ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಂದ ಪ್ರತಿಭಟನೆ

ಸಾರಾಯಿ ಮಾರಾಟ ಪರವಾನಗಿಗೆ ವಿರೋಧ
Last Updated 13 ಜುಲೈ 2013, 11:14 IST
ಅಕ್ಷರ ಗಾತ್ರ

ಗೋಕಾಕ: ಸಾರಾಯಿ ಮಾರಾಟಕ್ಕೆ ಪರವಾನಗಿ ಹಾಗೂ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಇಲ್ಲಿಯ ತಾಲ್ಲೂಕು ಹೊಂಗಿರಣ ಮಹಿಳಾ ಮಹಾಸಂಘ ಹಾಗೂ ಮಹಿಳಾ ಸಮಾಖ್ಯಾ ಕರ್ನಾಟಕ ಸಂಸ್ಥೆಯ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಹೊಂಗಿರಣ ಮಹಿಳಾ ಸಂಸ್ಥೆ ಅಧ್ಯಕ್ಷೆ ರೇಣುಕಾ ಮಾಳೇದವರ ಹಾಗೂ ಸಮಾಖ್ಯಾ ಸಂಸ್ಥೆಯ ಜಿಲ್ಲಾ ಸಂಯೋಜಕಿ ಆರತಿ ಸಬರದ  ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಉಭಯ ಸಂಘಟನೆಗಳ ಪದಾಧಿಕಾರಿಗಳು, ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಅಧಿಕಗೊಳ್ಳುತ್ತಿದ್ದು, ಸಾರಾಯಿ ಮಾರಾಟಕ್ಕೆ ಹೊಸದಾಗಿ ಪರವಾನಿಗೆ ನೀಡಿದರೆ ಅನೇಕ ತೊಂದರೆಗಳು ಸಂಭವಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಡಿತದ ಚಟಕ್ಕೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದು, ಸಾರಾಯಿ ಕುಡಿಯಲು ಮಕ್ಕಳನ್ನು ಮಾರಾಟ ಮಾಡುವ ಕೃತ್ಯಗಳು ನಡೆಯುತ್ತಿವೆ. ಮದ್ಯದಂಗಡಿ ಆರಂಭಕ್ಕೆ ಪರವಾನಗಿ ನೀಡುವ ಬದಲು ಅವರಿಗೆ ಬೇರೆ ಉದ್ಯೋಗ  ಒದಗಿಸಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಉದಯ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ  ಸಂಪತ್ತಾ ಘಂಟೆ, ಕಮಲಾ ತರಳಿ, ಅಶ್ವಿನಿ ಪೊದ್ದಾರ, ಶೋಭಾ ಪಟ್ಟಣಶೆಟ್ಟಿ, ರೇಣುಕಾ ಬಿರಾಜ ಪಾಲ್ಗೊಂಡಿದ್ದರು.

ರಾಯಬಾಗ ವರದಿ
ಸರ್ಕಾರ ಮತ್ತೆ ಹೊಸ ಸಾರಾಯಿ ಮಾರಾಟಕ್ಕೆ ಪರವಾನಗಿ ನೀಡಿದರೆ ಸಮಾಜದಲ್ಲಿ  ಹಿಂಸೆ ಜಾಸ್ತಿಯಾಗುತ್ತವೆ. ಹೀಗಾಗಿ  ಸಾರಾಯಿ ಮಾರಾಟಕ್ಕೆ ಪರವಾನಗಿ ನೀಡಬಾರದು ಎಂದು ಶುಕ್ರವಾರ ಪಟ್ಟಣದಲ್ಲಿ ಮಹಿಳಾ ಸಮಾಖ್ಯಾದ ಸದಸ್ಯರು ಪ್ರತಿಭಟನೆ ನಡೆಸಿ, ತಹಶೀಲ್ದಾದಾರರಿಗೆ ಮನವಿ ಅರ್ಪಿಸಿದರು.

ಮಹಿಳೆಯರಿಗೆ ಮಕ್ಕಳಿಗೆ ರಕ್ಷಣೆ ಸಿಗಬೇಕು. ಸರ್ಕಾರ ಒಳ್ಳೆಯ ವಾತಾವರಣ ನಿರ್ಮಿಸಬೇಕು.  ನಿರುದ್ಯೋಗಿಗಳಿಗೆ ಮದ್ಯದಂಗಡಿ ಪರವಾನಗಿ  ನೀಡುವ ಬದಲಾಗಿ ಬೇರೆ ಉದ್ಯೋಗ ಕಲ್ಪಿಸಬೇಕು ಎಂದು ತಾಲ್ಲೂಕು ಮಹಿಳಾ ಸಮಾಖ್ಯಾ ಸಂಘದ ಸಂಪನ್ಮೂಲ ವ್ಯಕ್ತಿ ಸುವರ್ಣಾ ಪಾಟೀಲ ಆಗ್ರಹಿಸಿದರು.

ತಾ.ಪಂ. ಆವರಣದಿಂದ  ಮಿನಿವಿಧಾನ ಸೌಧದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾ ಸಂಚಾಲಕಿ ದೇವಿರಮಾ, ಅನಿತಾ.ಬಿ. ಕೆ. ಮಂಜುಳಾ, ಗೀತಾ ಯರಗಟ್ಟಿ,ಪಿ. ಪೂರ್ಣಿಮಾ, ಗೌರಿ ಸೇರಿದಂತೆ ತಾಲ್ಲೂಕಿನ  ಇಟನಾಳ, ಸುಟ್ಟಟ್ಟಿ, ಯಬರಟ್ಟಿ, ಯಲ್ಪಾರಟ್ಟಿ, ಬೆಂಡವಾಡ, ಹನಮರಟ್ಟಿ, ಕೆಂಪಟ್ಟಿ, ಬಾವಚಿ, ದೇವಾಪೂರಹಟ್ಟಿ, ಹುಬ್ಬರವಾಡಿ ಗ್ರಾಮಗಳ ಮಹಿಳಾ ಸಂಘಗಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT