ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮೇಯರ್ ಬಂಧನಕ್ಕೆ ಆಗ್ರಹ

Last Updated 17 ಮಾರ್ಚ್ 2011, 7:15 IST
ಅಕ್ಷರ ಗಾತ್ರ

ಬೆಳಗಾವಿ: ನಾಡೋಜ ಪಾಟೀಲ ಪುಟ್ಟಪ್ಪ ಹಾಗೂ ಟಿ.ಎ. ನಾರಾಯಣಗೌಡ ಅವರ ಪ್ರತಿಕೃತಿ ದಹನ ಮಾಡಿ ಭಾಷಾ ವೈಷಮ್ಯದ ಬೀಜ ಬಿತ್ತುವ ಕೆಲಸ ಮಾಡುತ್ತಿರುವ ಮಾಜಿ ಮೇಯರ್ ಸಂಭಾಜಿ ಪಾಟೀಲ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ವಿಶ್ವ ಕನ್ನಡ ಸಮ್ಮೇಳನದ ಯಶಸ್ಸು ಸಹಿಸದ ಕೆಲವರು ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ. ಕೂಡಲೇ ಅಂತಹವರನ್ನು ಬಂಧಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಪಾಟೀಲರ ಪ್ರತಿಕೃತಿ ದಹಿಸಿದರು.

ಪದೇ, ಪದೇ ನಗರದಲ್ಲಿ ಮರಾಠಿ ಭಾಷಿಕರನ್ನು ಪ್ರಚೋದಿಸುವ ಕೆಲಸ ಮಾಡುವ ಮಾಜಿ ಮೇಯರ್ ಸಂಭಾಜಿ ಪಾಟೀಲ, ಎಂಇಎಸ್ ಹಾಗೂ ಶಿವಸೇನೆ ನಾಯಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ ಟೋಪಣ್ಣವರ ಮಾತನಾಡಿ, ‘ಕನ್ನಡ ನಗರ ಸೇವಕರ ಬೆಂಬಲದಿಂದ ಸಂಭಾಜಿ ಪಾಟೀಲರು ಮೂರು ಬಾರಿ ಮೇಯರ್ ಆಗಿದ್ದಾರೆ. ಇದೀಗ ಕನ್ನಡಿಗರನ್ನು ಮರೆತು ಬಣ್ಣ ಬದಲಾಯಿಸಿರುವ ಪಾಟೀಲರು, ಮುಗ್ಧ ಮರಾಠಿ ಭಾಷಿಕರನ್ನು ಕೆರಳಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಕನ್ನಡ ಅಥವಾ ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಹಣಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳುವ ವ್ಯಕ್ತಿಯನ್ನು ಮರಾಠಿ ಭಾಷಿಕರು ನಂಬಬಾರದು’ ಎಂದು ಅವರು ಮನವಿ ಮಾಡಿಕೊಂಡರು.ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾದೇವ ತಳವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರೋಕಡೆ, ಮಹಿಳಾ ಘಟಕದ ಅಧ್ಯಕ್ಷೆ ಟಿ. ಶಾಂತಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಗಜಾನನ ಶಿಂಗೆ, ರಾಮಾ ವಣ್ಣೂರ, ಪ್ರಭು ಪುರಾಣಿಕಮಠ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT