ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ‘ನಾಜೂಕಯ್ಯ’

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹದಿನೆಂಟು ವರ್ಷಗಳ ಹಿಂದೆ ಭರ್ಜರಿ 120 ಪ್ರದರ್ಶನಗಳನ್ನು ಕಂಡಿದ್ದ ‘ನಮ್ಮೊಳಗೊಬ್ಬ ನಾಜೂಕಯ್ಯ’ ಈಗ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮತ್ತೆ ರಂಗಕ್ಕೆ ಬರುತ್ತಿದ್ದಾನೆ. ಇಂದು (ಶುಕ್ರವಾರ) ಸಂಜೆ 7ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿರುವ ‘ನಾಜೂಕಯ್ಯ’ನ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ ಟಿ.ಎನ್‌.ಸೀತಾರಾಂ.

‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕ ಬರೆಯಲು ಆರಂಭಿಸಿದ್ದು 1987ರ ಮೇ ತಿಂಗಳಿನಲ್ಲಿ. ಆಗ ಪ್ರಾರಂಭಗೊಂಡ ನಾಟಕ ರಚನೆ ಕಾರ್ಯ ಮುಗಿದಿದ್ದು 1988ರಲ್ಲಿ. ಬರೆದು ಪೂರ್ತಿಯಾದ ನಂತರ, ಆ ನಾಟಕದ ಮೊದಲ ಪ್ರದರ್ಶನವೂ ಅದೇ ವರ್ಷ ಆಯ್ತು. ರಾಜ್ಯ ಮತ್ತು ದೇಶದ ವಿವಿಧೆಡೆ ‘... ನಾಜೂಕಯ್ಯ’ ಭರ್ಜರಿ 120 ಪ್ರದರ್ಶನಗಳನ್ನು ಕಂಡಿತು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಈ ನಾಟಕ ಆನಂತರ ಭರ್ತಿ 18 ವರ್ಷ ಎಲ್ಲೂ ಪ್ರದರ್ಶನ ಕಾಣಲಿಲ್ಲ. ‘... ನಾಜೂಕಯ್ಯ’ ಪ್ರದರ್ಶನಗೊಳ್ಳದೇ ಇರಲು ಇಂಥದ್ದೇ ನಿರ್ದಿಷ್ಟ ಕಾರಣ ಏನೂ ಇರಲಿಲ್ಲ. ಈ ಪ್ರಪಂಚಲ್ಲಿರುವ ಎಲ್ಲ ಸಂಗತಿಗಳು, ವಿಚಾರಗಳಂತಯೇ ಈ ನಾಟಕ ಪ್ರದರ್ಶನವೂ ಯಾವುದೇ ಕಾರಣವಿಲ್ಲದೇ ನಿಂತಿತು.

ಈ ನಾಟಕದಲ್ಲಿ ಬರುವ ಡೈರೆಕ್ಟರ್‌ ಪಾತ್ರ ನಿರ್ವಹಿಸುತ್ತಿದ್ದ ಶಿವಮೊಗ್ಗ ವೆಂಕಟೇಶ್‌ ಅನ್ನುವವರು ತೀರಿಕೊಂಡರು. ಹಾಗಾಗಿ ನಾಟಕ ಪ್ರರ್ದಶನಕ್ಕೆ ಅಡ್ಡಿಯಾಯ್ತು ಎಂಬುದನ್ನೂ ಇಲ್ಲಿ ಸ್ಮರಿಸಬಹುದು. ಇದರ ಜತೆಗೆ ನಾಟಕ ತಂಡದವರು ಬೇರೆ ಬೇರೆ ನಾಟಕಗಳ ಪ್ರದರ್ಶನದಲ್ಲಿ ಬ್ಯುಸಿಯಾಗಿದ್ದರಿಂದ ಈ ನಾಟಕ ಮತ್ತೇ ಪ್ರದರ್ಶನಕ್ಕೆ ಬರಲಿಲ್ಲವಷ್ಟೇ.

‘... ನಾಜೂಕಯ್ಯ’ ನಾಟಕದ ವಸ್ತು ವಿಷಯ ಅಂದಿಗೂ ಇಂದಿಗೂ ಸರ್ವಕಾಲಕ್ಕೂ ಪ್ರಸ್ತುತವಾದುದು. ಹಾಗಾಗಿ, 18 ವರ್ಷಗಳ ನಂತರ ಈ ನಾಟಕ ಪ್ರದರ್ಶನ ಕಾಣುತ್ತಿದ್ದರೂ ಕಥೆಯಲ್ಲೇನೂ ಬದಲಾವಣೆ ಆಗಿಲ್ಲ. ಆದರೆ, ನಾಟಕದಲ್ಲಿ ಬರುವ ಕೆಲವೊಂದು ಸಣ್ಣ ಪುಟ್ಟ ಸಂಗತಿಗಳನಷ್ಟೇ ಬದಲಾವಣೆ ಮಾಡಿಕೊಂಡಿದ್ದೇವೆ. ಉದಾಹರಣೆಗೆ, ಈಗ ಮನೆ ಬಾಡಿಗೆ ರೂ300 ಅಂದರೆ ಜನ ನಕ್ಕು ಬಿಡುತ್ತಾರೆ.

ಅದನ್ನು ಐದಾರು ಸಾವಿರ ಅಂತ ಮಾಡಿಕೊಂಡಿದ್ದೇವೆ. ಇಂತಹ ಸಣ್ಣಪುಟ್ಟ ಅಂಕಿ, ಸಂಖ್ಯೆಗಳ ಬದಲಾವಣೆ ಹೊರತುಪಡಿಸಿದರೆ ನಾಟಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಆಗಿಲ್ಲ.  ಪಾತ್ರ ವರ್ಗದಲ್ಲೂ ಅಷ್ಟೇ. ಅಂಥ ದೊಡ್ಡ ಬದಲಾವಣೆ ಆಗಿಲ್ಲ. ನಾನು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಜನ ರಂಗಭೂಮಿ ಬಗ್ಗೆ ಎಷ್ಟು ಆಕರ್ಷಣೆ ಉಳಿಸಿಕೊಂಡಿದ್ದಾರೆ ಎಂದು ನಿಖರವಾಗಿ ಗೊತ್ತಿಲ್ಲ.

ಹಾಗಾಗಿ, ಬೆಂಗಳೂರಿನಲ್ಲಿ ಇಂದು ಪ್ರದರ್ಶನಗೊಳ್ಳಲಿರುವ ‘... ನಾಜೂಕಯ್ಯ’ ನಾಟಕಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಂತೂ ನನಗೆ ಇದ್ದೇ ಇದೆ. ಮೊದಲಿನಿಂದಲೂ ನನಗೆ ನಾಟಕಗಳನ್ನು ನೋಡುವ ಖಯಾಲಿ ಜಾಸ್ತಿ. ಈಗ ಬೆಂಗಳೂರಿನಲ್ಲಿ ತಿಂಗಳುದ್ದಕ್ಕೂ ವಿವಿಧ ಭಾಷೆಯಲ್ಲಿ ನಾಟಕಗಳು ಪ್ರದರ್ಶನ ಕಾಣುತ್ತಿರುತ್ತವೆ. ನಾನು ಇತ್ತೀಚೆಗೆ ನೋಡಿದ ವೈದೇಹಿ ಅವರ ‘ವ್ಯಾನಿಟಿ ಬ್ಯಾಗ್‌’ ನಾಟಕ ತುಂಬಾ ಇಷ್ಟವಾಯ್ತು.

ನಮ್ಮ ಸುತ್ತಲೂ ಇರುವ ಸ್ವಾರ್ಥ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡುವ ‘... ನಾಜೂಕಯ್ಯ’ನನ್ನು ಕಣ್ತುಂಬಿಕೊಳ್ಳಲು ಆಸಕ್ತಿ ಇರುವವರು ರವೀಂದ್ರ ಕಲಾಕ್ಷೇತ್ರದತ್ತ ಹೆಜ್ಜೆ ಬೆಳಸಬಹುದು. ನಟರಂಗ ತಂಡದವರು ಸಂಜೆ 7ಕ್ಕೆ ಈ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT