ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರಕ್ಕೆ ಪ್ರಚೋದನೆ: ದೂರು

Last Updated 10 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಯಾದಗಿರಿ: ಜೇವರ್ಗಿ ತಾಲ್ಲೂಕಿನ ಆಂದೋಲದ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದಿಸುವ ಪತ್ರವೊಂದು ಬಂದಿದ್ದು, ಈ ಕುರಿತು ಶ್ರೀಗಳು ಜೇವರ್ಗಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಿದ್ಧಲಿಂಗ ಸ್ವಾಮೀಜಿ, 2008 ರ ಫೆಬ್ರವರಿ 11 ರಂದು ಆಂದೋಲಾದ ಕರುಣೇಶ್ವರ ಮಠಕ್ಕೆ ಪತ್ರ ಬಂದಿದ್ದು, ಮೊರಟಗಿಯ ಜಮಾಅತೆ ಇಸ್ಲಾಮಿ ಹಿಂದ್‌ನ ಇಸ್ಲಾಮಿ ಶಾಲೆಯ ಶಿಕ್ಷಕ ಲಾಲ್ ಹುಸೇನ್ ಇಳಕಲ್ ಎಂಬುವವರ ಹೆಸರಿದೆ ಎಂದರು.

2008 ರಲ್ಲಿಯೇ ಈ ಪತ್ರ ಬಂದಿದ್ದು, ತಾವು ರಾಜ್ಯದ ಇತರೆಡೆ ಪ್ರವಾಸದಲ್ಲಿ ಇದ್ದುದರಿಂದ ಓದಲು ಆಗಿರಲಿಲ್ಲ. ನಂತರ ಮಠದ ದಾಖಲೆಗಳಲ್ಲಿ ಈ ಪತ್ರ ಅಡಗಿ ಹೋಗಿತ್ತು. ಇತ್ತೀಚೆಗೆ ಹಬ್ಬದ ಪ್ರಯುಕ್ತ ಮಠದ ಸ್ವಚ್ಛತೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಪತ್ರ ಸಿಕ್ಕಿದೆ. ಹಾಗಾಗಿ ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ಪತ್ರದಲ್ಲಿ ದೇವ ಧರ್ಮವಾದ ಇಸ್ಲಾಮ್‌ನಲ್ಲಿ ಸಂಪೂರ್ಣ ಪ್ರವೇಶ ಮಾಡುವಂತೆ ಆಹ್ವಾನ ನೀಡಲಾಗಿದೆ. ಅಲ್ಲದೇ ಇಸ್ಲಾಮ್ ಧರ್ಮ ಪ್ರವೇಶಿಸಿ ಸ್ವರ್ಗ ಪಡೆಯಿರಿ ಎಂದು ಹೇಳಲಾಗಿದೆ ಎಂದ ಅವರು, ಇಸ್ಲಾಮ್ ಧರ್ಮ ಕೇವಲ 1200 ವರ್ಷಗಳ ಇತಿಹಾಸ ಹೊಂದಿದೆ. ಸನಾತನವಾಗಿರುವ ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಮ್ ಧರ್ಮಕ್ಕೆ ಹೋಗಲು ನಾವೇನು ಅನಾಥರಲ್ಲ. ಬೇಕಾದರೆ ಲಾಲ್ ಹುಸೇನ್ ಇಳಕಲ್ ಅವರೇ ಹಿಂದೂ ಧರ್ಮವನ್ನು ಸ್ವೀಕರಿಸಲಿ ಎಂದು ಹೇಳಿದರು. ಈ ರೀತಿ ಮತಾಂತರ ಮಾಡಲು ಪ್ರಚೋದನೆ ನೀಡಲಾಗುತ್ತಿದ್ದು, ಈ ಬಗ್ಗೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ:
ಹುಣಸಗಿ ಠಾಣೆ ವ್ಯಾಪ್ತಿಯಲ್ಲಿ ಗೋವುಗಳ ಖರೀದಿ ಮಾಡಿರುವ ಬಗ್ಗೆ ಖೊಟ್ಟಿ ರಸೀದಿಯನ್ನು ಆಧರಿಸಿ, ಗೋವುಗಳನ್ನು ಮರಳಿ ಕೊಡುವಂತೆ ಪೊಲೀಸರು ಪತ್ರ ಬರೆದಿದ್ದು, ಯಾವುದೇ ವಿಚಾರಣೆ ನಡೆಸದೇ ಈ ರೀತಿ ಪತ್ರ ಬರೆದಿರುವ ಹುಣಸಗಿ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧಲಿಂಗ ಸ್ವಾಮೀಜಿ ಒತ್ತಾಯಿಸಿದರು.

ಕಳೆದ ಜುಲೈ 17 ರಂದು ಹುಣಸಗಿ ಠಾಣೆಯ ಪೊಲೀಸರು, ಕರುಣೇಶ್ವರ ವಿವಿಧೋದ್ದೇಶ ಸಂಘಕ್ಕೆ ಪತ್ರ ಬರೆದಿದ್ದು, ವಾರಸುದಾರರು ಇಲ್ಲದ ಎರಡು ಜಾನುವಾರುಗಳನ್ನು ಸಂಘಕ್ಕೆ ಒಪ್ಪಿಸಿದ್ದರು. ಕೆಲವು ದಿನಗಳ ನಂತರ ಮತ್ತೊಂದು ಪತ್ರ ಬರೆದು, ಜಾನುವಾರುಗಳು ಮಾಲೀಕರು ಸಿಕ್ಕಿದ್ದು, ಅವುಗಳನ್ನು ಮರಳಿ ಮಾಲೀಕರಿಗೆ ಒಪ್ಪಿಸುವಂತೆ ಕೋರಿದ್ದರು. ಈ ಪತ್ರದ ಜೊತೆಯಲ್ಲಿ ಜಾನುವಾರುಗಳನ್ನು ಖರೀದಿ ಮಾಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನೀಡಿರುವ ರಸೀದಿ ಇದೆ. ಆದರೆ ಈ ರಸೀದಿಯ ಪ್ರಕಾರ ಈ ಜಾನುವಾರುಗಳನ್ನು ಜುಲೈ 28 ಕ್ಕೆ ಖರೀದಿ ಮಾಡಲಾಗಿದೆ ಎಂದು ಪ್ರಕರಣದ ಕುರಿತು ವಿವರ ನೀಡಿದರು.

ಜುಲೈ 17 ರಂದು ಪೊಲೀಸರೇ ತಮ್ಮ ಸಂಘಕ್ಕೆ ಜಾನುವಾರುಗಳನ್ನು ಒಪ್ಪಿಸಿದ್ದಾರೆ. ಆದರೆ ಕಕ್ಕೇರಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜುಲೈ 28 ರಂದು ಜಾನುವಾರುಗಳ ಖರೀದಿ ಆಗಿರುವುದಾಗಿ ರಸೀದಿ ನೀಡಿದ್ದಾರೆ. ಸಂಘದ ವಶದಲ್ಲಿದ್ದ ಜಾನುವಾರುಗಳ ಖರೀದಿ ಹೇಗೆ ಆಯಿತು ಎಂದು ಪ್ರಶ್ನಿಸಿದರು.

ಇದೆಲ್ಲವನ್ನೂ ಪರಿಶೀಲನೆ ಮಾಡದ ಪೊಲೀಸ್ ಅಧಿಕಾರಿಗಳು, ಸಂಘಕ್ಕೆ ಪತ್ರ ಬರೆದು ಜಾನುವಾರುಗಳನ್ನು ಮಾಲೀಕರಿಗೆ ಒಪ್ಪಿಸುವಂತೆ ಕೋರಿದ್ದಾರೆ. ಇದು ಸಂಶಯಕ್ಕೆ ಕಾರಣವಾಗಿದ್ದು, ಕೂಡಲೇ ಹುಣಸಗಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಕಕ್ಕೇರಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶ್ರೀರಾಮಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT