ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ದೊರಕದ ದೈಹಿಕ ಶಿಕ್ಷಣ: ವಿಷಾದ

ಕೋಲಾರ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ 4ನೇ ಸಮ್ಮೇಳನ
Last Updated 13 ಡಿಸೆಂಬರ್ 2013, 8:36 IST
ಅಕ್ಷರ ಗಾತ್ರ

ಕೋಲಾರ:- ನಿಗದಿತ ಸಂಖ್ಯೆಯ ವಿದ್ಯಾರ್ಥಿ­ಗಳಿದ್ದರಷ್ಟೇ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಸೇವೆಯನ್ನು ನೀಡುವುದಾಗಿ ಹೇಳುವ ಸರ್ಕಾರದ ಶಿಕ್ಷಣ ನೀತಿಯಿಂದ ಸಾವಿರಾರು ಮಕ್ಕಳು ದೈಹಿಕ ಶಿಕ್ಷಣದ ಪಾಠಗಳಿಲ್ಲದೆ ವಂಚನೆಗೆ ಒಳಗಾಗುತ್ತಿ­ದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾ­ಯಣಸ್ವಾಮಿ ವಿಷಾದಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಆಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ದೈಹಿಕ ಶಿಕ್ಷಣ ಶಿಕ್ಷಕರ 4ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಶಾಲೆಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ನೀತಿ­ಯನ್ನು ಮಾರ್ಪಡಿಸ­ಬೇಕು ಎಂದು ಅವರು ಅಭಿಪ್ರಾಯಪಟ್ಟರು.

₨ 1.20 ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕೇವಲ ₨ 83.84 ಕೋಟಿ ಅನುದಾನ­ವನ್ನು ಮಾತ್ರ ಮೀಸಲಿಟ್ಟಿದೆ. ಸುಮಾರು 2 ಕೋಟಿಯಷ್ಟಿರುವ ಯುವಜನರಿಗೆ ಇಷ್ಟು ಅನುದಾನ ಸಾಕೇ? ಎಂದು ಪ್ರಶ್ನಿಸಿದ ಅವರು, ಕ್ರೀಡಾಕೂಟಗಳನ್ನು ಏರ್ಪಡಿಸಿದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು, ಇಲಾಖೆಯ ಅಧಿಕಾರಿಗಳು ದಾನಿಗಳ ಬಳಿ ಕೈಚಾಚುವ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾದರೆ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕೆಲವೇ ಮಕ್ಕಳಿರುವ ಶ್ರೀನಿವಾಸಪುರ ತಾಲ್ಲೂಕಿನ ಆರಿಕುಂಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಏಕೆಂದರೆ ಅಲ್ಲಿ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ ಎನ್ನುತ್ತದೆ ಸರ್ಕಾರ. ಕಡಿಮೆ ಸಂಖ್ಯೆಯ ಮಕ್ಕಳಿಗೆ ದೈಹಿಕ ಶಿಕ್ಷಣ ಬೇಡವೇ? ಸರ್ಕಾರ ಇನ್ನಾದರೂ ದ್ವಂದ್ವ ನೀತಿಯನ್ನು ಸಕಾರಾತ್ಮಕವಾಗಿ ಚಿಂತನೆ ಮಾಡಿ, ಮಕ್ಕಳ ಸಂಖ್ಯೆ ಎಷ್ಟೇ ಇರಲಿ, ಎಲ್ಲ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ 22 ತಾಲ್ಲೂಕುಗಳಲ್ಲಿ ಕ್ರೀಡಾಂಗಣಗಳೇ ಇಲ್ಲ. 56 ತಾಲ್ಲೂಕುಗಳಲ್ಲಿ ಈಗಷ್ಟೇ ಕ್ರೀಡಾಂಗಣ ನಿರ್ಮಾಣ ಕಾರ್ಯ ಶುರುವಾಗಿದೆ. 5 ಜಿಲ್ಲೆಗಳಲ್ಲಿ ಜಿಲ್ಲಾ ಕ್ರೀಡಾಂಗಣ ಸೌಕರ್ಯವೇ ಇಲ್ಲ. 10 ಕ್ರೀಡಾಂಗಣಗಳನ್ನು ಒತ್ತುವರಿ ಮಾಡಲಾಗಿದೆ. ಕ್ರೀಡಾ ಇಲಾಖೆ ಒಟ್ಟಾರೆ ನಿರ್ಲಕ್ಷ್ಯಕ್ಕೆ ಈಡಾಗಿದೆ ಎಂದರು.

ಬಡ್ತಿಗೆ ಮನವಿ: ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ, ಅವರಿಗೂ ಮುಖ್ಯಶಿಕ್ಷಕರಾಗುವ ಅವಕಾಶವನ್ನು ಪಡೆಯಲು ಅವಕಾಶ ಮಾಡಿ­ಕೊಡ­ಬೇಕು ಎಂದು ಸರ್ಕಾರವನ್ನು ಈಗಾಗಲೇ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ, ಸನ್ಮಾನ: ಇದೇ ವೇಳೆ ತಾಲ್ಲೂಕಿನ ಸೂಲೂರಿನ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಜಿ.ಎನ್.ಶ್ರೀನಿವಾಸ್ ಅವರ `ಭಾರತೀಯ ಆಟ ಖೋ-ಖೋ' ಕೃತಿಯನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.  ದೈಹಿಕ ಶಿಕ್ಷಣ ಶಿಕ್ಷಕರ ವಾರ್ಷಿಕ ಕ್ರಿಯಾ ಯೋಜನೆ ಕ್ಯಾಲೆಂಡರ್ ಅನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಲುವೇಲಮ್ಮ ಬಿಡುಗಡೆ ಮಾಡಿದರು.

ನಗರ ಸಂಚಾರ ನಿಯಂತ್ರಣ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಮೆಹಬೂಬ್ ಪಾಷ, ನಿವೃತ್ತ ವಿಷಯ ಪರೀಕ್ಷಕ ಕೆ.ಶ್ರೀನಿವಾಸಗೌಡ, ನಿವೃತ್ತ ಮುಖ್ಯ ಶಿಕ್ಷಕ ಸೋಮಣ್ಣ, ವೆಟರನ್ ಅಥ್ಲೆಟಿಕ್ ಕ್ರೀಡಾಪಟು ವಿ.ಮಾರಪ್ಪ ಅವರನ್ನು ಸನ್ಮಾನಿಸಲಾಯಿತು.  ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಎ.ಎಂ.ಲಕ್ಷ್ಮಿನಾರಾಯಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ.ಪದ್ಮನಾಭ, ಕ್ಷೇತ್ರ ಶಿಕ್ಷಣಾಧಿಕಾರಿ­ಗಳಾದ ಎಸ್.ವಿ.ಸುಬ್ರಹ್ಮಣ್ಯಂ, ಕೃಷ್ಣಮೂರ್ತಿ, ದೇವರಾಜ್, ರಾಘವೇಂದ್ರ, ಬಿ.ಜಗದೀಶ.  ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ, ಶಿಕ್ಷಣಾಧಿಕಾರಿ ಕೆ.ಎಂ.ಜಯ­ರಾಮ­ರೆಡ್ಡಿ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಶ್ರೀನಿವಾಸ್, ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಉದಯಕುಮಾರ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಅನಿಲಕುಮಾರ್, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಸಮನ್ವಯಾಧಿಕಾರಿ ಸಿದ್ದಗಂಗಯ್ಯ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಮಂಜುನಾಥ, ಎಂ.ಸುಬ್ರಮಣಿ, ಸಿ.ಆರ್.ಅಶೋಕ್, ಗುಡು­ಗುಂಜ­ಗುರ್ಕಿಯ ಭದ್ರಕಾಳಿ ಮಠದ ಪ್ರಕಾಶ್ ಸ್ವಾಮೀಜಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ವಿ.ರಾಮಚಂದ್ರಪ್ಪ, ಸಾಯಿ ಸ್ಪೋರ್ಟ್ಸ್‌ ಮಾಲೀಕ ನವೀನ್ ವೇದಿಕೆಯಲ್ಲಿದ್ದರು. 

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೌಡಪ್ಪ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ನೀಲಾ, ಕೆ.ವಿ.ವಿಜಯ ತಂಡದವರು ನಾಡಗೀತೆ ಹಾಡಿದರು.

ಇದೇ ವೇಳೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ನೆಲ್ಸನ್ ಮಂಡೇಲಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಕುಮಾರ್, ಸುವರ್ಣ ಅವರಿಗೆ  ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT