ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ:ಸಿದ್ದರಾಮಯ್ಯ

Last Updated 19 ಡಿಸೆಂಬರ್ 2012, 8:41 IST
ಅಕ್ಷರ ಗಾತ್ರ

ಮೈಸೂರು: ಎಣಿಕೆಗೆ ಸಿಗದಷ್ಟು ಆಸ್ತಿ ಮಾಡಿದವರೆಲ್ಲ ಇಂದು ಜೈಲುವಾಸ ಅನುಭವಿಸುತ್ತಿದ್ದಾರೆ. ಆಸ್ತಿ, ಅಂತಸ್ತು ನಮ್ಮನ್ನು ಯಾವತ್ತೂ ಕಾಪಾಡುವುದಿಲ್ಲ. ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಉತ್ತಮ ಶಿಕ್ಷಣ ಕೊಡಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ಮಾಡಿದರು.

ವಿಜಯಲಕ್ಷ್ಮಿ ಆರ್.ಎಲ್. ಜಾಲಪ್ಪ ಎಜುಕೇಶನ್ ಫೌಂಡೇಷನ್ ವತಿಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ನಮ್ಮ ಹಿರಿಯರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮಾಡಿದ ತಪ್ಪಿನಿಂದ ದೇಶದಲ್ಲಿ ಇಂದು ಹಿಂದುಳಿದ ವರ್ಗಗಳ ಮೇಲೆ ಅನ್ಯಾಯ ವಿಪರೀತವಾ ಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ 20ರಷ್ಟು ಇರುವ ಮೇಲ್ವರ್ಗದವರೇ ನಿರಂತರವಾಗಿ ಅಧಿಕಾರ ಹಿಡಿಯುತ್ತಿದ್ದಾರೆ. ಶೇ 80ರಷ್ಟು ದೊಡ್ಡ ಪ್ರಮಾಣ ಹೊಂದಿರುವ ಹಿಂದುಳಿದ ವರ್ಗಗಳ ಕೈಗೆ ಅಧಿಕಾರ ಏಕೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದ ಅವರು, ನಮ್ಮಲ್ಲಿ ಸುಶಿಕ್ಷಿತರ ಕೊರತೆಯೇ ಇದಕ್ಕೆ ಕಾರಣ ಎಂದರು.

ಬಸವಣ್ಣನವರ ವಚನ ಬೋಧಿಸುವವರೇ ರಾಜ್ಯದಲ್ಲಿ ಈಗ ಜಾತಿಗಳನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ, ಹಿಂದುಳಿದ, ದಲಿತ ಹಾಗೂ ಶೋಷಿತ ವರ್ಗದ ವರನ್ನು ಒಂದುಗೂಡಿಸಲು ನಾನು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಆದರೂ ಸಾಧ್ಯವಾಗಿಲ್ಲ.

ನಮ್ಮಲ್ಲಿನ ಒಡಕುಗಳೇ ನಮ್ಮನ್ನು ಅಧಿಕಾರದಿಂದ ದೂರ ತಳ್ಳುತ್ತಿವೆ. ಈಗಲೂ ಕಾಲ ಮಿಂಚಿಲ್ಲ; ನಾವೆಲ್ಲ ಒಂದಾಗಿ ನಿಂತರೆ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಮಾತನಾಡಿ, ದೇವರಾಜ್ ಅರಸು ಅವರು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದ ಮೇಲೆ ಮೇಲ್ವರ್ಗದವರ ಆಸ್ತಿ ಹಂಚಿ ಹೋಯಿತು. ಆದರೆ, ಅವರೆಲ್ಲ ನಗರಗಳಿಗೆ ಸೇರಿ ಶಿಕ್ಷಣ ಪಡೆದರು. ಅದರ ಪರಿಣಾಮವೇ ಇಂದು ಕೂಡ ರಾಜ್ಯವನ್ನಾಳುತ್ತಿದ್ದಾರೆ. ಶಿಕ್ಷಣದ ಬಗ್ಗೆ ಕಾಳಜಿ ತೋರದ ಹಿಂದುಳಿದ ವರ್ಗಗಳು ದಯನೀಯ ಸ್ಥಿತಿಯಿಂದ ಮೇಲೇಳಲೇ ಇಲ್ಲ ಬೇಸರ ವ್ಯಕ್ತಪಡಿಸಿದರು.

ಯಾರೋ ದೊಡ್ಡ ನಾಯಕರು ಬಂದು ನಿಮ್ಮನ್ನು ಉದ್ದಾರ ಮಾಡುತ್ತಾರೆ ಎಂದು ಕಾದು ಕುಳಿತುಕೊ ಳ್ಳುವ ಕಾಲ ಈಗಿಲ್ಲ. ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ. ಉತ್ತಮ ಶಿಕ್ಷಣ ದಿಂದ ಮಾತ್ರ ಭವಿಷ್ಯ ಗಟ್ಟಿಯಾಗಲು ಸಾಧ್ಯ ಎಂದರು.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ಎಂ. ತಿಮ್ಮೇಗೌಡ, ಜಿಲ್ಲಾ ಅಧ್ಯಕ್ಷ ಎಂ.ಕೆ. ಪೋತರಾಜು, ದೇವರಾಜು ಅರಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಚ್.ನಾಗರಾಜ, ಮುಖಂಡರಾದ ಜೆ.ಪಿ. ತಿಮ್ಮೇ ಗೌಡ, ಹನುಮಂತರಾಜು,ಓಬಯ್ಯ,ಉದಯ, ರಾಜ ಶೇಖರ ಕದಂಬ, ಸರೋಜಮ್ಮ ಪಾಪೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT