೆ ಮುಂದುವರಿಯುತ್ತಿತ್ತು. ಅಂದರೆ ಇದರಲ್ಲಿ ಕಡಿಮೆ ದೃಷ್ಟಿಯಿರುವ ಎಡಗಣ್ಣು ಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ ನಿಖರವಾಗಿ ವಸ್ತುವನ್ನು ಪತ್ತೆಹಚ್ಚುವ ಗುಣವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಮಾಡುವುದರಿಂದ ಇದನ್ನು ಬಹಳಷ್ಟು ಸರಿಪಡಿಸಬಹುದು ಎಂಬುದು ಸಮಾಧಾನಕರ ಅಂಶ.

`ದೃಷ್ಟಿಮಾಂದ್ಯ~ (amblyopia) ಮತ್ತು `ಅಂಧತ್ವ~ ಅಥವಾ `ಕುರುಡುತನ~ (blindness) ಈ ಎರಡಕ್ಕೂ ಬಹಳ ವ್ಯತ್ಯಾಸವಿದೆ. ದೃಷ್ಟಿಮಾಂದ್ಯದಲ್ಲಿ ದೃಷ್ಟಿ ಕಡಿಮೆ ಆಗಲು ಕಣ್ಣಿನ ಅಂಗಾಂಶಗಳಲ್ಲಿ ಯಾವ ಕಾರಣವೂ ಇರುವುದಿಲ್ಲ. ಆದರೆ ಅಂಧತ್ವ ಉಂಟಾಗಲು ಅಂತಹ ಕಾರಣಗಳು ಇದ್ದೇ ಇರುತ್ತವೆ. ಉದಾಹರಣೆಗೆ ಕಣ್ಣಿನ ಪೊರೆ, ಗ್ಲೊಕೊಮಾ, ಕಣ್ಣಿನ ಪಾರದರ್ಶಕ ಪಟಲ (ಕಪ್ಪುಗುಡ್ಡೆ) ವಿವಿಧ ಕಾಯಿಲೆಗೆ ಒಳಗಾಗುವುದು, ಅಕ್ಷಿಪಟಲದ ಕಾಯಿಲೆಗಳು ಇತ್ಯಾದಿ.

ನಮಗೆ ದೃಷ್ಟಿಯ ಜ್ಞಾನ ಬರಲು ಕಣ್ಣು ಮತ್ತು ಮೆದುಳು ಒಟ್ಟಾಗಿ ಕೆಲಸ ಮಾಡುತ್ತವೆ. ಬೆಳಕಿನ ಕಿರಣಗಳು ಕಣ್ಣಿನ ಒಳ ಪ್ರವೇಶಿಸಿ ಅಲ್ಲಿ ನರಸಂವೇದನೆಯ ರೀತಿಯಲ್ಲಿ ಬದಲಾಗಿ ಕಣ್ಣಿನ ದೃಷ್ಟಿ ನರ-ಆಪ್ಟಿಕ್ ನರದ ಮೂಲಕ ಮೆದುಳಿಗೆ ಮಾಹಿತಿ ಕೊಡುತ್ತದೆ. ಮೆದುಳು ಮತ್ತು ಕಣ್ಣು ಸಂಯೋಜಿತವಾಗಿ  ಕೆಲಸ ಮಾಡದೆ ಇದ್ದಾಗ ಅಂತಹ ಒಂದು ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾಗುತ್ತದೆ. ಕಣ್ಣಿನಲ್ಲಿ ಯಾವ ಶಾರೀರಿಕ ಊನವಿರುವುದಿಲ್ಲ. ಆದರೆ ಮೆದುಳು ಮತ್ತೊಂದು ಕಣ್ಣನ್ನು ಹೆಚ್ಚು ಪಕ್ಷಪಾತ ಮಾಡುತ್ತಿರುವುದರಿಂದ ಈ ಕಣ್ಣಿನ ದೃಷ್ಟಿ ಮಂದವಾಗುತ್ತದೆ. ದೃಷ್ಟಿಮಾಂದ್ಯ ಒಂದೇ ಕಣ್ಣಿನಲ್ಲಿ ಅಥವಾ ಕೆಲವೊಮ್ಮೆ ಎರಡೂ ಕಣ್ಣಿನಲ್ಲಿಯೂ ಕಾಣಿಸಿಕೊಳ್ಳಬಹುದು.

ಹೆಚ್ಚಿನ ಸಂದರ್ಭಗಳಲ್ಲಿ ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. 100 ಮಕ್ಕಳಲ್ಲಿ 2 ರಿಂದ 3 ಮಕ್ಕಳಲ್ಲಿ ಕಂಡುಬರುತ್ತದೆ. ಈ ಹಂತದಲ್ಲಿ ಸರಿಯಾಗಿ ಚಿಕಿತ್ಸೆಯಾಗದಿದ್ದರೆ ಈ ದೃಷ್ಟಿಮಾಂದ್ಯ ಮಗು ದೊಡ್ಡದಾದ ಮೇಲೂ ಉಳಿದುಕೊಳ್ಳುತ್ತದೆ. ಆಗ ಚಿಕಿತ್ಸೆ ಕಷ್ಟ.

ದೃಷ್ಟಿಮಾಂದ್ಯಕ್ಕೆ ಕಾರಣಗಳೇನು?
ಮುಖ್ಯವಾದ ಕಾರಣಗಳೆಂದರೆ: 1. ಎರಡು ಕಣ್ಣುಗಳಲ್ಲಿನ ದೃಷ್ಟಿದೋಷದ ವ್ಯತ್ಯಾಸಗಳು. 1. ದೃಷ್ಟಿದೋಷಗಳು. 3. ಮೆಳ್ಳೆಗಣ್ಣು ಅಥವಾ ಕಣ್ಣು ಓರೆಯಾಗಿರುವುದು. 4. ದೃಷ್ಟಿ ನಷ್ಟದಿಂದ ಉಂಟಾಗುವ ದೃಷ್ಟಿಮಾಂದ್ಯ.

ದೃಷ್ಟಿದೋಷದ ವ್ಯತ್ಯಾಸಗಳು: ಇಲ್ಲಿ ಒಂದು ಕಣ್ಣಿನಲ್ಲಿ ಯಾವ ದೃಷ್ಟಿದೋಷವೂ ಇರುವುದಿಲ್ಲ. ಮತ್ತೊಂದು ಕಣ್ಣಿನಲ್ಲಿ ದೂರದ ಅಥವಾ ಹತ್ತಿರದ ವಸ್ತು ಕಾಣುವುದಿಲ್ಲ ಎಂಬ ಸಮೀಪದೃಷ್ಟಿ ಅಥವಾ ದೂರದೃಷ್ಟಿ ದೋಷವಿರುತ್ತದೆ. ದೃಷ್ಟಿದೋಷವಿರುವ ಕಣ್ಣಿನಿಂದ ಅಕ್ಷಿಪಟಲದ ಮೇಲೆ ಅಸ್ಪಷ್ಟ ಬಿಂಬ ಮೂಡುವುದರಿಂದ ಮೆದುಳು ಸಹಿತ ಅಸ್ಪಷ್ಟ ಚಿತ್ರ ಮೂಡಿಸುತ್ತದೆ. ಕ್ರಮೇಣ ಮೆದುಳು ಸರಿ ಇರುವ ಕಣ್ಣಿನ ಸ್ಪಷ್ಟ ಬಿಂಬವನ್ನು ಪ್ರತಿಫಲಿಸಿ, ಮತ್ತೊಂದು ಅಸ್ಪಷ್ಟ ಬಿಂಬವನ್ನು ನಿರ್ಲಕ್ಷ್ಯ ಮಾಡುತ್ತಾ ಬರುತ್ತದೆ. ಈ ಹಂತದಲ್ಲಿ ಪೋಷಕರಿಗೆ ಅಥವಾ ಶಿಕ್ಷಕರಿಗೆ ಗೊತ್ತಾದರೆ ಮಗುವಿಗೆ ಚಿಕಿತ್ಸೆ ದೊರೆಯುತ್ತದೆ. ಇಲ್ಲದಿದ್ದರೆ ಮಗುವಿನ ಅಸ್ಪಷ್ಟ ಬಿಂಬ ಮೂಡಿಸುವ ದೃಷ್ಟಿದೋಷವಿರುವ ಕಣ್ಣು ದೃಷ್ಟಿಮಾಂದ್ಯಕ್ಕೆ ತಿರುಗಿ ಹಾಗೆಯೇ ಉಳಿದುಬಿಡುತ್ತದೆ.

ದೃಷ್ಟಿದೋಷ: ಎಷ್ಟೋ ಬಾರಿ ಮಗುವಿಗೆ ದೃಷ್ಟಿಯ ಸಮಸ್ಯೆ ಇದೆಯೆಂದು ಮಗುವಿಗೆ ಪಾಲಕರಿಗೆ, ಶಿಕ್ಷಕರಿಗೆ ಗೊತ್ತಾಗದೇ ಹಲವಾರು ವರ್ಷಗಳೇ ಕಳೆದುಹೋಗುತ್ತದೆ. ಇಂತಹ ಮಗು ದೂರದಲ್ಲಿರುವ ಶಾಲೆಯ ಬೋರ್ಡ್ ನೋಡುವಾಗ ಅಥವಾ ಟಿ.ವಿ. ನೋಡುವಾಗ ಕಣ್ಣನ್ನು ಕಿರಿದಾಗಿಸಿ ನೋಡಿ ಸುಧಾರಿಸಿಬಿಡುತ್ತದೆ. ಈ ಹಂತದಲ್ಲಿ ದೃಷ್ಟಿದೋಷ ಪತ್ತೆಯಾಗದೆ ಹೋದಾಗ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿಮಾಂದ್ಯ ಉಂಟಾಗುತ್ತದೆ. ಹಾಗಾಗಿ ಪ್ರಾಥಮಿಕ ಶಾಲೆಯ ಮಕ್ಕಳ ಕಣ್ಣು ಪರೀಕ್ಷಾ ಯೋಜನೆ ತುಂಬಾ ಮುಖ್ಯ.

ಮೆಳ್ಳೆಗಣ್ಣು: ಒಂದು ಕಣ್ಣು ಒಂದು ಕಡೆ, ಮತ್ತೊಂದು ಕಣ್ಣು ಬೇರೆ ಕಡೆ ನೋಡುವ ವ್ಯವಸ್ಥೆ ಇಂತಹವರಲ್ಲಿರುತ್ತದೆ. ಇದಕ್ಕೆ ನಾವು ಮೆಳ್ಳೆಗಣ್ಣು, ಕೋಸುಗಣ್ಣು (ಸ್ಕ್ವಿಂಟ್) ಎನ್ನುತ್ತೇವೆ. ಹೀಗಿದ್ದಾಗ ಮೆದುಳಿನಲ್ಲಿ ಎರಡು ಬೇರೆ ಬೇರೆ ರೀತಿಯ ಬಿಂಬಗಳೂ ಉಂಟಾಗುತ್ತವೆ.

ಎರಡನ್ನೂ ಒಂದೇ ಬಾರಿ ಕಾಣುವಂತೆ ಮಾಡಿದರೆ, ನಮಗೆ ಒಂದು ವಸ್ತುವಿರುವುದು ಎರಡಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ಇದ್ದುದರಲ್ಲಿ ಕಡಿಮೆ ದೃಷ್ಟಿ ಇರುವ ಕಣ್ಣಿನ ಬಿಂಬವನ್ನು ಮೆದುಳು ನಿರ್ಲಕ್ಷ್ಯ ಮಾಡುತ್ತಾ ಬರುತ್ತದೆ. ಪರಿಣಾಮ ಎಂದರೆ ಅಂತಹ ಕಣ್ಣು ದೃಷ್ಟಿಮಾಂದ್ಯ ಹೊಂದುತ್ತದೆ. ತುಂಬಾ ದೊಡ್ಡ ಪ್ರಮಾಣದ ಮೆಳ್ಳೆಗಣ್ಣು ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಮೆಳ್ಳೆಗಣ್ಣು ಗೊತ್ತಾಗುವುದು ತಡವಾಗುತ್ತದೆ. ಮತ್ತೆ ಕೆಲವೊಮ್ಮೆ ಗೊತ್ತಾಗುವುದೇ ಇಲ್ಲ. ಇಂತಹವರಲ್ಲಿ ಕಣ್ಣಿನ ವೈದ್ಯರು ವಿವಿಧ ಪರೀಕ್ಷೆಗಳನ್ನು ಮಾಡಿಯೇ ಮೆಳ್ಳೆಗಣ್ಣು ಕಂಡುಹಿಡಿಯಬೇಕಾಗುತ್ತದೆ.

ದೃಷ್ಟಿ ನಷ್ಟದಿಂದ ಉಂಟಾಗುವ ದೃಷ್ಟಿಮಾಂದ್ಯ: ಮಗು ಹುಟ್ಟುವಾಗ ಅಥವಾ ನಂತರದ ವರ್ಷಗಳಲ್ಲಿ ಒಂದು ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾಗುವಂತಹ ಕಾರಣವಿದ್ದು, ಮತ್ತೊಂದು ಕಣ್ಣು ಸರಿಯಿದ್ದಾಗ, ಮೊದಲಿನ ಕಣ್ಣಿನಲ್ಲಿ ದೃಷ್ಟಿಮಾಂದ್ಯ ಉಂಟಾಗುತ್ತದೆ. ಉದಾ:ಗೆ ಮಗು ಹುಟ್ಟುವಾಗ ಒಂದು ಕಣ್ಣಿನಲ್ಲಿ ಕಣ್ಣಿನಪೊರೆ (ಕ್ಯಾಟರ‌್ಯಾಕ್ಟ್) ಇದ್ದಾಗ ಅಥವಾ ಅದರ ಪಾರದರ್ಶಕ ಪಟಲ ಕಾರ್ನಿಯ ತೀವ್ರವಾಗಿ ಬಿಳಿಯದಾಗಿ ದೃಷ್ಟಿ ಕಡಿಮೆಯಾದಾಗ ಅಂತಹ ಕಣ್ಣು ಗಮನಾರ್ಹವಾದ ದೃಷ್ಟಿ ನಷ್ಟಕ್ಕೆ ಒಳಗಾಗುತ್ತದೆ. ಆಗ ಅಂತಹ ಕಣ್ಣಿನಿಂದ ಹೋಗಿ ಮೆದುಳಿನಲ್ಲಿ ಛಾಪಿಸುವ ಬಿಂಬಗಳು ಅಸ್ಪಷ್ಟವಾಗುತ್ತದೆ. ಕ್ರಮೇಣ ಆ ಕಣ್ಣು ದೃಷ್ಟಿಮಾಂದ್ಯ ಹೊಂದುತ್ತದೆ. ಹಾಗಾಗಿ ಇಂತಹ ತೊಂದರೆಯಿರುವ ಮಕ್ಕಳಿಗೆ ಆದಷ್ಟು ಬೇಗ ಚಿಕಿತ್ಸೆ ಮಾಡಿ ದೃಷ್ಟಿ ಕಡಿಮೆಯಾಗುವ ಅಂಶವನ್ನು ಶೀಘ್ರವಾಗಿ ನಿವಾರಿಸಿದರೆ ದೃಷ್ಟಿಮಾಂದ್ಯ ತಪ್ಪಿಸಬಹುದು.

ದೃಷ್ಟಿಮಾಂದ್ಯದ ಚಿಕಿತ್ಸೆ
ದೃಷ್ಟಿಮಾಂದ್ಯಕ್ಕೆ ಕಾರಣವಾಗುವ ಅಂಶಗಳಿದ್ದರೆ ಅವುಗಳನ್ನು ನಿವಾರಿಸುವುದು ಮತ್ತು ಕಡಿಮೆ ದೃಷ್ಟಿ ಇರುವ ಕಣ್ಣಿಗೆ ದೃಷ್ಟಿ ಹೆಚ್ಚಾಗುವಂತೆ ಮಾಡುವುದು ಇವೆರಡು ಚಿಕಿತ್ಸೆಯ ಮುಖ್ಯ ಉದ್ದೇಶಗಳು. ದೃಷ್ಟಿದೋಷ, ಮೆಳ್ಳೆಗಣ್ಣು, ಕಣ್ಣಿನಪೊರೆ, ಕಾರ್ನಿಯದ ಅಪಾರದರ್ಶಕತೆ ಇವುಗಳನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ಮಾಡಲು ಸಾಧ್ಯವಿದ್ದಾಗ ಅಂತಹ ಚಿಕಿತ್ಸೆಗಳನ್ನು ಮೊದಲು ಮಾಡಬೇಕು.

ಕಡಿಮೆ ದೃಷ್ಟಿ ಇರುವ ಕಣ್ಣಿನ ದೃಷ್ಟಿ ಹೆಚ್ಚಿಸಲು ಹೆಚ್ಚು ದೃಷ್ಟಿ ಇರುವ ಕಣ್ಣಿನ ದೃಷ್ಟಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬೇಕು. ಇದನ್ನು ಎರಡು ವಿಧಾನಗಳಿಂದ ಮಾಡಬಹುದು. ಅಟ್ರೊಪಿನ್ ಎಂಬ ಔಷಧವನ್ನು ದೃಷ್ಟಿ ಹೆಚ್ಚಿರುವ ಕಣ್ಣಿಗೆ ಹಾಕುವುದರಿಂದ, ಕಡಿಮೆ ದೃಷ್ಟಿ ಇರುವ ಕಣ್ಣು ಹೆಚ್ಚು ಉಪಯೋಗವಾಗುವಂತೆ ಮಾಡಬಹುದು. ಇನ್ನೊಂದು ರೀತಿಯ ಚಿಕಿತ್ಸೆಯಲ್ಲಿ ಜಾಸ್ತಿ ದೃಷ್ಟಿ ಇರುವ ಕಣ್ಣನ್ನು ತಾತ್ಕಾಲಿಕವಾಗಿ ನಿಯಮಿತವಾಗಿ ಸಣ್ಣ ಬ್ಯಾಂಡೇಜ್ ಇಟ್ಟು ಮುಚ್ಚುತ್ತೇವೆ. ದೃಷ್ಟಿಮಾಂದ್ಯದ ತೀವ್ರತೆಯನ್ನು ಅವಲಂಬಿಸಿ ಇದನ್ನು ದಿವಸದಲ್ಲಿ ಇಷ್ಟು ಗಂಟೆ, ವಾರದಲ್ಲಿ ಇಷ್ಟು ದಿವಸ ಎಂದು ನಿಗದಿಪಡಿಸಲಾಗುತ್ತದೆ. 

ಮುಖ್ಯವಾಗಿ ಮಗುವಿದ್ದಾಗಲೇ ದೃಷ್ಟಿಮಾಂದ್ಯದ ಇರವು ಗೊತ್ತಾದರೆ ಚಿಕಿತ್ಸೆ ಸುಲಭ, ನಷ್ಟ ಕಡಿಮೆ, ಚಿಕಿತ್ಸೆಯ ಅವಧಿ ಕಿರಿದು. ಮಗು ದೊಡ್ಡದಾದಂತೆ ಚಿಕಿತ್ಸೆ ಕಠಿಣ, ಆದರೂ 17 ವರ್ಷದವರೆಗೂ ಈ ರೀತಿಯ ವಿವಿಧ ದೃಷ್ಟಿಮಾಂದ್ಯವನ್ನು ಚಿಕಿತ್ಸೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT