ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸಂಗೀತ ನೃತ್ಯ ನಿಲ್ಲಿಸಿದ ‘ಕಾರಂಜಿ’

Last Updated 6 ಜನವರಿ 2014, 6:59 IST
ಅಕ್ಷರ ಗಾತ್ರ

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರಕ್ಕೆ ಅಂಟಿಕೊಂಡಂತಿರುವ ‘ಮಯೂರ ಸಂಗೀತ ನೃತ್ಯ ಕಾರಂಜಿ’ ದುಃಸ್ಥಿತಿಯಲ್ಲಿದ್ದು, ಕಾಯಕಲ್ಪಕ್ಕಾಗಿ ಎದುರು ನೋಡುತ್ತಿದೆ.

ಈ ಕಾರಂಜಿಯ ದ್ವಾರ ಬಾಗಿಲು ಮುಚ್ಚಿದ್ದು, ಹಾಳು ಕೊಂಪೆಯಂತಾಗಿದೆ. ಕಾರಂಜಿಯ ಕಬ್ಬಿಣದ ಪೈಪ್‌ಲೈನ್‌ ಹಾಗೂ ಉಪಕರಣಗಳು ತುಕ್ಕು ಹಿಡಿದಿವೆ. ಕಾರಂಜಿಯ ಒಳ ಆವರಣದಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದ್ದು, ಹಾವುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪ್ರೇಕ್ಷಕರು ಕೂರುವ ಸ್ಥಳ ಅವಶೇಷ ಮಾದರಿಯಲ್ಲಿ ರೂಪಾಂತರಗೊಂಡಿದೆ.

1998ರಲ್ಲಿ ಆರಂಭಗೊಂಡ ಈ ಕಾರಂಜಿಯನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪಿ.ಎಸ್‌. ಜೈವಂತ ಉದ್ಘಾಟಿಸಿದ್ದರು. ಬಾಲಭವನ ನಿರ್ವಹಣೆಯಲ್ಲಿದ್ದ ಈ ಕಾರಂಜಿಯು ಪ್ರವಾಸಿಗರಿಗೆ ಹಾಗೂ ನಗರದ ಜನತೆಗೆ ನಿತ್ಯ ಮನರಂಜನೆ ಒದಗಿಸುತ್ತಿತ್ತು.
ಕಡಲತೀರದ ಸೌಂದರ್ಯ ಹಾಗೂ ಸೂರ್ಯಾಸ್ತಮವನ್ನು ನೋಡಲು ಬರುತ್ತಿದ್ದ ಜನರು ಬಳಿಯಲ್ಲೇ ಈ ಕಾರಂಜಿಗೂ ಭೇಟಿ ನೀಡುತ್ತಿದ್ದರು. ಕತ್ತಲೆಯಲ್ಲಿ ಇಂಪಾದ ಸಂಗೀತ ಹಾಗೂ ಬೆಳಕಿನ ಚಿತ್ತಾರದೊಂದಿಗೆ ಬಳಕುತ್ತಿದ್ದ ನೀರಿನ ಬುಗ್ಗೆಯನ್ನು ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಮಂದಿ ಭೇಟಿ ನೀಡುತ್ತಿದ್ದರು. ಆದರೆ, ಸದ್ಯ ಈ ಕಾರಂಜಿ ದುರಸ್ತಿಯಲ್ಲಿದ್ದು, ಪ್ರವಾಸಿಗರಿಂದ ದೂರ ಉಳಿದಿದೆ.

ಈ ಕಾರಂಜಿ ಆಗಾಗ ದುರಸ್ತಿಗೆ ಬರುತ್ತಿತ್ತು. ಅದನ್ನು ಮತ್ತೆ ದುರಸ್ತಿಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. 2011ರ ನವೆಂಬರ್‌ ತಿಂಗಳಲ್ಲಿ ಶಾರ್ಟ್‌ ಸರ್ಕೀಟ್‌ನಿಂದ ಕಾರಂಜಿಯ ಕಾರ್ಯಚಟು ವಟಿಕೆ ಸ್ತಬ್ಧಗೊಂಡಿತು. ಬಳಿಕ ಜಿಲ್ಲಾಡಳಿತ ಹಾಗೂ ಕೈಗಾ ಅಣುಸ್ಥಾವರದ ನೆರವಿನಿಂದ 2013ರ ಜನವರಿಯಲ್ಲಿ ದುರಸ್ತಿಗೊಳಿಸಿ ಮತ್ತೆ ಚಾಲನೆ ನೀಡಲಾಯಿತು. ಆದರೆ, ಸರಿಯಾದ ನಿರ್ವಹಣೆ ನಿಲ್ಲದ ಕಾರಣ ಮತ್ತೆ ಹಾಳಾಗಿದೆ.

‘ಈ ಕಾರಂಜಿಯು ಸಂಜೆ 7ರಿಂದ 8ರವರೆಗೆ ನಡೆಯುತ್ತಿತ್ತು. ದೊಡ್ಡವರಿಗೆ ರೂ.10 ಹಾಗೂ ಚಿಕ್ಕವರಿಗೆ ರೂ.5 ಪ್ರವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆದರೆ, ಪ್ರವಾಸಿಗರ ಕೊರತೆಯಿಂದ  ಆದಾಯ ಕೂಡ ಇಳಿಮುಖ ವಾಗಿತ್ತು. ಇದರಿಂದ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಂಜಿಯನ್ನು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಕೂಡ ಮಾಡಿದ್ದಾರೆ. ಶೀಘ್ರದಲ್ಲಿಯೇ ಕಾರಂಜಿಗೆ ಕಾಯಕಲ್ಪ ಒದಗಿಸಲಾಗುವುದು’ ಎಂದು ಬಾಲಭವನದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT