ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರಂತೆ ಬದುಕಲು ಬಿಡಿ

ಆ ಚಿಕ್ಕ ದೇವಸ್ಥಾನದಲ್ಲಿ ಹೊರ ನೋಟಕ್ಕೆ ಅದೊಂದು ಮದುವೆ. ಹಾಗಂತ ಅಲ್ಲಿ ಮನೆಯವರ ಸಂಭ್ರಮ, ಸಡಗರ ಇರಲಿಲ್ಲ. ರೇಷ್ಮೆ ಸೀರೆಯುಟ್ಟು ಮುತ್ತೈದೆಯರು ಆಗೊಮ್ಮೆ ಈಗೊಮ್ಮೆ ಓಡಾಡಿದರೂ ಮದುವೆಯ ಕಾರ್ಯ ನಾವೇ ಮಾಡಬೇಕಾದರೆ ಗತಿಯೇನು ಎಂಬ ಚಿಂತೆಯಲ್ಲಿ ಆದಷ್ಟು ದೂರವೇ ಉಳಿದಿದ್ದರು.
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆ ಚಿಕ್ಕ ದೇವಸ್ಥಾನದಲ್ಲಿ ಹೊರ ನೋಟಕ್ಕೆ ಅದೊಂದು ಮದುವೆ. ಹಾಗಂತ ಅಲ್ಲಿ ಮನೆಯವರ ಸಂಭ್ರಮ, ಸಡಗರ ಇರಲಿಲ್ಲ. ರೇಷ್ಮೆ ಸೀರೆಯುಟ್ಟು ಮುತ್ತೈದೆಯರು ಆಗೊಮ್ಮೆ ಈಗೊಮ್ಮೆ ಓಡಾಡಿದರೂ ಮದುವೆಯ ಕಾರ್ಯ ನಾವೇ ಮಾಡಬೇಕಾದರೆ ಗತಿಯೇನು ಎಂಬ ಚಿಂತೆಯಲ್ಲಿ ಆದಷ್ಟು ದೂರವೇ ಉಳಿದಿದ್ದರು. ನೆಂಟರಿಷ್ಟರು, ಪರಿಚಯದವರು, ಆತ್ಮೀಯರು ಕುತೂಹಲದಿಂದ ನೋಡಲಿಕ್ಕೆ ಬಂದಂತಿತ್ತು.

ಮದುಮಕ್ಕಳು  ನಿರ್ಲಿಪ್ತ ರಾಗಿದ್ದರು. ಹೆತ್ತ ಕರುಳು ಮಾತ್ರ ಹೇಗಾ ದರಾಗಲೀ ಈ ಮದುವೆ ಸುಸೂತ್ರವಾಗಿ ಸಾಗಿ ವಿಧವೆ ಮಗಳಿಗೆ ಒಳ್ಳೆಯದಾಗಲಿ ಎಂದು ಹಂಬಲಿಸುತ್ತಿತ್ತು. ಬಂಧು– ಬಳಗ, ಮದುವೆ ಶಾಸ್ತ್ರ ನಡೆಸಿ ಕೊಡಲು ಒಪ್ಪದ ಕಾರಣ, ಬೇರೆ ಉಪಾಯ ಇಲ್ಲದೇ ಮದುವೆ ನಡೆಸಿಕೊಡಲು ಬಂದಿದ್ದ  ದಂಪತಿಯೇ ಆ ಕಾರ್ಯ ನೆರವೇರಿಸ ಬೇಕಾಯಿತು.

ಇದು ಯಾವುದೋ ಓಬೀರಾಯನ ಕಾಲದ ವಿಷಯದ ವಿಶ್ಲೇಷಣೆಯಲ್ಲ. ವೈಚಾರಿಕ ಯುಗಕ್ಕೂ ಮುತ್ತಿಕೊಂಡ ಸಂಪ್ರದಾಯದ ಆಳವಾದ ಬೇರುಗಳು ಹೇಗೆ ನಮ್ಮನ್ನೆಲ್ಲ ಸುತ್ತಿಕೊಂಡಿವೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಮದುವೆಯೊಂದು ಉದಾಹರಣೆ.

ಪ್ರಗತಿಪರ ಯೋಚನೆಗಳಿಗೆ ಅಷ್ಟೇನೂ ದಿಟ್ಟತನದಿಂದ  ತೆರೆದುಕೊಳ್ಳದ ವಿಧವೆ. ಅಮಂಗಳೆ ಎನ್ನುವ ಮೂಢನಂಬಿಕೆ ಇನ್ನೂ ಸಮಾಜದಲ್ಲಿದೆ.  ಮೇಲ್ನೋಟಕ್ಕೆ ಅಷ್ಟೇನೂ ಗಾಢವಾಗಿಲ್ಲದೇ ಇದ್ದರೂ ಧಾರ್ಮಿಕ ವಿಧಿ-ವಿಧಾನಗಳಲ್ಲಿ, ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಅವರ ಪಾಡು ಇನ್ನೂ ಹಾಗೆಯೇ ಇದೆ. 

ಸಾಮಾಜಿಕ ಬದಲಾವಣೆ ಅನ್ನುವುದು ಬರೀ ಭಾವನಾತ್ಮಕ ಧ್ಯೇಯವಾಗಿ, ಸಂದರ್ಭಾನುಸಾರ  ಆದರ್ಶದ ಮಾತಾಗಿ ಉಳಿದರೆ ಸಾಲದು. ಸಮಾಜ ಸುಧಾರಣೆ ಎಂದರೆ ಆಮೂಲಾಗ್ರ ಬದಲಾವಣೆ. ಜನಾಂಗವೊಂದು ತನ್ನಲ್ಲಿನ ಸತ್ವವನ್ನು ಗುರುತಿಸಿಕೊಂಡು ಹೊಸಯುಗಕ್ಕೆ ಸೂಕ್ತವಾಗುವ ರೀತಿಯಲ್ಲಿ ಹೆಜ್ಜೆ ಹಾಕುವುದರ ಜೊತೆಗೆ ತನ್ನನ್ನು ತಾನು ರೂಪಿಸಿಕೊಂಡು ಇತರರ ಏಳ್ಗೆಗೆ ಮುಂದಾಗಬೇಕು. ಮದುವೆ ಪ್ರತಿಯೊಬ್ಬರ ಬದುಕಿನ ಮಹತ್ವದ ನಿರ್ಧಾರ. ಅದು ಜೀವನವನ್ನು ಬದಲಾಯಿಸುತ್ತದೆ ಎಂದು ಏನೇನೋ  ಕನಸು ಕಂಡು ವಿವಾಹ ಬಂಧನಕ್ಕೆ  ಒಳಗಾಗುತ್ತಾರೆ. ಕಿರಿಯ ವಯಸ್ಸಿನಲ್ಲಿ ವಿಧವೆಯಾದರೆ ಬದುಕಿನ ಕನಸುಗಳು ನುಚು್ಚನೂರು ಆಗುತ್ತವೆ.

ಹುಡುಕುತ್ತಾ ಹೋದರೆ ಇಂತಹದೇ ನೋವಿ ನಲ್ಲಿ ದಿನದೂಡುವ ಹಲವು ಹೆಣ್ಣುಮಕ್ಕಳು ಸಿಗುತ್ತಾರೆ. ಕಿರಿಯ ವಯಸ್ಸಿನಲ್ಲಿಯೇ ವಿಧವೆಯ ಪಟ್ಟ, ಜತೆಗೆ ಸಂಪ್ರದಾಯಗಳು. ಇವುಗಳನ್ನೆಲ್ಲಾ ಕಟ್ಟಿಕೊಂಡು ಬಾಳು ನರಕವಾದವರ ಕಥೆ ಕಡಿಮೆಯೇನಿಲ್ಲ. ನಮ್ಮ ಮಧ್ಯಮವರ್ಗದ ಭಾರತೀಯ ಸಮಾಜ ಇವತ್ತಿನ ತನಕ ಮದುವೆ, ವಿಚ್ಛೇದನ ಬಗ್ಗೆ ಯೋಚಿಸಿದಷ್ಟು ತೀವ್ರವಾಗಿ, ವ್ಯವಧಾನದಿಂದ ವೈಧವ್ಯದ ಬಗ್ಗೆ ಯೋಚಿಸಿಲ್ಲ. ತುಂಬಾ ಪ್ರೀತಿಸುವ ಗಂಡ ಸತ್ತು ಹೋದಾಗ ಗಂಡನ ನೆನಪಿನಲ್ಲಿ ಬದುಕುವ ಮತು್ತ ಅಷ್ಟೂ ವರ್ಷಗಳನ್ನೂ ಕಳೆದುಬಿಡುವುದು ಎಷ್ಟು ಘೋರ, ಎಷ್ಟು ಕಷ್ಟ!

ವೈಧವ್ಯ ಕೂಡಾ ಎಲ್ಲರಿಗೂ ಹೇಳಿ ಕೇಳಿ ಒಂದೇ ತೆರನಾಗಿ ಬರುವುದಿಲ್ಲ. ಕೆಲವರಿಗೆ ಮಾನಸಿಕವಾಗಿ ಸನ್ನದ್ಧರಾಗುವಂತೆ 
ಮಾಡಿದರೆ, ಇನ್ನೂ ಕೆಲವರಿಗೆ  ಧುತ್ತೆಂದು ಚಂಡಮಾರುತದಂತೆ ಅಪ್ಪಳಿಸಿದ್ದೂ  ಉಂಟು. ಅಂಥ ಸಂದರ್ಭದಲ್ಲಿ ಆ ಒಂಟಿ ಹೆಣ್ಣುಮಗಳಿಗೆ ಬೇಕಾಗಿರುವುದು ಅನುಕಂಪದ ಮಾತುಗಳಲ್ಲ. ಬದಲಿಗೆ ಆತ್ಮಸ್ಥೈರ್ಯ ತುಂಬುವ ಭರವಸೆಯ ಮಾತುಗಳು. ಕೊಂಕುನುಡಿಗಳಲ್ಲ,
ಜೀವನ ಪ್ರೀತಿಯೆಡೆಗೆ ಹೊರಳಿಸಬೇಕಾದ ಮಾರ್ಗದರ್ಶನ.

ಹಳ್ಳಿಗಿಂತ ಪಟ್ಟಣವೇ ವಾಸಿ. ಅಲ್ಲಿ ಓದಿದ ಪ್ರಜ್ಞಾವಂತರಿರುತ್ತಾರೆ, ಮೌಢ್ಯದ ಮುಖಗಳ ಪರಿಚಯ ಇರುತ್ತದೆ ಎಂದುಕೊಂಡಿದ್ದೆ. ಆದರೆ ನಡೆದ ಘಟನೆ ಮಾತ್ರ ಮನಕಲಕಿ ಬಿಟ್ಟಿತ್ತು. ನಡೆದಂತಹ ಆ ಸಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ವಿದ್ಯಾವಂತರು, ಬುದ್ಧಿಜೀವಿಗಳು ಎಂದೆನಿಸಿಕೊಂಡವರು. ಕಾರ್ಯಕ್ರಮದ ಸಂಬಂಧ ಬಂದ ಹೆಣ್ಣು ಮಕ್ಕಳಿಗೆ ಜಂಪರಪೀಸ್‌ನಲ್ಲಿ ಸ್ವಲ್ಪ ಅಕ್ಕಿ
ಹಾಕಿ ಕೊಡುತ್ತಿದ್ದರು. ಕೊನೆಯ ಪಾಳಿ ಬಂದದ್ದು ವಿಧವೆ ಶಿಕ್ಷಕಿಯದು. ಕೊಡುತ್ತಿದ್ದವರೂ, ಅಲ್ಲಿ ನಿಂತು ಸಲಹೆ ನೀಡುತ್ತಿದ್ದವರೂ  ಶಿಕ್ಷಕಿಯರೇ. ವಿಧವೆಯರಿಗೆ ಹಾಗೆ ಅಕ್ಕಿ ಹಾಕಿ ಕೊಡಬಾರದು ಎಂದು ಕಣ್ಮುಂದೆಯೇ ಇಂತಹ ದಿವ್ಯ ಸಲಹೆ ನೀಡಿ  ಹಾಕಿದ ಅಕ್ಕಿಯನ್ನು ತೆಗೆಸಿಬಿಟ್ಟರು! 

ನಾವು  ಮಾಡುತ್ತಿರುವುದು ಏನನು್ನ? ಬದಲಾವಣೆಯನ್ನೇ? ಮೌಢ್ಯವನು್ನ ಮರು ಸಾ್ಥಪಿಸುತ್ತಿದ್ದೇವೆಯೇ?  ಮಕ್ಕಳನ್ನು ಅಕ್ಷರ ದಾಸೋಹದ ಮೂಲಕ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಮಹಾನ್ ಕಾರ್ಯದಲ್ಲಿ ತೊಡಗಿಕೊಂಡು ವಿಜೃಂಭಣೆ ಯಿಂದ ಶಿಕ್ಷಕ ದಿನಾಚರಣೆ ಆಚರಿಸಿಕೊಳ್ಳುತ್ತಿ ರುವ ದಿನಗಳಲ್ಲಿ ಇದೊಂದು ವಿಪರಾ್ಯಸ. 

ಮನದ ಕಲ್ಮಶ, ಭಾವನೆಯ ಕಲ್ಮಶ ತೊಳೆದುಕೊಂಡು, ನುಡಿಯ ಮಂಜನ್ನು ಎಸೆಯದೇ ತಮ್ಮ ಮನದ ಡೊಂಕು, ನಡೆ-ನುಡಿಯ ಡೊಂಕನ್ನು ಮೊದಲು ತಿದ್ದಿಕೊಳ್ಳ ಬೇಕಾಗಿದೆ. ಇದೊಂದೇ ಕ್ಷೇತ್ರವನ್ನಲ್ಲ, ಇತರ ಕ್ಷೇತ್ರಗಳಲ್ಲೂ ವಿದ್ಯಾವಂತರೆನಿಸಿಕೊಂಡ ಪ್ರಜ್ಞಾವಂತರು ಅವಜ್ಞೆಗೆ ಒಳಗಾದರೆ ಹೇಗೆ? ಇಂಥವರಿಂದ ಸಮಾಜ ಹೇಗೆ  ಸುಧಾರಣೆ ಯಾದೀತು? ಇಲ್ಲಿ ಗೊತ್ತಿದ್ದೂ ಮಾಡು ವುದಕ್ಕೂ, ಗೊತ್ತಿರದೇ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ಹಿಂದೆ ಅನ್ನದಾನ, ವಸ್ತ್ರದಾನ ಮಾಡುತ್ತಾ ನಿಮ್ಮ ಕುಟುಂಬವೂ ಬೆಳೆಯಲಿ, ನಮ್ಮ ಬಾಂಧವ್ಯವೂ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸುತ್ತಾ ಬಂದ ಈ ಸಂಪ್ರದಾಯ ಇಂದು  ಕೇವಲ ಮುತ್ತೈದೆಯರಿಗೆ ಮಾತ್ರ ಎಂಬ ಸೀಮಿತ ಅರ್ಥ ಲೇಪಿಸಿಕೊಂಡಿದೆ.
ಹೀಗೆ ಮಾಡುವವರು  ಆ ಭಗವಂತನ ಹತ್ತಿರ ನಾವು ಮುತೈದೆಯಾಗಿಯೇ ಸಾಯುತ್ತೇವೆ ಎಂದು ಆಣೆ ಮಾಡಿಸಿಕೊಂಡು ಬಂದಿದ್ದಾ ರೆಯೇ? ಅಂದು –ಇಂದು –ಮುಂದೆ  ಯಾರ ಬದುಕಿನ ನಿರ್ಧಾರ ಯಾರದಾದರೂ ಕೈಯಲ್ಲಿದೆಯೇ? ಮುರಿದು ಹೋದ ಬದುಕು ಒಡೆದ ಕನ್ನಡಿಯಂತೆ. ಅದನ್ನು ಮತ್ತೆ ಜೋಡಿಸುವುದಕ್ಕೆ ಸಾಧ್ಯ ಇಲ್ಲ. ಹಾಗಂತ ಪತಿಯನ್ನು ಕಳೆದುಕೊಂಡ ನಂತರ ಬದುಕಿಗೆ ವಿದಾಯ ಹೇಳುವುದಲ್ಲ; ಹೊಸ ಜೀವನವನ್ನು ಸ್ವಾಗತಿಸಬೇಕು.

ಮತ್ತೊಬ್ಬರಿಗೆ ಬೌದ್ಧಿಕ ಆಘಾತ ನೀಡುವಂತೆ ಯಾವ ಶಾಸ್ತ್ರ, ಪುರಾಣಗಳೂ ಹೇಳುವುದಿಲ್ಲ. ಕಾಲ ಬದಲಾದಂತೆ ನಾವೆಲ್ಲಾ ಕಟ್ಟಲೆಗಳ ಮೂಲ ಉದ್ದೇಶಗಳನ್ನು ಮರೆಯುವಂತಾಗ ಬಾರದಲ್ಲವೇ? ಮಠ ಮಾನ್ಯಗಳು, ಸಂಘ-ಸಂಸ್ಥೆಗಳು ಈ ದಿಶೆಯಲ್ಲಿ ಕ್ರಾಂತಿಕಾರಕ ಹೆಜ್ಜೆಯಿಡುತ್ತಿರುವಾಗ  ಕೊನೇಪಕ್ಷ ಮನುಷ್ಯರಾಗಿ, ಮನುಷ್ಯರನ್ನು, ಮನುಷ್ಯರಂತೆ ಕಾಣಬಾರದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT