ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅವಾಂತರ: ಮನೆಗಳಿಗೆ ನೀರು, ಧರೆಗುರುಳಿದ ಮರಗಳು

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಕೆಲವೆಡೆ ಮರಗಳು ಉರುಳಿ ಬಿದ್ದು ಜನಜೀವನ ಅಸ್ತವ್ಯಸ್ತವಾಯಿತು.

 ಯಶವಂತಪುರ, ಮತ್ತಿಕೆರೆ, ಮುತ್ಯಾಲನಗರ ಭಾಗದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ರಪರಪನೆ ಆಲಿಕಲ್ಲು ಉದುರಿತು. ಕೆಲವರು ಮಳೆಯನ್ನೂ ಲೆಕ್ಕಿಸದೆ ಮನೆಯಿಂದ ಹೊರ ಬಂದು ಆಲಿಕಲ್ಲುಗಳನ್ನು ಸಂಗ್ರಹಿಸಿದರು. ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳಲ್ಲಿ ಕಲ್ಲು ಉಪ್ಪು ಸುರಿದಂತಾಯಿತು.

ನಾಯಂಡನಹಳ್ಳಿ ಬಳಿಯ ತಿಗಳರ ಬಡಾವಣೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ತಿಗಳರ ಬಡಾವಣೆಯಲ್ಲಿ ಹೊಸದಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮ ಚರಂಡಿಗಳು ಕಟ್ಟಿಕೊಂಡು ಮಳೆ ನೀರು ಮನೆಗಳಿಗೆ ನುಗ್ಗಿದೆ.

ವಿಜಯನಗರ, ಚೊಕ್ಕಸಂದ್ರ, ಬಸವೇಶ್ವರ ನಗರ, ಎಸ್‌ಬಿಐ ಆಫೀಸರ್ಸ್‌ ಕಾಲೊನಿ, ಮೀನಾಕ್ಷಿ ನಗರ, ಸುಂಕದಕಟ್ಟೆ, ಜಯನಗರ ಒಂಬತ್ತನೇ ಹಂತದ 28ನೇ ಮುಖ್ಯರಸ್ತೆ, ಲಗ್ಗೆರೆ ಸಮೀಪದ ಎಂಇಐ ಕಾಲೊನಿಯ ಒಂದನೇ ಅಡ್ಡರಸ್ತೆಯಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದಾಗಿ ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.

ಹನುಮಂತನಗರದ ನಾಗೇಂದ್ರ ಬ್ಲಾಕ್ ಮುಖ್ಯರಸ್ತೆಯಲ್ಲಿ ದೊಡ್ಡ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದೆ. ಇದರಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬೈಕ್‌ನ ಮೇಲೆ ಬಿದ್ದ ಪರಿಣಾಮ ಬೈಕ್ ಸುಟ್ಟು ಹೋಗಿದೆ. ಅಲ್ಲದೇ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿಗಳು ಮರವನ್ನು ಕಡಿದು ಸಾಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಭಾನುವಾರ ರಾತ್ರಿ ಮಳೆ ಸುರಿದ ಸಂದರ್ಭದಲ್ಲೂ ಚರಂಡಿ ನೀರು ಮನೆಯೊಳಗೆ ನುಗ್ಗಿತ್ತು. ಇದರಿಂದ ಇಡೀ ರಾತ್ರಿ ನಿದ್ರೆ ಮಾಡದೆ ಚರಂಡಿ ನೀರನ್ನು ಹೊರ ಹಾಕುವುದರಲ್ಲೇ ಕಾಲ ಕಳೆಯುವಂತಾಯಿತು.

ಜಲಮಂಡಳಿಯು ಚರಂಡಿಗಳಿಗೆ ಹೊಸದಾಗಿ ಅಳವಡಿಸಿರುವ ಕೊಳವೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಈ ಕಾರಣದಿಂದಲೇ ಮಳೆ ನೀರು ಮನೆಗಳಿಗೆ ನುಗುತ್ತಿದೆ ಎಂದು ತಿಗಳರ ಬಡಾವಣೆ ನಿವಾಸಿ ದಿನೇಶ್ ಅವರು ಹೇಳಿದರು.

ಮಳೆ ನೀರು ಮನೆಗೆ ನುಗ್ಗಿರುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರೂ ಸಮಸ್ಯೆ ಪರಿಹರಿಸಲು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಚರಂಡಿ ನೀರು ರಸ್ತೆ ಮೇಲೂ ಹರಿದು ನಿಂತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ದೂರಿದರು.

ನಗರದ ಒಳ ಭಾಗದಲ್ಲಿ 4.2 ಮಿಲಿ ಮೀಟರ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 0.1 ಮಿ.ಮೀ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆ ಗರಿಷ್ಠ 28.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ ಮತ್ತು ಆಗಾಗ್ಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT