ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಧು'ವನ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

`ರೋಮಿಯೊ-ಜೂಲಿಯೆಟ್, ಲೈಲಾ-ಮಜ್ನು, ಸಲೀಂ-ಅನಾರ್ಕಲಿ... ಹೀಗೆ ಎಷ್ಟೊಂದು ಪ್ರೇಮಕಥೆಗಳನ್ನು ಕೇಳಿದ್ದೇವೆಯೋ ಅಂಥ ಶ್ರೇಷ್ಠ ಕಥೆಗಳ ಸಾಲಿಗೆ ಸೇರುವಂಥ ಪ್ರೀತಿ ಅವರದು...'

ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನಕ್ಕಿಳಿದಿರುವ ಮಧು ಚಿಕ್ಕಮಗಳೂರು ತಮ್ಮೂರಿನಲ್ಲಿ ನಡೆದ ನೈಜ ಪ್ರೇಮಕಥನವನ್ನು ಬಣ್ಣಿಸಿದ್ದು ಹೀಗೆ. ಚಿತ್ರಮಂದಿರದತ್ತ ಪ್ರೇಕ್ಷಕನನ್ನು ಆಕರ್ಷಿಸಲು `ನೈಜ ಘಟನೆಯ ಆಧಾರಿತ' ಎಂಬ ಘೋಷವಾಕ್ಯವನ್ನು ಸೇರ್ಪಡಿಸುವ ಕಾಲವಿದು.

ಆದರೆ ಮಧು ಸ್ವತಃ ಕಂಡು, ಕೇಳಿದ ಘಟನೆಗಳಿಗೆ ಸಿನಿಮೀಯ ಸ್ಪರ್ಶ ನೀಡುತ್ತಿರುವುದು ಮಾತ್ರವಲ್ಲ, ತಮ್ಮ ಚಿತ್ರದ ಮೂಲಕ ಈ ಪ್ರೇಮಿಗಳನ್ನು ಒಂದುಗೂಡಿಸುವ ಸಂಕಲ್ಪತೊಟ್ಟಿದ್ದಾರೆ. ಪೋಷಕರಿಂದಾಗಿ ಪ್ರೇಮಿಯಿಂದ ದೂರವಾಗಿರುವ ಯುವತಿಯ ಹೆಸರು ಪಾವನಿ. ವಾಸ್ತವಕ್ಕೆ ಹತ್ತಿರವಾಗಲೆಂದು ಚಿತ್ರಕ್ಕೂ ಅದೇ ಶೀರ್ಷಿಕೆ ಇರಿಸಿದ್ದಾರೆ ಮಧು.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಕೆ. ದುರ್ಗ ಎಂಬ ಹಳ್ಳಿಯವರಾದ ಮಧು, ಕಾಲೇಜು ದಿನಗಳಿಂದಲೇ ಬಣ್ಣದ ಲೋಕದ ಆಕರ್ಷಣೆಗೆ ಒಳಗಾದವರು. ಪದವಿ ಮುಗಿಯುತ್ತಿದ್ದಂತೆ ಪಯಣ ಬೆಳೆಸಿದ್ದು ಗಾಂಧಿನಗರದತ್ತ. ಅವಕಾಶ ಕೋರಿ ಅನೇಕ ಹೆಸರಾಂತ ನಟ, ನಿರ್ದೇಶಕರ ಬಳಿಗೆ ಹೋದಾಗ ಸಿಕ್ಕಿದ್ದು ನಿರಾಸೆ. ನಿರ್ದೇಶಕ ಗಣೇಶ್ ಕೆ. ಅವರಿಂದ ಚಿತ್ರರಂಗ ಪರಿಚಯವಾಯಿತು.

`ಮಣ್ಣಿನ ಮಕ್ಕಳು' ಚಿತ್ರದ ಮೂಲಕ ಸಹಾಯಕ ನಿರ್ದೇಶಕನಾಗುವ ಅವಕಾಶ. ಮುಂದೆ `ಚಿಕ್ಕಮಗಳೂರ ಚಿಕ್ಕಮಲ್ಲಿಗೆ', `ವೆಂಕಟ ಇನ್ ಸಂಕಟ', `ಕ್ರೇಜಿ ಕುಟುಂಬ', `ನೀ ರಾಣಿ ನಾ ಮಹಾರಾಣಿ', `ಅದ್ವೈತ', `ಸಾರಥಿ', `ಆಟೋರಾಜ' ಹೀಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕಲಿತರು. ಕೆಲಸ ಮಾಡಿದ ಅನೇಕ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು.

ಊರಿನಲ್ಲಿ ನಡೆದ ಘಟನೆ ಅವರನ್ನು ಕಾಡುತ್ತಿತ್ತು. ಆ ಪ್ರೇಮಿಗಳನ್ನು ಭೇಟಿ ಮಾಡಿದರು. ಅವರ ಸ್ನೇಹಿತರಿಂದ ವಿವರ ಕಲೆ ಹಾಕಿದರು. ಅವರಿಬ್ಬರ ನಡುವೆ ಹುಟ್ಟಿದ ಪ್ರೀತಿ, ಅವರ ಕನಸುಗಳು, ಪೋಷಕರ ವಿರೋಧ, ಆತ್ಮಹತ್ಯೆಯ ಪ್ರಯತ್ನ ಹೀಗೆ ಮನಕಲಕುವ ಘಟನೆಗಳು ಸಿನಿಮಾಕ್ಕೆ ವಸ್ತುಗಳನ್ನು ಹೆಕ್ಕಿ ಕೊಟ್ಟವು. ಅದರ ಫಲವೇ `ಪಾವನಿ'.

ಓದು ಮುಗಿಸಿ ಉದ್ಯೋಗಕ್ಕೆ ಹೋಗುತ್ತಿದ್ದ ಯುವತಿ ಮತ್ತು ತಾಯಿಯ ಕನಸನ್ನು ಈಡೇರಿಸುವ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಯುವಕನ ನಡುವೆ ಪ್ರೀತಿ ಚಿಗುರೊಡೆದದ್ದು 2007ರ ಜೂನ್ 22ರಂದು. ಭವಿಷ್ಯದ ಕನಸುಗಳನ್ನು ಹೊಸೆದಿದ್ದರು. ಯುವತಿ ಮನೆಯಲ್ಲಿ ತಂದೆ ತಾಯಿಗೆ ವಿಷಯ ತಿಳಿದು ಇಬ್ಬರನ್ನೂ ದೂರಮಾಡಿದರು. ಪೋಷಕರ ಸಾಯುವ ಬೆದರಿಕೆಗೆ ಮಣಿದರೂ, ಆಕೆಗೆ ಮದುವೆ ಮಾಡಿಸುವ ಪ್ರಯತ್ನಗಳ ವಿಫಲವಾದವು.

ಇಬ್ಬರೂ ತಮ್ಮ ಪ್ರೀತಿ ಒಂದಾಗುತ್ತದೆ ಎಂಬ ನಂಬಿಕೆಯಿಂದ ಕಾದಿದ್ದಾರೆ. ಈ ಸಿನಿಮಾ ಅವರಿಬ್ಬರನ್ನು ದೂರಮಾಡಿರುವ ಮನಸ್ಸುಗಳನ್ನು ಪರಿವರ್ತನೆ ಮಾಡುತ್ತದೆ ಎಂಬ ಭರವಸೆ ಮಧು ಅವರದು. ನೈಜ ಘಟನೆಯಾದರೂ ಅವರಿಬ್ಬರ ವೈಯಕ್ತಿಕ ಬದುಕಿಗೆ ಹಾನಿ ಮಾಡುವ ಅಂಶಗಳು ಚಿತ್ರದಲ್ಲಿ ಇರುವುದಿಲ್ಲ ಎನ್ನುತ್ತಾರೆ ಅವರು. ಈ ಪ್ರೇಮಕಥೆಗೆ ಇನ್ನೂ ಅಂತ್ಯ ಸಿಗದಿದ್ದರೂ, ಚಿತ್ರದಲ್ಲಿ ಸುಂದರ ಅಂತ್ಯ ನೀಡಿದ್ದಾರಂತೆ.

ಅಂದಹಾಗೆ, ಇಲ್ಲಿ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿರುವುದು ದಿಗಂತ್. ಪ್ರೇಯಸಿಯ ಹುಡುಕಾಟ ನಡೆದಿದೆ. ಭಾವನಾ ಮೆನನ್ `ಪಾವನಿ'ಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಪ್ರೇಮಿಗಳಿಬ್ಬರೂ ಓಡಾಡಿದ, ಕದ್ದುಮುಚ್ಚಿ ಭೇಟಿ ಮಾಡುತ್ತಿದ್ದ ಸ್ಥಳಗಳಲ್ಲಿಯೇ ಚಿತ್ರೀಕರಣ ನಡೆಸುವುದು ಮಧು ಉದ್ದೇಶ.

ಅವರಿಬ್ಬರ ನಡುವೆ ನಡೆದ ಸಂದೇಶ ವಿನಿಮಯ, ಸಂಭಾಷಣೆಗಳೂ ಚಿತ್ರದಲ್ಲಿ ಅಳವಡಿಕೆಯಾಗಲಿದೆಯಂತೆ. ದಿಗಂತ್‌ರ `ಒಂದೂರಲ್ಲಿ ಒಬ್ಬ ರಾಜ ಇದ್ದ' ಚಿತ್ರದ ಚಿತ್ರೀಕರಣ ಮುಗಿದ ನಂತರ `ಪಾವನಿ'ಗೆ ಅದ್ದೂರಿ ಚಾಲನೆ ನೀಡುವ ಬಯಕೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT